ನವದೆಹಲಿ: ( helicopter )ತಂದೆ-ತಾಯಿಯ ಆಸೆಗಳನ್ನು ಪೂರೈಸುವ ಮಕ್ಕಳ ಸುದ್ದಿಗಳು ಯಾವಾಗಲೂ ಮನಸ್ಸಿಗೆ ಮುದ ನೀಡುತ್ತವೆ. ಅಂತಹದ್ದೇ ಒಂದು ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದ್ದು, ಮಗನೊಬ್ಬ ತನ್ನ ಪೋಷಕರನ್ನು ಮೊದಲ ಬಾರಿಗೆ ಹೆಲಿಕಾಪ್ಟರ್ ಪ್ರವಾಸಕ್ಕೆ ಕರೆದೊಯ್ದು ಅವರ ಮುಖದಲ್ಲಿ ಮಂದಹಾಸ ಮೂಡಿಸಿದ್ದಾನೆ.
ಈ ವಿಡಿಯೋದಲ್ಲಿ, ವಯಸ್ಸಾದ ದಂಪತಿ ಮಗನ ಜೊತೆ ಹೆಲಿಕಾಪ್ಟರ್ ಬಳಿ ನಡೆದುಕೊಂಡು ಹೋಗುತ್ತಿರುವುದನ್ನು ಕಾಣಬಹುದು. ಮಗ ತನ್ನ ತಂದೆ-ತಾಯಿಯನ್ನು ಹೆಲಿಕಾಪ್ಟರ್ ಒಳಗೆ ಕೂರಿಸಿ, ಅವರಿಗೆ ಹೆಡ್‌ಫೋನ್ ಹಾಕಿ ಸೀಟ್ ಬೆಲ್ಟ್ ಧರಿಸಲು ಸಹಾಯ ಮಾಡುತ್ತಾನೆ. ಮೊದಲ ಬಾರಿಗೆ ಆಕಾಶದಲ್ಲಿ ಹಾರಾಡುವ ಸಂಭ್ರಮ ಮತ್ತು ಒಂದು ರೀತಿಯ ಆತಂಕ ಎರಡೂ ಪೋಷಕರ ಮುಖದಲ್ಲಿ ಎದ್ದು ಕಾಣುತ್ತಿತ್ತು.
ಹೆಲಿಕಾಪ್ಟರ್ ಹಾರಾಟ ಆರಂಭಿಸುತ್ತಿದ್ದಂತೆ ಪೋಷಕರು ಕಿಟಕಿಯಿಂದ ಕೆಳಗಿನ ನೋಟವನ್ನು ನೋಡಿ ಬೆರಗಾಗುತ್ತಾರೆ. ಅವರ ಮುಖದಲ್ಲಿದ್ದ ಆ ಮುಗ್ಧ ನಗು ಮತ್ತು ಸಂತೋಷದ ಕ್ಷಣಗಳು ನೆಟ್ಟಿಗರ ಹೃದಯ ಗೆದ್ದಿವೆ.
ಒಂದು ಕಾಲದಲ್ಲಿ ಹೊಲಗಳಲ್ಲಿ ನಿಂತು ಆಕಾಶದಲ್ಲಿ ಹೆಲಿಕಾಪ್ಟರ್‌ಗಳನ್ನು ನೋಡುತ್ತಿದ್ದವರನ್ನು ಇಂದು ಹೆಲಿಕಾಪ್ಟರ್‌ನಲ್ಲಿ ಇರಿಸಲಾಗಿದೆ. ಹಳ್ಳಿಯ ಮಣ್ಣಿನಿಂದ ಆಕಾಶದ ಎತ್ತರದವರೆಗೆ ಎಂದು ಬರೆದುಕೊಂಡು ವಿಡಿಯೋ ಶೇರ್ ಮಾಡಿದ್ದಾರೆ.
ಈ ವಿಡಿಯೋ ನೋಡಿದ ಸಾವಿರಾರು ಜನರು ಮಗನ ಕಾರ್ಯವನ್ನು ಶ್ಲಾಘಿಸಿದ್ದಾರೆ. ಪ್ರತಿಯೊಬ್ಬ ಪೋಷಕರು ಇಂತಹ ಮಕ್ಕಳನ್ನು ಹೊಂದಲು ಬಯಸುತ್ತಾರೆ" ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ.