Hunger Strike | ಉಪವಾಸವಿದ್ದರೆ ತನ್ನದೇ ಸ್ನಾಯುಗಳನ್ನೇ ತಿನ್ನುತ್ತಾ ಮಾನವನ ದೇಹ...? ವಾಂಗ್ಚುಕ್ ಹಸಿವಿನ ಮುಷ್ಕರದ ಆಳಕ್ಕಿಳಿದಾಗ ಸಿಕ್ಕ ಭೀಕರ ವೈಜ್ಞಾನಿಕ ವಿಶ್ಲೇಷಣೆ ಇಲ್ಲಿದೆ!
Hunger Strike: ಸೋನಮ್ ವಾಂಗ್ಚುಕ್ ನಡೆಸುತ್ತಿರುವ ಉಪವಾಸ ಸತ್ಯಾಗ್ರಹ 20 ದಿನ ಕಳೆದು 21ನೇ ದಿನಕ್ಕೆ ಕಾಲಿಟ್ಟಿದ್ದು, ಈ ಅವಧಿಯಲ್ಲಿ ಅವರು ಬರೋಬ್ಬರಿ 8.2 ಕೆಜಿ ತೂಕವನ್ನು ಕಳೆದುಕೊಂಡಿರುವುದು ವೈದ್ಯಕೀಯ ವಲಯದಲ್ಲಿ ತೀವ್ರ ಕಳವಳವನ್ನು ಉಂಟುಮಾಡಿದೆ. ಸುದೀರ್ಘ ಅವಧಿಯ ಉಪವಾಸವು ಮಾನವನ ದೇಹದ ಮೇಲೆ ಎಂತಹ ಗಂಭೀರ ಮತ್ತು ಮಾರಕ ಪರಿಣಾಮಗಳನ್ನು ಬೀರಬಹುದು ಎಂಬುದಕ್ಕೆ ಇದು ಕನ್ನಡಿ ಹಿಡಿದಿದೆ.
ವರದಿಗಳ ಪ್ರಕಾರ, ವಾಂಗ್ಚುಕ್ ಈ ಇಡೀ ಪ್ರತಿಭಟನೆಯ ಅವಧಿಯಲ್ಲಿ ಕೇವಲ ನೀರನ್ನು ಮಾತ್ರ ಸೇವಿಸುತ್ತಿದ್ದಾರೆ. ಕಡಿಮೆ ಅವಧಿಯ ಉಪವಾಸಕ್ಕೆ ಹೊಂದಿಕೊಳ್ಳುವ ಶಕ್ತಿ ಮಾನವನ ದೇಹಕ್ಕೆ ಇರುತ್ತದೆಯಾದರೂ, ವಾರಗಳ ಕಾಲ ಆಹಾರವಿಲ್ಲದೆ ಉಪವಾಸ ಕಾಯ್ದಾಗ ದೇಹವು ಸರ್ವೈವಲ್ ಮೋಡ್ (ಬದುಕುಳಿಯುವ ತೀವ್ರ ಕಸರತ್ತು) ಗೆ ತಲುಪುತ್ತದೆ. ಈ ಹಂತದಲ್ಲಿ ದೇಹವು ತನ್ನದೇ ಆದ ಶಕ್ತಿ ಮೂಲಗಳನ್ನು ಮತ್ತು ಅಂತಿಮವಾಗಿ ಸ್ನಾಯುಗಳನ್ನೇ ತಿನ್ನಲು ಪ್ರಾರಂಭಿಸುತ್ತದೆ ಎಂದು ವೈದ್ಯರು ಎಚ್ಚರಿಸಿದ್ದಾರೆ.
20 ದಿನಗಳಲ್ಲಿ 8 ಕೆಜಿ ತೂಕ ಇಳಿಕೆ: ವೈದ್ಯರು ಹೇಳುವುದೇನು?
ಸೋನಮ್ ವಾಂಗ್ಚುಕ್ ತೂಕ 8 ಕೆಜಿ ಕಡಿಮೆಯಾಗಿರುವುದು ವೈದ್ಯಕೀಯವಾಗಿ ಅತ್ಯಂತ ಕಳವಳಕಾರಿ ಸಂಗತಿಯಾಗಿದೆ ಎಂದು ವೈದ್ಯಕೀಯ ತಜ್ಞರಾದ ಡಾ. ಸುರಂಜಿತ್ ಚಟರ್ಜಿ ತಿಳಿಸಿದ್ದಾರೆ. ಆದರೆ, ಇಲ್ಲಿ ಆತಂಕ ಪಡಬೇಕಿರುವುದು ಕೇವಲ ತೂಕದ ಯಂತ್ರದಲ್ಲಿ ಕಡಿಮೆ ಕಾಣಿಸುತ್ತಿರುವ ಸಂಖ್ಯೆಯನ್ನು ನೋಡಿಯಲ್ಲ, ಬದಲಿಗೆ ಆ ತೂಕದ ಇಳಿಕೆಯು ದೇಹದ ಒಳಗಿನ ಯಾವ ಸ್ಥಿತಿಯನ್ನು ಬಿಂಬಿಸುತ್ತಿದೆ ಎಂಬುದನ್ನು ನೋಡಿ. ಸುದೀರ್ಘ ಉಪವಾಸದ ಸಮಯದಲ್ಲಿ, ದೇಹವು ಮೊದಲು ರಕ್ತದಲ್ಲಿ ಚಲಿಸುವ ಗ್ಲೂಕೋಸ್ ಅನ್ನು ಬಳಸಿಕೊಳ್ಳುತ್ತದೆ. ಆ ನಂತರ ಲಿವರ್ ಮತ್ತು ಸ್ನಾಯುಗಳಲ್ಲಿ ಶೇಖರವಾಗಿರುವ ಗ್ಲೈಕೋಜೆನ್ ಅನ್ನು ಬಳಸುತ್ತದೆ.
ಈ ಎಲ್ಲಾ ಶಕ್ತಿಯ ಮೂಲಗಳು ಖಾಲಿಯಾದ ನಂತರ, ದೇಹವು ಕೊಬ್ಬನ್ನು ಕರಗಿಸಲು ಪ್ರಾರಂಭಿಸುತ್ತದೆ. ಆದರೆ ಉಪವಾಸ ಹೀಗೆಯೇ ಮುಂದುವರಿದರೆ, ದೇಹವು ತನ್ನ ಅತ್ಯಗತ್ಯ ಶಕ್ತಿಯ ಅಗತ್ಯತೆಗಳನ್ನು ಪೂರೈಸಿಕೊಳ್ಳಲು ತನ್ನದೇ ಆದ ಸ್ನಾಯುಗಳ ಪ್ರೊಟೀನ್ ಅನ್ನು ಒಡೆಯಲು ಅನಿವಾರ್ಯವಾಗಿ ಮುಂದಾಗುತ್ತದೆ ಎಂದು ಅವರು ವಿವರಿಸಿದ್ದಾರೆ.
ಮುಂದುವರೆದು ಮಾತನಾಡಿರುವ ಡಾ. ಚಟರ್ಜಿ, ಈ ಹಂತಕ್ಕೆ ತಲುಪಿದಾಗ, ದೇಹ ಕೇವಲ ಕೊಬ್ಬನ್ನು ಮಾತ್ರವಲ್ಲ, ಅಮೂಲ್ಯವಾದ ಸ್ನಾಯುವಿನ ದ್ರವ್ಯರಾಶಿಯನ್ನು ಸಹ ಕಳೆದುಕೊಳ್ಳುತ್ತಿದೆ, ಇದು ದೇಹವು ತೀವ್ರವಾದ ಚಯಾಪಚಯ ಒತ್ತಡಕ್ಕೆ ಒಳಗಾಗಿದೆ ಎಂಬುದನ್ನು ತೋರಿಸುತ್ತದೆ. ಹೀಗೆ ನಿರಂತರವಾಗಿ ಸ್ನಾಯುಗಳ ನಷ್ಟ ಉಂಟಾದರೆ ಅದು ಒಟ್ಟಾರೆ ದೈಹಿಕ ಕಾರ್ಯವನ್ನು ದುರ್ಬಲಗೊಳಿಸುತ್ತದೆ ಮತ್ತು ಪ್ರಮುಖ ಶಾರೀರಿಕ ಪ್ರಕ್ರಿಯೆಗಳ ಮೇಲೆ ಪರಿಣಾಮ ಬೀರುತ್ತದೆ. ಇಷ್ಟು ವೇಗವಾಗಿ ತೂಕ ಕಡಿಮೆಯಾಗುವುದು ಸಾಮಾನ್ಯವಲ್ಲ ಮತ್ತು ಇದಕ್ಕೆ ನಿಕಟ ವೈದ್ಯಕೀಯ ಮೇಲ್ವಿಚಾರಣೆಯ ಅಗತ್ಯವಿರುತ್ತದೆ ಎಂದು ಚಟರ್ಜಿ ಅಭಿಪ್ರಾಯಪಟ್ಟಿದ್ದಾರೆ.
ಆಹಾರ ಸೇವಿಸುವುದನ್ನು ನಿಲ್ಲಿಸಿದಾಗ ದೇಹದಲ್ಲಿ ಏನಾಗುತ್ತದೆ..?
ಮೆದುಳು ಮತ್ತು ಸ್ನಾಯುಗಳು ಕಾರ್ಯನಿರ್ವಹಿಸಲು ಆಹಾರದಿಂದ ಸಿಗುವ ಕಾರ್ಬೋಹೈಡ್ರೇಟ್‌ಗಳ (ಗ್ಲೂಕೋಸ್) ನಿರಂತರ ಪೂರೈಕೆ ಅತ್ಯಗತ್ಯ. ಒಮ್ಮೆ ಆಹಾರ ಸೇವನೆ ನಿಂತಾಗ ದೇಹದಲ್ಲಿ ಏನೆಲ್ಲಾ ಬದಲಾವಣೆಗಳಾಗುತ್ತವೆ ಎಂಬ ಹಂತಗಳು ಇಲ್ಲಿವೆ.
ಮೊದಲ 24 ಗಂಟೆಗಳು: ಆಹಾರ ನಿಲ್ಲಿಸಿದ ತಕ್ಷಣ ದೇಹವು ರಕ್ತದಲ್ಲಿ ಈಗಾಗಲೇ ಇರುವ ಗ್ಲೂಕೋಸ್ ಅನ್ನು ಬಳಸಲು ಪ್ರಾರಂಭಿಸುತ್ತದೆ. ಸುಮಾರು 24 ಗಂಟೆಗಳ ಒಳಗೆ ಈ ಗ್ಲೂಕೋಸ್ ಸಂಗ್ರಹ ಸಂಪೂರ್ಣವಾಗಿ ಖಾಲಿಯಾಗುತ್ತದೆ.
1 ರಿಂದ 2 ದಿನಗಳು: ಗ್ಲೂಕೋಸ್ ಖಾಲಿಯಾದ ನಂತರ, ದೇಹವು ಲಿವರ್ ಮತ್ತು ಸ್ನಾಯುಗಳಲ್ಲಿ ಸಂಗ್ರಹವಾಗಿರುವ ಕಾರ್ಬೋಹೈಡ್ರೇಟ್ ರೂಪವಾದ ಗ್ಲೈಕೋಜೆನ್ ಕಡೆಗೆ ಮುಖ ಮಾಡುತ್ತದೆ. ಆದರೆ ಈ ಗ್ಲೈಕೋಜೆನ್ ಕೇವಲ ಒಂದರಿಂದ ಎರಡು ದಿನಗಳ ಶಕ್ತಿಯ ಅಗತ್ಯವನ್ನು ಮಾತ್ರ ಪೂರೈಸಬಲ್ಲದು.
ಕೊಬ್ಬು ಕರಗುವ ಹಂತ: ಗ್ಲೈಕೋಜೆನ್ ಕೂಡ ಖಾಲಿಯಾದ ನಂತರ, ದೇಹದ ಚಯಾಪಚಯ ಕ್ರಿಯೆಯು ಕೊಬ್ಬಿನ ಸಂಗ್ರಹದ ಕಡೆಗೆ ತಿರುಗುತ್ತದೆ. ಲಿವರ್ ಕೊಬ್ಬನ್ನು ಕೀಟೋನ್ಸ್ ಆಗಿ ಪರಿವರ್ತಿಸುತ್ತದೆ. ಇವು ಮೆದುಳು ಮತ್ತು ಇತರ ಅಂಗಗಳಿಗೆ ಪರ್ಯಾಯ ಇಂಧನವಾಗಿ ಕೆಲಸ ಮಾಡುತ್ತವೆ. ಈ ಹಂತವು ಆಹಾರವಿಲ್ಲದೆ ದೇಹವು ಹೆಚ್ಚು ದಿನ ಬದುಕಲು ಸಹಾಯ ಮಾಡುತ್ತದೆ.
ಸ್ನಾಯುಗಳ ನಾಶದ ಹಂತ: ಆದರೆ, ಕೇವಲ ಕೊಬ್ಬು ಒಂದೇ ದೇಹದ ಎಲ್ಲಾ ಶಕ್ತಿಯ ಅಗತ್ಯಗಳನ್ನು ಪೂರೈಸಲು ಸಾಧ್ಯವಿಲ್ಲ. ಉಪವಾಸ ಹೀಗೆಯೇ ಮುಂದುವರಿದಾಗ, ಅಗತ್ಯ ಅಂಗಾಂಗಗಳನ್ನು ರಕ್ಷಿಸಲು ಮತ್ತು ಗ್ಲೂಕೋಸ್ ಉತ್ಪಾದಿಸಲು ಅಸ್ಥಿಪಂಜರದ ಸ್ನಾಯುಗಳಲ್ಲಿನ ಪ್ರೊಟೀನ್‌ಗಳನ್ನು ಅಮೈನೋ ಆಮ್ಲಗಳಾಗಿ ಒಡೆಯಲಾಗುತ್ತದೆ. ಇದರ ಪರಿಣಾಮವಾಗಿ ಸ್ನಾಯುಗಳ ದ್ರವ್ಯರಾಶಿ ನಷ್ಟವಾಗಿ, ತೀವ್ರ ದೈಹಿಕ ದೌರ್ಬಲ್ಯ ಉಂಟಾಗುತ್ತದೆ.
ಉಪವಾಸ ಮುಗಿದ ಮೇಲೂ ಕಾಯ್ದಿರುತ್ತೆ ಅಪಾಯ!
ದೀರ್ಘಾವಧಿಯ ಉಪವಾಸ ಮುಗಿದ ತಕ್ಷಣವೇ ಅಪಾಯಗಳು ಕೊನೆಗೊಳ್ಳುವುದಿಲ್ಲ. ಹಲವು ದಿನಗಳು ಅಥವಾ ವಾರಗಳ ಕಾಲ ಆಹಾರವಿಲ್ಲದೆ ಇದ್ದ ದೇಹಕ್ಕೆ ಹಠಾತ್ ಆಗಿ ಸಾಮಾನ್ಯ ಆಹಾರವನ್ನು ನೀಡಿದರೆ ಅದು ರಿಫೀಡಿಂಗ್ ಸಿಂಡ್ರೋಮ್ ಎಂಬ ಪ್ರಾಣಾಪಾಯದ ಸ್ಥಿತಿಗೆ ಕಾರಣವಾಗಬಹುದು ಎಂದು ವೈದ್ಯರು ಎಚ್ಚರಿಸಿದ್ದಾರೆ.
ದೇಹವು ಹಠಾತ್ ಆಗಿ ಕಾರ್ಬೋಹೈಡ್ರೇಟ್‌ಗಳನ್ನು ಸಂಸ್ಕರಿಸಲು ಆರಂಭಿಸಿದಾಗ, ದೇಹದ ಎಲೆಕ್ಟ್ರೋಲೈಟ್‌ಗಳಲ್ಲಿ ಅಪಾಯಕಾರಿ ಏರುಪೇರುಗಳು ಉಂಟಾಗುತ್ತವೆ. ಈ ಕಾರಣಕ್ಕಾಗಿ, ಸುದೀರ್ಘ ಉಪವಾಸದ ನಂತರ ವೈದ್ಯಕೀಯ ಮೇಲ್ವಿಚಾರಣೆಯಲ್ಲೇ ಹಂತ-ಹಂತವಾಗಿ ಆಹಾರ ಸೇವನೆಯನ್ನು ಮರುಪ್ರಾರಂಭಿಸಬೇಕಾಗುತ್ತದೆ.
ಆರೋಗ್ಯವಂತ ಜನರಲ್ಲಿ ಅಲ್ಪಾವಧಿಯ ಉಪವಾಸವು ಯಾವುದೇ ತೊಂದರೆ ಉಂಟುಮಾಡುವುದಿಲ್ಲ. ಆದರೆ ವಾರಗಳ ಕಾಲ ಕೇವಲ ನೀರು ಕುಡಿದು ಉಪವಾಸ ಮಾಡುವುದು ಸಂಪೂರ್ಣವಾಗಿ ಭಿನ್ನ ಮತ್ತು ಅಪಾಯಕಾರಿ. ಕೇವಲ ಮೂರು ವಾರಗಳಿಗಿಂತ ಕಡಿಮೆ ಅವಧಿಯಲ್ಲಿ ವ್ಯಕ್ತಿಯೊಬ್ಬರು ಹಲವು ಕೆಜಿ ತೂಕ ಕಳೆದುಕೊಂಡಿದ್ದಾರೆ ಎಂದರೆ, ದೇಹವು ಕೇವಲ ಕೊಬ್ಬನ್ನು ಕರಗಿಸುವ ಹಂತವನ್ನು ಮೀರಿ, ಪ್ರಮುಖ ಅಂಗಾಂಗಗಳನ್ನು ಬದುಕಿಸಲು ತನ್ನದೇ ಸ್ನಾಯುಗಳನ್ನು ಬಲಿಕೊಡಲು ಮುಂದಾಗಿದೆ ಎಂದರ್ಥ. ಇದು ದೇಹವು ತೀವ್ರ ಚಯಾಪಚಯ ಒತ್ತಡದಲ್ಲಿದೆ ಎಂಬುದರ ಗಂಭೀರ ಸಂಕೇತವಾಗಿದೆ(ಏಜೆನ್ಸೀಸ್).