ಉದ್ದವ್ ಠಾಕ್ರೆ ಮತ್ತು ಸ್ಪೀಕರ್ ಓಂ ಬಿರ್ಲಾ  
ದೇಶ

ಶಿವಸೇನಾ ಉದ್ದವ್ ಬಣಕ್ಕೆ ಸ್ಪೀಕರ್ ಓಂ ಬಿರ್ಲಾ ಶಾಕ್: ಆರು ಸಂಸದರು ಶಿಂಧೆ ಬಣ ಸೇರ್ಪಡೆಗೆ ಅನುಮೋದನೆ: ಟಿಎಂಸಿ ರೆಬಲ್ಸ್​ಗೂ ಪ್ರತ್ಯೇಕ ಆಸನ | Speaker Om Birla

ನವದೆಹಲಿ: ಸೋಮವಾರದಿಂದ ಆರಂಭವಾಗಲಿರುವ ಮಳೆಗಾಲದ ಸಂಸತ್ ಅಧಿವೇಶನಕ್ಕೂ ಮುನ್ನ ಶನಿವಾರ(ಜು. 18) ಶಿವಸೇನಾ ಉದ್ಧವ್ ಬಣಕ್ಕೆ ಶಾಕ್ ನೀಡಿರುವ ಲೋಕಸಭೆ ಸ್ಪೀಕರ್ ಓಂ ಬಿರ್ಲಾ(Speaker Om Birla), ಆರು ಸಂಸದರು ಶಿಂಧೆ ಬಣ ಸೇರ್ಪಡೆಗೆ ಅನುಮೋದನೆ ನೀಡಿದ್ದು, ಟಿಎಂಸಿ ರೆಬೆಲ್ಸ್ ಸಂಸದರಿಗೂ ಪ್ರತ್ಯೇಕ ಆಸನ ವ್ಯವಸ್ಥೆ ಹಂಚಿಕೆ ಮಾಡಿದ್ದಾರೆ ಎಂದು ವರದಿಯಾಗಿದೆ.
ಲೋಕಸಭೆಯ ಸಚಿವಾಲಯ ಹೊರಡಿಸಿದ ಅಧಿಕೃತ ಸಂವಹನವು 18ನೇ ಲೋಕಸಭೆಯಲ್ಲಿ ಪಕ್ಷದ ಪರಿಷ್ಕೃತ ಸ್ಥಾನಗಳಲ್ಲಿನ ಬದಲಾವಣೆಯನ್ನು ಖಚಿತಪಡಿಸಿದೆ ಎನ್ನಲಾಗಿದೆ. ಇದು ಉದ್ಧವ್ ಠಾಕ್ರೆ ನೇತೃತ್ವದ ಬಣದಿಂದ ಆರು ಸಂಸದರು ಔಪಚಾರಿಕ ಶಿಂಧೆ ಶಿವಸೇನೆಯಲ್ಲಿ ವಿಲೀನವಾಗಿರುವದನ್ನು ಅನುಮೋದಿಸಿರುವುದನ್ನು ಪ್ರತಿಬಿಂಬಿಸುತ್ತದೆ.
ಇನ್ನೂ ಅದೇ ಸಮಯದಲ್ಲಿ, ತೃಣಮೂಲ ಕಾಂಗ್ರೆಸ್​ನೊಳಗಿನ ತೀವ್ರ ಬಿಕ್ಕಟ್ಟನ್ನು ಪರಿಹರಿಸಿದ ಸ್ಪೀಕರ್, ಪಕ್ಷದ ಮುಖ್ಯಸ್ಥೆ ಮಮತಾ ಬ್ಯಾನರ್ಜಿಯವರಿಂದ ಸಿಡಿದು ಬಂಡಾಯವೆದ್ದಿರುವ 20 ಬಂಡಾಯ ಟಿಎಂಸಿ ಸಂಸದರಿಗೆ ಸದನದೊಳಗೆ ಪ್ರತ್ಯೇಕ ಆಸನ ವ್ಯವಸ್ಥೆ ಮಾಡುವುದಕ್ಕೆ ನಿರ್ದೇಶನ ನೀಡಿದ್ದಾರೆ.
ಹಿರಿಯ ರಾಜಕಾರಣಿ ಸುದೀಪ್ ಬಂಡೋಪಾಧ್ಯಾಯ ನೇತೃತ್ವದ ಬಂಡಾಯ ಸಂಸದರು ರಾಜಕೀಯ ಪಕ್ಷವಾದ ನ್ಯಾಷನಲಿಸ್ಟ್ ಸಿಟಿಜನ್ಸ್ ಪಾರ್ಟಿ ಆಫ್ ಇಂಡಿಯಾ (ಎನ್‌ಸಿಪಿಐ) ನೊಂದಿಗೆ ವಿಲೀನಗೊಂಡಿದ್ದಾರೆ. ಮತ್ತು ಮಾತೃ ಟಿಎಂಸಿ ಬ್ಲಾಕ್‌ನಿಂದ ಪ್ರತ್ಯೇಕ ಆಸನ ವ್ಯವಸ್ಥೆಗೆ ಕೋರಿದ್ದರು. ಅದಕ್ಕೆ ಇಂದು ಸ್ಪೀಕರ್ ಅನುಮೋದಿಸಿದ್ದಾರೆ.
ಆದರೆ ಸಂಸದೀಯ ಮತ್ತು ಸಾಂವಿಧಾನಿಕ ತಜ್ಞರು ಕಾನೂನು ನಿಯತಾಂಕಗಳನ್ನು ಪರಿಶೀಲಿಸುತ್ತಿರುವುದರಿಂದ ಎನ್‌ಸಿಪಿಐ ಬ್ಯಾನರ್ ಅಡಿಯಲ್ಲಿ ಗುಂಪನ್ನು ಔಪಚಾರಿಕವಾಗಿ ಗುರುತಿಸಬೇಕೆ ಅಥವಾ ಬೇಡವೇ ಎಂಬುದರ ಕುರಿತು ಅಂತಿಮ ನಿರ್ಧಾರ ಬಾಕಿ ಇದೆ ಎಂದು ಅಧಿಕೃತ ಮೂಲಗಳು ಸೂಚಿಸಿವೆ.
ಶಿವಸೇನೆಯ ಆರು ಸಂಸದರು ಮತ್ತು ಟಿಎಂಸಿಯ ಇಪ್ಪತ್ತು ಸಂಸದರ ಬಂಡಾಯದಿಂದ ಸಂಸತ್​ನಲ್ಲಿ ಆಡಳಿತಾರೂಢ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್‌ಡಿಎ) ಸಂಖ್ಯಾಬಲ ಹೆಚ್ಚಳವಾಗಿದೆ. ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರು ಬಂಡೋಪಾಧ್ಯಾಯ ಮತ್ತು ಎನ್‌ಸಿಪಿಐ ಮುಖ್ಯ ಸಚೇತಕ ಡಾ. ಕಾಕೋಲಿ ಘೋಷ್ ದಸ್ತಿದಾರ್ ಅವರನ್ನು ಸರ್ಕಾರದ ಸಾಂಪ್ರದಾಯಿಕ ಸರ್ವಪಕ್ಷ ನಾಯಕರ ಸಭೆಯಲ್ಲಿ ಭಾಗವಹಿಸಲು ಆಹ್ವಾನಗಳನ್ನು ನೀಡಿದ್ದಾರೆ (ಏಜೆನ್ಸೀಸ್).