ನವದೆಹಲಿ: 2023ರಲ್ಲಿ ರೇವ್ ಪಾರ್ಟಿಯಲ್ಲಿ ಹಾವಿನ ವಿಷ ಬಳಸಿದ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ವಿವಾದಾತ್ಮಕ ಯೂಟ್ಯೂಬರ್ ಎಲ್ವಿಶ್ ಯಾದವ್ ವಿರುದ್ಧ ವನ್ಯಜೀವಿ (ರಕ್ಷಣೆ) ಕಾಯ್ದೆಯಡಿಯಲ್ಲಿ ದಾಖಲಾಗಿದ್ದ ಎಫ್‌ಐಆರ್(FIR) ಮತ್ತು ನಂತರದ ಕ್ರಮಗಳನ್ನು ಸುಪ್ರೀಂ ಕೋರ್ಟ್ ಗುರುವಾರ(ಮಾ. 19) ರದ್ದುಗೊಳಿಸಿದೆ.
ತಮ್ಮ ವಿರುದ್ಧ ದಾಖಲಾಗಿದ್ದ ಪ್ರಕರಣ ರದ್ದುಗೊಳಿಸುವಂತೆ ಕೋರಿ ಎಲ್ವಿಶ್ ಯಾದವ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿರುವ ಸುಪ್ರೀಂಕೋರ್ಟ್ನ ನ್ಯಾ.ಎಂ.ಎಂ. ಸುಂದ್ರೇಶ್ ಮತ್ತು ಎನ್. ಕೋಟಿಶ್ವರ್ ಸಿಂಗ್ ನೇತೃತ್ವದ ದ್ವಿಸದಸ್ಯ ಪೀಠ ಪ್ರಕರಣವನ್ನು ರದ್ದುಗೊಳಿಸಿದ್ದು, ವನ್ಯಜೀವಿ (ರಕ್ಷಣೆ) ಕಾಯ್ದೆಯಡಿಯಲ್ಲಿ ಅಧಿಕೃತ ವ್ಯಕ್ತಿಯೊಬ್ಬರು ದೂರು ದಾಖಲಿಸದ ಕಾರಣ ಪ್ರಕರಣವನ್ನು ಕಾನೂನಿನಲ್ಲಿ ಉಳಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದೆ.
ಯಾದವ್ ವಿರುದ್ಧದ ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾದ ಮಾದಕ ದ್ರವ್ಯ ಮತ್ತು ಮನೋವಿಕೃತ ವಸ್ತುಗಳ ಕಾಯ್ದೆ(ಎನ್‌ಡಿಪಿಎಸ್) ಕಾಯ್ದೆಯ ನಿಬಂಧನೆಗಳನ್ನು ಉಲ್ಲೇಖಿಸಿರುವ ಪೀಠ, ಸಹ-ಆರೋಪಿಯಿಂದ ವಶಪಡಿಸಿಕೊಂಡ ದ್ರವ ಪದಾರ್ಥ (ವಿಷ ವಿರೋಧಿ) ವೇಳಾಪಟ್ಟಿಯ ಅಡಿಯಲ್ಲಿ ನಿಗದಿತ ವಸ್ತುವಾಗಿಲ್ಲದ ಕಾರಣ ಇವುಗಳನ್ನು ಅನ್ವಯಿಸಲಾಗುವುದಿಲ್ಲ ಎಂದಿದೆ.
ಪ್ರಕರಣದ ಹಿನ್ನೆಲೆ
ಉತ್ತರ ಪ್ರದೇಶದ ನೋಯ್ಡಾದಲ್ಲಿ ನಡೆದಿದೆ ಎನ್ನಲಾದ ರೇವ್ ಪಾರ್ಟಿಯಲ್ಲಿ ಹಾವಿನ ವಿಷ ಬಳಸಿದ ಆರೋಪದ ಮೇಲೆ 2023 ನವೆಂಬರ್ 22ರಂದು ಎಲ್ವಿಶ್ ವಿರುದ್ಧ ಎಫ್‌ಐಆರ್ ದಾಖಲಾಗಿತ್ತು. 2024 ಮಾರ್ಚ್ 17ರಂದು ಆತನನ್ನು ಬಂಧಿಸಲಾಗಿತ್ತು. ಬಳಿಕ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದನು. ರೇವ್ ಪಾರ್ಟಿಯಲ್ಲಿ ವಿದೇಶಿಯರು ಸೇರಿದಂತೆ ಜನರು ಹಾವಿನ ವಿಷವನ್ನು ಮನರಂಜನಾ ಔಷಧವಾಗಿ ಸೇವಿಸುತ್ತಿದ್ದಾರೆ ಎಂದು ಆರೋಪಪಟ್ಟಿಯಲ್ಲಿ ಆರೋಪಿಸಲಾಗಿತ್ತು.
ಎಲ್ವಿಶ್ ಯಾದವ್ ಪ್ರತಿಕ್ರಿಯೆ
ಪ್ರಕರಣವನ್ನು ರದ್ದುಗೊಳಿಸಿದ ಬಳಿಕ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯೆ ನೀಡಿರುವ ಎಲ್ವಿಶ್ ಯಾದವ್, ಇಂದು ನನಗೆ ತುಂಬಾ ಸಂತೋಷವಾಗಿದೆ. ಸುಪ್ರೀಂ ಕೋರ್ಟ್ ನನ್ನ ವಿರುದ್ಧದ ಹಾವಿಗೆ ಸಂಬಂಧಿಸಿದ ಪ್ರಕರಣವನ್ನು ರದ್ದುಗೊಳಿಸಿದೆ. ನಮ್ಮ ನ್ಯಾಯಾಂಗ ವ್ಯವಸ್ಥೆಯಲ್ಲಿ ನ್ಯಾಯ ಗೆಲ್ಲುತ್ತದೆ ಎಂದು ನನಗೆ ಯಾವಾಗಲೂ ನಂಬಿಕೆ ಇತ್ತು. ತಪ್ಪು ಮಾಡಿದವರಿಗೆ ಶಿಕ್ಷೆಯಾಗುತ್ತದೆ ಮತ್ತು ನಿರಪರಾಧಿಗಳು ರಕ್ಷಿಸಲ್ಪಡುತ್ತಾರೆ. ಆದರೆ ನನ್ನ ಕುಟುಂಬದ ಎದುರಿಸಿದ ಕಿರುಕುಳಕ್ಕೆ ಯಾರು ಪರಿಹಾರ ನೀಡುತ್ತಾರೆ ಎಂದು ಪ್ರಶ್ನಿಸಿದ್ದಾರೆ (ಏಜೆನ್ಸೀಸ್).