ದೇಶ

ಹರಿದ 10 ರೂಪಾಯಿಯ ನೋಟು ನಿರಾಕರಿಸಿದ್ದಕ್ಕೆ ಕಪಾಳಕ್ಕೆ ಹೊಡೆದ ಗ್ರಾಹಕ; ವಿಡಿಯೋ ಮಾಡಿಟ್ಟು ಯುವಕ ಆತ್ಮಹತ್ಯೆ..Delhi

  • ಡೆಲಿವರಿ ಏಜೆಂಟ್ ಸಮೀರ್ ಹುಸೇನ್ (24) ಆತ್ಮಹತ್ಯೆ..ದೂರು ದಾಖಲು.

  • ಹತ್ತು ರೂಪಾಯಿ ನೋಟು ಬದಲಾಯಿಸಿ ಕೊಡಿ ಎಂದಿದ್ದಕ್ಕೆ ಕಪಾಳಕ್ಕೆ ಹೊಡೆದ ಗ್ರಾಹಕ.

  • ಬಡತನದ ಬಗ್ಗೆ ಅವಮಾನ, ಸ್ವಾಭಿಮಾನಕ್ಕೆ ಧಕ್ಕೆ ಸಹಿಸದೆ ಯುವಕ ವಿಡಿಯೋ ಮಾಡಿಟ್ಟು ಆತ್ಮಹತ್ಯೆ.

ನವ ದೆಹಲಿ: ಗ್ರಾಹಕನಿಂದ ಕಪಾಳಕ್ಕೆ ಹೊಡಿಸಿಕೊಂಡ ನೋವನ್ನು ತಡೆಯಲಾಗದೆ, ಫ್ಲಿಪ್‌ಕಾರ್ಟ್ ಮಿನಿಟ್ಸ್‌ನ ಡೆಲಿವರಿ ಏಜೆಂಟ್​​ 24 ವರ್ಷದ ಯುವಕನೊಬ್ಬ ವಿಷ ಸೇವಿಸಿ, ಆತ್ಮಹತ್ಯೆ ಮಾಡಿಕೊಂಡ ಘಟನೆ ದೆಹಲಿಯಲ್ಲಿ ಬೆಳಕಿಗೆ ಬಂದಿದೆ.

ಸಮೀರ್ ಹುಸೇನ್ (24) ಎಂದು ಗುರುತಿಸಲಾಗಿದೆ. ತನ್ನ ಹುಟ್ಟು ಹಬ್ಬಕ್ಕೆ ಇನ್ನೂ ಕೆಲವೇ ದಿನದ ಹಿಂದೆ ಈ ನಿರ್ಧಾರ ಕೈಗೊಂಡಿದ್ದಾನೆ ಎನ್ನಲಾಗಿದೆ. ಸದ್ಯ ಆತ ಸಾಯುವ ಮುನ್ನ ಮಾಡಿದ್ದ ವಿಡಿಯೋಗಳು ಸೋಶಿಯಲ್​​ ಮೀಡಿಯಾದಲ್ಲಿ ಹರಿದಾಡುತ್ತಿದೆ.

ಕಾಫಿ ಆರ್ಡರ್ ಮಾಡಿದ್ದ ಗ್ರಾಹಕ

ಫ್ಲಿಪ್​ಕಾರ್ಟ್ ಡೆಲಿವರಿ ಬಾಯ್ ಆದ ಸಮೀರ್ ಹುಸೇನ್ ಅಕ್ಟೋಬರ್ 4 ರಂದು ಪೂರ್ವ ದೆಹಲಿಯ ವಿನೋದ್ ನಗರದಲ್ಲಿರುವ ರಾಮ್‌ಪಾಲ್ ಸಿಂಗ್ ಎಂಬುವವರಿಗೆ ಆರ್ಡರ್ ತಲುಪಿಸಲು, ರಾತ್ರಿ 10:30 ರ ಸುಮಾರಿಗೆ ತೆರಳಿದ್ದ. ಸುಮಾರು 150 ರೂ. ಮೌಲ್ಯದ ಕಾಫಿ ಆರ್ಡರ್‌ ಮಾಡಿದ್ದರು. 150 ರೂಪಾಯಿ ನಗದನ್ನು ಅರೇಂಜ್​ ಮಾಡಲು ಸುಮಾರು 15 ನಿಮಿಷಗಳನ್ನು ತೆಗೆದುಕೊಂಡಿದ್ದಾರೆ ಎಂದು ಸಮೀರ್​ ಹುಸೇನ್ ವಿಡಿಯೋದಲ್ಲಿ ಹೇಳಿಕೊಂಡಿದ್ದಾನೆ.

ಮುಂದುವರೆದು, ಆತ ವಿಳಂಬ ಮಾಡಿದ್ದಕ್ಕೆ ನಾನೇನು ಮಾತನಾಡಲಿಲ್ಲ. ಆದರೆ, ಆತ ಕೊಟ್ಟ ಹಣದಲ್ಲಿ 10 ರೂಪಾಯಿ ನೋಟು ಹರಿದಿತ್ತು. ಹೀಗಾಗಿ ಅಂಕಲ್ ಈ ನೋಟು ಹರಿದಿದೆ ಇದನ್ನು ಬದಲಾಯಿಸಿ ಕೊಡಿ ಎಂದು ಹೇಳಿದೆ. ನನ್ನ ಬಳಿ ಇರೋದೆ ಇದು. ಬೇಕಿದ್ರೆ ತೆಗೆದುಕೋ ಇಲ್ಲದಿದಿದ್ರೆ ಹೋಗು ಎಂದು ಹೇಳಿದ. ನನ್ನ ಕಪಾಳಕ್ಕೆ ಮೂರು ಬಾರಿ ಹೊಡೆದ. ಇದರಿಂದ ನನಗೆ ಸಮಸ್ಯೆಯಾಗಿಲ್ಲ. ಆದರೆ ಆತ ನನ್ನ ಆರ್ಥಿಕ ಸ್ಥಿತಿ ಬಗ್ಗೆ ವ್ಯಂಗ್ಯವಾಡಿದ. ಹೀಯಾಳಿಸಿದ ಹೀಗಾಗಿ ತೀವ್ರ ಬೇಸರವಾಯ್ತು ಎಂದಿದ್ದಾರೆ.

ಬಡತನದ ಬಗ್ಗೆ ಅವಮಾನಿಸಿದ

'ಬಡತನ ಶಾಪವೇ? ನಾನು ನನ್ನ ತಂದೆಯಿಂದ ಹಣ ಕೇಳಲು ಬಯಸದೇ ಸ್ವಂತವಾಗಿ ದುಡಿಯಬೇಕು ಎಂದು ಫ್ಲಿಪ್​​​ಕಾರ್ಟ್​ನಲ್ಲಿ ಉದ್ಯೋಗ ಆರಂಬಿಸಿದೆ. ಆದರೆ, ಗ್ರಾಹಕರು ನಮ್ಮನ್ನು ಹೀಗೆ ನಡೆಸಿಕೊಳ್ತಾರೆ. ಬಡವನಾಗಿರುವುದರಿಂದಲೇ ಒಬ್ಬ ವ್ಯಕ್ತಿಯು ಜೀವನದುದ್ದಕ್ಕೂ ದೌರ್ಜನ್ಯಕ್ಕೊಳಗಾಗುತ್ತಾನೆ. ಯಾರು ಬೇಕಾದರೂ ನಮಗೆ ಏನು ಬೇಕಾದರೂ ಹೇಳಬಹುದು... ಯಾವಾಗಲೂ ಇತರರಿಗೆ ಶಕ್ತಿ ನೀಡುತ್ತಿದ್ದ ನನಗೆ ನನಗಾಗಿ ಶಕ್ತಿ ಸಿಗಲಿಲ್ಲ' ಎಂದು ಅವರು ಹೇಳಿದರು.

'ನನ್ನ ಸ್ವಾಭಿಮಾನಕ್ಕೆ ಧಕ್ಕೆಯುಂಟಾಗಿರುವ ಕಾರಣ ನಾನು ಆತ್ಮಹತ್ಯೆಗೆ ನಿರ್ಧರಿಸಿದ್ದೇನೆ. ಸೈಕಲ್‌ನಲ್ಲಿ ಆರ್ಡರ್‌ಗಳನ್ನು ತಲುಪಿಸುತ್ತಿದ್ದೆ. ನಾನು ಕಷ್ಟಪಟ್ಟು ಕೆಲಸ ಮಾಡುವುದರಲ್ಲಿ ನಂಬಿಕೆ ಇಟ್ಟಿದ್ದೇನೆ. ನನ್ನ ಬಳಿ ಯಾವುದೇ ವಾಹನವಿಲ್ಲ, ಆದ್ದರಿಂದ ನಾನು ಸೈಕಲ್‌ನಲ್ಲಿ ತಲುಪಿಸುತ್ತೇನೆ. ನಾನು ಕಡಿಮೆ ತಿನ್ನುತ್ತೇನೆ. ಆದರೆ, ಅದು ನಾನು ಶ್ರಮಪಟ್ಟ ಹಣದಿಂದ' ಎಂದು ಹೇಳಿಕೊಂಡಿದ್ದಾರೆ.

ಅ.5ರಂದು ಆತ್ಮಹತ್ಯೆಗೆ ಯತ್ನ, ಅ.20 ಸಾವು

ಮತ್ತೊಂದು ವೀಡಿಯೊದಲ್ಲಿ ಹುಸೇನ್ ನಾನು ರೆಕಾರ್ಡ್​ ಮಾಡುತ್ತಿರುವ ಈ ವಿಡಿಯೋ ಆತ್ಮಹತ್ಯೆ ಪತ್ರ ಎಂದು ಹೇಳಿಕೊಂಡಿದ್ದು, 'ಗ್ರಾಹಕ ಮತ್ತು ಅವರ ಮೊಮ್ಮಗ ರಾಕೇಶ್ ಅವರಿಂದ ನನ್ನ ಮೇಲೆ ಹಲ್ಲೆ ನಡೆದಿದೆ. ಆದರೆ, ಅವರ ಮೇಲೆ ಯಾವುದೇ ದೂರು ದಾಖಲಾಗುವುದಿಲ್ಲ. ಹೊಡೆದದ್ದಕ್ಕೆ ಅವರ ಪತ್ನಿ ಕ್ಷಮೆ ಕೇಳಿದ್ರು. ಆದರೆ ಏನು ಪ್ರಯೋಜನ?. ನನ್ನ ಸಾವಿಗೆ ಅವರೇ ಕಾರಣ' ಎಂದಿದ್ದಾರೆ.

ದೌರ್ಜನ್ಯ ನಡೆದ ಕೆಲವೇ ಗಂಟೆಗಳ ನಂತರ ಅಕ್ಟೋಬರ್ 5 ರಂದು ವಿಷ ಸೇವಿಸಿದ್ದಾರೆ. ಅವರನ್ನು ಲಾಲ್ ಬಹದ್ದೂರ್ ಶಾಸ್ತ್ರಿ ಆಸ್ಪತ್ರೆಗೆ ದಾಖಲಿಸಲಾಯಿತು, ಆದರೆ, ಚಿಕಿತ್ಸೆ ಫಲಕಾರಿಯಾಗದೆ ಅ.20ರಂದು ನಿಧನರಾದರು.

ಹುಸೇನ್ ಅವರ ತಾಯಿ ಕಲಿಮಾ, ಆರೋಪಿಗೆ ರಾಜಕೀಯ ಸಂಪರ್ಕವಿದೆ. ಬಡತನವನ್ನು ಅಣುಕಿಸಿದ್ದೇ ಅವನ ಈ ನಿರ್ಧಾರಕ್ಕೆ ಕಾರಣ ಎಂದು ಆರೋಪಿಸಿದರು.

ಪೊಲೀಸರು ಆತ್ಮಹತ್ಯೆಗೆ ಪ್ರಚೋದನೆಗೆ ಸಂಬಂಧಿಸಿದಂತೆ ಭಾರತೀಯ ನ್ಯಾಯ ಸಂಹಿತಾ (ಬಿಎನ್‌ಎಸ್) ಸೆಕ್ಷನ್ ದಾಖಲಿಸಿಕೊಂಡಿದ್ದು ತನಿಖೆ ಮುಂದುವರೆಸಿದ್ದಾರೆ, (ಏಜೆನ್ಸೀಸ್).