- ಭಾರತದ ಮೊದಲ ಖಾಸಗಿ ಆರ್ಬಿಟಲ್ ರಾಕೆಟ್ 'ವಿಕ್ರಮ್-1' ಉಡಾವಣೆ
- ಹೈದರಾಬಾದ್ ಮೂಲದ ಬಾಹ್ಯಾಕಾಶ ಸ್ಟಾರ್ಟ್ಅಪ್ನಿಂದ ರಾಕೆಟ್ ಅಭಿವೃದ್ಧಿ
- ಇಂದು ಬೆಳಗ್ಗೆ 11:30ಕ್ಕೆ 'ಮಿಷನ್ ಆಗಮನ್' ಹೆಸರಿನ ಈ ಐತಿಹಾಸಿಕ ಉಡಾವಣೆ
ನವದೆಹಲಿ: ಭಾರತದ ಬಾಹ್ಯಾಕಾಶ ಕ್ಷೇತ್ರದಲ್ಲಿ ಇಂದು ಮತ್ತೊಂದು ಐತಿಹಾಸಿಕ ದಾಖಲೆ ನಿರ್ಮಾಣವಾಗಲು ವೇದಿಕೆ ಸಿದ್ಧಗೊಂಡಿದೆ. ದೇಶದ ಮೊದಲ ಸಂಪೂರ್ಣ ಖಾಸಗಿ ನಿರ್ಮಿತ ಆರ್ಬಿಟಲ್ ಉಡಾವಣಾ ನೌಕೆಯಾದ 'ವಿಕ್ರಮ್-1'(Skyroot Vikram-1 Launch) ಉಡಾವಣೆ ಬಗ್ಗೆ ಪ್ರಧಾನಿ ಮೋದಿ ಅವರು ಶ್ಲಾಘಿಸಿದ್ದಾರೆ.
ಇದು ದೇಶದ ಬಾಹ್ಯಾಕಾಶ ಪಯಣದಲ್ಲಿ ಒಂದು "ಐತಿಹಾಸಿಕ ನವ ದಿಗಂತ" ಹಾಗೂ ಭಾರತೀಯ ಯುವಕರ ಪ್ರತಿಭೆ ಮತ್ತು ಉದ್ಯಮಶೀಲತೆಯ ಸಂಕೇತ. ಈ ಮಹತ್ವದ ಕೆಲಸವು ಯುವಜನರಿಗೆ ಪ್ರೇರಣೆಯಾಗಲಿ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಬಣ್ಣಿಸಿದ್ದಾರೆ.
ಇಂದು ಬೆಳಗ್ಗೆ 11:30ಕ್ಕೆ, ಸ್ಕೈರೂಟ್ ಏರೋಸ್ಪೇಸ್ ಸಂಸ್ಥೆಯು ಭಾರತದ ಮೊದಲ ಖಾಸಗಿ ನಿರ್ಮಿತ ಉಡಾವಣಾ ನೌಕೆಯಾದ 'ವಿಕ್ರಮ್-1' ರ ಚೊಚ್ಚಲ ಆರ್ಬಿಟಲ್ ಉಡಾವಣೆಯನ್ನು ಕೈಗೊಳ್ಳಲಿದೆ. ವಂದೇ ಮಾತರಂ ಸಂದೇಶ ಹೊತ್ತು ಬಾಹ್ಯಾಕಾಶಕ್ಕೆ ಹಾರಲಿರುವ ರಾಕೆಟ್ ಹಾಗೂ ಸಂಸ್ಥೆ ಬಗ್ಗೆ ಪ್ರಧಾನಿ ಮೋದಿ ಅವರು ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ಈ ನಾಲ್ಕು ಹಂತದ ರಾಕೆಟ್ ಅನ್ನು ಅತ್ಯಂತ ವೇಗವಾಗಿ ಮತ್ತು ಬೇಡಿಕೆಗೆ ತಕ್ಕಂತೆ ಉಡಾವಣಾ ಸೇವೆಗಳನ್ನು ಒದಗಿಸುವಂತೆ ವಿನ್ಯಾಸಗೊಳಿಸಲಾಗಿದೆ. ಈ ಮಿಷನ್ ನಮ್ಮ ಯುವಕರ ಪ್ರತಿಭೆ, ದೃಢಸಂಕಲ್ಪ ಮತ್ತು ಉದ್ಯಮಶೀಲತೆಯ ಮನೋಭಾವವನ್ನು ಎತ್ತಿ ತೋರಿಸುತ್ತದೆ. ಅಷ್ಟೇ ಅಲ್ಲದೆ, ನಮ್ಮ ಬಾಹ್ಯಾಕಾಶ ಕ್ಷೇತ್ರದ ಸುಧಾರಣೆಗಳು ನಾವೀನ್ಯತೆಮತ್ತು ಉದ್ಯಮಶೀಲತೆಗೆ ಹೇಗೆ ಹೊಸ ಅವಕಾಶಗಳನ್ನು ಮುಕ್ತಗೊಳಿಸುತ್ತಿವೆ ಎಂಬುದನ್ನು ಇದು ಪ್ರದರ್ಶಿಸುತ್ತದೆ.ಯಶಸ್ವಿ ಉಡಾವಣೆಗಾಗಿ ಇಡೀ ಸ್ಕೈರೂಟ್ ಏರೋಸ್ಪೇಸ್ ತಂಡಕ್ಕೆ ನನ್ನ ಹೃತ್ಪೂರ್ವಕ ಶುಭ ಹಾರೈಕೆಗಳು. ವಿಕ್ರಮ್-1 ನೌಕೆಯು ಗಗನಕ್ಕೆ ಜಿಗಿದು, ಇತಿಹಾಸ ಸೃಷ್ಟಿಸಲಿ ಮತ್ತು ಹೊಸ ಪೀಳಿಗೆಯ ನಾವೀನ್ಯಕಾರರಿಗೆ ಪ್ರೇರಣೆಯಾಗಲಿ. ಎಲ್ಲಾ ಭಾರತೀಯರು, ವಿಶೇಷವಾಗಿ ನನ್ನ ಯುವ ಸ್ನೇಹಿತರು, ಈ ಐತಿಹಾಸಿಕ ಮಿಷನ್ ಅನ್ನು ವೀಕ್ಷಿಸಬೇಕು ಎಂದು ಪೋಸ್ಟ್ ಹಂಚಿಕೊಂಡಿದ್ದಾರೆ
'ಮಿಷನ್ ಆಗಮನ್' ಮೂಲಕ ಇತಿಹಾಸ ಬರೆಯಲಿರುವ ಸ್ಕೈರೂಟ್
ಭಾರತದ ವೇಗವಾಗಿ ವಿಸ್ತರಿಸುತ್ತಿರುವ ಖಾಸಗಿ ಬಾಹ್ಯಾಕಾಶ ರಂಗಕ್ಕೆ ಈ ಉಡಾವಣೆ ಅತಿ ದೊಡ್ಡ ಮೈಲಿಗಲ್ಲಾಗಿದೆ. ಸ್ಕೈರೂಟ್ ಏರೋಸ್ಪೇಸ್ ಸಂಸ್ಥೆಯು ಆಂಧ್ರಪ್ರದೇಶದ ಶ್ರೀಹರಿಕೋಟದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ತನ್ನ ಮೊದಲ ಆರ್ಬಿಟಲ್ ರಾಕೆಟ್ ಆದ 'ವಿಕ್ರಮ್-1' ಅನ್ನು ಹಾರಿಸಲು ಸಕಲ ಸಿದ್ಧತೆ ಮಾಡಿಕೊಂಡಿದೆ.
ಪಿಎಂ ಮೋದಿಯವರ "ವಂದೇ ಮಾತರಂ" ಸಂದೇಶಈ ಉಡಾವಣೆಯು ಕೇವಲ ತಾಂತ್ರಿಕವಾಗಿ ಮಾತ್ರವಲ್ಲದೆ ಭಾವನಾತ್ಮಕವಾಗಿಯೂ ವಿಶೇಷತೆ ಪಡೆದುಕೊಂಡಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಬರೆದಿರುವ ವಿಶೇಷ ಸಂದೇಶವನ್ನು ಒಳಗೊಂಡ ಸ್ಮರಣಾರ್ಥ ಕಾರ್ಡ್ ಅನ್ನು ಈ ರಾಕೆಟ್ ಬಾಹ್ಯಾಕಾಶಕ್ಕೆ ಹೊತ್ತೊಯ್ಯಲಿದೆ. ಈ ಕಾರ್ಡ್‌ನಲ್ಲಿ "ವಂದೇ ಮಾತರಂ" ಎಂದು ಬರೆಯಲಾಗಿದೆ. ಇದರೊಂದಿಗೆ, ಜಗತ್ತಿನಾದ್ಯಂತ ಇರುವ ಲಕ್ಷಾಂತರ ಜನರ ಆಸೆ, ಆಕಾಂಕ್ಷೆ ಮತ್ತು ಶುಭ ಹಾರೈಕೆಗಳನ್ನು ಒಳಗೊಂಡ ನೂರಾರು ಕಾರ್ಡ್‌ಗಳನ್ನು ಸಹ ವಿಕ್ರಮ್-1 ನೌಕೆಯು ಬಾಹ್ಯಾಕಾಶಕ್ಕೆ ಕೊಂಡೊಯ್ಯಲಿದೆ.