Strait Of Hormuz  
ದೇಶ

ಹಾರ್ಮುಜ್ ಜಲಸಂಧಿಯಲ್ಲಿ ಭಾರತದ ಹಡಗುಗಳಿಗೆ ಸ್ಪೆಷಲ್ ಎಂಟ್ರಿ: ಇರಾನ್ ಒಪ್ಪಿಗೆ ನೀಡಿದ ರಹಸ್ಯ ಬಿಚ್ಚಿಟ್ಟ ಜೈಶಂಕರ್! | Strait Of Hormuz

ನವದೆಹಲಿ: ಮಧ್ಯಪ್ರಾಚ್ಯದಲ್ಲಿ ಯುದ್ಧದ ಕಾರ್ಮೋಡ ಕವಿದು, ಇರಾನ್ ಹಾಗೂ ಅಮೆರಿಕ-ಇಸ್ರೇಲ್ ನಡುವೆ ಸಂಘರ್ಷ ತಾರಕಕ್ಕೇರಿರುವ ಈ ಸಂದಿಗ್ಧ ಸಮಯದಲ್ಲಿ ಭಾರತ ಮಹತ್ವದ ರಾಜತಾಂತ್ರಿಕ ಯಶಸ್ಸು ಸಾಧಿಸಿದೆ. 
ಜಾಗತಿಕ ತೈಲ ಮತ್ತು ಅನಿಲ ಪೂರೈಕೆಯ ಪ್ರಮುಖ ಕೇಂದ್ರವಾದ 'ಹಾರ್ಮುಜ್ ಜಲಸಂಧಿ'ಯನ್ನು (Strait of Hormuz) ಇರಾನ್ ಸಂಪೂರ್ಣವಾಗಿ ಬಂದ್ ಮಾಡಿದ್ದರೂ, ಭಾರತದ ಎರಡು ದೈತ್ಯ ಗ್ಯಾಸ್ ಟ್ಯಾಂಕರ್ ಹಡಗುಗಳಿಗೆ ಸುರಕ್ಷಿತವಾಗಿ ಸಾಗಲು ಇರಾನ್ ಅನುಮತಿ ನೀಡಿದೆ. ಈ ಕುರಿತು ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ್ ಕ್ಲ್ಯಾರಿಟಿ ಕೊಟ್ಟಿದ್ದಾರೆ. 
ಇರಾನ್ ಸರ್ಕಾರದೊಂದಿಗೆ ನಾವು ನಡೆಸಿದ ಮಾತುಕತೆಗಳು ಸಕಾರಾತ್ಮಕ ಫಲಿತಾಂಶ ನೀಡಿವೆ, ಎಂದು ಸಚಿವ ಡಾ. ಎಸ್. ಜೈಶಂಕರ್ ಅಧಿಕೃತಪಡಿಸಿದ್ದಾರೆ.

ಹೇಗಿತ್ತು ಮಾತುಕತೆ?

ಹಾರ್ಮುಜ್ ಜಲಸಂಧಿಯಲ್ಲಿ ಭಾರತೀಯ ಧ್ವಜ ಹೊಂದಿರುವ ಹಡಗುಗಳ ಮುಕ್ತ ಸಂಚಾರಕ್ಕಾಗಿ ಇರಾನ್ ಜೊತೆ ಭಾರತ ಸತತವಾಗಿ ಸಂಪರ್ಕದಲ್ಲಿದೆ. "ನಾನು ವೈಯಕ್ತಿಕವಾಗಿ ಇರಾನ್ ಅಧಿಕಾರಿಗಳೊಂದಿಗೆ ಚರ್ಚಿಸುತ್ತಿದ್ದೇನೆ. ನಮ್ಮ ಮಾತುಕತೆಯಿಂದ ಫಲಿತಾಂಶಗಳು ಗೋಚರಿಸುತ್ತಿವೆ. ಆದರೆ, ಇದು ಕೇವಲ ಆರಂಭವಷ್ಟೇ. ಎಲ್ಲಾ ಹಡಗುಗಳಿಗೂ ಒಂದೇ ಬಾರಿಗೆ ಅನ್ವಯವಾಗುವಂತಹ ಯಾವುದೇ ಸಾರ್ವತ್ರಿಕ ಒಪ್ಪಂದ ನಮಗಿಲ್ಲ. ಪ್ರತಿ ಹಡಗಿನ ಸಂಚಾರವೂ ಆಯಾ ಸಮಯದ ಮಾತುಕತೆಯ ಮೇಲೆ ನಿರ್ಧಾರವಾಗುತ್ತದೆ," ಎಂದು ಜೈಶಂಕರ್ ಸ್ಪಷ್ಟಪಡಿಸಿದ್ದಾರೆ.
ಈ ವಿಶೇಷ ರಿಯಾಯಿತಿಗೆ ಪ್ರತಿಯಾಗಿ ಭಾರತ ಇರಾನ್‌ಗೆ ಏನನ್ನಾದರೂ ನೀಡಿದೆಯೇ? ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, "ಇದು ಕೊಡು-ಕೊಳ್ಳುವಿಕೆಯ ವ್ಯವಹಾರವಲ್ಲ. ಭಾರತ ಮತ್ತು ಇರಾನ್ ನಡುವೆ ದಶಕಗಳ ಕಾಲದ ಐತಿಹಾಸಿಕ ಸಂಬಂಧವಿದೆ. ಆ ನಂಬಿಕೆಯ ಆಧಾರದ ಮೇಲೆ ನಾವು ಮಾತುಕತೆ ನಡೆಸುತ್ತಿದ್ದೇವೆ," ಎಂದಿದ್ದಾರೆ.

'ಶಿವಲಿಕ್' ಮತ್ತು 'ನಂದಾದೇವಿ'

ಭಾರತಕ್ಕೆ ಬರಬೇಕಿದ್ದ 'ಶಿವಲಿಕ್' ಮತ್ತು 'ನಂದಾದೇವಿ' ಎಂಬ ಎರಡು ಬೃಹತ್ ಟ್ಯಾಂಕರ್‌ಗಳು ಸುಮಾರು 92,700 ಮೆಟ್ರಿಕ್ ಟನ್ ಎಲ್‌ಪಿಜಿಯನ್ನು ಹೊತ್ತು ಬರುತ್ತಿವೆ. ಸದ್ಯ ಹಾರ್ಮುಜ್ ಜಲಸಂಧಿಯನ್ನು ಸುರಕ್ಷಿತವಾಗಿ ದಾಟಿರುವ ಈ ಹಡಗುಗಳು ಮುಂದಿನ ಎರಡು ದಿನಗಳಲ್ಲಿ ಗುಜರಾತ್‌ನ ಮುದ್ರಾ ಮತ್ತು ಕಾಂಡ್ಲಾ ಬಂದರುಗಳನ್ನು ತಲುಪುವ ನಿರೀಕ್ಷೆಯಿದೆ. ದೇಶದಲ್ಲಿ ಅಡುಗೆ ಅನಿಲದ ಕೊರತೆಯಾಗದಂತೆ ತಡೆಯಲು ಈ ಹಡಗುಗಳ ಆಗಮನ ಅತ್ಯಂತ ನಿರ್ಣಾಯಕವಾಗಿದೆ.

ಭಾರತಕ್ಕೆ ಹಾರ್ಮುಜ್ ಜಲಸಂಧಿ ಏಕೆ ಮುಖ್ಯ?

ವಿಶ್ವದ ಒಟ್ಟು ಕಚ್ಚಾ ತೈಲ ಮತ್ತು ನೈಸರ್ಗಿಕ ಅನಿಲದ ಸುಮಾರು ಶೇ. 20ರಷ್ಟು ವ್ಯಾಪಾರ ಈ ಹಾರ್ಮುಜ್ ಜಲಸಂಧಿಯ ಮೂಲಕವೇ ನಡೆಯುತ್ತದೆ. ಪರ್ಷಿಯನ್ ಗಲ್ಫ್‌ನಿಂದ ಅರಬ್ಬಿ ಸಮುದ್ರಕ್ಕೆ ಇರುವ ಏಕೈಕ ಪ್ರವೇಶ ದ್ವಾರ ಇದಾಗಿದೆ. ಭಾರತವು ವಿಶ್ವದ ನಾಲ್ಕನೇ ಅತಿ ದೊಡ್ಡ ಎಲ್‌ಎನ್‌ಜಿ (LNG) ಖರೀದಿದಾರ ಮತ್ತು ಎರಡನೇ ಅತಿ ದೊಡ್ಡ ಎಲ್‌ಪಿಜಿ (LPG) ಖರೀದಿದಾರ ದೇಶವಾಗಿದೆ. ನಮಗೆ ಬೇಕಾದ ಅನಿಲದ ಬಹುಪಾಲು ಮಧ್ಯಪ್ರಾಚ್ಯ ರಾಷ್ಟ್ರಗಳಿಂದಲೇ ಬರುತ್ತದೆ. ಇರಾನ್ ಈ ಹಾದಿಯನ್ನು ಮುಚ್ಚಿದರೆ ಭಾರತದ ಇಂಧನ ಭದ್ರತೆಗೆ ದೊಡ್ಡ ಹೊಡೆತ ಬೀಳುವ ಸಾಧ್ಯತೆಯಿದೆ.

ಕೈಗಾರಿಕೆಗಳ ಮೇಲೆ ಯುದ್ಧದ ಪ್ರಭಾವ

ಇರಾನ್ ಮತ್ತು ಇಸ್ರೇಲ್ ಸಂಘರ್ಷದಿಂದಾಗಿ ಅನಿಲ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗುತ್ತಿದ್ದು, ಸೆರಾಮಿಕ್ ಟೈಲ್ಸ್ ಸೇರಿದಂತೆ ಹತ್ತಾರು ಕೈಗಾರಿಕೆಗಳು ಉತ್ಪಾದನಾ ಬಿಕ್ಕಟ್ಟನ್ನು ಎದುರಿಸುತ್ತಿವೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ಮನೆಬಳಕೆಯ ಗ್ಯಾಸ್ ಮತ್ತು ಸಾರಿಗೆ ಕ್ಷೇತ್ರಕ್ಕೆ ಆದ್ಯತೆ ನೀಡುವಂತೆ ಈಗಾಗಲೇ ಆದೇಶಿಸಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯಾನ್ ಅವರೊಂದಿಗೆ ಇತ್ತೀಚೆಗೆ ಮಾತುಕತೆ ನಡೆಸಿ, ಸರಕು ಮತ್ತು ಇಂಧನ ಸಾಗಣೆಯ ಕುರಿತು ಸುದೀರ್ಘ ಚರ್ಚೆ ನಡೆಸಿದ್ದರು. ಈ ಉನ್ನತ ಮಟ್ಟದ ರಾಜತಾಂತ್ರಿಕ ಸಂಪರ್ಕವೇ ಈಗ ಹಡಗುಗಳ ಬಿಡುಗಡೆಗೆ ಪ್ರಮುಖ ಕಾರಣವಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ,(ಏಜೆನ್ಸೀಸ್​).