ಸಾಂದರ್ಭಿಕ ಚಿತ್ರ  
ದೇಶ

ಚಿಕ್ಕ ಕುಟುಂಬ ದೊಡ್ಡ ಸವಾಲು! ಭಾರತದಲ್ಲಿ ಕಡಿಮೆಯಾದ ಜನನ ದರ

ಭಾರತ ಸ್ವಾತಂತ್ರ್ಯ ಪಡೆದುಕೊಂಡಾಗ (1947) ದೇಶದ ಜನಸಂಖ್ಯೆ ಕೇವಲ 33 ಕೋಟಿ ಇತ್ತು. ಕಳೆದ 79 ವರ್ಷಗಳಲ್ಲಿ ಜನಸಂಖ್ಯೆಯ ವಿಷಯದಲ್ಲಿ ಹಲವು ಮಹತ್ವದ ಬದಲಾವಣೆಗಳಾಗಿವೆ. ಪ್ರಸ್ತುತ 144 ಕೋಟಿಗೂ ಅಧಿಕ ಜನಸಂಖ್ಯೆಯೊಂದಿಗೆ, ಭಾರತ ಚೀನಾವನ್ನು ಹಿಂದಿಕ್ಕಿ ವಿಶ್ವದಲ್ಲೇ ಅತ್ಯಧಿಕ ಜನಸಂಖ್ಯೆ ಇರುವ ರಾಷ್ಟ್ರವಾಗಿ ಹೊರಹೊಮ್ಮಿದೆ. ಆದರೆ, ಇತ್ತೀಚಿನ ವರ್ಷಗಳಲ್ಲಿ ಜನನ ದರ 1.94ಕ್ಕೆ ಕುಸಿದಿದೆ. ಇದು ಭವಿಷ್ಯದಲ್ಲಿ ಜನಸಂಖ್ಯೆ ಅಸಮತೋಲನಕ್ಕೆ ಕಾರಣವಾಗಲಿದೆ. ಅಂದರೆ, ವೃದ್ಧರ ಸಂಖ್ಯೆಯೇ ಹೆಚ್ಚಳಗೊಂಡು, ದುಡಿಯುವ ಕೈಗಳ ಸಂಖ್ಯೆ ಕಡಿಮೆಯಾಗಲಿದೆ. ಇದು ಆರ್ಥಿಕತೆ ನಿಟ್ಟಿನಲ್ಲೂ ಅಪಾಯ. 1947ರಿಂದ ಜನಸಂಖ್ಯೆ ನೀತಿಯಲ್ಲಿ ಏನೆಲ್ಲ ಬದಲಾವಣೆಯಾಯಿತು? ಅದರ ಪರಿಣಾಮಗಳೇನು? ಮುಂದೆ ಸಾಗಬೇಕಾದ ದಾರಿ ಯಾವುದು? ಈ ಕುರಿತಾದ ಅವಲೋಕನ ಇಲ್ಲಿದೆ.

ಸ್ವಾತಂತ್ರ್ಯದ ಹೊಸ್ತಿಲಲ್ಲಿ

ಸ್ವಾತಂತ್ರ್ಯಪ್ರಾಪ್ತಿಯ ಅಂದರೆ 1947ರ ಸಮಯದಲ್ಲಿ ಭಾರತದ ಜನಸಂಖ್ಯೆ 33 ಕೋಟಿಯಾಗಿತ್ತು. ಆದರೆ, ಸರಾಸರಿ ಜೀವಿತಾವಧಿ (ಔಜ್ಛಿಛಿ ಛ್ಡಿಟಛ್ಚಿಠಿಚ್ಞ್ಚ) ಕೇವಲ 32 ವರ್ಷಗಳಾಗಿತ್ತು. ದೇಶ ವಿಭಜನೆಯ ನಂತರ ನಿರಾಶ್ರಿತರ ಪುನರ್ವಸತಿ, ಆಹಾರ ಮತ್ತು ವೈದ್ಯಕೀಯ ವ್ಯವಸ್ಥೆಯ ದೊಡ್ಡ ಬಿಕ್ಕಟ್ಟು ಎದುರಾಗಿತ್ತು. ಆಗ ಮೊದಲ ಬಾರಿಗೆ ಆರೋಗ್ಯ ಮತ್ತು ಶಿಕ್ಷಣವನ್ನು ರಾಷ್ಟ್ರೀಯ ಗುರಿಯಾಗಿ ನೋಡಲಾಯಿತು. ಆದರೆ ಜನಸಂಖ್ಯಾ ನೀತಿಯಂತಹ ಯಾವುದೇ ನಿರ್ದಿಷ್ಟ ಯೋಜನೆ ಇರಲಿಲ್ಲ.

ಮೊದಲ ಜನಗಣತಿ

1951ರಲ್ಲಿ ನಡೆದ ದೇಶದ ಮೊದಲ ಜನಗಣತಿಯಲ್ಲಿ ಜನಸಂಖ್ಯೆ 36 ಕೋಟಿಗೆ ತಲುಪಿತು. ಇದರೊಂದಿಗೆ ದೇಶಕ್ಕೆ ತನ್ನ ಜನಸಂಖ್ಯಾ ಮಾದರಿಯ ನಿಜವಾದ ಚಿತ್ರಣ ದೊರೆಯಿತು. ಅಲ್ಲದೆ, ಜನಸಂಖ್ಯೆ ಬೆಳವಣಿಗೆಯ ವೇಗ ತುಂಬ ಹೆಚ್ಚಾಗಿದೆ ಎಂದು ಸರ್ಕಾರಕ್ಕೆ ಮೊದಲ ಬಾರಿಗೆ ಅರಿವಾಯಿತು. ಆದರೆ, ಆಗ ಜನನ ದರ ಮತ್ತು ಮರಣ ದರ ಎರಡೂ ತುಂಬ ಹೆಚ್ಚಾಗಿದ್ದರಿಂದ, ಜನಸಂಖ್ಯೆಯ ಒಟ್ಟಾರೆ ಬೆಳವಣಿಗೆಯು ಸೀಮಿತವಾಗಿತ್ತು.

ಕುಟುಂಬ ಯೋಜನೆ ಕಾರ್ಯಕ್ರಮ

ಭಾರತವು 1952ರಲ್ಲಿ ವಿಶ್ವದಲ್ಲೇ ಮೊದಲ ಬಾರಿಗೆ ಸರ್ಕಾರಿ ಮಾನ್ಯತೆ ಪಡೆದ ರಾಷ್ಟ್ರೀಯ ಕುಟುಂಬ ಯೋಜನೆ ಕಾರ್ಯಕ್ರಮವನ್ನು ಪ್ರಾರಂಭಿಸಿತು. ತಾಯಂದಿರ ಮರಣ ದರ ಮತ್ತು ಶಿಶು ಮರಣ ದರವನ್ನು ಕಡಿಮೆ ಮಾಡುವುದು ಹಾಗೂ ಜಾಗೃತಿ ಮೂಡಿಸುವುದು ಇದರ ಮುಖ್ಯ ಉದ್ದೇಶವಾಗಿತ್ತು. ಈ ಉಪಕ್ರಮ ಆರಂಭದಲ್ಲಿ ನಿಧಾನವಾಗಿ ಸಾಗಿದರೂ, ಇದು ಜನಸಂಖ್ಯೆಯ ವಿಷಯದಲ್ಲಿ ಸರ್ಕಾರದ ನೀತಿ-ಮಟ್ಟದ ಬದ್ಧತೆಗೆ ನಾಂದಿ ಹಾಡಿತು.

ಜನಸಂಖ್ಯಾ ಸ್ಫೋಟ

ದೇಶದ ಜನಸಂಖ್ಯೆ 1961ರಲ್ಲಿ 43.9 ಕೋಟಿಯಷ್ಟಿತ್ತು. ಇದು 1971ರ ವೇಳೆಗೆ ಅಂದರೆ ಒಂದೇ ದಶಕದಲ್ಲಿ 10 ಕೋಟಿಗಿಂತಲೂ ಹೆಚ್ಚಾಗಿ 54.8 ಕೋಟಿಗೆ ತಲುಪಿತು. ವೈದ್ಯಕೀಯ ಸುಧಾರಣೆಗಳಿಂದಾಗಿ ಮರಣ ದರದಲ್ಲಿನ ಕುಸಿತವೇ ಇದಕ್ಕೆ ಮುಖ್ಯ ಕಾರಣವಾಗಿತ್ತು, ಆದರೆ ಜನನ ದರವು ಇನ್ನೂ ಹೆಚ್ಚಾಗಿತ್ತು. ಕೇವಲ 10 ವರ್ಷಗಳಲ್ಲಿ 10 ಕೋಟಿಯಷ್ಟು ಜನಸಂಖ್ಯೆ ಹೆಚ್ಚಾಗಿದ್ದು ನೀತಿ ನಿರೂಪಕರನ್ನು ಬೆಚ್ಚಿಬೀಳಿಸಿತು. ಈ ಅವಧಿಯನ್ನು ‘ಜನಸಂಖ್ಯಾ ಸ್ಪೋಟ’ದ ಅವಧಿ ಎಂದು ಕರೆಯಲಾಯಿತು.

ಜನಸಂಖ್ಯಾ ನೀತಿಯ ಕರಡು

ಸರ್ಕಾರವು 1976ರಲ್ಲಿ ಮೊದಲ ಬಾರಿಗೆ ಜನಸಂಖ್ಯಾ ನೀತಿಯನ್ನು ರೂಪಿಸಿತು. ಇಬ್ಬರು ಮಕ್ಕಳ ಆದರ್ಶ ಕುಟುಂಬ, ಬಾಲ್ಯವಿವಾಹ ತಡೆಗಟ್ಟುವಿಕೆ ಮತ್ತು ಸಂತಾನಶಕ್ತಿಹರಣದಂತಹ (ನಸಬಂದಿ) ಕ್ರಮಗಳನ್ನು ಕೈಗೊಳ್ಳುವುದು ಇದರ ಉದ್ದೇಶವಾಗಿತ್ತು. ಜನಸಂಖ್ಯಾ ನೀತಿಯ ಕರಡು ಸಿದ್ಧವಾದರೂ, ಆಗಿನ ತುರ್ತು ಪರಿಸ್ಥಿತಿಯ ರಾಜಕೀಯ ಏರುಪೇರುಗಳಿಂದಾಗಿ ಅದರ ಸರಿಯಾದ ಅನುಷ್ಠಾನ ಸಾಧ್ಯವಾಗಲಿಲ್ಲ.

ಸಂತಾನಶಕ್ತಿಹರಣ ಅಭಿಯಾನ

ಸಂತಾನಶಕ್ತಿಹರಣ ಚಿಕಿತ್ಸೆಯನ್ನು 1975-77ರ ಅವಧಿಯಲ್ಲಿ ಬಲವಂತವಾಗಿ ಜಾರಿಗೆ ತರಲಾಯಿತು. 1976-77ರ ಅವಧಿಯಲ್ಲಿ 60 ಲಕ್ಷಕ್ಕೂ ಹೆಚ್ಚು ಪುರುಷರಿಗೆ ಬಲವಂತದ ಸಂತಾನಶಕ್ತಿಹರಣ ಚಿಕಿತ್ಸೆ ಮಾಡಲಾಯಿತು. ಇದು ಸಮಾಜದಲ್ಲಿ ತೀವ್ರ ಅಪನಂಬಿಕೆ ಮತ್ತು ಸರ್ಕಾರದ ವಿರುದ್ಧ ಆಕ್ರೋಶದ ವಾತಾವರಣ ನಿರ್ವಣಕ್ಕೆ ಕಾರಣವಾಯಿತು. ಜನಸಂಖ್ಯಾ ನೀತಿಯನ್ನು ‘ದಮನದ ಅಸ್ತ್ರ’ ಎಂದು ಪರಿಗಣಿಸಲಾಯಿತು, ಇದು ಮುಂದಿನ ಯೋಜನೆಗಳಿಗೆ ದೊಡ್ಡ ಅಡ್ಡಿಯಾಯಿತು. 1975ರಲ್ಲಿ ವಾರ್ಷಿಕ ಜನಸಂಖ್ಯಾ ಬೆಳವಣಿಗೆ ದರವು ಶೇ.2.29ರಷ್ಟಿತ್ತು.

ಜಾಗೃತಿ ಆಧಾರಿತ ಯೋಜನೆ

1978-1994ರ ಅವಧಿಯಲ್ಲಿ ಸ್ವಯಂಪ್ರೇರಿತ ಸಂತಾನಶಕ್ತಿಹರಣ ಚಿಕಿತ್ಸೆಗೆ ಒತ್ತು ನೀಡಲಾಯಿತು. ಜನಸಂಖ್ಯೆ ನಿಯಂತ್ರಣಕ್ಕಾಗಿ ಮಹಿಳಾ ಕೇಂದ್ರಿತ ದೃಷ್ಟಿಕೋನವನ್ನು ಅಳವಡಿಸಿಕೊಳ್ಳಲಾಯಿತು. ‘ನಾವು ಇಬ್ಬರು, ನಮಗೆ ಇಬ್ಬರು’ (ಹಮ್ ದೋ, ಹಮಾರೆ ದೋ) ನಂತಹ ಜನಪ್ರಿಯ ಸಾರ್ವಜನಿಕ ಅಭಿಯಾನಗಳನ್ನು ಪ್ರಾರಂಭಿಸಲಾಯಿತು. ಇದರ ಫಲವಾಗಿ ಸಾಕ್ಷರತೆ, ಲಸಿಕಾಕರಣ ಮತ್ತು ಪ್ರಸವ ಆರೋಗ್ಯದಲ್ಲಿ ಸುಧಾರಣೆಯಾಯಿತು. ಆರೋಗ್ಯ ಸೇವೆಗಳು ಮತ್ತು ಜನಸಂಖ್ಯೆ ನಿಯಂತ್ರಣ ಯೋಜನೆಗಳ ಮೇಲೆ ಸಾರ್ವಜನಿಕರಿಗೆ ಮತ್ತೆ ನಂಬಿಕೆ ಮೂಡಿತು.

ಹೊಸ ರಾಷ್ಟ್ರೀಯ ಜನಸಂಖ್ಯಾ ನೀತಿ

2000ನೇ ಇಸವಿಯಲ್ಲಿ ಫಲವತ್ತತೆ ದರ 3.35 ಮತ್ತು 2010ರಲ್ಲಿ 2.6ರಷ್ಟಿತ್ತು. 2010ರ ವೇಳೆಗೆ ಒಟ್ಟು ಫಲವತ್ತತೆ ದರ 2.1ಕ್ಕೆ ಇಳಿಸುವುದು ಇದರ ಗುರಿಯಾಗಿತ್ತು. ಇದಕ್ಕಾಗಿ ಮಹಿಳಾ ಶಿಕ್ಷಣ ಮತ್ತು ಹದಿಹರೆಯದವರ ಆರೋಗ್ಯಕ್ಕೆ ಒತ್ತು ನೀಡಲಾಯಿತು. 2000ನೇ ಇಸ್ವಿಯ ಹೊಸ ರಾಷ್ಟ್ರೀಯ ಜನಸಂಖ್ಯಾ ನೀತಿಯು ಕುಟುಂಬ ಯೋಜನೆಯನ್ನು ಮಹಿಳೆಯರ ಸಬಲೀಕರಣದೊಂದಿಗೆ ಜೋಡಿಸಿತು.

ಜನಸಂಖ್ಯೆ ಸ್ಥಿರೀಕರಣದ ಸಂಕೇತಗಳು

ಈ ಅವಧಿಯಲ್ಲಿ (2010-2020) ದೇಶದ ಬಹುತೇಕ ರಾಜ್ಯಗಳಲ್ಲಿ ಫಲವತ್ತತೆ ದರವು 2.1 ಅಥವಾ ಅದಕ್ಕಿಂತ ಕಡಿಮೆಯಾಯಿತು. ದಕ್ಷಿಣ ಭಾರತದ ಕೆಲವು ರಾಜ್ಯಗಳಲ್ಲಿ ಈ ದರವು ಅದಕ್ಕಿಂತಲೂ ಕೆಳಗೆ ಕುಸಿಯಿತು. ಜನರ ಸರಾಸರಿ ಜೀವಿತಾವಧಿ 69-70 ವರ್ಷಗಳಿಗೆ ಏರಿಕೆಯಾಯಿತು. ಭಾರತವು ಜನಸಂಖ್ಯೆ ಸ್ಥಿರೀಕರಣದತ್ತ ಯಶಸ್ವಿಯಾಗಿ ಸಾಗಲು ಪ್ರಾರಂಭಿಸಿತು. ದೇಶದ ಬೃಹತ್ ಯುವ ಜನಸಂಖ್ಯೆಯನ್ನು ‘ಡೆಮೊಗ್ರಾಫಿಕ್ ಡಿವಿಡೆಂಡ್’ (ಜನಸಂಖ್ಯಾ ಲಾಭಾಂಶ) ಎಂದು ನೋಡಲು ಆರಂಭಿಸಲಾಯಿತು.

ಬೃಹತ್ ಜನಸಂಖ್ಯೆ

ಭಾರತವು 2023-2025ರ ಅವಧಿಯಲ್ಲಿ ಚೀನಾವನ್ನು ಹಿಂದಿಕ್ಕಿ ವಿಶ್ವದಲ್ಲೇ ಅತಿ ಹೆಚ್ಚು ಜನಸಂಖ್ಯೆ ಹೊಂದಿದ ದೇಶವಾಯಿತು. ದೇಶದ ಜನಸಂಖ್ಯೆಯು 144 ಕೋಟಿಗಿಂತ ಹೆಚ್ಚಾಗಿದೆ. ವೃದ್ಧರ ಜನಸಂಖ್ಯೆ ಹೆಚ್ಚಳ, ನಗರೀಕರಣ, ನಿರುದ್ಯೋಗ ಮತ್ತು ಪರಿಸರ ಮಾಲಿನ್ಯದಂತಹ ದೊಡ್ಡ ಸವಾಲುಗಳು ಈಗ ಎದುರಾಗಿವೆ. ಜನಸಂಖ್ಯೆಯು ಈಗ ಕೇವಲ ‘ನಿಯಂತ್ರಣ’ದ ವಿಷಯವಾಗಿರದೆ ‘ನಿರ್ವಹಣೆ’ಯ ವಿಷಯವಾಗಿದೆ. ಜನಸಂಖ್ಯೆಯನ್ನು ದೇಶದ ಪ್ರಮುಖ ಮಾನವ ಸಂಪನ್ಮೂಲವನ್ನಾಗಿ ಬಳಸಿಕೊಳ್ಳುವುದು ಇದರ ಪ್ರಮುಖ ಗುರಿಯಾಗಿದೆ.

ದಕ್ಷಿಣ ಭಾರತಕ್ಕೆ ರಾಜಕೀಯ ಸಂಕಟ

ಉತ್ತರ ಭಾರತಕ್ಕೆ ಹೋಲಿಸಿದರೆ ದಕ್ಷಿಣ ಭಾರತದ ರಾಜ್ಯಗಳಲ್ಲಿ ಜನಸಂಖ್ಯೆ ಬೆಳವಣಿಗೆಯ ದರ ಗಣನೀಯವಾಗಿ ಕಡಿಮೆಯಾಗಿದೆ. ಇದು ಮುಂಬರುವ ಲೋಕಸಭಾ ಕ್ಷೇತ್ರಗಳ ಮರುವಿಂಗಡಣೆ ಪ್ರಕ್ರಿಯೆಯಲ್ಲಿ ದಕ್ಷಿಣದ ರಾಜ್ಯಗಳಿಗೆ ರಾಜಕೀಯವಾಗಿ ಭಾರಿ ಹಿನ್ನಡೆ ಉಂಟುಮಾಡಬಹುದು. ಕಳೆದ 50 ವರ್ಷಗಳಲ್ಲಿ ಕರ್ನಾಟಕ, ತಮಿಳುನಾಡು, ಕೇರಳ, ಆಂಧ್ರಪ್ರದೇಶ ಮತ್ತು ಈಗಿನ ತೆಲಂಗಾಣ ರಾಜ್ಯಗಳು ಕೇಂದ್ರ ಸರ್ಕಾರದ ಕುಟುಂಬ ಯೋಜನೆಗಳನ್ನು ಅತ್ಯಂತ ಯಶಸ್ವಿಯಾಗಿ ಜಾರಿಗೆ ತಂದವು. ಇಲ್ಲಿನ ಶಿಕ್ಷಣ, ಆರೋಗ್ಯ ಮತ್ತು ಆರ್ಥಿಕ ಪ್ರಗತಿಯಿಂದಾಗಿ ಜನಸಂಖ್ಯೆ ನಿಯಂತ್ರಣಕ್ಕೆ ಬಂದಿತು. ಆದರೆ, ಉತ್ತರ ಭಾರತದ ಕೆಲವು ದೊಡ್ಡ ರಾಜ್ಯಗಳಲ್ಲಿ ಉದಾಹರಣೆಗೆ, ಉತ್ತರ ಪ್ರದೇಶ, ಬಿಹಾರ, ಮಧ್ಯಪ್ರದೇಶದ ಜನಸಂಖ್ಯಾ ಬೆಳವಣಿಗೆಯ ದರ ಹೆಚ್ಚಾಗಿಯೇ ಉಳಿಯಿತು. ಜನಸಂಖ್ಯೆ ಹೆಚ್ಚಿರುವ ಕಾರಣ ಉತ್ತರ ಪ್ರದೇಶ, ಬಿಹಾರದಂತಹ ರಾಜ್ಯಗಳಿಗೆ ಸಿಗುವ ಲೋಕಸಭಾ ಸೀಟುಗಳ ಸಂಖ್ಯೆ ಭಾರಿ ಪ್ರಮಾಣದಲ್ಲಿ ಏರಿಕೆಯಾಗುತ್ತದೆ. ಜನಸಂಖ್ಯೆಯನ್ನು ಯಶಸ್ವಿಯಾಗಿ ನಿಯಂತ್ರಿಸಿದ ತಪ್ಪಿಗೆ ದಕ್ಷಿಣದ ರಾಜ್ಯಗಳ ಲೋಕಸಭಾ ಸೀಟುಗಳ ಅನುಪಾತ ಒಟ್ಟು ಸಂಸತ್ತಿನಲ್ಲಿ ಕಡಿಮೆಯಾಗುತ್ತದೆ. ದೇಶದ ಒಟ್ಟು ಜಿಡಿಪಿಗೆ ಮತ್ತು ತೆರಿಗೆ ಸಂಗ್ರಹಕ್ಕೆ ದಕ್ಷಿಣದ ರಾಜ್ಯಗಳು ಸಿಂಹಪಾಲು ಕೊಡುಗೆ ನೀಡುತ್ತವೆ. ಆದರೆ, ಸಂಸತ್ತಿನಲ್ಲಿ ಸೀಟುಗಳು ಕಡಿಮೆಯಾದರೆ, ಕೇಂದ್ರ ರಾಜಕಾರಣದಲ್ಲಿ ದಕ್ಷಿಣದ ದನಿ ಮತ್ತು ನಿರ್ಧಾರ ತೆಗೆದುಕೊಳ್ಳುವ ಶಕ್ತಿ ಕುಂದುತ್ತದೆ.

ಚಿಂತೆಗೀಡಾದ ಚೀನಾ

ಅಭಿವೃದ್ಧಿಯ ವಿಷಯದಲ್ಲಿ ಅಮೆರಿಕವನ್ನು ಹಿಂದಿಕ್ಕಲು ಸತತ ಪ್ರಯತ್ನ ಮಾಡುತ್ತಿರುವ ಚೀನಾ ದುಡಿಯುವ ಕೈಗಳಿಲ್ಲದೆ ಚಿಂತಾಕ್ರಾಂತವಾಗಿದೆ. 1949ರಿಂದ ಇಲ್ಲಿಯವರೆಗಿನ ಲೆಕ್ಕಾಚಾರದಲ್ಲಿ ಚೀನಾದಲ್ಲಿ ಜನನ ಪ್ರಮಾಣವು 2025ರಲ್ಲಿ ತೀವ್ರವಾಗಿ ಕುಸಿದಿದೆ. ಸದ್ಯ ಈಗ ಪ್ರತಿ ಸಾವಿರ ಜನರಿಗೆ ಜನನ ಪ್ರಮಾಣ ಶೇಕಡ 5.63ರಷ್ಟಿದೆ. ಹಾಗಾಗಿಯೇ, ಮಕ್ಕಳಿಗೆ ಜನ್ಮ ನೀಡುವುದು ‘ದೇಶಭಕ್ತಿಯ ಶ್ರೇಷ್ಠ ಕಾರ್ಯ’ ಎಂದು ಕಮ್ಯುನಿಸ್ಟ್ ಸರ್ಕಾರ ಘೋಷಿಸಿದೆ!

ದೇಶಗಳು ಕೈಗೊಳ್ಳುತ್ತಿರುವ ಕ್ರಮಗಳು

ಪರಿಸ್ಥಿತಿಯನ್ನು ಸುಧಾರಿಸಲು ಚೀನಾ ಈಗ ಮೂರು ಮಕ್ಕಳ ನೀತಿ ತಂದಿದೆ. ಇಬ್ಬರು ಮಕ್ಕಳನ್ನು ಹೆರುವುದಕ್ಕೆ 2015ರಲ್ಲಿ ಅನುಮತಿ ನೀಡಲಾಯಿತು. ಮೂರು ಮಕ್ಕಳನ್ನು ಹೊಂದಲು 2021ರಲ್ಲಿ ಅವಕಾಶ ಕಲ್ಪಿಸಲಾಗಿದೆ. ಅಷ್ಟೇ ಅಲ್ಲ, ಎರಡು ಅಥವಾ ಅದಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿದ ದಂಪತಿಗೆ ತೆರಿಗೆ ವಿನಾಯಿತಿ ಘೋಷಿಸಿದೆ. ಮೂರು ವರ್ಷದೊಳಗಿನ ಮಗು ಅಥವಾ ಮಕ್ಕಳು ಹೊಂದಿರುವ ದಂಪತಿಗೆ ವಾರ್ಷಿಕವಾಗಿ 500 ಡಾಲರ್ ಆರ್ಥಿಕ ನೆರವು ನೀಡಲಾಗುತ್ತಿದ್ದು, ಸರ್ಕಾರದಿಂದಲೇ ರಿಯಾಯಿತಿ ದರದಲ್ಲಿ ಮನೆ ಒದಗಿಸಲಾಗುತ್ತಿದೆ. ಹೆರಿಗೆ ರಜೆಯ ಅವಧಿಯನ್ನು ಹೆಚ್ಚಿಸಲಾಗಿದೆ. ದಕ್ಷಿಣ ಕೊರಿಯಾ ಮತ್ತು ಜಪಾನ್ ದೇಶಗಳು ಮಗುವನ್ನು ಹೆರುವ ದಂಪತಿಗೆ ಭಾರಿ ಮೊತ್ತದ ನಗದು ಪೋ›ತ್ಸಾಹಧನ, ಉಚಿತ ಶಿಕ್ಷಣ ಮತ್ತು ಉಚಿತ ವಸತಿ ಸೌಲಭ್ಯಗಳಂತಹ ಕೊಡುಗೆ ನೀಡುತ್ತಿವೆ. ಆದಾಗ್ಯೂ, ಜಾಗತಿಕವಾಗಿ ಈ ಜನನ ದರವನ್ನು ಮತ್ತೆ ಹೆಚ್ಚಿಸುವುದು ಸರ್ಕಾರಗಳಿಗೆ ದೊಡ್ಡ ಸವಾಲಾಗಿ ಪರಿಣಮಿಸಿರುವುದು ಹೌದು.