ಸೋಷಿಯಲ್ ಮೀಡಿಯಾ ಆದಾಯ ಉಚಿತವಲ್ಲ!: ಆಗಸ್ಟ್ 31ರೊಳಗೆ ಐಟಿಆರ್ ಸಲ್ಲಿಸದಿದ್ದರೆ ಸಂಕಷ್ಟ! (Income Tax Alert ಸಾಂದರ್ಭಿಕ ಚಿತ್ರ) 
ದೇಶ

ಸೋಷಿಯಲ್ ಮೀಡಿಯಾದಿಂದ ಹಣ ಮಾಡ್ತಿದ್ದೀರಾ?: ಆಗಸ್ಟ್ 31ರೊಳಗೆ ಈ ಕೆಲಸ ಮಾಡದಿದ್ದರೆ ಐಟಿ ಇಲಾಖೆಯಿಂದ ನೋಟಿಸ್! Income Tax Alert

ಪ್ರಮುಖ ಮುಖ್ಯಾಂಶಗಳು

  • ಸೋಷಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್‌ಗಳಲ್ಲಿ ಸಕ್ರಿಯರಾಗಿರುವ ಕಂಟೆಂಟ್ ಕ್ರಿಯೇಟರ್ಸ್‌ಗೆ ಆದಾಯ ತೆರಿಗೆಯಿಂದ ಶಾಕ್
  • ಡಿಜಿಟಲ್​ ಲೋಕದಲ್ಲಿ ಕಂಟೆಂಟ್​ ರಚಿಸುವುದು ಕೇವಲ ಹವ್ಯಾಸವಾಗಿ ಉಳಿದಿಲ್ಲ. ಬದಲಾಗಿ ಅದೊಂದು ಉದ್ಯೋಗದ ಆದಾಯವಾಗಿ ಬೆಳೆದಿದೆ
  • ಸೋಷಿಯಲ್ ಮೀಡಿಯಾ ಪ್ರಭಾವಿಗಳು ತಮ್ಮ ಆದಾಯ ಮತ್ತು ವೆಚ್ಚಗಳ ಸರಿಯಾದ ಲೆಕ್ಕಪತ್ರವನ್ನು ಕಾಯ್ದುಕೊಳ್ಳುವುದು ಅಗತ್ಯ

Income Tax Alert: ಯೂಟ್ಯೂಬ್, ಇನ್‌ಸ್ಟಾಗ್ರಾಮ್ ಹಾಗೂ ವಿವಿಧ ಸೋಷಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್‌ಗಳಲ್ಲಿ ಸಕ್ರಿಯರಾಗಿರುವ ಕಂಟೆಂಟ್ ಕ್ರಿಯೇಟರ್ಸ್‌ಗೆ ಆದಾಯ ತೆರಿಗೆ ಇಲಾಖೆ ಇದೀಗ ಎಚ್ಚರಿಕೆಯೊಂದನ್ನು ನೀಡಿದೆ. ಡಿಜಿಟಲ್​ ಲೋಕದಲ್ಲಿ ಕಂಟೆಂಟ್​ ರಚಿಸುವುದು ಕೇವಲ ಹವ್ಯಾಸವಾಗಿ ಉಳಿದಿಲ್ಲ. ಬದಲಾಗಿ ಅದೊಂದು ಉದ್ಯೋಗದ ಆದಾಯವಾಗಿ ಬೆಳೆದಿದೆ. ಆದರೆ, ಈ ಉದ್ಯೋಗದಿಂದ ಬರುವ ಆದಾಯ ಸಂಪೂರ್ಣ ತೆರಿಗೆ ಮುಕ್ತವಲ್ಲ ಎಂಬುದನ್ನು ಕ್ರಿಯೇಟರ್‌ಗಳು ನೆನಪಿನಲ್ಲಿಡಬೇಕಿದೆ.

ಆಗಸ್ಟ್ 31ರ ಐಟಿಆರ್ (ಆದಾಯ ತೆರಿಗೆ ರಿಟರ್ನ್ಸ್) ಸಲ್ಲಿಕೆಯ ಅಂತಿಮ ಗಡುವು ಹತ್ತಿರವಾಗುತ್ತಿದ್ದು, ಉದ್ಯಮ ಅಥವಾ ವೃತ್ತಿಪರ ಆದಾಯ ಹೊಂದಿರುವ ಸೋಷಿಯಲ್ ಮೀಡಿಯಾ ಪ್ರಭಾವಿಗಳು ತಮ್ಮ ಆದಾಯ ಮತ್ತು ವೆಚ್ಚಗಳ ಸರಿಯಾದ ಲೆಕ್ಕಪತ್ರವನ್ನು ಕಾಯ್ದುಕೊಳ್ಳುವುದು ಅತ್ಯಗತ್ಯವಾಗಿದೆ.

ಕ್ರಿಯೇಟರ್ಸ್ ಯಾವೆಲ್ಲಾ ಮೂಲದ ಆದಾಯಕ್ಕೆ ತೆರಿಗೆ ಪಾವತಿಸಬೇಕು?

ಸಾಮಾನ್ಯವಾಗಿ ಕ್ರಿಯೇಟರ್‌ಗಳಿಗೆ ಒಂದೇ ಮೂಲದಿಂದ ಆದಾಯ ಬರುವುದಿಲ್ಲ. ಯೂಟ್ಯೂಬ್ ಆಡ್‌ಸೆನ್ಸ್ (AdSense) ಜಾಹೀರಾತು ಗಳಿಕೆ, ಇನ್‌ಸ್ಟಾಗ್ರಾಮ್ ಬ್ರ್ಯಾಂಡ್ ಪ್ರಚಾರಗಳು (Brand Deals), ಅಫಿಲಿಯೇಟ್ ಕಮಿಷನ್, ಮೆಂಬರ್‌ಶಿಪ್, ಸೂಪರ್ ಚಾಟ್ಸ್, ಪ್ಲಾಟ್‌ಫಾರ್ಮ್ ಪೇಔಟ್‌ಗಳು ಹಾಗೂ ಮರ್ಚಂಡೈಸ್ ಮಾರಾಟದಿಂದ ಗಳಿಸುವ ಹಣವು ತೆರಿಗೆ ವ್ಯಾಪ್ತಿಗೆ ಒಳಪಡುತ್ತದೆ.
ಇಷ್ಟೇ ಅಲ್ಲದೆ, ಪ್ರಚಾರದ ಭಾಗವಾಗಿ ಬ್ರಾಂಡ್​ಗಳಿಂದ ಉಡುಗೊರೆಯಾಗಿ ತೆಗೆದುಕೊಳ್ಳುವ ಫೋನ್​ಗಳು, ಗ್ಯಾಜೇಟ್​ಗಳು ಅಥವಾ ಉಚಿತ ಪ್ರವಾಸಗಳಂತಹ ಸೌಲಭ್ಯಗಳು ಸಹ ವೃತ್ತಿಪರ ಲಾಭ ಎಂದು ಪರಿಗಣಿಸಲಾಗುತ್ತದೆ. ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 28(iv) ಪ್ರಕಾರ ಇವುಗಳ ಮೇಲೂ ತೆರಿಗೆ ಅನ್ವಯವಾಗಲಿದ್ದು, ಬ್ರ್ಯಾಂಡ್‌ಗಳು ಸೆಕ್ಷನ್ 194R ಅಡಿಯಲ್ಲಿ ಶೇಕಡಾ 10ರಷ್ಟು ಟಿಡಿಎಸ್ (TDS) ಕಡಿತಗೊಳಿಸುತ್ತವೆ.

ಕಂಟೆಂಟ್ ಕ್ರಿಯೇಟರ್‌ಗಳು ಯಾವ ಐಟಿಆರ್ ಫಾರ್ಮ್ ಬಳಸಬೇಕು?

ಕಂಟೆಂಟ್ ಕ್ರಿಯೇಟರ್‌ಗಳು ತಮ್ಮ ಆದಾಯದ ಸ್ವರೂಪಕ್ಕೆ ಅನುಗುಣವಾಗಿ ಸೂಕ್ತವಾದ ಐಟಿಆರ್ ಫಾರ್ಮ್ ಆಯ್ಕೆ ಮಾಡಿಕೊಳ್ಳಬೇಕು. ಉದ್ಯಮ ಅಥವಾ ವೃತ್ತಿಯಿಂದ ಆದಾಯ ಹೊಂದಿರುವ ಮತ್ತು ನಿಯಮಿತ ಲೆಕ್ಕಪತ್ರ ನಿರ್ವಹಿಸುವ ವ್ಯಕ್ತಿಗಳು ITR-3 ಬಳಸಬೇಕು. ಅದೇ ರೀತಿ, ಸೆಕ್ಷನ್ 44AD ಅಥವಾ 44ADA ಅಡಿಯಲ್ಲಿ ಅನುಮಾನಾಸ್ಪದ ತೆರಿಗೆ ಯೋಜನೆಯನ್ನು ಆಯ್ಕೆ ಮಾಡಿಕೊಳ್ಳುವ ಅರ್ಹ ಕ್ರಿಯೇಟರ್‌ಗಳು ITR-4 ನಂತಹ ಸರಳ ಫಾರ್ಮ್ ಅನ್ನು ಬಳಸಬಹುದು.
ತೆರಿಗೆ ಪಾವತಿದಾರರು ಐಟಿಆರ್ ಸಲ್ಲಿಸುವ ಮೊದಲು ತಮ್ಮ ಎಐಎಸ್ (AIS) ಮತ್ತು ಫಾರ್ಮ್ 26AS ಅನ್ನು ತಮ್ಮ ನಿಜವಾದ ಜಮಾ ಆದಾಯದೊಂದಿಗೆ, ವಿಶೇಷವಾಗಿ ವಿದೇಶಿ ಆಡ್‌ಸೆನ್ಸ್ ಕ್ರೆಡಿಟ್‌ಗಳೊಂದಿಗೆ ಮರುಪರಿಶೀಲಿಸಿಕೊಳ್ಳುವುದು ಕಡ್ಡಾಯವಾಗಿದೆ.

ಎಡಿಟಿಂಗ್ ಹಾಗೂ ಕ್ಯಾಮೆರಾ ವೆಚ್ಚಗಳಿಗೆ ತೆರಿಗೆ ವಿನಾಯಿತಿ ಸಿಗುತ್ತದೆಯೇ?

ಕಂಟೆಂಟ್ ರಚನೆಗಾಗಿ ವೆಚ್ಚ ಮಾಡಿದ ಹಣಕ್ಕೆ ತೆರಿಗೆ ವಿನಾಯಿತಿ ಪಡೆಯಲು ಅವಕಾಶವಿದೆ. ವಿಡಿಯೋ ಎಡಿಟಿಂಗ್ ಸಾಫ್ಟ್​ವೇರ್ ಚಂದಾದಾರಿಕೆ, ಕ್ಯಾಮೆರಾ, ಮೈಕ್​, ಲೈಟಿಂಗ್​ ಮುಂತಾದ ಉಪಕರಣಗಳ ಸವೆಕಳಿ ವೆಚ್ಚ ಹಾಗೂ ಇಂಟರ್ನೆಟ್ ಮತ್ತು ಪ್ರಯಾಣದ ವೆಚ್ಚಗಳನ್ನು ಆದಾಯದಲ್ಲಿ ಕಡಿತಗೊಳಿಸಬಹುದು. ಆದರೆ, ಪ್ರತಿಯೊಂದು ವೆಚ್ಚಕ್ಕೂ ಸೂಕ್ತ ಬಿಲ್​ಗಳನ್ನು ಕಾಯ್ದಿರಿಸಿಕೊಂಡಿರಬೇಕು.

ಜಿಎಸ್‌ಟಿ ನೋಂದಣಿ ಮತ್ತು ಟಿಡಿಎಸ್ ನಿಯಮಗಳೇನು?

ಆದಾಯ ತೆರಿಗೆ ಮಾತ್ರವಲ್ಲದೆ ಜಿಎಸ್‌ಟಿ ನಿಯಮಗಳು ಸಹ ಕ್ರಿಯೇಟರ್‌ಗಳಿಗೆ ಅನ್ವಯಿಸುತ್ತವೆ. ಕ್ರಿಯೇಟರ್‌ಗಳ ವಾರ್ಷಿಕ ಒಟ್ಟು ಸಂಪಾದನೆ 20 ಲಕ್ಷ ರೂಪಾಯಿಗಳನ್ನು (ಕೆಲವು ವಿಶೇಷ ರಾಜ್ಯಗಳಲ್ಲಿ 10 ಲಕ್ಷ ರೂ.) ಮೀರಿದರೆ ಜಿಎಸ್​ಟಿ ನೋಂದಣಿ ಮಾಡಿಸುವುದು ಕಡ್ಡಾಯವಾಗಿದೆ. ಜೊತೆಗೆ ವಿದೇಶಿ ಕ್ಲೈಂಟ್‌ಗಳಿಗೆ ಸೇವೆ ಒದಗಿಸುವಾಗ ನಿರ್ದಿಷ್ಟ ಜಿಎಸ್‌ಟಿ ನಿಯಮಗಳನ್ನು ಅನುಸರಿಸಬೇಕಾಗುತ್ತದೆ.

ಯೂಟ್ಯೂಬ್ ವೀವ್ಸ್ ಲೆಕ್ಕಾಚಾರದಲ್ಲಿ ಬದಲಾವಣೆ: ಆದಾಯ ಹೆಚ್ಚಾಗುತ್ತದೆಯೇ?

ಮತ್ತೊಂದೆಡೆ, ಯೂಟ್ಯೂಬ್ ಆಗಸ್ಟ್ 24ರಿಂದ ವೀಕ್ಷಣೆಗಳನ್ನು (Views) ಲೆಕ್ಕಹಾಕುವ ವಿಧಾನದಲ್ಲಿ ಬದಲಾವಣೆ ತರುತ್ತಿದೆ. ಇನ್‌ಸ್ಟಾಗ್ರಾಮ್ ಮತ್ತು ಟಿಕ್‌ಟಾಕ್ ಮಾದರಿಯಲ್ಲಿ ವೀಡಿಯೋ ಪ್ಲೇ ಆಗಲು ಪ್ರಾರಂಭವಾದ ತಕ್ಷಣವೇ ವೀವ್ ಎಂದು ಪರಿಗಣಿಸಲಾಗುತ್ತದೆ. ಇದರಿಂದ ವೀವ್ಸ್ ಸಂಖ್ಯೆ ವೇಗವಾಗಿ ಹೆಚ್ಚಾಗಬಹುದು. ಆದರೆ, ಇದರಿಂದ ಕ್ರಿಯೇಟರ್‌ಗಳ ಗಳಿಕೆ ಹೆಚ್ಚಾಗುವುದಿಲ್ಲ. ಯೂಟ್ಯೂಬ್ ತನ್ನ ಪಾರ್ಟ್‌ನರ್ ಪ್ರೋಗ್ರಾಂ ಅರ್ಹತೆ ಮತ್ತು ಜಾಹೀರಾತು ಗಳಿಕೆಗೆ ಹಳೆಯ ಎಂಗೇಜ್ಡ್ ವೀವ್ಸ್ ಮಾನದಂಡವನ್ನೇ ಮುಂದುವರಿಸಲಿದೆ.
ಆದ್ದರಿಂದ, ಕಂಟೆಂಟ್ ಕ್ರಿಯೇಟರ್‌ಗಳು ತಮ್ಮ ಕೆಲಸವನ್ನು ವ್ಯಾಪಾರದಂತೆ ಪರಿಗಣಿಸಿ, ಆಗಸ್ಟ್ 31ರ ಒಳಗಾಗಿ ತೆರಿಗೆ ಸಲ್ಲಿಕೆ ಪ್ರಕ್ರಿಯೆಯನ್ನು ಪೂರ್ಣಗೊಳಿಸುವುದು ಸೂಕ್ತ (ಏಜೆನ್ಸೀಸ್​).