ನವದೆಹಲಿ: ವಿಮಾನದ ಸರಕು ಸಾಗಾಣೆ ರೂಮ್ನಿಂದ ಹೊಗೆ ಬಂದ ಹಿನ್ನೆಲೆ ಇಂದು(ಜು. 27) ಬೆಳಗ್ಗೆ ಮುಂಬೈನಿಂದ ದುಬೈಗೆ ಹೋಗುತ್ತಿದ್ದ ಇಂಡಿಗೋ ವಿಮಾನವೊಂದು(IndiGo flight) ಗುಜರಾತ್‌ನ ರಾಜ್‌ಕೋಟ್‌ನಲ್ಲಿ ತುರ್ತು ಭೂಸ್ಪರ್ಶ ಮಾಡಿದೆ. ಮತ್ತು ಪ್ರಯಾಣಿಕರೆಲ್ಲರೂ ಸುರಕ್ಷಿತವಾಗಿ ಇಳಿದಿದ್ದಾರೆ ಎಂದು ವರದಿಯಾಗಿದೆ.
ಇಂಡಿಗೋ 6E 1452 ತುರ್ತು ಭೂಸ್ಪರ್ಶ ಮಾಡಿದ ವಿಮಾನ 194 ಪ್ರಯಾಣಿಕರನ್ನು ಹೊತ್ತೊಯ್ದಿತ್ತು. ವಿಮಾನದ ಸರಕು ಸಾಗಾಣೆಯ ರೂಮ್ನಲ್ಲಿ ಹೊಗೆ ಬರೋದು ಪತ್ತೆ ಮಾಡಿದ ಬಳಿಕ ಪೈಲಟ್‌ಗಳು ರಾಜ್‌ಕೋಟ್ ವಿಮಾನ ನಿಲ್ದಾಣವನ್ನು ಸಂಪರ್ಕಿಸಿ ತುರ್ತು ಭೂಸ್ಪರ್ಶಕ್ಕೆ ಮನವಿ ಮಾಡಿದ್ದಾರೆ.
ಈ ಕುರಿತು ಮಾತನಾಡಿರುವ ರಾಜ್‌ಕೋಟ್ ವಿಮಾನ ನಿಲ್ದಾಣದ ನಿರ್ದೇಶಕ ದಿಗಂತ ಬೋರಾ, ಮುಂಬೈನಿಂದ ದುಬೈಗೆ ತೆರಳುತ್ತಿದ್ದ ಇಂಡಿಗೋ ವಿಮಾನದ ಸರಕು ಸಾಗಾಣೆ ರೂಮ್ನಲ್ಲಿ ಹೊಗೆ ಕಂಡು ಬಂದ ಬಳಿಕ ರಾಜ್‌ಕೋಟ್ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿತು. ವಿಮಾನ ಸುರಕ್ಷಿತವಾಗಿ ಇಳಿಯಿತು ಮತ್ತು ಎಲ್ಲಾ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ ಎಂದು ತಿಳಿಸಿದ್ದಾರೆ (ಏಜೆನ್ಸೀಸ್).