NEET Paper Leak Case 
ದೇಶ

'ಹಳೇ ತಪ್ಪುಗಳಿಂದ NTA ಇನ್ನೂ ಪಾಠ ಕಲಿತಿಲ್ಲ'; NEET ಪೇಪರ್ ಲೀಕ್ ಸಂಬಂಧ ಸುಪ್ರೀಂ ಕೋರ್ಟ್ ಬೇಸರ

ಪ್ರಮುಖ ಮುಖ್ಯಾಂಶಗಳು

  • ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣ
  • ಇಂತಹದ್ದೇ ಘಟನೆಗಳು ನಡೆದಿದ್ದರೂ, ವ್ಯವಸ್ಥೆಯು ಇನ್ನೂ ಎಚ್ಚೆತ್ತುಕೊಂಡಿಲ್ಲ ಎಂದು ಬೇಸರ
  • ಪೇಪರ್ ಲೀಕ್ ಹಗರಣ ಕಷ್ಟಪಟ್ಟು ಓದುವ ವಿದ್ಯಾರ್ಥಿಗಳ ಭವಿಷ್ಯ ಮತ್ತು ನಂಬಿಕೆಯನ್ನು ಧ್ವಂಸಗೊಳಿಸುತ್ತಿವೆ
ನವದೆಹಲಿ:

FAIMAಯಿಂದ ಅರ್ಜಿ ಸಲ್ಲಿಕೆ

National Testing Agency ಬದಲಾಯಿಸಬೇಕು. ನ್ಯಾಯಾಂಗದ ಉಸ್ತುವಾರಿಯಲ್ಲಿ ಮರುಪರೀಕ್ಷೆ ನಡೆಸಬೇಕು ಎಂದು ಕೋರಿ ಸಲ್ಲಿಕೆಯಾಗಿದ್ದ ಅರ್ಜಿಯ ವಿಚಾರಣೆ ವೇಳೆ ಕೋರ್ಟ್​ ಈ ಆದೇಶ ಹೊರಡಿಸಿದೆ ಅಖಿಲ ಭಾರತ ವೈದ್ಯಕೀಯ ಸಂಘಗಳ ಒಕ್ಕೂಟ (FAIMA) ಈ ಅರ್ಜಿಯನ್ನು ಸಲ್ಲಿಸಿದ್ದು, ನೀಟ್ ಪರೀಕ್ಷೆ ನಡೆಸುವಲ್ಲಿ ಎನ್‌ಟಿಎ ಸಂಸ್ಥೆಯು ವ್ಯವಸ್ಥಿತವಾಗಿ ವಿಫಲವಾಗಿದೆ ಎಂದಿದೆ.

ಅರ್ಜಿಯಲ್ಲಿ ಏನಿತ್ತು?

 ದೇಶದ ಅತ್ಯಂತ ಪ್ರಮುಖ ವೈದ್ಯಕೀಯ ಪ್ರವೇಶ ಪರೀಕ್ಷೆಯ ವಿಶ್ವಾಸಾರ್ಹತೆಯನ್ನು ಉಳಿಸಲು ಎನ್‌ಟಿಎ ಸಂಸ್ಥೆಯನ್ನು ಬದಲಾಯಿಸಬೇಕು ಅಥವಾ ಮೂಲಭೂತವಾಗಿ ಪುನರ್​ರಚನೆ ಮಾಡಬೇಕು. ಉಸ್ತುವಾರಿಯಲ್ಲೇ ಪಾರದರ್ಶಕವಾಗಿ ಹೊಸ ಪರೀಕ್ಷೆಯನ್ನು ನಡೆಸಬೇಕು ಎಂದು ಅಡ್ವೊಕೇಟ್ ತನ್ವಿ ದುಬೆ ಅವರ ಮೂಲಕ ಅರ್ಜಿ ಸಲ್ಲಿಸಲಾಗಿತ್ತು.
ಈ ಸಂಬಂಧ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಪಿ.ಎಸ್. ನರಸಿಂಹ ಮತ್ತು ಅಲೋಕ್ ಆರಾಧೆ ಅವರ ನೇತೇತ್ವದ ಪೀಠವು, ​ ಕೇಂದ್ರ ಸರ್ಕಾರ  ಮತ್ತು ಶಿಕ್ಷಣ ಸಚಿವಾಲಯಕ್ಕೆ ನೋಟಿಸ್ ಜಾರಿ ಮಾಡಿದೆ. 2024ರಲ್ಲಿ ಕೋರ್ಟ್​ ನಿರ್ದೇಶನದ ಮೇರೆಗೆ ತೆಗೆದುಕೊಂಡ ಕ್ರಮಗಳ ಕುರಿತು ಗುರುವಾರದೊಳಗೆ ಅಫಿಡವಿಟ್ ಸಲ್ಲಿಸುವಂತೆ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ)ಗೆ ಖಡಕ್​  ಸೂಚನೆ ಕೊಟ್ಟಿದೆ.  ಈ ಪ್ರಕರಣದ ಮುಂದಿನ ವಿಚಾರಣೆಯನ್ನು ಬರುವ ಶುಕ್ರವಾರಕ್ಕೆ ಮುಂದೂಡಿದೆ.

ಕೋರ್ಟ್​ ಹೇಳಿದ್ದೇನು?

ವೈದ್ಯಕೀಯ ಪ್ರವೇಶಾತಿಗಾಗಿ ನಡೆಯುವ ನೀಟ್​  ಪರೀಕ್ಷೆಯ ಪೇಪರ್​ ಪದೇ ಪದೇ ಲೀಕ್ ಹಗರಣಗಳಿಂದಾಗಿ ಧಕ್ಕೆಯಾಗುತ್ತಿರುವುದನ್ನು  ಕೋರ್ಟ್​ ಗಂಭೀರವಾಗಿ ಪರಿಗಣಿಸಿದೆ. ಮುಂದಿನ ಭವಿಷ್ಯದ  ವೈದ್ಯರನ್ನು ನಿರ್ಣಯಿಸುವ ಇಂತಹ ಪರೀಕ್ಷೆಗಳಲ್ಲಿ ವ್ಯವಸ್ಥಿತ ಅಕ್ರಮಗಳು ನಡೆಯುತ್ತಿರುವುದು ಇಡೀ ಶಿಕ್ಷಣ ಮತ್ತು ಪರೀಕ್ಷಾ ಮಂಡಳಿಯ ವೈಫಲ್ಯವನ್ನು ಎತ್ತಿ ತೋರಿಸುತ್ತದೆ.

ಲಕ್ಷಕ್ಕೂ ಹೆಚ್ಚು ಆಕಾಂಕ್ಷಿಗಳು ಹಗಲು-ಇರುಳು ಎನ್ನದೆ ಪರೀಕ್ಷೆಗೆ ಶ್ರಮಪಟ್ಟು ಸಿದ್ಧರಾಗುತ್ತಾರೆ. ಆದರೆ ಈ ರೀತಿಯ ಪೇಪರ್ ಲೀಕ್ ಪ್ರಕರಣಗಳಿಂದ ಅವರ ಭವಿಷ್ಯದ ಮೇಲೆ ಭರವಸೆಯನ್ನಿಟ್ಟುಕೊಳ್ಳುವ ಸಂಬಂಧ ಅವರು ಕುಗ್ಗುತ್ತಾರೆ. ವ್ಯವಸ್ಥೆಯು ಕಟ್ಟುನಿಟ್ಟಿನ ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳುವಲ್ಲಿ ವಿಫಲವಾಗಿರುವುದು ಅತ್ಯಂತ ಕಳವಳಕಾರಿ. 
ಪರೀಕ್ಷಾ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ಸುರಕ್ಷಿತಗೊಳಿಸಲು ಮತ್ತು ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲು ಕಟ್ಟುನಿಟ್ಟಿನ ಮಾರ್ಗಸೂಚಿಗಳನ್ನು ಅನುಸರಿಸುವಂತೆ ಕೋರ್ಟ್​ ಸೂಚನೆ ಕೊಟ್ಟಿದೆ.

 ಏನಿದು ಘಟನೆ?

ಪ್ರಶ್ನೆಪತ್ರಿಕೆ ಸೋರಿಕೆ ಆರೋಪಗಳ ಹಿನ್ನೆಲೆಯಲ್ಲಿ ಎನ್‌ಟಿಎ ಮೇ 3 ರಂದು ನಡೆದಿದ್ದ ಪರೀಕ್ಷೆಯನ್ನು ರದ್ದುಗೊಳಿಸಿದ ಬೆನ್ನಲ್ಲೇ ಈ ಅರ್ಜಿ ಸಲ್ಲಿಕೆಯಾಗಿದೆ. ಸದ್ಯ ಕೇಂದ್ರ ಸರ್ಕಾರವು ಈ ಪ್ರಕರಣದ ತನಿಖೆಯನ್ನು ಸಿಬಿಐ ಗೆ ಒಪ್ಪಿಸಿದೆ.  

ಅರ್ಜಿದಾರರ ಬೇಡಿಕೆ ಏನು?

ನಿವೃತ್ತ ಸುಪ್ರೀಂ ಕೋರ್ಟ್ ನ್ಯಾಯಾಧೀಶರ ನೇತೃತ್ವದಲ್ಲಿ ಸೈಬರ್ ಭದ್ರತಾ ತಜ್ಞರು ಮತ್ತು ವಿಧಿವಿಜ್ಞಾನ ವಿಜ್ಞಾನಿಗಳನ್ನು ಒಳಗೊಂಡ ಉನ್ನತಾಧಿಕಾರ ಉಸ್ತುವಾರಿ ಸಮಿತಿಯನ್ನು ರಚಿಸಬೇಕು. ಹೊಸ ಸ್ವಾಯತ್ತ ಸಂಸ್ಥೆ ರಚನೆಯಾಗುವವರೆಗೆ ಈ ಸಮಿತಿಯೇ ಮರುಪರೀಕ್ಷೆಯ ಉಸ್ತುವಾರಿ ವಹಿಸಬೇಕು.

ನ್ಯಾಯಾಲಯದಿಂದ ನೇಮಕಗೊಂಡ ಈ ಉನ್ನತಾಧಿಕಾರ ಸಮಿತಿಯು ಮರುಪರೀಕ್ಷೆಯ ಭದ್ರತಾ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ಪರಿಶೀಲಿಸಿ, ಪ್ರಮಾಣೀಕರಿಸಿದ ನಂತರವೇ ಪರೀಕ್ಷೆ ನಡೆಸಬೇಕು. ಪ್ರಶ್ನೆಪತ್ರಿಕೆಗಳನ್ನು ಸಾಗಿಸುವಾಗ ಎದುರಾಗುವ ಭೌತಿಕ ಭದ್ರತಾ ಲೋಪಗಳನ್ನು ತಡೆಗಟ್ಟಲು, ಪ್ರಶ್ನೆಪತ್ರಿಕೆಗಳಿಗೆ 'ಡಿಜಿಟಲ್ ಲಾಕಿಂಗ್' ವ್ಯವಸ್ಥೆ ತರಬೇಕು ಹಾಗೂ ಪರೀಕ್ಷೆಯನ್ನು ಕಂಪ್ಯೂಟರ್ ಆಧಾರಿತ ಪರೀಕ್ಷೆ ಮಾದರಿಗೆ ಬದಲಾಯಿಸಬೇಕು ಎನ್ನುವುದು ಬೇಡಿಕೆಯಾಗಿದೆ, (ಏಜೆನ್ಸೀಸ್).