Bhojshala Verdict |  
ದೇಶ

700 ವರ್ಷಗಳ ಬಳಿಕ ಬೆಳಗಿದ ಅಖಂಡ ಜ್ಯೋತಿ!... ಹೈಕೋರ್ಟ್ ತೀರ್ಪಿನ ಬೆನ್ನಲ್ಲೇ ಭೋಜಶಾಲಾದಲ್ಲಿ ಐತಿಹಾಸಿಕ ಮಹಾ ಹವನ ಆರಂಭ | Bhojshala Verdict

Bhojshala Verdict: ಮಧ್ಯಪ್ರದೇಶದ ಧಾರ್ ಜಿಲ್ಲೆಯ ಐತಿಹಾಸಿಕ ಭೋಜಶಾಲಾ ಸಂಕೀರ್ಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಇತ್ತೀಚೆಗೆ ಮಹತ್ವದ ತೀರ್ಪು ನೀಡಿದ್ದು, ಇದರ ಬೆನ್ನಲ್ಲೇ ಮಂಗಳವಾರ ಇಲ್ಲಿ ವಿಶೇಷ ಹವನ ಮತ್ತು ಪ್ರಾರ್ಥನೆಗಳನ್ನು ಆಯೋಜಿಸಲಾಗಿತ್ತು. ಕೋರ್ಟ್ ತೀರ್ಪಿನ ಬಳಿಕ ಹಳೆಯ ನಿಯಮಗಳನ್ನು ತೆಗೆದುಹಾಕಿ ಹೊಸ ಮಾರ್ಗಸೂಚಿಗಳನ್ನು ಸಿದ್ಧಪಡಿಸುವ ಕೆಲಸ ಆರಂಭವಾಗಿದ್ದು, ಇದೀಗ ಭಕ್ತರು ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ವಿಶೇಷ ಪೂಜೆ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.
ಈ ಸೀಮಿತ ಅವಧಿಯಲ್ಲಿ ಹಿಂದೂ ಸಮುದಾಯದ ಜನ ಹೆಚ್ಚಿನ ಸಂಖ್ಯೆಯಲ್ಲಿ ಬಂದು ಭಾಗವಹಿಸಬೇಕೆಂದು ಆಯೋಜನಾ ಸಮಿತಿ ಮನವಿ ಮಾಡಿದ್ದು, ಕಳೆದ 23 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಇಲ್ಲಿ ಇಷ್ಟೊಂದು ದೊಡ್ಡ ಮಟ್ಟದ ಮಹಾಪೂಜೆ ನಡೆದಿದೆ. 2003ರ ನಂತರ ಪರಿಷ್ಕೃತ ನಿಯಮಗಳ ಅಡಿಯಲ್ಲಿ ಮೊದಲ ಬಾರಿಗೆ ಈ ಪೂಜೆಯನ್ನು ನಡೆಸಲಾಗುತ್ತಿದೆ. ಹೀಗಾಗಿ ಧಾರ್ ಜಿಲ್ಲೆಯ ಜನರ ಸಂಭ್ರಮಕ್ಕೆ ಸದ್ಯ ಪಾರವೇ ಇಲ್ಲದಂತಾಗಿದೆ.

ಮಸೀದಿ ಮತ್ತು ಸಮಾಧಿಗಳನ್ನು ತೆರವುಗೊಳಿಸುವುದೆ ನಮ್ಮ ಗುರಿ

ಭೋಜಶಾಲಾ ಉತ್ಸವ ಸಮಿತಿಯ ಪ್ರಧಾನ ವ್ಯವಸ್ಥಾಪಕರಾದ ಹೇಮಂತ್ ದೌರಾಯಾ, ಭೋಜಶಾಲಾ ಒಂದು ಐತಿಹಾಸಿಕ ಸರಸ್ವತಿ ದೇವಸ್ಥಾನವಾಗಿದೆ ಎಂದು ತಿಳಿಸಿದ್ದಾರೆ. ಕೋರ್ಟ್ ತೀರ್ಪಿನ ಬಳಿಕ ಮೊದಲ ಮಂಗಳವಾರದ ಪೂಜೆಯು ಒಂದು ದೊಡ್ಡ ಮಟ್ಟದ ಸಂಭ್ರಮಕ್ಕೆ ಸಾಕ್ಷಿಯಾಗಿದೆ. ಹಿಂದೂ ಸಮುದಾಯದವರು 2003 ರಿಂದಲೂ ಪ್ರತಿ ಮಂಗಳವಾರ ಇಲ್ಲಿ ಸತ್ಯಾಗ್ರಹ ನಡೆಸುತ್ತಾ ಬಂದಿದ್ದು, ಭೋಜಶಾಲಾ ಸಂಕೀರ್ಣವು ವಾಗ್ದೇವಿ ಸರಸ್ವತಿಯ ದೇವಸ್ಥಾನ ಎಂಬುದನ್ನು ಸಾಬೀತುಪಡಿಸುವುದೇ ಈ 23 ವರ್ಷಗಳ ದೀರ್ಘ ಇದರ ಮುಖ್ಯ ಗುರಿಯಾಗಿತ್ತು. 
ಮುಂದುವರಿದು ಮಾತನಾಡಿದ ಹೇಮಂತ್ ದೌರಾಯಾ, ಈ ಮಹಾ ಸತ್ಯಾಗ್ರಹದ ಮುಂದಿನ ಮುಖ್ಯ ಉದ್ದೇಶ ಈ ಸಂಕೀರ್ಣದ 300 ಮೀಟರ್ ವ್ಯಾಪ್ತಿಯಲ್ಲಿರುವ ಮಸೀದಿ ಮತ್ತು ಸಮಾಧಿಗಳನ್ನು ತೆರವುಗೊಳಿಸುವುದಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಭಕ್ತರು ದೇವಸ್ಥಾನದ ಆವರಣದೊಳಗೆ ಹವನ ಮತ್ತು ಪೂಜೆಗಳನ್ನು ನೆರವೇರಿಸಿದ್ದಾರೆ. ಹೈಕೋರ್ಟ್ ಶನಿವಾರ ತನ್ನ ಆದೇಶದಲ್ಲಿ ಭೋಜಶಾಲಾವನ್ನು ಸರಸ್ವತಿ ದೇವಿಯ ದೇವಸ್ಥಾನ ಎಂದು ಸ್ಪಷ್ಟವಾಗಿ ಘೋಷಿಸಿದ್ದು, ಈ ಐತಿಹಾಸಿಕ ನಿರ್ಧಾರದ ಬಳಿಕ ಹಿಂದೂಗಳಿಗೆ ಕೇವಲ ಮಂಗಳವಾರದ ಬದಲಾಗಿ ವರ್ಷದ ಎಲ್ಲಾ ದಿನಗಳಲ್ಲೂ ಪೂಜೆ ಸಲ್ಲಿಸಲು ಅನುಮತಿ ನೀಡಲಾಗಿದೆ. ಈ ಹಿಂದೆ ಆರ್ಕಿಯಾಲಜಿಕಲ್ ಸರ್ವೆ ಆಫ್ ಇಂಡಿಯಾ (ASI) ಅಳವಡಿಸಿದ್ದ ಬೋರ್ಡ್ ಅನ್ನು ಈಗ ಪೇಂಟ್ ಮಾಡಿ ಅಳಿಸಿಹಾಕಲಾಗಿದೆ.
ಕೋರ್ಟ್ ಆದೇಶದ ಬೆನ್ನಲ್ಲೇ ರಾಜಾ ಭೋಜ ಸಂಕೀರ್ಣದಲ್ಲಿ ಕಳೆದ 700 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಅಖಂಡ ಜ್ಯೋತಿಯನ್ನು ಬೆಳಗಿಸಲಾಗಿದೆ. ಅಷ್ಟೇ ಅಲ್ಲದೆ, 2003 ರ ನಂತರ ಮೊದಲ ಬಾರಿಗೆ ಗರ್ಭಗುಡಿಯಲ್ಲಿ ವಾಗ್ದೇವಿ ದೇವಿಯ ಸಾಂಕೇತಿಕ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದ್ದು, ಭೋಜಶಾಲಾ ಚಳವಳಿಗೆ ಸಂಬಂಧಿಸಿದ ಮೂವರು ಹುತಾತ್ಮರ ಫೋಟೋಗಳನ್ನು ಸಹ ಇದೇ ಮೊದಲ ಬಾರಿಗೆ ಒಳಗಿನ ಆವರಣದಲ್ಲಿ ಇರಿಸಲಾಗಿದೆ(ಏಜೆನ್ಸೀಸ್​).