ಲಖನೌ: ಪೂರ್ವ ಉತ್ತರ ಪ್ರದೇಶದ ಸೋನ್‌ಭದ್ರ ಜಿಲ್ಲೆಯಲ್ಲಿ ಸಂಭವಿಸಿದ ಕಲ್ಲು ಗಣಿ ಕುಸಿತದಲ್ಲಿ(Stone mine collapse) ಸಾವನ್ನಪ್ಪಿದವರ ಸಂಖ್ಯೆ ಏಳಕ್ಕೆ ಏರಿದ್ದು, ಅವಶೇಷಗಳಡಿಯಿಂದ ಮತ್ತೊಂದು ಮೃತದೇಹ ಪತ್ತೆಯಾಗಿದೆ ಎಂದು ಅಧಿಕಾರಿಗಳು ಮಂಗಳವಾರ(ನ. 18) ತಿಳಿಸಿದ್ದಾರೆ.
ಮೃತನನ್ನು ಸೋನ್‌ಭದ್ರಾದ ಓಬ್ರಾ ಪೊಲೀಸ್ ಠಾಣೆ ಪ್ರದೇಶದ ನಿವಾಸಿ ಗುಲಾಬ್ ಖಾರ್ವಾರ್ (32) ಎಂದು ಗುರುತಿಸಲಾಗಿದೆ. ಬಿಲ್ಲಿ ಮಾರ್ಕುಂಡಿಯಲ್ಲಿ ಶನಿವಾರ(ನ. 15) ಮಧ್ಯಾಹ್ನ ಕಾರ್ಮಿಕರು ಕಲ್ಲು ಕೊರೆಯುವ ಕಾರ್ಯದಲ್ಲಿ ನಿರತರಾಗಿದ್ದಾಗ ಏಕಾಏಕಿ ಗುಡ್ಡ ಕುಸಿದು ದುರಂತ ಸಂಭವಿಸಿತ್ತು. ಸ್ಥಳದಲ್ಲಿ ಇನ್ನೂ ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ.
ಈ ಕುರಿತು ಮಾತನಾಡಿರುವ ಯುಪಿ ಸಚಿವ ಸಂಜೀವ್ ಕುಮಾರ್ ಗೊಂಡ್, ಕೃಷ್ಣ ಮೈನಿಂಗ್ ವರ್ಕ್ಸ್ ನಿರ್ವಹಿಸುತ್ತಿರುವ ಕ್ವಾರಿಯ ಒಂದು ಭಾಗ ಶನಿವಾರ ಸಂಜೆ ಕುಸಿದಿದೆ. ಸುಮಾರು ಒಂದು ಡಜನ್ ಕಾರ್ಮಿಕರು ಇನ್ನೂ ಅವಶೇಷಗಳ ಅಡಿಯಲ್ಲಿ ಸಿಲುಕಿರಬಹುದು ಎಂದು ಹೇಳಿದ್ದಾರೆ.
ಇನ್ನೂ ರಾಜ್ಯ ಸರ್ಕಾರ ಮೃತ ಕಾರ್ಮಿಕರ ಕುಟುಂಬಕ್ಕೆ ತಲಾ 20 ಲಕ್ಷ ರೂ. ಪರಿಹಾರ ಘೋಷಿಸಿದ್ದು, ಘಟನೆ ಬಗ್ಗೆ ಪೊಲೀಸ್ ಇಲಾಖೆ, ಗಣಿಗಾರಿಕೆ ಇಲಾಖೆ ಹಾಗೂ ಜಿಲ್ಲಾಡಳಿತದಿಂದ ಮೂರು ಹಂತದ ತನಿಖೆ ನಡೆಸಲು ಆದೇಶ ನೀಡಿದೆ. ಕೃಷ್ಣ ಮೈನಿಂಗ್ ವರ್ಕ್ಸ್ ಮಾಲೀಕ ಮತ್ತು ಅವರ ವ್ಯವಹಾರ ಪಾಲುದಾರರಾದ ಮಧುಸೂದನ್ ಸಿಂಗ್ ಮತ್ತು ದಿಲೀಪ್ ಕೇಶರಿ ವಿರುದ್ಧ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ, (ಏಜೆನ್ಸೀಸ್).