Sonam Wangchuk Wife | ನನ್ನ ಒಪ್ಪಿಗೆಯಿಲ್ಲದೆ ಪತಿಗೆ ಚಿಕಿತ್ಸೆ ನೀಡಬೇಡಿ!...ಪೊಲೀಸರ ವರ್ತನೆಗೆ ಸೋನಮ್ ವಾಂಗ್ಚುಕ್ ಪತ್ನಿ ಗೀತಾಂಜಲಿ ಆಕ್ಷೇಪ
Sonam Wangchuk Wife: ನೀಟ್ ಪರೀಕ್ಷೆಯ ಅಕ್ರಮಗಳು ಹಾಗೂ ವಿದ್ಯಾರ್ಥಿಗಳ ಸಾವಿನ ಪ್ರಕರಣಗಳನ್ನು ಖಂಡಿಸಿ ಸಿಜೆಪಿ (ಕಾಕ್ರೋಚ್ ಜನತಾ ಪಾರ್ಟಿ) ನೇತೃತ್ವದಲ್ಲಿ ನಡೆಯುತ್ತಿರುವ ಪ್ರತಿಭಟನೆಯನ್ನು ಬೆಂಬಲಿಸಿ, ಜೂನ್ 28 ರಿಂದ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಕೈಗೊಂಡಿದ್ದ ಹೋರಾಟಗಾರ ಸೋನಮ್ ವಾಂಗ್ಚುಕ್ರನ್ನು ದೆಹಲಿ ಪೊಲೀಸರು ಶನಿವಾರ ಮುಂಜಾನೆ ಜಂತರ್ ಮಂತರ್ ಪ್ರತಿಭಟನಾ ಸ್ಥಳದಿಂದ ಸಫ್ದರ್ಜಂಗ್ ಆಸ್ಪತ್ರೆಗೆ ಸ್ಥಳಾಂತರಿಸಿದ್ದಾರೆ.
ವಾಂಗ್ಚುಕ್ ಉಪವಾಸ ಸತ್ಯಾಗ್ರಹವು 21ನೇ ದಿನಕ್ಕೆ ಕಾಲಿಟ್ಟಿದ್ದು, ಅವರ ಆರೋಗ್ಯದ ಸ್ಥಿತಿಯನ್ನು ದೆಹಲಿ ಹೈಕೋರ್ಟ್ ಸೂಕ್ಷ್ಮವಾಗಿ ಗಮನಿಸುತ್ತಿದೆ. ನ್ಯಾಯಾಲಯದ ಆದೇಶ ಹಾಗೂ ವೈದ್ಯಕೀಯ ತಜ್ಞರ ಸಲಹೆಯ ಮೇರೆಗೆ, ಅವರ ಕ್ಷೀಣಿಸುತ್ತಿರುವ ಆರೋಗ್ಯದ ದೃಷ್ಟಿಯಿಂದ ಅಗತ್ಯ ವೈದ್ಯಕೀಯ ಆರೈಕೆಗಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ನವದೆಹಲಿಯ ಉಪ ಪೊಲೀಸ್ ಕಮಿಷನರ್ ಸಚಿನ್ ಶರ್ಮಾ ತಿಳಿಸಿದ್ದಾರೆ.
ಪತ್ನಿ ಗೀತಾಂಜಲಿ ಆಕ್ಷೇಪ!..
ಸೋನಮ್ ವಾಂಗ್ಚುಕ್ ಪತ್ನಿ ಗೀತಾಂಜಲಿ ಜೆ ಆಂಗ್ಮೋ ದೆಹಲಿಯ ಸಫ್ದರ್ಜಂಗ್ ಆಸ್ಪತ್ರೆಯಲ್ಲಿದ್ದು, ತಮ್ಮ ಪತಿಯನ್ನು ಆಸ್ಪತ್ರೆಗೆ ದಾಖಲಿಸಿರುವ ನಿರ್ಧಾರವನ್ನು ಪ್ರಶ್ನಿಸಿದ್ದಾರೆ. ಶುಕ್ರವಾರದವರೆಗೆ ಅವರು ಆರಾಮವಾಗಿಯೇ ಇದ್ದರು, ಅವರನ್ನು ಆಸ್ಪತ್ರೆಗೆ ಕರೆತರುವ ಅಗತ್ಯವಿರಲಿಲ್ಲ ಎಂದು ಹೇಳಿದ್ದಾರೆ. ಅಲ್ಲದೆ, ಆರ್ಟಿಕಲ್ 32 (Article 32) ಅಡಿಯಲ್ಲಿ ಇದು ನನ್ನ ಹಕ್ಕಾಗಿದೆ. ನನ್ನ, ನಮ್ಮ ಕುಟುಂಬದ ಹಾಗೂ ಕಳೆದ 20 ದಿನಗಳಿಂದ ಅವರ ಆರೋಗ್ಯವನ್ನು ಮೇಲ್ವಿಚಾರಣೆ ಮಾಡುತ್ತಿರುವ ವೈದ್ಯರ ಒಪ್ಪಿಗೆಯಿಲ್ಲದೆ ಅವರಿಗೆ ಯಾವುದೇ ರೀತಿಯ ಮೌಖಿಕ ಅಥವಾ ರಕ್ತನಾಳದ (Intravenous) ಚಿಕಿತ್ಸೆಯನ್ನು ನೀಡಬಾರದು ಎಂದು ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ದೇಹದ ಶೇ. 20 ರಷ್ಟು ತೂಕ ಕಳೆದುಕೊಂಡಿದ್ದೇನೆ ಎಂದ ವಾಂಗ್ಚುಕ್
ಆಸ್ಪತ್ರೆಗೆ ದಾಖಲಾಗುವ ಮುನ್ನ ಶುಕ್ರವಾರ ರಾತ್ರಿ ವಿಡಿಯೋ ಸಂದೇಶವೊಂದನ್ನು ಬಿಡುಗಡೆ ಮಾಡಿದ್ದ ಸೋನಮ್ ವಾಂಗ್ಚುಕ್, ತಮ್ಮ ಆರೋಗ್ಯ ಹದಗೆಡುತ್ತಿದ್ದರೂ ಹೋರಾಟ ಮುಂದುವರಿಸುವ ಸಂಕಲ್ಪವನ್ನು ಪುನರುಚ್ಚರಿಸಿದ್ದರು. ಈ ಉಪವಾಸ ಸತ್ಯಾಗ್ರಹದಲ್ಲಿ ನಾನು ನನ್ನ ದೇಹದ ಶೇಕಡಾ 20 ರಷ್ಟು ತೂಕವನ್ನು ಕಳೆದುಕೊಂಡಿದ್ದೇನೆ. ಈ ದೇಶದಲ್ಲಿ ಈ ಹಿಂದೆ ಈರುಳ್ಳಿ ಬೆಲೆಯ ವಿಷಯಕ್ಕೇ ಸರ್ಕಾರಗಳು ಬಿದ್ದಿವೆ. ಈಗಲಾದರೂ ಸರ್ಕಾರ ಯುವಜನರ ಧ್ವನಿಯನ್ನು ಆಲಿಸುವ ಸಮಯ ಬಂದಿದೆ ಎಂದು ಅವರು ಹೇಳಿದ್ದರು.
ಜಂತರ್ ಮಂತರ್‌ನಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್
ವಾಂಗ್ಚುಕ್ರನ್ನು ಆಸ್ಪತ್ರೆಗೆ ಸ್ಥಳಾಂತರಿಸುವ ಸಂದರ್ಭದಲ್ಲಿ ಸಣ್ಣ ಮಟ್ಟದ ಗದ್ದಲ ಉಂಟಾದ ಹಿನ್ನೆಲೆಯಲ್ಲಿ, ಜಂತರ್ ಮಂತರ್ ಮತ್ತು ನವದೆಹಲಿ ಜಿಲ್ಲೆಯ ಸುತ್ತಮುತ್ತ ಭದ್ರತೆಯನ್ನು ಹೆಚ್ಚಿಸಲಾಗಿದೆ. ಕಾನೂನು ಸುವ್ಯವಸ್ಥೆ ಕಾಪಾಡಲು ಮತ್ತು ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ತಡೆಯಲು ದೆಹಲಿ ಪೊಲೀಸ್ ಮತ್ತು ಅರೆಸೇನಾ ಪಡೆಗಳನ್ನು ಭಾರಿ ಪ್ರಮಾಣದಲ್ಲಿ ನಿಯೋಜಿಸಲಾಗಿದೆ. ಪ್ರತಿಭಟನಾಕಾರರು ಮತ್ತು ಸಂದರ್ಶಕರ ಓಡಾಟವನ್ನು ನಿಯಂತ್ರಿಸಲು ಪ್ರಮುಖ ಸ್ಥಳಗಳಲ್ಲಿ ಬ್ಯಾರಿಕೇಡ್‌ಗಳನ್ನು ಸಹ ಹಾಕಲಾಗಿದೆ.
ಇದೇ ವೇಳೆ, ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸುತ್ತಿರುವವರು ಶಾಂತಿಯುತವಾಗಿ ಆದಷ್ಟು ಬೇಗ ಜಾಗವನ್ನು ಖಾಲಿ ಮಾಡಬೇಕೆಂದು ದೆಹಲಿ ಪೊಲೀಸರು ಸೂಚಿಸಿದ್ದಾರೆ(ಏಜೆನ್ಸೀಸ್).