MichaelVaughan  
ದೇಶ

South Africa ಅತ್ಯಂತ ಸ್ಟುಪಿಡ್​ ತಂಡ: ಭಾರತವನ್ನ ಸೆಮಿಫೈನಲ್‌ಗೆ ಕಳುಹಿಸಿದ್ದೇ ಅದು.. ಮೈಕಲ್ ವಾನ್ ವ್ಯಂಗ್ಯ!

ಲಂಡನ್: 2026ರ ಟಿ20 ವಿಶ್ವಕಪ್‌ನ ಸಮೀಕರಣಗಳ ಕುರಿತು ಇಂಗ್ಲೆಂಡ್ ಮಾಜಿ ನಾಯಕ ಮೈಕಲ್ ವಾನ್ (Michael Vaughan) ನೀಡಿರುವ ಹೇಳಿಕೆ ಈಗ ಕ್ರಿಕೆಟ್ ವಲಯದಲ್ಲಿ ಭಾರಿ ಸಂಚಲನ ಮೂಡಿಸಿದೆ. 
ಅಹಮದಾಬಾದ್‌ನಲ್ಲಿ ನಡೆದ ಸೂಪರ್-8 ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ(South Africa) ತಂಡವು ವೆಸ್ಟ್ ಇಂಡೀಸ್ ತಂಡವನ್ನು ಸೋಲಿಸುವ ಮೂಲಕ ಭಾರತದ ಸೆಮಿಫೈನಲ್ ಹಾದಿಯನ್ನು ಸುಗಮಗೊಳಿಸಿತು ಮತ್ತು ಇದು ದಕ್ಷಿಣ ಆಫ್ರಿಕಾ ಮಾಡಿದ "ಮೂರ್ಖತನದ ಕೆಲಸ" ಎಂದು ವಾನ್ ಲೇವಡಿ ಮಾಡಿದ್ದಾರೆ.
'ಸ್ಟಿಕ್ ಟು ಕ್ರಿಕೆಟ್' (Stick to Cricket) ಪಾಡ್‌ಕಾಸ್ಟ್‌ನಲ್ಲಿ ಮಾತನಾಡಿದ ವಾನ್, ಟೂರ್ನಿಯ ಬಲಿಷ್ಠ ತಂಡವನ್ನು ಹೊರಹಾಕಲು ಸಿಕ್ಕ ಅವಕಾಶವನ್ನು ದಕ್ಷಿಣ ಆಫ್ರಿಕಾ ಕೈಚೆಲ್ಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಏಡನ್ ಮಾರ್ಕ್ರಾಮ್ ನೇತೃತ್ವದ ದಕ್ಷಿಣ ಆಫ್ರಿಕಾ ತಂಡವು ವೆಸ್ಟ್ ಇಂಡೀಸ್ ವಿರುದ್ಧ 9 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿತ್ತು. ಈ ಗೆಲುವಿನಿಂದಾಗಿ ಭಾರತಕ್ಕೆ ಸೆಮಿಫೈನಲ್ ಪ್ರವೇಶಿಸಲು ಅವಕಾಶ ಸಿಕ್ಕಂತಾಯಿತು.
"ನನ್ನ ಪ್ರಕಾರ ಈ ಟೂರ್ನಿಯ ಅತ್ಯಂತ ದಡ್ಡ ತಂಡ ದಕ್ಷಿಣ ಆಫ್ರಿಕಾ. ಒಂದು ವೇಳೆ ಅವರು ವೆಸ್ಟ್ ಇಂಡೀಸ್ ವಿರುದ್ಧ ಸೋತಿದ್ದರೆ, ಭಾರತ ಟೂರ್ನಿಯಿಂದ ಅಧಿಕೃತವಾಗಿ ಹೊರಬೀಳುತ್ತಿತ್ತು. ಆ ಮೂಲಕ ಭಾರತವೆಂಬ ತಡೆಯಲಾಗದ ಶಕ್ತಿಯನ್ನು (Juggernaut) ಅಲ್ಲಿಯೇ ನಿಲ್ಲಿಸಬಹುದಿತ್ತು. ಆದರೆ ದಕ್ಷಿಣ ಆಫ್ರಿಕಾ ಗೆಲುವಿನ ಮೂಲಕ ಭಾರತಕ್ಕೆ ದಾರಿ ಮಾಡಿಕೊಟ್ಟಿತು," ಎಂದು ವಾನ್ ಹೇಳಿದ್ದಾರೆ.
ತಂತ್ರಗಾರಿಕೆಯ ಕೊರತೆಯೇ?
ವಿಶ್ವಕಪ್‌ನಂತಹ ದೊಡ್ಡ ಟೂರ್ನಿಗಳಲ್ಲಿ ಬಲಿಷ್ಠ ತಂಡಗಳನ್ನು ಆರಂಭಿಕ ಹಂತದಲ್ಲೇ ಹೊರಹಾಕುವುದು ಒಂದು ತಂತ್ರಗಾರಿಕೆ ಎಂಬುದು ವಾನ್ ವಾದ. "ವಿಶ್ವಕಪ್ ಗೆಲ್ಲಬೇಕಾದರೆ ಮೊದಲು ಅತ್ಯುತ್ತಮ ತಂಡವನ್ನು ಟೂರ್ನಿಯಿಂದ ಕಿತ್ತೊಗೆಯಬೇಕು. ದಕ್ಷಿಣ ಆಫ್ರಿಕಾ ಆ ಕೆಲಸ ಮಾಡದೆ ಭಾರತಕ್ಕೆ ಅವಕಾಶ ನೀಡಿತು" ಎಂದು ಅವರು ವಿಶ್ಲೇಷಿಸಿದ್ದಾರೆ.
ಮೈಕಲ್ ವಾನ್ ಅವರ ಈ ಹೇಳಿಕೆ ಭಾರತೀಯ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದೆ. ಕ್ರಿಕೆಟ್ ಅನ್ನು ಕ್ರೀಡಾ ಮನೋಭಾವದಿಂದ ಆಡಬೇಕೇ ಹೊರತು, ಮತ್ತೊಂದು ತಂಡವನ್ನು ಹೊರಹಾಕಲು ಬೇಕೆಂತಲೇ ಸೋಲಬಾರದು ಎಂದು ಕ್ರಿಕೆಟ್ ಪ್ರೇಮಿಗಳು ಸಾಮಾಜಿಕ ಜಾಲತಾಣಗಳಲ್ಲಿ ವಾನ್‌ಗೆ ತಿರುಗೇಟು ನೀಡುತ್ತಿದ್ದಾರೆ.
ಸೆಮಿಫೈನಲ್ ಹಾದಿಯ ರೋಚಕ ತಿರುವು
ದಕ್ಷಿಣ ಆಫ್ರಿಕಾ ವೆಸ್ಟ್ ಇಂಡೀಸ್ ಅನ್ನು ಸೋಲಿಸಿದ ಅದೇ ದಿನ ಭಾರತ ತಂಡ ಜಿಂಬಾಬ್ವೆ ವಿರುದ್ಧ ಜಯಗಳಿಸಿತು. ಇದರಿಂದಾಗಿ ವೆಸ್ಟ್ ಇಂಡೀಸ್ ಮತ್ತು ಭಾರತದ ನಡುವಿನ ಮುಂದಿನ ಪಂದ್ಯವು 'ವರ್ಚುವಲ್ ಕ್ವಾರ್ಟರ್‌ಫೈನಲ್' ಆಗಿ ಮಾರ್ಪಟ್ಟಿತು.
ಸಂಜು ಸ್ಯಾಮ್ಸನ್ ಅಬ್ಬರ: ಕ್ವಾರ್ಟರ್‌ಫೈನಲ್‌ನಂತಿದ್ದ ಈ ಪಂದ್ಯದಲ್ಲಿ ಸಂಜು ಸ್ಯಾಮ್ಸನ್ ಕೇವಲ ಅಲ್ಪ ಅಂತರದಲ್ಲಿ ಶತಕ ವಂಚಿತರಾದರು (97* ರನ್). ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಭಾರತ 5 ವಿಕೆಟ್‌ಗಳ ಜಯ ಸಾಧಿಸಿ ಸೆಮಿಫೈನಲ್‌ಗೆ ಲಗ್ಗೆ ಇಟ್ಟಿತು.
ವೆಸ್ಟ್ ಇಂಡೀಸ್ ಔಟ್: ಆತಿಥೇಯ ವೆಸ್ಟ್ ಇಂಡೀಸ್ ಟೂರ್ನಿಯಿಂದ ಹೊರಬಿದ್ದರೆ, ಭಾರತ ಮುಂದೆ ಇಂಗ್ಲೆಂಡ್ ತಂಡವನ್ನು ಮಣಿಸಿ ಫೈನಲ್ ಹಾದಿಯನ್ನು ಭದ್ರಪಡಿಸಿಕೊಂಡಿತ್ತು,(ಏಜೆನ್ಸೀಸ್​).