ಇನ್ಸ್ಟಾಗ್ರಾಮ್ ಖಾತೆ ತೆರೆದ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ
'ಬಿಲಾಂಗಿಗ್: ಎ ಜರ್ನಿ ಆಫ್ ಲವ್' ಆತ್ಮಕತೆಯ ಮೊದಲ ನೋಟ ಪೋಸ್ಟ್
ಮಗಳು ಪ್ರಿಯಾಂಕಾಗೆ ಸಿಹಿ ತಿನ್ನಿಸಿ, ಪುಸ್ತಕದ ಮೊದಲ ಪುಟ ಹಂಚಿಕೊಂಡ ಸೋನಿಯಾ ಗಾಂಧಿ
ಪ್ರೀತಿ, ಕರ್ತವ್ಯ, ನಷ್ಟ ಮತ್ತು ತಮಗೆ ಸೂಕ್ತವಾದ ನೆಲೆ ಎಂದು ವಿಡಿಯೋಗೆ ಶೀರ್ಷಿಕೆ
ನವ ದೆಹಲಿ: ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರು ತಮ್ಮ ಆತ್ಮಕಥೆ ಬಿಲಾಂಗಿಗ್: ಎ ಜರ್ನಿ ಆಫ್ ಲವ್ ಪುಸ್ತಕದ ಮೊದಲ ಪ್ರತಿಯನ್ನು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಳ್ಳುವ ಮೂಲಕ, ಹೊಸದಾಗಿ ಇನ್ಸ್ಟಾಗ್ರಾಮ್ ಲೋಕಕ್ಕೆ ಕಾಲಿಟ್ಟಿದ್ದಾರೆ.
ನವೆಂಬರ್ 10 ರಂದು ವಿಶ್ವಾದ್ಯಂತ ಸೋನಿಯಾ ಗಾಂಧಿಯವರ ಆತ್ಮಚರಿತ್ರೆ 'ಬಿಲಾಂಗಿಂಗ್: ಎ ಜರ್ನಿ ಆಫ್ ಲವ್'ನ ಪುಸ್ತಕ ಬಿಡುಗಡೆಯಾಗಲಿದೆ. ಅದಕ್ಕೂ ಮುನ್ನ ಪುಸ್ತಕದ ಮೊದಲ ನೋಟ ಹಾಗೂ ಮಗಳು ಪ್ರಿಯಾಂಕಾ ಗಾಂಧಿಯೊಂದಿಗೆ ಕಳೆದ ಸವಿಯಾದ ಕ್ಷಣಗಳನ್ನು ಹೊಂದಿರುವ ವಿಡಿಯೋ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ. ಸದ್ಯ ಅವರ ಈ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ.
'ಎಲ್ಲರಿಗೂ ನಮಸ್ಕಾರ. 'ಬಿಲಾಂಗಿಂಗ್: ಎ ಜರ್ನಿ ಆಫ್ ಲವ್' ಕೃತಿಯ ಮೊದಲ ನೋಟವನ್ನು ನಿಮ್ಮೆಲ್ಲರೊಂದಿಗೆ ಹಂಚಿಕೊಳ್ಳುತ್ತಿರುವುದಕ್ಕೆ ನನಗೆ ತುಂಬಾ ಸಂತೋಷ ಮತ್ತು ಕೃತಜ್ಞತಾ ಭಾವವಿದೆ. ಇದು ಪ್ರೀತಿ, ಕರ್ತವ್ಯ, ನಷ್ಟ ಮತ್ತು ತಮಗೆ ಸೂಕ್ತವಾದ ನೆಲೆಯನ್ನು ಕಂಡುಕೊಳ್ಳುವ ಕಥೆ. ಇದನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ನಾನು ಉತ್ಸುಕಳಾಗಿದ್ದೇನೆ' ಎಂದು ಇನ್ಸ್ಟಾದಲ್ಲಿ ಹಂಚಿಕೊಂಡ ವಿಡಿಯೋಗೆ ಶೀರ್ಷಿಕೆ ಬರೆದುಕೊಂಡಿದ್ದಾರೆ.
ಪುಸ್ತಕ ಬಂಡಲ್ ಹೊತ್ತು ಬರುವ ಪ್ರಕಾಶಕಿಗೆ 'ನೀವು ತುಂಬಾ ಭಾರವನ್ನು ಹೊತ್ತಿದ್ದೀರಿ' ಎನ್ನುತ್ತಾರೆ. ಅಲ್ಲೇ ಇದ್ದ ಪ್ರಿಯಾಂಕಾ ಗಾಂಧಿ, ತಮ್ಮ ತಾಯಿ ಸೋನಿಯಾಗೆ ಸಿಹಿ ತಿನ್ನಿಸಿ ಅಪ್ಪಿಕೊಳ್ಳುತ್ತಾರೆ. ಸೋನಿಯಾ ಗಾಂಧಿ, ಮುಗುಳ್ನಗುತ್ತಾ, ತಮ್ಮ ಆತ್ಮಕತೆಯೊಂದಿಗೆ ಪೋಸ್ ನೀಡಿದರು, ಆಗ ಅವರ ಸುತ್ತಲಿದ್ದವರು ಅಭಿನಂದನಾ ಚಪ್ಪಾಳೆ ತಟ್ಟಿದರು. ನಂತರ ಮೊದಲ ಪುಟ ತೆರೆದ ಅವರು 'ಪ್ರಿಯಾಂಕಾ ನೋಡು ಬಹಳ ಚಿತ್ರಗಳಿವೆ' ಎಂದು ಹೇಳಿ ಮಂದಹಾಸ ಬೀರಿರುವುದು ವಿಡಿಯೋದಲ್ಲಿ ಇದೆ.
ನವೆಂಬರ್ 10ರಂದು 'ಬಿಲಾಂಗಿಂಗ್: ಎ ಜರ್ನಿ ಆಫ್ ಲವ್' ಪುಸ್ತಕ ಲೋಕಾರ್ಪಣೆಯಾಗಲಿದೆ. ಈ ಪುಸ್ತಕವನ್ನು ಭಾರತದಲ್ಲಿ ಹಾರ್ಪರ್ ಕಾಲ್ಸಿನ್ ಇಂಡಿಯಾ ಪ್ರಕಟಿಸುತ್ತಿದ್ದರೆ, ಜಾಗತಿಕವಾಗಿ ಪ್ರಕಟಿಸುವ ಹೊಣೆಯನ್ನು ಆಲ್ಫ್ರೆಡ್ ಎ ನಾಫ್ ಸಂಸ್ಥೆ ಹೊತ್ತಿದೆ.
ಇನ್ಸ್ಟಾಗ್ರಾಮ್ನಲ್ಲಿ ವಿಡಿಯೋ ಹಂಚಿಕೊಳ್ಳುತ್ತಲೇ ಕಾಂಗ್ರೆಸ್ ನಾಯಕರು ಅಭಿನಂದನೆ ಸಲ್ಲಿಸಿದ್ದಾರೆ. ಪುಸ್ತಕವನ್ನು ಓದುವ ಕಾತುರ ತಡೆತಲಾಗುತ್ತಿಲ್ಲ ಎಂದಿದ್ದಾರೆ. ಕೆಲವು ಇನ್ಸ್ಟಾಗ್ರಾಮ್ ಬಳಕೆದಾರರು ಪೆಂಗ್ವಿನ್ ರ್ಯಾಂಡಮ್ ಹೌಸ್ ಇಂಡಿಯಾ ಟ್ಯಾಗ್ ಮಾಡಿ ಕಿಡಿಕಾರಿದ್ದಾರೆ.
ಬಿಡುಗಡೆಗೂ ಮುನ್ನವೇ ಸೋನಿಯಾ ಗಾಂಧಿ ಅವರ 'ಬಿಲಾಂಗಿಂಗ್: ಎ ಜರ್ನಿ ಆಫ್ ಲವ್' ಭಾರಿ ವಿವಾದಕ್ಕೆ ಕಾರಣವಾಗಿತ್ತು. ಪ್ರಧಾನಿ ಮೋದಿ ಹಾಗೂ ಭಾರತದ ಭೂ ಪ್ರದೇಶವನ್ನು ಚೀನಾ ಆಕ್ರಮಿಸಿಕೊಂಡ ರೀತಿ ಹಾಗೂ ಆರ್ಎಸ್ಎಸ್ ವಿಷಯಗಳನ್ನು ತೆಗೆದು ಹಾಕಲು ಪೆಂಗ್ವಿನ್ ರ್ಯಾಂಡಮ್ ಹೌಸ್ ಇಂಡಿಯಾ ಪ್ರಕಾಶಕರು ಸೂಚಿಸಿದ್ದರು. ಅವರ ಈ ಬದಲಾವಣೆ ತರಲು ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಒಪ್ಪದ ಕಾರಣ, ಭಾರತದಲ್ಲಿ ಪುಸ್ತಕ ಪ್ರಕಟಿಸುವ ತೀರ್ಮಾನದಿಂದ ಹಿಂದೆ ಸರಿದ್ದಿತ್ತು. ಆ ಬಳಿಕ ಹಾರ್ಪರ್ ಕಾಲ್ಸಿನ್ ಇಂಡಿಯಾ ಪುಸ್ತಕ ಪ್ರಕಟಿಸುವ ಹೊಣೆ ಹೊತ್ತುಕೊಂಡಿತ್ತು.
1984 ರಲ್ಲಿ ತಮ್ಮ ಅತ್ತೆ ಹಾಗೂ ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಹತ್ಯೆ, 1920ರಲ್ಲಿ ವಿಮಾನ ದುರಂತದಲ್ಲಿ ಸಂಜಯ್ ಗಾಂಧಿ ಸಾವು, 1991ರಲ್ಲಿ ರಾಜೀವ್ ಗಾಂಧಿ ಹತ್ಯೆ ಘಟನೆಗಳು ಉಲ್ಲೇಖಿಸಲಾಗಿದೆ. ಇಟಲಿಯಿಂದ ನೆಹರು-ಗಾಂಧಿ ಕುಟುಂಬದ ಭಾಗವಾದ ರೀತಿ, ಭಾರತದ ಜೀವನಶೈಲಿಗೆ ಒಗ್ಗಿಕೊಂಡ ಪರಿ. ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರ ಜೊತೆಗಿದ್ದ ಒಡೆನಾಟವನ್ನು ವಿವರಿಸಲಾಗಿದೆ. ಅಲ್ಲದೇ ಆರು ದಶಕದಲ್ಲಿ ಗಾಂಧಿ ಕುಟುಂಬದ ರಾಜಕೀಯ ಮತ್ತು ಸಾಮಾಜಿಕ ಬದಲಾವಣೆ ಬಗ್ಗೆ ಪುಸ್ತಕದಲ್ಲಿ ಉಲ್ಲೇಖಿಸಲಾಗಿದೆ
ಸೋನಿಯಾ ಗಾಂಧಿ ಅಂತಿಮವಾಗಿ ರಾಜಕೀಯ ಪ್ರವೇಶಿಸಿ ಕಾಂಗ್ರೆಸ್ನ ಅತಿ ಹೆಚ್ಚು ಕಾಲ ಅಧ್ಯಕ್ಷೆಯಾಗಿ ಸೇವೆ ಸಲ್ಲಿಸಿದ ಹೆಗ್ಗಳಿಕೆ ಬಗ್ಗೆ ಹಾಗೂ ಪ್ರಧಾನಿಯಾಗುವ ತಮ್ಮ ಪಕ್ಷದ ಪ್ರಸ್ತಾಪವನ್ನು ತಿರಸ್ಕರಿಸಿದ ಬಗ್ಗೆ ಬರೆದುಕೊಂಡಿದ್ದಾರೆ. ಅಲ್ಲದೇ 2014 ರಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಬಿಜೆಪಿ ವಿರುದ್ಧ ಅಧಿಕಾರವನ್ನು ಕಳೆದುಕೊಂಡ ಬಗ್ಗೆಯೂ ಪುಸ್ತಕ ಒಳಗೊಂಡಿದೆ, (ಏಜೆನ್ಸೀಸ್)