ತಾಯಿತನ್ನು ಹೆಗಲೆ ಮೇಲೆ ಹೊತ್ತ ಮಗ
- ತಾಯಿತನ್ನು ಹೆಗಲೆ ಮೇಲೆ ಹೊತ್ತ ಮಗ
- ತಾಯಿ ಮಗನ ವಿಡಿಯೋ ವೈರಲ್
- ಇವನೇ ಆಧುನಿಕ ಶ್ರವಣ ಕುಮಾರ ಎಂದ ನೆಟ್ಟಿಗರು
ವೈರಲ್: ಇಂದಿನ ಫಾಸ್ಟ್ ಫಾರ್ವರ್ಡ್ ಜಗತ್ತಿನಲ್ಲಿ ಮನುಷ್ಯ ತನ್ನ ಕೆಲಸ, ಹಣ, ಕೆರಿಯರ್ ಅಂತ ಓಡುತ್ತಿದ್ದಾನೆ. ಎಷ್ಟೋ ಬಾರಿ ತನ್ನ ಜೊತೆಗಿರುವ ಸಂಬಂಧಗಳನ್ನೇ ಮರೆತು ಬಿಡುತ್ತಾನೆ. ಹೆತ್ತವರನ್ನು ವೃದ್ಧಾಶ್ರಮಕ್ಕೆ ತಳ್ಳುವ ಈ ಕಾಲದಲ್ಲಿ, ಮಗನೊಬ್ಬ ತನ್ನ ತಾಯಿಯ ಮೇಲೆ ತೋರಿರುವ ಅಪಾರ ಪ್ರೀತಿಯ ವಿಡಿಯೋವೊಂದು ಈಗ ಸೋಶಿಯಲ್ ಮೀಡಿಯಾನಲ್ಲಿ (Viral Video) ಲಕ್ಷಾಂತರ ಜನರ ಹೃದಯನ್ನು ಗೆದ್ದಿದೆ.
ವಿಡಿಯೋನಲ್ಲೇನಿದೆ?
ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಈ ವಿಡಿಯೋನಲ್ಲಿ ಜನಜಂಗುಳಿಯಿಂದ ತುಂಬಿದ ರೈಲ್ವೆ ಪ್ಲಾಟ್‌ಫಾರ್ಮ್‌ನಲ್ಲಿ ಯುವಕನೊಬ್ಬ ತನ್ನ ವೃದ್ಧ ತಾಯಿಯನ್ನು ಬೆನ್ನಿನ ಮೇಲೆ ಹೊತ್ತುಕೊಂಡು ಓಡುತ್ತಿದ್ದಾನೆ.
ಪ್ಲಾಟ್‌ಫಾರ್ಮ್ ತುಂಬಾ ಜನ ಇದ್ದರೂ, ಯಾರನ್ನೂ ಕೇರ್ ಮಾಡದೆ ಆ ಯುವಕ ತನ್ನ ತಾಯಿಯನ್ನು ಸುರಕ್ಷಿತವಾಗಿ ಕರೆದುಕೊಂಡು ಹೋಗುವ ಧಾವಂತದಲ್ಲಿದ್ದ. ರೈಲು ತಪ್ಪಿ ಹೋಗಬಾರದು ಎಂಬ ಆತುರವೋ ಅಥವಾ ತನ್ನ ತಾಯಿಗೆ ಜನದಟ್ಟಣೆಯಲ್ಲಿ ತೊಂದರೆಯಾಗಬಾರದು ಎಂಬ ಕಾಳಜಿಯೋ ಗೊತ್ತಿಲ್ಲ, ಆದರೆ ಆತನ ಬೆನ್ನ ಮೇಲೆ ಕುಳಿತಿದ್ದ ತಾಯಿಯ ಮುಖದಲ್ಲಿ ಒಂದು ರೀತಿಯ ನಿರಾಳತೆ ಇತ್ತು.
ಮೊಬೈಲ್‌ನಲ್ಲಿ ಸೆರೆಯಾದ ಅಪರೂಪದ ಕ್ಷಣ
ದೂರದಿಂದ ಈ ದೃಶ್ಯವನ್ನು ಗಮನಿಸಿದ ಮತ್ತೊಬ್ಬ ಯುವಕ ತನ್ನ ಮೊಬೈಲ್‌ನಲ್ಲಿ ಇದನ್ನು ಸೆರೆಹಿಡಿದು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾನೆ. ಈ ವಿಡಿಯೋ ಎಷ್ಟು ವೇಗವಾಗಿ ವೈರಲ್ ಆಗಿದೆ ಎಂದರೆ, ಕೇವಲ ಕೆಲವೇ ಗಂಟೆಗಳಲ್ಲಿ ಲಕ್ಷಾಂತರ ಜನ ಇದನ್ನು ನೋಡಿ ಭಾವುಕರಾಗಿದ್ದಾರೆ.
ನಮ್ಮ ಪುರಾಣಗಳಲ್ಲಿ ತಂದೆ-ತಾಯಿಯನ್ನು ಕಾವಡಿಯಲ್ಲಿ ಹೊತ್ತು ತೀರ್ಥಯಾತ್ರೆ ಮಾಡಿಸಿದ ಶ್ರವಣ ಕುಮಾರನ ಬಗ್ಗೆ ಓದಿದ್ದೇವೆ. ಈ ವಿಡಿಯೋ ನೋಡಿದ ಮೇಲೆ ಇವನೇ ಇಂದಿನ ಕಾಲದ ಆಧುನಿಕ ಶ್ರವಣ ಕುಮಾರ ಎಂದು ನೆಟ್ಟಿಗರು ಕೊಂಡಾಡುತ್ತಿದ್ದಾರೆ.
ನೆಟ್ಟಿಗರ ಕಾಮೆಂಟ್‌ಗಳ ಸುರಿಮಳೆ
ವಿಡಿಯೋ ನೋಡಿದ ಪ್ರತಿಯೊಬ್ಬರೂ ಈ ಮಗನ ಸಂಸ್ಕಾರಕ್ಕೆ ತಲೆಬಾಗಿದ್ದಾರೆ. ಒಬ್ಬ ಬಳಕೆದಾರರು, ಪ್ರತಿಯೊಬ್ಬ ತಾಯಿಗೂ ಇಂತಹ ಮಗನೇ ಸಿಗಲಿ ಎಂದು ಹಾರೈಸಿದ್ದಾರೆ. ಇನ್ನೊಬ್ಬರು, ಇಂದಿನ ಕಾಲದಲ್ಲಿ ತಂದೆ-ತಾಯಿಯನ್ನು ಅಪ್ಪಿ ಮುದ್ದಾಡುವವರೇ ಕಡಿಮೆ, ಇನ್ನು ಬೆನ್ನ ಮೇಲೆ ಹೊತ್ತು ಸಾಗುವ ಈ ಮಗನಿಗೆ ನಮ್ಮದೊಂದು ಸಲಾಂ ಎಂದು ಬರೆದಿದ್ದಾರೆ, (ಏಜನ್ಸೀಸ್).