BJP New Team | ನಿತಿನ್ ನವೀನ್ ನೇತೃತ್ವದ ಪದಾಧಿಕಾರಿಗಳ ಪಟ್ಟಿ ಬಿಡುಗಡೆಗೆ ಕ್ಷಣಗಣನೆ! (ಸಂಗ್ರಹ ಚಿತ್ರ)
ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನವೀನ್ ಅವರ ನೇತೃತ್ವದ ನೂತನ ಪದಾಧಿಕಾರಿಗಳ (BJP New Team) ಪಟ್ಟಿಯನ್ನು ಶೀಘ್ರದಲ್ಲೇ ಬಿಡುಗಡೆ ಮಾಡುವ ಸಾಧ್ಯತೆಯಿದೆ. ಮುಂದಿನ ವರ್ಷದ ಆರಂಭದಲ್ಲಿ ಉತ್ತರ ಪ್ರದೇಶ, ಉತ್ತರಾಖಂಡ, ಪಂಜಾಬ್, ಗೋವಾ ಮತ್ತು ಮಣಿಪುರ ಸೇರಿದಂತೆ ಪಂಚ ರಾಜ್ಯಗಳಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗಳು ಹಾಗೂ 2029ರ ಲೋಕಸಭಾ ಚುನಾವಣೆಗೆ ಪಕ್ಷವನ್ನು ಸಜ್ಜುಗೊಳಿಸಲು ಈ ಸಾಂಸ್ಥಿಕ ಬದಲಾವಣೆಯನ್ನು ಮಾಡಲಾಗುತ್ತಿದೆ.
ಬಿಜೆಪಿ ನಾಯಕರು ತಮ್ಮ ನೂತನ ತಂಡದಲ್ಲಿ ಹಳೆಯ ಮತ್ತು ಹೊಸ ಮುಖಗಳಿಗೆ ಸಮಾನ ಅವಕಾಶ ನೀಡಲು ತೀರ್ಮಾನಿಸಿದ್ದಾರೆ. ಇದರ ಜೊತೆಗೆ ಮಹಿಳೆಯರಿಗೆ ಹೆಚ್ಚಿನ ಆದ್ಯತೆ ನೀಡುವ ಉದ್ದೇಶದಿಂದ, ಒಟ್ಟು 38 ಸಾಂಸ್ಥಿಕ ಹುದ್ದೆಗಳಲ್ಲಿ 13 ಸ್ಥಾನಗಳನ್ನು (ಶೇ. 33ರಷ್ಟು) ಮಹಿಳಾ ನಾಯಕಿಯರಿಗೆ ಮೀಸಲಿಡಲು ನಿರ್ಧರಿಸಲಾಗಿದೆ ಎಂದು ತಿಳಿದುಬಂದಿದೆ.
ಜೆನ್-ಝಿ ಮೇಲೆಯೇ ಹೆಚ್ಚಿನ ಗಮನ!...
ಇತ್ತೀಚೆಗೆ ದೆಹಲಿಯ ಜಂತರ್ ಮಂತರ್‌ನಲ್ಲಿ ನೀಟ್ ಅಕ್ರಮ ಖಂಡಿಸಿ ನಡೆದ ವಿದ್ಯಾರ್ಥಿ ಪ್ರತಿಭಟನೆಗಳ ನಂತರ ಧರ್ಮೇಂದ್ರ ಪ್ರಧಾನ್ ಅವರು ಶಿಕ್ಷಣ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಈ ಹಿನ್ನೆಲೆಯಲ್ಲಿ, ಜೆನ್-ಝಿ ಯುವ ಪೀಳಿಗೆಯನ್ನು ತಲುಪಲು ಹಾಗೂ ಬಿಜೆಪಿ ಇತಿಹಾಸದಲ್ಲೇ ಅತ್ಯಂತ ಕಿರಿಯ ರಾಷ್ಟ್ರೀಯ ಅಧ್ಯಕ್ಷರೆನಿಸಿಕೊಂಡಿರುವ ನಿತಿನ್ ನವೀನ್ ಅವರ ಆಡಳಿತವನ್ನು ಸುಲಭಗೊಳಿಸಲು ನೂತನ ತಂಡದಲ್ಲಿ ಯುವ ನಾಯಕರಿಗೆ ಹೆಚ್ಚಿನ ಪ್ರಾತಿನಿಧ್ಯ ನೀಡುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.
ಇನ್ನು ಪ್ರಮುಖ ಮುಖಗಳ ವಿಷಯಕ್ಕೆ ಬರುವುದಾದರೆ, 2019ರ ಲೋಕಸಭಾ ಚುನಾವಣೆಯಲ್ಲಿ ಅಮೇಥಿಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಸೋಲಿಸಿ ಬಿಜೆಪಿಯ ಪ್ರಮುಖ ಮುಖವಾಗಿ ಹೊರಹೊಮ್ಮಿದ್ದ ಮಾಜಿ ಕೇಂದ್ರ ಸಚಿವೆ ಸ್ಮೃತಿ ಇರಾನಿ ಹಾಗೂ ನವನೀತ್ ರಾಣಾ ಅವರಿಗೆ ನೂತನ ತಂಡದಲ್ಲಿ ಪ್ರಮುಖ ಸ್ಥಾನ ಸಿಗುವ ಸಾಧ್ಯತೆಯಿದೆ. ಹಾಗೆಯೇ, 2027ರ ಕೊನೆಯಲ್ಲಿ ನಡೆಯಲಿರುವ ಹಿಮಾಚಲ ಪ್ರದೇಶ ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಹಮೀರ್‌ಪುರ ಸಂಸದ ಹಾಗೂ ಮಾಜಿ ಕೇಂದ್ರ ಸಚಿವ ಅನುರಾಗ್ ಠಾಕೂರ್ ಅವರನ್ನೂ ಸಾಂಸ್ಥಿಕ ಹುದ್ದೆಗೆ ಮರಳಿ ತರಲು ಯೋಚಿಸಲಾಗಿದೆ.
ಇವರೊಂದಿಗೆ ವಿನೋದ್ ತಾವ್ಡೆ, ಸಂಜಯ್ ಭಾಟಿಯಾ ಮತ್ತು ಸುನಿಲ್ ಬನ್ಸಲ್ ಅವರಿಗೂ ನಿತಿನ್ ನವೀನ್ ಅವರ ನೂತನ ಪಡೆಯ ಪ್ರಮುಖ ಜವಾಬ್ದಾರಿಗಳು ಸಿಗುವ ನಿರೀಕ್ಷೆಯಿದೆ. ಜನವರಿ 20 ರಂದು ನಿತಿನ್ ನವೀನ್ ಅವರು ಬಿಜೆಪಿ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿದ್ದರೂ, ಅವರ ತಂಡ ಇನ್ನೂ ಅಂತಿಮಗೊಂಡಿರಲಿಲ್ಲ. ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಷಾ ಸೇರಿದಂತೆ ಪಕ್ಷದ ಪ್ರಮುಖ ನಾಯಕರು ಈಗಾಗಲೇ ಹಲವು ಸುತ್ತಿನ ಚರ್ಚೆಗಳನ್ನು ನಡೆಸಿ ಪಟ್ಟಿಯನ್ನು ಅಂತಿಮಗೊಳಿಸಿದ್ದು, ನೂತನ ಪದಾಧಿಕಾರಿಗಳ ಅಧಿಕೃತ ಪಟ್ಟಿಯನ್ನು ಶೀಘ್ರದಲ್ಲೇ ಬಿಡುಗಡೆ ಮಾಡುವ ನಿರೀಕ್ಷೆಯಿದೆ(ಏಜೆನ್ಸೀಸ್).