ನವದೆಹಲಿ: ತಮ್ಮ ವಿದೇಶಿ ಆಸ್ತಿಗಳನ್ನು 2025-26ರ ಮೌಲ್ಯಮಾಪನ (ಅಸೆಸ್ವೆುಂಟ್) ವರ್ಷದ ಆದಾಯ ತೆರಿಗೆ ರಿಟರ್ನ್ಗಳಲ್ಲಿ (ಐಟಿಆರ್) ಬಹಿರಂಗಪಡಿಸದ 25,000 ಹೈರಿಸ್ಕ್ ಪ್ರಕರಣಗಳನ್ನು ಕೇಂದ್ರ ಸರ್ಕಾರ ಗುರುತಿಸಿದ್ದು, ಅವರೆಲ್ಲರಿಗೂ ಎಸ್ಸೆಮ್ಮೆಸ್ ಮತ್ತು ಇಮೇಲ್ ಕಳುಹಿಸುವ ಪ್ರಕ್ರಿಯೆಯನ್ನು ಸದ್ಯದಲ್ಲೇ ಪ್ರಾರಂಭಿಸಲಿದೆ.
ಸ್ವಯಂಚಾಲಿತ ಮಾಹಿತಿ ವಿನಿಮಯ ಒಡಂಬಡಿಕೆ ಚೌಕಟ್ಟಿನಡಿ ವಿದೇಶಿ ನ್ಯಾಯಾಲಯಗಳಿಂದ ಪಡೆದ ಮಾಹಿತಿಯ ಆಧಾರದಲ್ಲಿ ಈ ಹೈರಿಸ್ಕ್ ಪ್ರಕರಣಗಳನ್ನು ಗುರುತಿಸಲಾಗಿದೆ. ವಿದೇಶಿ ಆಸ್ತಿಗಳನ್ನು ಬಹಿರಂಗಪಡಿಸದಿದ್ದರೆ 10 ಲಕ್ಷ ರೂ. ದಂಡ, ಜೊತೆಗೆ ಶೇ.30ರಷ್ಟು ತೆರಿಗೆ ಮತ್ತು ತೆರಿಗೆ ಮೇಲೆ ಶೇ.300ರಷ್ಟು ದಂಡ ವಿಧಿಸಲು ಕಪ್ಪು ಹಣ ಕಾಯ್ದೆಯಡಿ ಅವಕಾಶವಿದೆ.
‘ನಡ್ಜ್’ ಅಭಿಯಾನದ ಭಾಗವಾಗಿ ಕೇಂದ್ರ ನೇರ ತೆರಿಗೆ ಮಂಡಳಿ (ಸಿಬಿಡಿಟಿ) ಮೊದಲ ಹಂತದಲ್ಲಿ ಈ 25,000 ಹೈರಿಸ್ಕ್ ಪ್ರಕರಣಗಳಿಗೆ ಎಸ್ಸೆಮ್ಮೆಸ್, ಇಮೇಲ್ ಕಳುಹಿಸಿ, ಇದೇ ಡಿ. 31ರೊಳಗೆ ಪರಿಷ್ಕೃತ ಐಟಿಆರ್ ಸಲ್ಲಿಸುವಂತೆ ಕೋರಲಿದೆ. ಎರಡನೇ ಹಂತದಲ್ಲಿ ಡಿಸೆಂಬರ್ ಮಧ್ಯಭಾಗದಿಂದ ಈ ನಡ್ಜ್ ಅಭಿಯಾನವನ್ನು ವಿಸ್ತರಿಸಿ ಇತರ ಪ್ರಕರಣಗಳನ್ನೂ ಸೇರಿಸಲಾಗುವುದು. ತೆರಿಗೆ ಕಾನೂನು ಪಾಲನಾ ವ್ಯವಸ್ಥೆಯನ್ನು ಇನ್ನಷ್ಟು ಸುಧಾರಿಸಲಾಗುವುದು.
ವಿದೇಶಿ ಆಸ್ತಿ ಹೊಂದಿರುವ ಉದ್ಯೋಗಿಗಳನ್ನು ಒಳಗೊಂಡ ದೊಡ್ಡ ಕಾರ್ಪೆರೇಟ್ ಕಂಪನಿಗಳನ್ನೂ ಈ ಅಭಿಯಾನಕ್ಕೆ ಸೇರಿಸಿ ತೆರಿಗೆದಾರರನ್ನು ಎಚ್ಚರಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ. ಜಾಗೃತಿ ಮೂಡಿಸುವಂತೆ ವಿವಿಧ ವೃತ್ತಿಪರ, ಉದ್ಯಮ ಸಂಘಟನೆಗಳು, ಭಾರತೀಯ ಚಾರ್ಟರ್ಡ್ ಅಕೌಂಟೆಂಟ್ಸ್ ಸಂಸ್ಥೆ (ಐಸಿಎಐ) ಮುಂತಾದವುಗಳಿಗೆ ಕೋರಲಾಗಿದೆ.
ಕಳೆದ ವರ್ಷವೂ ಇಲಾಖೆ ಇಂತಹ ತೆರಿಗೆದಾರರಿಗೆ ಎಸ್ಸೆಮ್ಮೆಸ್, ಇಮೇಲ್ ಕಳುಹಿಸಿತ್ತು. 24,678 ಜನ ತಮ್ಮ ಐಟಿಆರ್ ಪರಿಷ್ಕರಿಸಿ 29,208 ಕೋಟಿ ರೂ. ಮೊತ್ತದ ವಿದೇಶಿ ಆಸ್ತಿಗಳನ್ನು ಮತ್ತು 1,089.88 ಕೋಟಿ ರೂ. ಮೊತ್ತದ ವಿದೇಶಿ ಮೂಲದ ಆದಾಯವನ್ನು ಬಹಿರಂಗಪಡಿಸಿದ್ದರು.
ಮೂಲಗಳ ಪ್ರಕಾರ, 2025ರ ಜೂನ್ವರೆಗೆ ಇಲಾಖೆ ಸುಮಾರು 1,080 ಪ್ರಕರಣಗಳನ್ನು ಮೌಲ್ಯಮಾಪನ ಮಾಡಿ 40,000 ಕೋಟಿ ರೂ. ಬಾಕಿ ಇರುವುದನ್ನು ಪತ್ತೆ ಹಚ್ಚಿದೆ. ದೆಹಲಿ, ಮುಂಬೈ, ಪುಣೆ ಮುಂತಾದೆಡೆ ಶೋಧ ನಡೆಸಿ ನೂರಾರು ಕೋಟಿ ರೂ. ಮೌಲ್ಯದ ಬಹಿರಂಗಪಡಿಸದ ವಿದೇಶಿ ಆಸ್ತಿ ಮತ್ತು ಆದಾಯವನ್ನು ಪತ್ತೆಹಚ್ಚಲಾಗಿದೆ.