ಸೋನಮ್ ವಾಂಗ್‌ಚುಕ್ ಆಸ್ಪತ್ರೆಗೆ ದಾಖಲು
- 21ನೇ ದಿನಕ್ಕೆ ಕಾಲಿಟ್ಟ ಸಾಮಾಜಿಕ ಕಾರ್ಯಕರ್ತ ಸೋನಮ್ ವಾಂಗ್‌ಚುಕ್ ಉಪವಾಸ ಸತ್ಯಾಗ್ರಹ
- ಬಲವಂತವಾಗಿ ವಾಂಗ್ಚುಕ್ರನ್ನು ಆಸ್ಪತ್ರೆಗೆ ದಾಖಲಿಸಿದ ದೆಹಲಿ ಪೊಲೀಸರು
Sonam Wangchuk: ಇಂದಿಗೆ 21ನೇ ದಿನಕ್ಕೆ ಕಾಲಿಟ್ಟ ಸಾಮಾಜಿಕ ಕಾರ್ಯಕರ್ತ ಸೋನಮ್ ವಾಂಗ್‌ಚುಕ್ ಅವರ ಉಪವಾಸ ಸತ್ಯಾಗ್ರಹವನ್ನು ಬಲವಂತವಾಗಿ ಮೊಟಕುಗೊಳಿಸಿದ ದೆಹಲಿ ಪೊಲೀಸರು, ಅವರನ್ನು ತಕ್ಷಣಕ್ಕೆ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಜೂ.28ರಿಂದ ದೆಹಲಿಯ ಜಂತರ್ ಮಂತರ್‌ನಲ್ಲಿ ನೀಟ್ ಪರೀಕ್ಷೆಯಲ್ಲಿ ಆದ ಅನ್ಯಾಯ, ವಿದ್ಯಾರ್ಥಿಗಳಿಗೆ ಸಾವಿಗೆ ನ್ಯಾಯ ಕೊಡಿಸಲು ಮತ್ತು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ರ ರಾಜೀನಾಮೆಗೆ ಆಗ್ರಹಿಸಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ಸಾಮಾಜಿಕ ಕಾರ್ಯಕರ್ತ ಸೋನಮ್ ವಾಂಗ್‌ಚುಕ್, ತೀರ ಅಸ್ವಸ್ಥಗೊಂಡರೂ ಶನಿವಾರ ಬೆಳಗ್ಗೆ ತಮ್ಮ ಪ್ರತಿಭಟನೆಯನ್ನು ಮುಂದುವರಿಸಿದ ಹಿನ್ನೆಲೆ ದೆಹಲಿ ಪೊಲೀಸರು ಅವರನ್ನು ಬಲವಂತವಾಗಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.
ಸೋನಮ್ ಆರೋಗ್ಯ ತೀರ ಹದಗೆಟ್ಟ ಹಿನ್ನೆಲೆ ಮತ್ತು ದೆಹಲಿ ಹೈಕೋರ್ಟ್ ಅವರ ಜೀವವನ್ನು ಉಳಿಸಿ ಎಂಬ ಆದೇಶವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು, ವೈದ್ಯರ ಸಲಹೆಯ ಮೇರೆಗೆ ಅವರನ್ನು ಅಗತ್ಯ ಚಿಕಿತ್ಸೆಗೆಂದು ಆಸ್ಪತ್ರೆಗೆ ದಾಖಲಿಸಿದ್ದಾಗಿ ಹೇಳಿದ್ದಾರೆ. ಮತ್ತೊಂದೆಡೆ, ಸೋನಮ್ ಪರ ಹೋರಾಟಕ್ಕೆ ದನಿಗೂಡಿಸಿದ್ದ ಹಲವರು ಸ್ಥಳದಲ್ಲೇ ಇದ್ದರು ಎನ್ನಲಾಗಿದೆ.
ಈ ಬೇಡಿಕೆಗಳಿಗೆ ವಾಂಗ್‌ಚುಕ್ ಪಟ್ಟು
ನೀಟ್ ಪರೀಕ್ಷೆಯಲ್ಲಿ ಸೋರಿಕೆಗಳು ಹಲವು ಬಾರಿ ರಿಪೀಟ್ ಆಗಿದೆ. ಹೀಗಾದರೆ, ದೇಶಕ್ಕೆ ಎಂತಹ ವೈದ್ಯರು ಸಿಗುತ್ತಾರೆ. ಯಾವ ನಂಬಿಕೆ ಮೇಲೆ ಸರಿಯಾದ ಡಾಕ್ಟರ್ಗಳಿಂದ ಜನರು ಚಿಕಿತ್ಸೆ ಪಡೆಯಲಿದ್ದಾರೆ? ಎಂದು ಪ್ರಶ್ನಿಸಿರುವ ವಾಂಗ್‌ಚುಕ್, ಶಿಕ್ಷಣ ವ್ಯವಸ್ಥೆಯ ನ್ಯೂನತೆಗಳು ಹಾಗೂ ದೇಶದ ವಿವಿಧ ಜ್ವಲಂತ ಸಮಸ್ಯೆಗಳ ವಿರುದ್ಧ ದೆಹಲಿಯ ಜಂತರ್ ಮಂತರ್‌ನಲ್ಲಿ ನಿರಂತರ ಉಪವಾಸ ಸತ್ಯಾಗ್ರಹ ಕೈಗೊಂಡಿದ್ದಾರೆ.
ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ರನ್ನು ಏಕೆ ಕೇಂದ್ರ ಸರ್ಕಾರ ಪ್ರಶ್ನಿಸುತ್ತಿಲ್ಲ. ತಕ್ಷಣಕ್ಕೆ ಜಾರಿಗೆ ಬರುವಂತೆ ಸಚಿವ ಸ್ಥಾನದಿಂದ ಇನ್ನೂ ಕೆಳಗಿಸಿಲ್ಲ ಏಕೆ ಎಂಬ ಹಲವಾರು ಪ್ರಶ್ನೆಗಳನ್ನು ಮುಂದಿಟ್ಟಿದ್ದಾರೆ. ದೇಶದ ಶಿಕ್ಷಣ ಇಲಾಖೆಯಲ್ಲಿ ಮಹತ್ವದ ಬದಲಾವಣೆಗಳು ಆಗಬೇಕು, ಭ್ರಷ್ಟಾಚಾರಗಳು ಕೊನೆಗೊಳ್ಳಬೇಕು ಮತ್ತು ಈಗಿನ ಶಿಕ್ಷಣ ಸಚಿವರನ್ನು ಕಿತ್ತುಬಿಸಾಡಿ ಎಂದು ವಾಂಗ್‌ಚುಕ್ ಡಿಮಾಂಡ್ ಮಾಡಿದ್ದಾರೆ. ಇಲ್ಲಿಯವರೆಗೆ, ಮೋದಿ ಸರ್ಕಾರ ನಮಗೆ ಯಾವುದೇ ರೀತಿಯಲ್ಲೂ ಪ್ರತಿಕ್ರಿಯೆ ನೀಡಿಲ್ಲ ಎಂದಿರುವ ಸಿಜೆಪಿ ಪಕ್ಷ, ವಾಂಗ್‌ಚುಕ್ ಅವರ ಆರೋಗ್ಯ ಹದಗೆಟ್ಟಿದೆ ಮತ್ತು ಸುಮಾರು 9 ಕೆಜಿಗೂ ಹೆಚ್ಚು ತೂಕ ಕಳೆದುಕೊಂಡಿದ್ದಾರೆ ಎಂದಿದೆ.