ವೃದ್ಧೆಯ ಒಡೆವೆ ಕದ್ದು ಊರೋರಿಗೆ ಗಿಫ್ಟ್​ ಕೊಟ್ಟ ರೀಲ್​ ಸ್ಟಾರ್​ ಈತ! ದೇವರ ಪರಮ ಭಕ್ತ ಕೊನೆಗೂ ಖಾಕಿ ಬಲೆಗೆ ಬಿದ್ದಿದ್ದೇ ರೋಚಕ | Influencer 
ದೇಶ

ವೃದ್ಧೆಯ ಒಡೆವೆ ಕದ್ದು ಊರೋರಿಗೆ ಗಿಫ್ಟ್​ ಕೊಟ್ಟ ರೀಲ್​ ಸ್ಟಾರ್​ ಈತ! ದೇವರ ಪರಮ ಭಕ್ತ ಕೊನೆಗೂ ಖಾಕಿ ಬಲೆಗೆ ಬಿದ್ದಿದ್ದೇ ರೋಚಕ | Influencer

ಪಾಲಕ್ಕಾಡ್: ಸೋಷಿಯಲ್ ಮೀಡಿಯಾದಲ್ಲಿ ತಾನೊಬ್ಬ ಅಪ್ಪಟ್ಟ ದೇವರ ಭಕ್ತ ಎಂದು ತನ್ನ ಫಾಲೋವರ್ಸ್​ಗೆ ತೋರಿಸಿಕೊಳ್ಳುತ್ತಿದ್ದ ರೀಲ್​ ಸ್ಟಾರ್​ವೊಬ್ಬ, ರೈಲಿನಲ್ಲಿ ಪ್ರಯಾಣ ಮಾಡುತ್ತಿದ್ದ ವೃದ್ಧೆಯೊಬ್ಬರ ಚಿನ್ನಾಭರಣ ಕಳ್ಳತನ ಮಾಡಿದ ಆರೋಪದಡಿ ಇದೀಗ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ.

ಮೊಮ್ಮಗಳ ಮದುವೆಗೆಂದು 47 ಗ್ರಾಂ ಚಿನ್ನಾಭರಣ ಮತ್ತು 10 ಸಾವಿರ ರೂ. ಕ್ಯಾಶ್ ಅನ್ನು ಕೊಂಡೊಯುತ್ತಿದ್ದ ಮಹಿಳೆಯು, ರೈಲಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ, ಆಕೆಯ ಬ್ಯಾಗ್ ಅನ್ನು ಕಳವು ಮಾಡಿದ ಆರೋಪದ ಮೇಲೆ ಸೋಷಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ತಮಿಳುನಾಡಿನ ದಿಂಡಿಗಲ್ ಜಿಲ್ಲೆಯ ಪೆರಿಯಾರ್ ಕಾಲೋನಿ ಮಹಾಲಕ್ಷ್ಮಿನಗರದ ಎಂ. ಬಾಲಮುರುಗ (38) ಎಂದು ಗುರುತಿಸಲಾಗಿದೆ.

ಸೀಟಿನ ಪಕ್ಕದಲ್ಲೇ ಇಟ್ಟಿದ್ದ ಬ್ಯಾಗ್‌

ಆಲಪ್ಪುಳ ಜಿಲ್ಲೆಯ ಚೆಂಗನ್ನೂರು ನಿವಾಸಿ ಕುಮಾರಿ (66) ಎಂಬುವವರು ಚೆನ್ನೈನಲ್ಲಿರುವ ಮಗನ ಮನೆಯಿಂದ ಚೆಂಗನ್ನೂರಿಗೆ ಚೆನ್ನೈ–ತಿರುವನಂತಪುರಂ ಮೇಲ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದರು. ನವೆಂಬರ್ 3ರಂದು ಬೆಳಗಿನ ಜಾವ ಸುಮಾರು 5.30ರ ವೇಳೆಗೆ ಪಾಲಕ್ಕಾಡ್ ಜಂಕ್ಷನ್‌ನಲ್ಲಿ ರೈಲು ಹತ್ತಿದ್ದ ಬಾಲಮುರುಗ, ಸೀಟಿನ ಪಕ್ಕದಲ್ಲೇ ಇಟ್ಟಿದ್ದ ಕುಮಾರಿ ಅವರ ಬ್ಯಾಗ್‌ ಕದ್ದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ರೈಲು ಹೊರಡುವ ಮೊದಲೇ ಕೆಳಗಿಳಿದ ಆತ, ಆಟೋದಲ್ಲಿ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣಕ್ಕೆ ತೆರಳಿ, ಅಲ್ಲಿಂದ ಕೊಯಮತ್ತೂರಿಗೆ ಪ್ರಯಾಣಿಸಿದ್ದಾನೆ ಎನ್ನಲಾಗಿದೆ.

ಸಿನಿಮಾ, ಕಿರುಚಿತ್ರಗಳಲ್ಲಿ ನಟನೆ

ಕೊಯಮತ್ತೂರಿನಲ್ಲಿ ಕಳವು ಮಾಡಿದ ಚಿನ್ನದ ಕೆಲವು ಆಭರಣಗಳನ್ನು ಮಾರಿ ಹಣ ಪಡೆದು ತನ್ನ ಊರಿಗೆ ಹೋಗಿದ್ದಾನೆ. ಬಳಿಕ ಅದೇ ಹಣದಲ್ಲಿ ಅದ್ಧೂರಿಯಾಗಿ ದೀಪಾವಳಿ ಆಚರಿಸಿದ್ದಲ್ಲದೆ, ಸ್ಥಳೀಯ ನಿವಾಸಿಗಳಿಗೆ ಹಬ್ಬದ ಉಡುಗೊರೆಗಳನ್ನು ಕೊಟ್ಟು ಸಂಭ್ರಮಾಚರಣೆ ಮಾಡಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಸೋಷಿಯಲ್ ಮೀಡಿಯಾದಲ್ಲಿ ಅಪಾರ ಸಂಖ್ಯೆಯ ಫಾಲೋವರ್ಸ್​ ಹೊಂದಿರುವ ಬಾಲಮುರುಗ, ಸಿನಿಮಾ ಮತ್ತು ಕಿರುಚಿತ್ರಗಳಲ್ಲಿಯೂ ನಟಿಸಿದ್ದಾನೆ ಎನ್ನಲಾಗಿದೆ.

ವಿಡಿಯೋ ಎಡಿಟಿಂಗ್ ಕೆಲಸವನ್ನೂ ಮಾಡುತ್ತಿದ್ದ ಈತ, ತನ್ನ ರೀಲ್​ ವಿಡಿಯೋಗಳಲ್ಲಿ ಐಷಾರಾಮಿ ಕಾರುಗಳಲ್ಲಿ ಓಡಾಡುವುದು, ಅದ್ಧೂರಿ ಆಚರಣೆಗಳಲ್ಲಿ ಭಾಗವಹಿಸುವುದು ಹಾಗೂ ದುಬಾರಿ ಉಡುಗೊರೆಗಳನ್ನು ನೀಡುವ ಮೂಲಕ ಸ್ಥಳೀಯರ ಗಮನ ಸೆಳೆದಿದ್ದ ಎಂದು ವಿವರಿಸಲಾಗಿದೆ. ಆರೋಪಿಗೆ ಪತ್ನಿ ಮತ್ತು ಇಬ್ಬರು ಮಕ್ಕಳಿದ್ದಾರೆ ಎಂದು ವರದಿಗಳು ತಿಳಿಸಿವೆ.

ಪ್ರಕರಣದ ತನಿಖೆ ನಡೆಸಿದ ರೈಲ್ವೆ ರಕ್ಷಣಾ ಪಡೆ (RPF) ಮತ್ತು ಸರ್ಕಾರಿ ರೈಲ್ವೆ ಪೊಲೀಸರು (GRP), ಕೊಯಮತ್ತೂರಿನ ಬಾಡಿಗೆ ಮನೆಯೊಂದರಲ್ಲಿ ಬಾಲಮುರುಗನನ್ನು ಬಂಧಿಸಿದ್ದಾರೆ. ಆರೋಪಿಯಿಂದ 36.42 ಪ್ರಮಾಣದ ಚಿನ್ನವನ್ನು ವಶಪಡಿಸಿಕೊಂಡಿರುವುದಾಗಿ ವರದಿಯಾಗಿದ್ದು, ಉಳಿದ ಆಭರಣಗಳ ಪತ್ತೆಗಾಗಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ,(ಏಜೆನ್ಸೀಸ್).