ದೇಶ

ನಮ್ಮದೇ ಪಕ್ಷದ ಕೆಲವರಿಗೆ ಹುಚ್ಚು ನಾಯಿ ಕಚ್ಚಿದೆ: ಸ್ವಪಕ್ಷದ ಶಾಸಕನ ವಿರುದ್ಧ ಸಿಎಂ ರೇವಂತ್ ರೆಡ್ಡಿ ವಾಗ್ದಾಳಿ | CM Revanth Reddy

ತೆಲಂಗಾಣದಲ್ಲಿ ಇತ್ತೀಚೆಗೆ ಅಭಿವೃದ್ಧಿ ಅನುದಾನ ಹಂಚಿಕೆಯಲ್ಲಿನ ತಾರತಮ್ಯ ಆರೋಪದ ಮೇಲೆ ತಮ್ಮದೇ ಕಾಂಗ್ರೆಸ್ ಸರ್ಕಾರದ ವಿರುದ್ಧ ಮುನುಗೋಡು ಶಾಸಕ ಕೋಮಟಿರೆಡ್ಡಿ ರಾಜಗೋಪಾಲರೆಡ್ಡಿ ವಾಗ್ದಾಳಿ ನಡೆಸಿದ್ದರು. ಮತ್ತು ತೆಲಂಗಾಣ ಸರ್ಕಾರದಲ್ಲಿ ಎಲ್ಲವೂ ಸರಿಯಿಲ್ಲ, ಆಂತರಿಕ ಭಿನ್ನಮತವನ್ನು ಬಹಿರಂಗಪಡಿಸಿದ್ದರು.

ಹೈದರಾಬಾದ್: ಇತ್ತೀಚೆಗೆ ತೆಲಂಗಾಣದಲ್ಲಿ ಅಭಿವೃದ್ಧಿ ಅನುದಾನ ಹಂಚಿಕೆಯಲ್ಲಿ ತಾರತಮ್ಯ ಮಾಡಲಾಗಿದೆ ಎಂದು ಆರೋಪಿಸಿ ತಮ್ಮದೇ ಕಾಂಗ್ರೆಸ್ ಸರ್ಕಾರದ ವಿರುದ್ಧ ಮುನುಗೋಡು ಶಾಸಕ ಕೋಮಟಿರೆಡ್ಡಿ ರಾಜಗೋಪಾಲರೆಡ್ಡಿ ವಾಗ್ದಾಳಿ ನಡೆಸಿದ್ದರು. ಮತ್ತು ಸರ್ಕಾರದಲ್ಲಿ ಎಲ್ಲವೂ ಸರಿಯಿಲ್ಲ ಎಂಬುದನ್ನು ತಿಳಿಸುವ ಜೊತೆಗೆ ಪಕ್ಷದಲ್ಲಿನ ಆಂತರಿಕ ಭಿನ್ನಮತವನ್ನು ಬಹಿರಂಗಪಡಿಸಿದ್ದರು.

ಸಿದ್ದಿಪೇಟೆಯಲ್ಲಿ ಗುರುವಾರ(ನ. 19) ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿರುವ ಸಿಎಂ ರೇವಂತ್ ರೆಡ್ಡಿ, ಸರ್ಕಾರವನ್ನು ಟೀಕಿಸಿದ ತಮ್ಮದೇ ಪಕ್ಷದ ಶಾಸಕರ ವಿರುದ್ಧ ಪರೋಕ್ಷವಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಯಾರದ್ದಾದರೂ ಕಿವಿಯಲ್ಲಿ ಕೆಟ್ಟದ್ದನ್ನು ಪಿಸುಗುಟ್ಟಬೇಕು. ಮತ್ತು ಒಳ್ಳೆಯದನ್ನು ಮೈಕ್‌ನಲ್ಲಿ ಹೇಳಬೇಕು ಎನ್ನುತ್ತಾರೆ. ಆದರೆ ನಮ್ಮದೇ ಪಕ್ಷದಲ್ಲಿನ ಕೆಲವರು ತಮ್ಮ ಕೊಳಕು ವಿಷಯಗಳನ್ನು ಮೈಕ್‌ನಲ್ಲಿ ಬಹಿರಂಗಪಡಿಸುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.

ನಮ್ಮವರಲ್ಲೇ ಕೆಲವರಿಗೆ ಹುಚ್ಚು ನಾಯಿ ಕಚ್ಚಿದಂತಿದೆ. ಅವರು ಸಾರ್ವಜನಿಕವಾಗಿ ಎಲ್ಲವನ್ನೂ ಟೀಕಿಸುತ್ತಾರೆ, ಆದರೆ ಮನೆಗೆ ಬಂದಾಗ ಮಾಡಿದ ಒಳ್ಳೆಯ ಕೆಲಸವನ್ನು ಖಾಸಗಿಯಾಗಿ ಮೆಚ್ಚಿಕೊಳ್ಳುತ್ತಾರೆ. ಇಂತಹವರನ್ನು ಕಾಂಗ್ರೆಸ್ ಕಾರ್ಯಕರ್ತರು ಮಾನಸಿಕ ಆಸ್ಪತ್ರೆಗೆ ಕರೆದೊಯ್ಯುತ್ತಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಕೋಮಟಿರೆಡ್ಡಿ ರಾಜಗೋಪಾಲ್​ರೆಡ್ಡಿ ಹೇಳಿದ್ದೇನು?

ನ. 18ರಂದು ತಮ್ಮ ಮುನುಗೋಡು ಕ್ಷೇತ್ರದಲ್ಲಿ ನಡೆದ ಪಿಂಚಣಿ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಕಾಂಗ್ರೆಸ್ ಶಾಸಕ ರಾಜ್ ಗೋಪಾಲ್ ರೆಡ್ಡಿ, ಅಭಿವೃದ್ಧಿ ನಿಧಿ ಹಂಚಿಕೆಯಲ್ಲಿ ತಾರತಮ್ಯ ಮಾಡಲಾಗಿದೆ ಎಂದು ಆರೋಪಿಸಿ ಮುಖ್ಯಮಂತ್ರಿ ರೇವಂತ್ ರೆಡ್ಡಿ, ಉಪಮುಖ್ಯಮಂತ್ರಿ ಮಲ್ಲು ಭಟ್ಟಿ ವಿಕ್ರಮಾರ್ಕ ಮತ್ತು ಸಚಿವ ಎನ್ ಉತ್ತಮ್ ಕುಮಾರ್ ರೆಡ್ಡಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದರು.

ಸರ್ಕಾರಿ ಅಧಿಕಾರಿಗಳ ಭ್ರಷ್ಟಾಚಾರದ ಬಗ್ಗೆಯೂ ಬಹಿರಂಗವಾಗಿ ಮಾತನಾಡಿದ್ದ ಅವರು, ಬಿಲ್‌ಗಳನ್ನು ಪ್ರಕ್ರಿಯೆಗೊಳಿಸಲು ಸರ್ಕಾರಿ ಅಧಿಕಾರಿಗಳು ಗುತ್ತಿಗೆದಾರರಿಂದ ಭಾರಿ ಕಮಿಷನ್‌ಗಳನ್ನು ಕೇಳುತ್ತಿದ್ದಾರೆ. ಇದು ಕಾಂಗ್ರೆಸ್ ಸರ್ಕಾರದ ವರ್ಚಸ್ಸಿಗೆ ಕಳಂಕ ತರುತ್ತಿದೆ ಎಂದು ಕಿಡಿಕಾರಿದ್ದರು (ಏಜೆನ್ಸೀಸ್).