ನವದೆಹಲಿ: ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷ (ಎಸ್ಪಿ) ನಡುವಿನ ಸೀಟು ಹಂಚಿಕೆ ಸಂಘರ್ಷ ಮುಂದುವರೆದಿದ್ದು, ಅಖಿಲೇಶ್ ಯಾದವ್ ಅವರ ಪಕ್ಷದೊಂದಿಗಿನ ಮೈತ್ರಿ ಏರ್ಪಡದಿದ್ರೆ, ಕಾಂಗ್ರೆಸ್ ಪಕ್ಷ ಇತರ ರಾಜಕೀಯ ಆಯ್ಕೆಗಳನ್ನು ಪರಿಗಣಿಸಬಹುದು ಸಂಸದ ಇಮ್ರಾನ್ ಮಸೂದ್ ಸುಳಿವು ನೀಡಿದ್ದಾರೆ.
ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷದೊಂದಿಗೆ ಮಾತುಕತೆಗಳನ್ನು ಪುನರಾರಂಭಿಸಲು ಕಾಂಗ್ರೆಸ್ ನಾಯಕರು ಮತ್ತು ಪಕ್ಷದ ಉಸ್ತುವಾರಿಗಳು ಪ್ರಯತ್ನಿಸುತ್ತಿರುವ ನಡುವೆಯೇ, ಸೀಟು ಹಂಚಿಕೆ ವಿಷಯದಲ್ಲಿ ಸಹರನ್ಪುರ ಸಂಸದ ಇಮ್ರಾನ್ ಮಸೂದ್ ಹೆಚ್ಚು ಕಠಿಣ ನಿಲುವನ್ನು ತಳೆದಿದ್ದಾರೆ.
ಬಹುಜನ ಸಮಾಜ ಪಕ್ಷದ ಮುಖ್ಯಸ್ಥೆ ಮಾಯಾವತಿಯನ್ನು "ದೊಡ್ಡ ನಾಯಕಿ" ಎಂದು ಹೊಗಳಿರುವ ಮಸೂದ್, ಪರ್ಯಾಯ ವ್ಯವಸ್ಥೆಯ ಸಾಧ್ಯತೆ ಇನ್ನೂ ಮುಕ್ತವಾಗಿದೆ ಎಂದು ಹೇಳುತ್ತಾ, ಬಿಎಸ್ಪಿ ಜೊತೆಗೆ ಮೈತ್ರಿ ಬಾಗಿಲು ತೆರೆದಿದೆ ಎಂದಿದ್ದಾರೆ.
ಸಂಭಾವ್ಯ ರಾಜಕೀಯ ಮೈತ್ರಿ ಸಾಧ್ಯತೆಯು ಸ್ವತಃ ಬಿಎಸ್ಪಿ ಮುಖ್ಯಸ್ಥರ ನಿರ್ಧಾರವನ್ನೇ ಅವಲಂಬಿಸಿದೆ. ತಮ್ಮನ್ನು ಆಹ್ವಾನಿಸಬೇಕೇ ಅಥವಾ ಬೇಡವೇ ಎಂಬುದು ಮಾಯಾವತಿ ಅವರಿಗೆ ಬಿಟ್ಟ ವಿಷಯ ಎಂದು ಹೇಳಿದ್ದಾರೆ.
ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ಮುನ್ನ ಸೀಟು ಹಂಚಿಕೆಯ ವಿಷಯದಲ್ಲಿ ಕಾಂಗ್ರೆಸ್ ಮತ್ತು ಎಸ್ಪಿ ನಡುವೆ ಸಂಘರ್ಷ ಮುಂದುವರಿದಿರುವ ಹಿನ್ನೆಲೆಯಲ್ಲಿ ಮಸೂದ್ ಅವರ ಈ ಹೇಳಿಕೆ ಹೊರಬಿದ್ದಿದೆ. ಭಿನ್ನಾಭಿಪ್ರಾಯಗಳನ್ನು ಬಗೆಹರಿಸಿಕೊಳ್ಳಲು ಸಮಾಜವಾದಿ ಪಕ್ಷದೊಂದಿಗೆ ಮತ್ತೊಂದು ಸುತ್ತಿನ ಮಾತುಕತೆ ನಡೆಸುವ ಭರವಸೆಯನ್ನು ಕಾಂಗ್ರೆಸ್ ನಾಯಕರು ಹೊಂದಿದ್ದಾರೆ. ಆದರೆ, ಕಾಂಗ್ರೆಸ್ ತನ್ನ ಮತ ಹಂಚಿಕೆಗೆ ಅನುಗುಣವಾಗಿ ಸ್ಥಾನಗಳನ್ನು ಪಡೆಯಬೇಕು ಎಂಬ ತನ್ನ ನಿಲುವನ್ನು ಸಮಾಜವಾದಿ ಪಕ್ಷ ಪುನರುಚ್ಚರಿಸಿದೆ (ಏಜೆನ್ಸೀಸ್).