Delhi Hospital on Sonam Wangchuk Health  
ದೇಶ

ಸೋನಮ್​ ವಾಂಗ್​ಚುಕ್​​ರ ಆರೋಗ್ಯ ಸ್ಥಿರವಾಗಿದೆ, ನಿರಂತರ ಮೇಲ್ವಿಚಾರಣೆ ಮುಖ್ಯ; ಹೆಲ್ತ್​ ಬುಲೆಟಿನ್ ಬಿಡುಗಡೆ ಮಾಡಿದ ದೆಹಲಿಯ ಆಸ್ಪತ್ರೆ!

ಪ್ರಮುಖ ಮುಖ್ಯಾಂಶಗಳು

  • ಸೋನಮ್​ ವಾಂಗ್​ಚುಕ್​ ಆರೋಗ್ಯ ಸ್ಥಿರವಾಗಿದೆ ಆದರೆ, ನಿರಂತರ ಮೇಲ್ವಿಚಾರಣೆಯ ಅಗತ್ಯವಿದೆ ಎಂದ ದೆಹಲಿ ಆಸ್ಪತ್ರೆ ವೈದ್ಯರು.
  • ದೀರ್ಘಕಾಲದಿಂದ ಉಪವಾಸ ಹಾಗೂ ನಿರ್ಜಲೀಕರಣದಿಂದ ದೇಹ ದುರ್ಬಲವಾಗಿದೆ ಎಂದ ವೈದ್ಯರು...
  • ಸೋನಮ್​ ವಾಂಗ್​​ಚುಕ್​ ಆಸ್ಪತ್ರೆಗೆ ದಾಖಲಾದ ಬೆನ್ನಲ್ಲೇ ಉಪವಾಸ ಆರಂಭಿಸಿದ ಅಭಿಜಿತ್​ ದೀಪ್ಕೆ..
Delhi Hospital on Sonam Wangchuk Health : ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್​ ಅವರು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ, ಶಿಕ್ಷಣ ತಜ್ಞ ಸೋನಮ್ ವಾಂಗ್‌ಚುಕ್ ಅನಿರ್ಧಿಷ್ಟಾವಧಿ ಉಪವಾಸ ಸತ್ಯಾಗ್ರಹ ಆರಂಭಿಸಿ ಇಂದಿಗೆ 21ನೇ ದಿನಕ್ಕೆ ಕಾಲಿಟ್ಟಿತ್ತು. ಆದರೆ, ಅವರ ದೇಹ ದುರ್ಬಲವಾಗಿರುವ ಕಾರಣ ಬೆಳ್ಳಂಬೆಳಗ್ಗೆ ದೆಹಲಿ ಪೊಲೀಸರು ಜಂತರ್​ ಮಂತರ್​ ಪ್ರವೇಶಿಸಿ, ಅವರನ್ನು ಆಸ್ಪತ್ರೆಗೆ ಕರೆದೊಯ್ದರು. ಸದ್ಯ ಅವರ ಆರೋಗ್ಯದ ಪರಿಸ್ಥಿತಿ ಹೇಗಿದೆ ಎನ್ನುವ ಬಗ್ಗೆ ಸಫ್ದರ್ಜಂಗ್ ಆಸ್ಪತ್ರೆ ವೈದ್ಯರು ಬುಲೆಟಿನ್​​ ಬಿಡುಗಡೆ ಮಾಡಿದ್ದಾರೆ.

ದೆಹಲಿ ವೈದ್ಯರು ಹೇಳಿದ್ದೇನು?

ಇಂದು ಬೆಳಿಗ್ಗೆ 7.40 ಕ್ಕೆ ಸೋನಮ್ ವಾಂಗ್‌ಚುಕ್ ಅವರನ್ನು ಅಗತ್ಯ ಆರೋಗ್ಯ ಆರೈಕೆಗಾಗಿ ಸಫ್ದರ್ಜಂಗ್ ಆಸ್ಪತ್ರೆಗೆ ದಾಖಲಿಸಲಾಯಿತು. ಸೋನಮ್ ವಾಂಗ್‌ಚುಕ್ ಆರೋಗ್ಯ ಸ್ಥಿರವಾಗಿದೆ. ಆದರೆ ಮೇಲ್ವಿಚಾರಣೆ ಅಗತ್ಯ ಎಂದು ವೈದ್ಯರು ಹೇಳಿದ್ದಾರೆ.

ಮೇಲ್ವಿಚಾರಣೆ ಮುಖ್ಯ

ದೀರ್ಘಕಾಲದಿಂದ ಉಪವಾಸ ನಡೆಸುತ್ತಿರುವ ಕಾರಣ ಹಾಗೂ ನಿರ್ಜಲೀಕರಣ ಸಮಸ್ಯೆಯಿಂದ ಸೋನಮ್​ ವಾಂಗ್​ಚುಕ್​ ದುರ್ಬಲರಾಗಿದ್ದಾರೆ. ಅವರ ಆರೋಗ್ಯ ಸ್ಥಿರವಾಗಿದೆ. ಆದರೆ ಅವರ ದೈಹಿಕ ಆರೋಗ್ಯ, ಫಿಟ್‌ನೆಸ್ ಮತ್ತು ಕಾರ್ಯಕ್ಷಮತೆಯ ಮೇಲ್ವಿಚಾರಣೆ ಹಾಗೂ ಚಿಕಿತ್ಸೆ ನೀಡುವ ಅಗತ್ಯವಿದೆ ಎಂದು ದೆಹಲಿ ಆಸ್ಪತ್ರೆಯ ವೈದ್ಯರು ಮಾಧ್ಯಮಗಳ ಮುಂದೆ ಮಾಹಿತಿ ಹಂಚಿಕೊಂಡಿದ್ದಾರೆ.
ಸೋನಮ್​ ವಾಂಗ್​ಚುಕ್​ ಅವರು ದೆಹಲಿಯ ಜಂತರ್​ ಮಂತರ್​ನಲ್ಲಿ ತಮ್ಮ 21 ನೇ ದಿನದ ಅನಿರ್ಧಿಷ್ಟಾವಧಿ ಉಪವಾಸ ಸತ್ಯಾಗ್ರಹದಲ್ಲಿ ತೊಡಗಿದ್ದರು. ಅವರ ದೀರ್ಘಕಾಲದ ಉಪವಾಸದಿಂದ ಅವರ ದೇಹ ದುರ್ಬಲವಾಗಿದ್ದು, ಮೇಲ್ವಿಚಾರಣೆಯ ಅಗತ್ಯವಿದೆ ಎಂದು ದೆಹಲಿ ಪೊಲೀಸರು ಅವರನ್ನು ಜಂತರ್​ ಮಂತರ್​​ನಿಂದ ಆಸ್ಪತ್ರೆಗೆ ಸ್ಥಳಾಂತರಿಸಿದರು.

ಸೋನಮ್​ ವಾಂಗ್​ಚುಕ್​ ಪತ್ನಿ ಹೇಳಿದ್ದೇನು?

ನಾನು ಸಫ್ದರ್ಜಂಗ್ ಆಸ್ಪತ್ರೆಯಲ್ಲಿದ್ದೇನೆ. ಇಲ್ಲಿ ಸೋನಮ್​ ವಾಂಗ್​ಚುಕ್​ ಅವರನ್ನು ದಾಖಲಿಸಿಕೊಳ್ಳಲಾಗಿದೆ. ನನ್ನ ಅನುಮತಿ ಇಲ್ಲದೆ ಯಾವ ಔಷಧಿಯನ್ನು ಸಹ ಪತಿಗೆ ನೀಡಕೂಡದು. ನಮ್ಮ ಫ್ಯಾಮಿಲಿ ಡಾಕ್ಟರ್​ ಹಾಗೂ ಕಳೆದ 20 ದಿನಗಳಿಂದ ಅವರ ಆರೋಗ್ಯವನ್ನು ಮೇಲ್ವಿಚಾರಣೆ ಮಾಡುತ್ತಿರುವ ವೈದ್ಯರ ಅನುಮತಿ ಇಲ್ಲದೆ ಯಾವುದೇ ಔಷಧಿ ನೀಡುವಂತಿಲ್ಲ ಎಂದು ತಾಕೀತು ಮಾಡಿ ಎಕ್ಸ್​ನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. ಸಂವಿಧಾನ 32ನೇ ವಿಧಿ ಅನ್ವಯ ಈ ಸೂಚನೆಯು ನನ್ನ ಹಕ್ಕಾಗಿದೆ. ಒಂದು ವೇಳೆ ಅವರಿಗೆ ಅನಾಹುತ ಸಂಭವಿಸಿದರೆ, ಇದಕ್ಕೆ ಎಲ್ಲರನ್ನು ಹೊಣೆ ಮಾಡುತ್ತೇನೆ ಎಂದು ವಾಂಗ್​ಚುಕ್​ ಪತ್ನಿ ಗೀತಾಂಕಲಿ ಜೆ ಆಂಗ್ಮೋ ಎಕ್ಸ್​ನಲ್ಲಿ ಬರೆದುಕೊಂಡಿದ್ದಾರೆ.

ಉಪವಾಸ ಆರಂಭಿಸುವೆ

ಸೋನಮ್​ ವಾಂಗ್​ಚುಕ್​ ಅವರನ್ನು ಆಸ್ಪತ್ರೆಗೆ ದೆಹಲಿ ಪೊಲೀಸರು ಕೊಂಡೊಯ್ದ ಬೆನ್ನಲ್ಲೇ ಅಭಿಜಿತ್​ ದೀಪ್ಕೆ ಅವರು ಸಾಲು ಸಾಲು ಪೋಸ್ಟ್​​ಗಳನ್ನು ಎಕ್ಸ್​ನಲ್ಲಿ ಹಂಚಿಕೊಂಡಿದ್ದರು. ಅವರ ಮೇಲೆ ಹಲ್ಲೆ ನಡೆಸಿದ್ದಾಗಿ ಹಾಗೂ ಜಂತರ್​ ಮಂತರ್​ನಲ್ಲಿ ಪ್ರೊಟೆಸ್ಟ್ ಮಾಡುತ್ತಿದ್ದ ವಿದ್ಯಾರ್ಥಿಗಳ ಮೇಲೆಯೂ ಲಾಠಿ ಚಾರ್ಜ್​ ಮಾಡಿದ್ದಾಗಿ ಉಲ್ಲೇಖಿಸಿದ್ದಾರೆ. ಅಲ್ಲದೆ, ತಾವು ಇಂದಿನಿಂದ ಅನಿರ್ಧಿಷ್ಟಾವಧಿ ಉಪವಾಸ ಸತ್ಯಾಗ್ರಹ ಆರಂಭಿಸುವ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ, (ಏಜೆನ್ಸೀಸ್).