ನವದೆಹಲಿ: ಭೂಮಿಯ ಕಕ್ಷೆಯಲ್ಲಿ ಅಪಾಯಕಾರಿಯಾಗಿ ಹೆಚ್ಚುತ್ತಿರುವ ಬಾಹ್ಯಾಕಾಶ ಕಸವನ್ನು ನಿಯಂತ್ರಿಸಲು ಭಾರತ ‘ಸ್ವಚ್ಛ ಬಾಹ್ಯಾಕಾಶ’ (ಡೆಬ್ರಿಸ್ ಫ್ರೀ ಸ್ಪೇಸ್ ಮಿಷನ್ -ಡಿಎಫ್ಎಸ್ಎಂ) ಎಂಬ ಮಹತ್ವಾಕಾಂಕ್ಷಿ ಯೋಜನೆಗೆ ಮುನ್ನುಡಿ ಬರೆದಿದೆ. 2030ರ ವೇಳೆಗೆ ದೇಶದ ಎಲ್ಲ ಬಾಹ್ಯಾಕಾಶ ಕಾರ್ಯåಚರಣೆಗಳನ್ನು ಕಸಮುಕ್ತ ಮಾಡುವ ಗುರಿ ಹೊಂದಲಾಗಿದೆ ಎಂದು ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಜಿತೇಂದ್ರ ಸಿಂಗ್ ತಿಳಿಸಿದ್ದಾರೆ.
ಪ್ರಸ್ತುತ ಬಾಹ್ಯಾಕಾಶದಲ್ಲಿ ಭಾರತಕ್ಕೆ ಸೇರಿದ 129 ಗುರುತಿಸಬಹುದಾದ ತ್ಯಾಜ್ಯ ವಸ್ತುಗಳಿವೆ. ಇವುಗಳಲ್ಲಿ ನಿಷ್ಕ್ರಿಯಗೊಂಡ ಉಪಗ್ರಹಗಳು ಹಾಗೂ ರಾಕೆಟ್ನ ಬಿಡಿಭಾಗಗಳು ಸೇರಿವೆ. ಜಾಗತಿಕ ಬಾಹ್ಯಾಕಾಶ ತ್ಯಾಜ್ಯಕ್ಕೆ ಹೋಲಿಸಿದರೆ ಭಾರತದ ಪಾಲು ಶೇ.1ಕ್ಕಿಂತ ಕಡಿಮೆ ಇದೆ. ಅಮೆರಿಕ ಮತ್ತು ರಷ್ಯಾ ಶೇ.70-80ರಷ್ಟು ಪಾಲು ಹೊಂದಿವೆ. ಬೋಲ್ಟ್ ಗಾತ್ರದ ತುಣುಕು ಕೂಡ ಉಪಗ್ರಹವನ್ನು ನಿಷ್ಕ್ರಿಯಗೊಳಿಸಬಲ್ಲದು. ಹೀಗಾಗಿ ಕಕ್ಷೆಯ ಸುರಕ್ಷತೆಯ ದೃಷ್ಟಿಯಿಂದ ಇಸ್ರೋ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುತ್ತಿದೆ. ಮಿಷನ್ ಮುಗಿದ ನಂತರ ಉಪಗ್ರಹಗಳನ್ನು ಭೂಮಿಯ ವಾತಾವರಣಕ್ಕೆ ತಂದು ಸುಟ್ಟುಹಾಕುವ ತಂತ್ರಜ್ಞಾನ ಹಾಗೂ ಉಪಗ್ರಹಗಳ ಚಲನವಲನಗಳ ಮೇಲೆ ನಿಗಾ ಇಡಲು ‘ನೇತ್ರಾ’ ಕಣ್ಗಾವಲು ವ್ಯವಸ್ಥೆಯನ್ನು ಸಕ್ರಿಯಗೊಳಿಸಲಾಗಿದೆ.
ಇದೇ ವೇಳೆ ಖಾಸಗಿ ವಲಯವೂ ಈ ಪ್ರಯತ್ನಕ್ಕೆ ಕೈಜೋಡಿಸಿದೆ. ಹೈದರಾಬಾದ್ ಮೂಲದ ‘ಕಾಸ್ಮೋಸರ್ವ್ ಸ್ಪೇಸ್’ ನವೋದ್ಯಮವು ಉಪಗ್ರಹಗಳ ದುರಸ್ತಿ ಮತ್ತು ಬಾಹ್ಯಾಕಾಶ ತ್ಯಾಜ್ಯ ತೆರವುಗೊಳಿಸುವ ‘ಡ್ಯುಯಲ್ ಸ್ಪೇಸ್ಕ್ರಾಫ್ಟ್ ಆರ್ಕಿಟೆಕ್ಚರ್’ ತಂತ್ರಜ್ಞಾನ ಅಭಿವೃದ್ಧಿಪಡಿಸಲು ನೂತನ ಸೌಲಭ್ಯವನ್ನು ಆರಂಭಿಸಿದೆ. ಸ್ಟಾರ್ಲಿಂಕ್ನಂಥ ಸಾವಿರಾರು ಉಪಗ್ರಹಗಳ ಮೆಗಾ ಸಮೂಹಗಳಿಂದ ಬಾಹ್ಯಾಕಾಶದಲ್ಲಿ ಸಂಚಾರ ದಟ್ಟಣೆ ಹೆಚ್ಚುತ್ತಿರುವ ಸಂದರ್ಭದಲ್ಲಿ, ಭಾರತದ ಈ ‘ಸ್ವಚ್ಛ ಬಾಹ್ಯಾಕಾಶ’ ಪರಿಕಲ್ಪನೆಯು ಜಾಗತಿಕ ಬಾಹ್ಯಾಕಾಶ ಪರಿಸರ ಸಂರಕ್ಷಣೆಯಲ್ಲಿ ಪ್ರಮುಖ ಹೆಜ್ಜೆಯಾಗಿದೆ.