ದಕ್ಷಿಣ ಭಾರತೀಯರಿಗೆ ಎಸ್ಎಸ್ಸಿ ಪರೀಕ್ಷೆ ಮಾಹಿತಿ ಕೊರತೆ
| ಪ್ರಶಾಂತ್ ರಿಪ್ಪನ್ಪೇಟೆ, ಬೆಂಗಳೂರು
ವಿದ್ಯಾಭ್ಯಾಸದ ನಂತರ ಉದ್ಯೋಗ ಅರಸುವ ವಿದ್ಯಾರ್ಥಿಗಳಿಗೆ ಸರ್ಕಾರಿ ನೌಕರಿಯ ಕನಸು ಸಹಜ. ಆದರೆ ಕೇಂದ್ರ ಸರ್ಕಾರಿ ನೌಕರಿ ಬಗ್ಗೆ ಕನ್ನಡಿಗರಲ್ಲಿ ನಿರಾಸಕ್ತಿ ಇರುವುದು ಕಂಡುಬರುತ್ತಿದೆ. ಇದರಿಂದಾಗಿ ಕೇಂದ್ರ ಸರ್ಕಾರದ ಕರ್ನಾಟಕ ಪ್ರಾದೇಶಿಕ ಕಚೇರಿಗಳಲ್ಲಿ ಉತ್ತರ ಭಾರತೀಯರೇ ಹೆಚ್ಚಾಗುತ್ತಿದ್ದಾರೆ.
ಕೇಂದ್ರ ಸರ್ಕಾರದ ಇಲಾಖೆಗಳಿಗೆ ಅಗತ್ಯವಿರುವ ಸಿಬ್ಬಂದಿ ಆಯ್ಕೆ ಮಾಡಲು ಸ್ಟಾಫ್ ಸೆಲೆಕ್ಷನ್ ಕಮಿಷನ್ (ಎಸ್ಎಸ್ಸಿ) ವರ್ಷಕ್ಕೆ ಎರಡು ಬಾರಿ ಪರೀಕ್ಷೆ ನಡೆಸುತ್ತದೆ. ಆದರೆ ಈ ಪರೀಕ್ಷೆಗಳಲ್ಲಿ ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದವರ ನಿರಾಸಕ್ತಿ ಎದ್ದು ಕಾಣುತ್ತಿದೆ. ಈ ಹಿಂದೆ ಕೇವಲ ಹಿಂದಿ ಮತ್ತು ಇಂಗ್ಲಿಷ್ನಲ್ಲಿ ನಡೆಯುತ್ತಿದ್ದ ಎಸ್ಎಸ್ಸಿ ಪರೀಕ್ಷೆಗಳನ್ನು ಕಳೆದ 2 ವರ್ಷದಿಂದ ಪ್ರಾದೇಶಿಕ ಭಾಷೆಯಲ್ಲೂ ನಡೆಸಲಾಗುತ್ತಿದೆ. ಆದರೆ ಈ ಬಗ್ಗೆ ಕನ್ನಡಿಗರಲ್ಲಿ ಮಾಹಿತಿಯ ಕೊರತೆ ಇರುವುದು ಇತ್ತೀಚಿನ ಪರೀಕ್ಷೆಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳ ಹಿನ್ನೆಲೆಯಿಂದ ಗೊತ್ತಾಗುತ್ತದೆ.
ಐಎಎಸ್, ಕೆಎಎಸ್ನಂತಹ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ವರ್ಷಗಟ್ಟಲೆ ತಯಾರಿ ನಡೆಸಿ, ನಾಲ್ಕಾರು ಬಾರಿ ಪ್ರಯತ್ನ ನಡೆಸುವ ಅಭ್ಯರ್ಥಿಗಳು ಒಂದು ವೇಳೆ ಪ್ರಯತ್ನ ಫಲಿಸದಿದ್ದರೆ ಖಾಸಗಿ ವಲಯದಲ್ಲಿ ಕಡಿಮೆ ವೇತನದ ಉದ್ಯೋಗಕ್ಕೆ ಹೋಗುವುದನ್ನು ಕಾಣುತ್ತೇವೆ. ಆದರೆ ಸ್ಪರ್ಧಾತ್ಮಕ ಪರೀಕ್ಷೆಗೆ ನಡೆಸಿದ ತಯಾರಿಯ ಅರ್ಧದಷ್ಟು ಶ್ರಮ ಪಟ್ಟರೂ ಎಸ್ಎಸ್ಸಿ ಪರೀಕ್ಷೆಯಲ್ಲಿ ಯಶಸ್ಸು ಸಾಧಿಸಿ ಕೇಂದ್ರ ಸರ್ಕಾರದ ವಿವಿಧ ಇಲಾಖೆಯ ಉನ್ನತ ಹುದ್ದೆಗೆ ಆಯ್ಕೆಯಾಗಬಹುದು. ಪರೀಕ್ಷಾ ವಿಧಾನ, ದಿನಾಂಕ, ಹುದ್ದೆಗಳ ವಿವರ ಇತ್ಯಾದಿ ಎಲ್ಲ ಮಾಹಿತಿ ಕೂಡಾ ಎಸ್ಎಸ್ಸಿ ವೆಬ್ಸೈಟ್ನಲ್ಲಿ ದೊರೆಯಲಿದೆ.
ಉತ್ತಮ ವೇತನ, ಬಡ್ತಿ, ವೃತ್ತಿ ಭದ್ರತೆ: ಕರ್ನಾಟಕದ ಖಾಸಗಿ ವಲಯದಲ್ಲಿ ಹೆಚ್ಚಿನ ಉದ್ಯೋಗಾವಕಾಶ ಹಾಗೂ ಆರ್ಥಿಕ ಕ್ಷೇತ್ರ ಸಬಲವಾಗಿರುವುದರಿಂದ, ಇಲ್ಲಿನ ಜನ ಕೇಂದ್ರ ಸರ್ಕಾರಿ ಹುದ್ದೆಗಳ ಬಗ್ಗೆ ಅಷ್ಟಾಗಿ ತಲೆ ಕೆಡಿಸಿಕೊಳ್ಳುತ್ತಿಲ್ಲ. ಇದರ ಪರಿಣಾಮವಾಗಿ ಬಿಹಾರ, ಉತ್ತರ ಪ್ರದೇಶ, ರಾಜಸ್ಥಾನ, ಹರ್ಯಾಣ ಮತ್ತು ದೆಹಲಿ ಮತ್ತಿತರ ಉತ್ತರ ಭಾರತದ ಜನರು ಕರ್ನಾಟಕದಲ್ಲಿರುವ ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳ ಪ್ರಾದೇಶಿಕ ಕಚೇರಿಗಳಲ್ಲಿ ಉದ್ಯೋಗ ಪಡೆದುಕೊಳ್ಳುತ್ತಿದ್ದಾರೆ. ಕನಿಷ್ಟ 50 ಸಾವಿರದಿಂದ ಆರಂಭವಾಗುವ ಉತ್ತಮ ವೇತನವಿದ್ದು, ಎಸ್ಎಸ್ಸಿ ಪರೀಕ್ಷೆಯಲ್ಲಿ ಗಳಿಸಿದ ರ್ಯಾಂಕ್ ಆಧರಿಸಿ ಹುದ್ದೆಯ ಗ್ರೇಡ್ ಕೂಡಾ ನಿರ್ಣಯವಾಗಲಿದೆ. ಸೇವಾ ಹಿರಿತನ ಮತ್ತು ಇಲಾಖೆ ಪರೀಕ್ಷೆಗಳನ್ನು ಎದುರಿಸಿ ಉನ್ನತೋನ್ನತ ಹುದ್ದೆಗೆ ಬಡ್ತಿ ಕೂಡಾ ದೊರೆಯಲಿದೆ. ಇವೆಲ್ಲಕ್ಕಿಂತ ಮುಖ್ಯವಾಗಿ ವೃತ್ತಿ ಭದ್ರತೆ ಇರುತ್ತದೆ. ಇಷ್ಟೆಲ್ಲಾ ಸೌಲಭ್ಯಗಳಿರುವ ಕೇಂದ್ರ ಸರ್ಕಾರಿ ನೌಕರಿಯ ಬಗ್ಗೆ ಜನ ಆಸಕ್ತಿ ಹೊಂದದಿರುವುದು ಮಾತ್ರ ಅಚ್ಚರಿ.
ಕೋಚಿಂಗ್ ಸೆಂಟರ್ಗಳೇ ಇಲ್ಲ
ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಬೇಕಾದ ಕೋಚಿಂಗ್ ಸೆಂಟರ್ನಂತೆ, ಎಸ್ಎಸ್ಸಿ ಕೋಚಿಂಗ್ ಸೆಂಟರ್ಗಳು ಕರ್ನಾಟಕದಲ್ಲಿ ಒಂದೂ ಇಲ್ಲ. ಕರ್ನಾಟಕದಲ್ಲಿ ಕೆಲವು ಪ್ರತಿಷ್ಠಿತ ಕೆಎಎಸ್, ಐಎಎಸ್ ಕೋಚಿಂಗ್ ಸೆಂಟರ್ಗಳಲ್ಲೇ ಉಪ ವಿಷಯವಾಗಿ ಎಸ್ಎಸ್ಸಿ ಕೋಚಿಂಗ್ ನೀಡಲಾಗುತ್ತಿದೆ. ಈ ಬಗ್ಗೆ ಕೌಶಾಲಾಭಿವೃದ್ಧಿ ಇಲಾಖೆ ವಿಶೇಷ ಗಮನ ನೀಡಿ, ಕೋಚಿಂಗ್ ಸೆಂಟರ್ಗಳನ್ನು ತೆರೆದರೆ ಕನ್ನಡದವರು ಕೇಂದ್ರ ಸರ್ಕಾರಿ ನೌಕರಿ ಗಿಟ್ಟಿಸಲು ಸಹಕಾರಿಯಾಗಲಿದೆ. ಈಗ ಬಹುತೇಕ ಎಲ್ಲ ನೇಮಕಾತಿ ಪರೀಕ್ಷೆಗಳ ಬಗ್ಗೆಯೂ ಆನ್ಲೈನ್ ಕೋಚಿಂಗ್ ಸಹ ದೊರೆಯಲಿದ್ದು, ಅದನ್ನು ಕೂಡ ಬಳಸಿಕೊಳ್ಳಬಹುದು.
658 ಸಿಬ್ಬಂದಿ ಆಯ್ಕೆ
ದೇಶದ ವಿವಿಧ ವಲಯಗಳ ಒಟ್ಟು 8300 ಹುದ್ದೆಗಳಲ್ಲಿ ಕರ್ನಾಟಕ-ಗೋವಾ ವಲಯಕ್ಕೆ 750 ಹುದ್ದೆ ಮಂಜೂರಾಗಿದ್ದವು. ಎಸ್ಎಸ್ಸಿ 2025ನೇ ಸಾಲಿನಲ್ಲಿ ನಡೆಸಿದ ಸಂಯೋಜಿತ ಪದವಿ ಮಟ್ಟದ (ಸಿಜಿಎಲ್) ಪರೀಕ್ಷೆಯಲ್ಲಿ ಕರ್ನಾಟಕ-ಗೋವಾ ವಲಯಕ್ಕೆ ಆಯ್ಕೆಯಾದ 658 ಅಭ್ಯರ್ಥಿಗಳ ದಾಖಲೆ ಪರಿಶೀಲನೆ ಪ್ರಕ್ರಿಯೆ ಇತ್ತೀಚೆಗೆ ಪೂರ್ಣಗೊಂಡಿದೆ. ಅದರಲ್ಲಿ ಸುಮಾರು 400ಕ್ಕೂ ಹೆಚ್ಚು ಅಭ್ಯರ್ಥಿಗಳು ಉತ್ತರ ಭಾರತದವರಾಗಿದ್ದು ಇನ್ನುಳಿದ 258 ಅಭ್ಯರ್ಥಿಗಳಲ್ಲಿ 200ಕ್ಕೂ ಹೆಚ್ಚು ಅಭ್ಯರ್ಥಿಗಳು ಆಂಧ್ರ, ತೆಲಂಗಾಣ ಮತ್ತು ಕೇರಳದವರಾಗಿದ್ದಾರೆ. ಬೆರಳೆಣಿಕೆ ಅಭ್ಯರ್ಥಿಗಳು ಮಾತ್ರ ರಾಜ್ಯದವರಾಗಿದ್ದಾರೆ. ಕರ್ನಾಟಕದವರು ಇತರ ರಾಜ್ಯಗಳಲ್ಲಿ ಹೋಗಿ ಕೆಲಸ ಮಾಡುವ ಮನಸ್ಥಿತಿ ಹೊಂದಿಲ್ಲದ ಕಾರಣಕ್ಕೆ ಕೇಂದ್ರ ಸರ್ಕಾರಿ ನೌಕರಿ ಬಗ್ಗೆ ಹೆಚ್ಚು ಆಸಕ್ತಿ ತೋರುತ್ತಿಲ್ಲ ಎಂಬುದು ಇಲಾಖೆಯ ಹಿರಿಯ ಅಧಿಕಾರಿಗಳ ಮಾತು. ಆದರೆ ನೇಮಕಾತಿ ಪ್ರಕ್ರಿಯೆ ಸಂದರ್ಭದಲ್ಲಿಯೇ ರಾಜ್ಯವನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶವಿರುವುದನ್ನು ಮನಗಾಣಬೇಕು.
ಕೇಂದ್ರ ಸರ್ಕಾರಿ ಸಂಸ್ಥೆಗಳಲ್ಲಿ ಆಂಗ್ಲ ಮತ್ತು ಹಿಂದಿ ಭಾಷೆಯಲ್ಲಿ ಪರೀಕ್ಷೆ ನಡೆಸುವುದು ಮೊದಲಿನಿಂದಲೂ ದಕ್ಷಿಣ ಭಾರತೀಯರಿಗೆ ಸಮಸ್ಯೆಯಾಗಿತ್ತು. ಈ ಸಮಸ್ಯೆಗೆ ಶಾಶ್ವತ ಪರಿಹಾರವೆಂದರೆ; ಮಾನ್ಯತೆ ಪಡೆದ ಎಲ್ಲ 22 ಭಾಷೆಗಳನ್ನೂ ಬಳಸುವಂತೆ ಲೋಕಸಭೆಯಲ್ಲಿ ಕಾನೂನು ತರಬೇಕು. ಆಂಧ್ರ ಸರ್ಕಾರ ಸ್ಪರ್ಧಾತ್ಮಕ ಪರೀಕ್ಷೆಗೆ ತರಬೇತಿ ನೀಡಲು ವಿಶಾಖಪಟ್ಟಣದಲ್ಲಿ ತರಬೇತಿ ಕೇಂದ್ರವನ್ನು ತೆರೆದಿದ್ದು, ಕರ್ನಾಟಕದಲ್ಲೂ ಅಂತಹ ತರಬೇತಿ ಕೇಂದ್ರವನ್ನು ತೆರೆಯಬೇಕು.
| ಪುರುಷೋತ್ತಮ ಬಿಳಿಮಲೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ