ಮುಂಬೈ: ಮಹಿಳಾ ಮೀಸಲಾತಿ ಮತ್ತು ಕ್ಷೇತ್ರ ಪುನರ್ವಿಂಗಡಣೆ ಮಸೂದೆಗೆ ಸಂಬಂಧಿಸಿದಂತೆ ಬಿಜೆಪಿಗೆ ಬೆಂಬಲ ನೀಡುತ್ತದೆ ಎಂಬ ಊಹಾಪೋಹಗಳ ನಡುವೆ, ವಿಶೇಷ ಸಂಸತ್ ಅಧಿವೇಶನಕ್ಕೂ ಮುನ್ನವೇ ಶರದ್ ಪವಾರ್ ನೇತೃತ್ವದ ಎನ್‌ಸಿಪಿ (ಎಸ್‌ಪಿ) ತನ್ನ ಎಂಟು ಲೋಕಸಭಾ ಸಂಸದರಿಗೆ ವಿಪ್ ಜಾರಿ ಮಾಡಿದೆ ಎಂದು ವರದಿಯಾಗಿದೆ.
ಶಿರೂರು ಸಂಸದ ಡಾ. ಅಮೋಲ್ ಕೊಲ್ಹೆ ಹೊರಡಿಸಿರುವ ವಿಪ್‌ನಲ್ಲಿ, 2026 ನವೆಂಬರ್ 30ರಿಂದ ಡಿಸೆಂಬರ್ 4ರವರೆಗೆ ನಡೆಯಲಿರುವ ಸಂಸತ್ತಿನ ವಿಶೇಷ ಅಧಿವೇಶನದಲ್ಲಿ ಕಡ್ಡಾಯವಾಗಿ ಹಾಜರಿರುವಂತೆ ಹಾಜರಿರುವಂತೆ ಹೇಳಲಾಗಿದೆ.
ಮುಂಬರುವ ಐದು ದಿನಗಳ ಅವಧಿಯಲ್ಲಿ ಲೋಕಸಭೆಯಲ್ಲಿ ಅತ್ಯಂತ ಪ್ರಮುಖ ವಿಷಯಗಳನ್ನು ಕೈಗೆತ್ತಿಕೊಳ್ಳಲಾಗುವುದು. ಪಕ್ಷದ ಎಲ್ಲಾ ಸಂಸದರು ಕಡ್ಡಾಯವಾಗಿ ಹಾಜರಿರಬೇಕು ಮತ್ತು ಚರ್ಚೆಗೆ ಹಾಗೂ ನಿರ್ಧಾರ ಕೈಗೊಳ್ಳಲು ಬರುವ ವಿಷಯಗಳ ಕುರಿತು ಪಕ್ಷದ ನಿಲುವನ್ನು ಬೆಂಬಲಿಸಬೇಕು ಎಂದು ಸೂಚಿಸಲಾಗಿದೆ.
'ತ್ರೀ-ಲೈನ್ ವಿಪ್' ಎಂದು ಗುರುತಿಸಲಾದ ಮತ್ತು 'ಅತ್ಯಂತ ಪ್ರಮುಖ' ಎಂದು ಬಣ್ಣಿಸಲಾದ ಎನ್‌ಸಿಪಿ(ಎಸ್‌ಪಿ) ಪಕ್ಷದ ಈ ಸೂಚನೆಯು ಮಹತ್ವ ಪಡೆದುಕೊಂಡಿದೆ. ಪ್ರಸ್ತಾವಿತ ಡಿಲಿಮಿಟೇಷನ್ ಕುರಿತಾದ ರಾಜಕೀಯ ಚರ್ಚೆ ಹಾಗೂ ಮಹಿಳಾ ಮೀಸಲಾತಿಗೆ ಸಂಬಂಧಿಸಿದ ಸಾಂವಿಧಾನಿಕ ತಿದ್ದುಪಡಿಗೆ ಬೆಂಬಲ ಪಡೆಯಲು ಸರ್ಕಾರ ಪ್ರಯತ್ನ ನಡೆಸುತ್ತಿದೆ. ಅದರ ನಡುವೆ ಎನ್‌ಸಿಪಿ(ಎಸ್‌ಪಿ)ಯ ಈ ವಿಪ್ ಮಹತ್ವ ಪಡೆದುಕೊಂಡಿದೆ.
ಆದಾಗ್ಯೂ, ಎನ್‌ಸಿಪಿ(ಎಸ್‌ಪಿ) ಪಕ್ಷದ ವಿಪ್‌ನಲ್ಲಿ ಕ್ಷೇತ್ರ ಮರುವಿಂಗಡಣೆ ಮಸೂದೆಯ ಬಗ್ಗೆ ಸ್ಪಷ್ಟವಾಗಿ ಉಲ್ಲೇಖಿಸಿಲ್ಲ ಅಥವಾ ಸರ್ಕಾರದ ಪ್ರಸ್ತಾವನೆಯ ಪರವಾಗಿ ಮತ ಚಲಾಯಿಸುವಂತೆ ಸಂಸದರಿಗೆ ನಿರ್ದೇಶನವನ್ನೂ ನೀಡಿಲ್ಲ. ಬದಲಾಗಿ, ಪಕ್ಷದ ನಿಲುವನ್ನು ಅನುಸರಿಸಲು ಮತ್ತು ಬೆಂಬಲಿಸಲು ಸದಸ್ಯರಿಗೆ ಸೂಚಿಸಲಾಗಿದೆ. ಅಧಿವೇಶನದ ಸಂದರ್ಭದಲ್ಲಿ ಪಕ್ಷದ ಅಂತಿಮ ನಿಲುವು ನಿರ್ಣಾಯಕವಾಗಲಿದೆ ಎಂಬುದನ್ನು ಇದು ಸೂಚಿಸುತ್ತದೆ ಎನ್ನಲಾಗಿದೆ.
ಕಳೆದ ಏಪ್ರಿಲ್ನಲ್ಲಿ ಕ್ಷೇತ್ರ ಮರುವಿಂಗಡಣೆಗೆ ಸಂಬಂಧಿಸಿದ ಸಾಂವಿಧಾನಿಕ ತಿದ್ದುಪಡಿಯನ್ನು ಮಂಡಿಸಲು ಸರ್ಕಾರ ನಡೆಸಿದ್ದ ಹಿಂದಿನ ಪ್ರಯತ್ನವನ್ನು ವಿರೋಧಿಸಿದ್ದ ಎನ್‌ಸಿಪಿ (ಎಸ್‌ಪಿ) ಈ ಬಾರಿ ಅದನ್ನು ಬೆಂಬಲಿಸುವ ಸೂಚನೆ ನೀಡಿದೆ ಎನ್ನಲಾಗಿದೆ.
ಇತ್ತೀಚೆಗೆ ಮಾತನಾಡಿದ್ದ ಪಕ್ಷದ ಕಾರ್ಯಾಧ್ಯಕ್ಷೆ ಮತ್ತು ಬಾರಾಮತಿ ಲೋಕಸಭಾ ಕ್ಷೇತ್ರದ ಸಂಸದೆ ಸುಪ್ರಿಯಾ ಸುಳೆ ಅವರು, ಎಲ್ಲಾ ರಾಜ್ಯಗಳಲ್ಲಿಯೂ ಲೋಕಸಭಾ ಸ್ಥಾನಗಳನ್ನು ಏಕರೂಪವಾಗಿ ಶೇಕಡಾ 50ರಷ್ಟು ಹೆಚ್ಚಿಸುವ ಪ್ರಸ್ತಾವನೆಯನ್ನು ಪರಿಗಣಿಸಲು ತಮ್ಮ ಪಕ್ಷ ಸಿದ್ಧವಿದೆ ಎಂದು ಹೇಳಿದ್ದಾರೆ. ಕೇಂದ್ರ ಸರ್ಕಾರ ಕೂಡ ಇದನ್ನು ಪರಿಗಣಿಸುವ ಸಾಧ್ಯತೆಯಿದೆ ಎನ್ನಲಾಗಿದೆ (ಏಜೆನ್ಸೀಸ್).