ವಿಕ್ರಮ್​-1 ಯಶಸ್ವಿ ಉಡಾವಣೆ ಬೆನ್ನಲ್ಲೇ ಸ್ಕೈರೂಟ್ ಸಂಸ್ಥಾಪಕರಿಗೆ ಕರೆ ಮಾಡಿದ ಪ್ರಧಾನಿ ಮೋದಿ: ಐತಿಹಾಸಿಕ ಸಾಧನೆ ಬಗ್ಗೆ ಹೇಳಿದ್ದೇನು? PM Modi  
ದೇಶ

ವಿಕ್ರಮ್​-1 ಯಶಸ್ವಿ ಉಡಾವಣೆ ಬೆನ್ನಲ್ಲೇ ಸ್ಕೈರೂಟ್ ಸಂಸ್ಥಾಪಕರಿಗೆ ಕರೆ ಮಾಡಿದ ಪ್ರಧಾನಿ ಮೋದಿ: ಐತಿಹಾಸಿಕ ಸಾಧನೆ ಬಗ್ಗೆ ಹೇಳಿದ್ದೇನು? PM Modi

ಪ್ರಮುಖ ಮುಖ್ಯಾಂಶಗಳು

  • ವಿಕ್ರಮ್ 1 ರಾಕೆಟ್ ಯಶಸ್ವಿ ಉಡಾವಣೆ ಹಿನ್ನೆಲೆ ಸ್ಕೈರೂಟ್ ಸಂಸ್ಥಾಪಕರಿಗೆ ಫೋನ್ ಕರೆ ಮಾಡಿ ಅಭಿನಂದಿಸಿದ ಪ್ರಧಾನಿ ಮೋದಿ
  • ಬಾಹ್ಯಾಕಾಶದಲ್ಲಿ ಹೊಸ ಸಸಿ ನೆಟ್ಟು ಮುಂಬರುವ ಪೀಳಿಗೆಗೆ ಬಲಿಷ್ಠ ಬೇರು ಮೂಡಿಸಿದ್ದೀರಿ ಎಂದು ವಿಜ್ಞಾನಿಗಳನ್ನು ಶ್ಲಾಘಿಸಿದ ಪ್ರಧಾನಿ
  • ಭಾರತದ ಮೊದಲ ಖಾಸಗಿ ಆರ್ಬಿಟಲ್ ಕ್ಲಾಸ್ ರಾಕೆಟ್ ವಿಕ್ರಮ್ 1 ಉಡಾವಣೆ ವೀಕ್ಷಿಸಿ ಸಂಭ್ರಮಿಸಿದ ನರೇಂದ್ರ ಮೋದಿ
  • ಪ್ರಧಾನಿ ಮೋದಿ ಹಸ್ತಾಕ್ಷರದ ವಂದೇ ಮಾತರಂ ಪೋಸ್ಟ್‌ಕಾರ್ಡ್ ಹೊತ್ತು ಬಾಹ್ಯಾಕಾಶಕ್ಕೆ ಜಿಗಿದ ವಿಕ್ರಮ್ 1 ರಾಕೆಟ್
ನವದೆಹಲಿ: ಖಾಸಗಿ ಬಾಹ್ಯಾಕಾಶ ಕ್ಷೇತ್ರದಲ್ಲಿ ಹೊಸ ಇತಿಹಾಸ ಬರೆದಿರುವ ಭಾರತದ ಮೊದಲ ಖಾಸಗಿ ನಿರ್ಮಿತ ಆರ್ಬಿಟಲ್ ಕ್ಲಾಸ್ ರಾಕೆಟ್ 'ವಿಕ್ರಮ್-1' ಯಶಸ್ವಿ ಉಡಾವಣೆಯ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ ( PM Modi ) ಅವರು ಸ್ಕೈರೂಟ್ ಏರೋಸ್ಪೇಸ್ ಸಂಸ್ಥಾಪಕರಾದ ಪವನ್ ಕುಮಾರ್ ಚಂದನ ಮತ್ತು ನಾಗ ಭರತ್ ಡಾಕಾ ಅವರಿಗೆ ಶನಿವಾರ ಫೋನ್ ಕರೆ ಮಾಡಿ ವಿಶೇಷ ಅಭಿನಂದನೆ ಸಲ್ಲಿಸಿದ್ದಾರೆ.
ದೇಶದ ಹೆಮ್ಮೆಯ ಈ ಸಾಧನೆಗೆ ಭಾರತೀಯ ವಿಜ್ಞಾನಿಗಳ ತಾಂತ್ರಿಕ ಕೌಶಲ್ಯವೇ ಕಾರಣ ಎಂದು ಶ್ಲಾಘಿಸಿದ ಪ್ರಧಾನಿ, ಈ ಐತಿಹಾಸಿಕ ಮೈಲಿಗಲ್ಲು ಭಾರತದ ಖಾಸಗಿ ಬಾಹ್ಯಾಕಾಶ ರಂಗದ ಸಾಮರ್ಥ್ಯವನ್ನು ಜಾಗತಿಕ ಮಟ್ಟದಲ್ಲಿ ಎತ್ತಿಹಿಡಿದಿದೆ ಎಂದು ಮುಕ್ತಕಂಠದಿಂದ ಪ್ರಶಂಸಿಸಿದರು.
ಐತಿಹಾಸಿಕ ಉಡಾವಣೆಯ ಯಶಸ್ಸಿನ ಬೆನ್ನಲ್ಲೇ ಸಂಸ್ಥಾಪಕರೊಂದಿಗೆ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು, ಈ ಮೈಲಿಗಲ್ಲು ದೇಶದ ಬಾಹ್ಯಾಕಾಶ ಮಹತ್ವಾಕಾಂಕ್ಷೆಗಳನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ದಿರುವುದು ಮಾತ್ರವಲ್ಲದೆ ನವ ಪೀಳಿಗೆಯ ಆವಿಷ್ಕಾರಕರಿಗೆ ಹೊಸ ಸ್ಫೂರ್ತಿ ನೀಡಿದೆ ಎಂದು ಬಣ್ಣಿಸಿದರು. ಪವನ್ ಕುಮಾರ್ ಚಂದನ ಮತ್ತು ನಾಗ ಭರತ್ ಡಾಕಾ ಅವರೇ, ನೀವು ಬಾಹ್ಯಾಕಾಶದಲ್ಲಿ ಕೇವಲ ಒಂದು ಹೊಸ ಸಸಿಯನ್ನು ನೆಟ್ಟಿಲ್ಲ, ಬದಲಿಗೆ ಮುಂಬರುವ ಹೊಸ ಪೀಳಿಗೆಗೆ ಪ್ರೇರಣೆ ನೀಡುವಂತಹ ಒಂದು ಬಲಿಷ್ಠವಾದ ಬೇರನ್ನು ಭೂಮಿಯ ಮೇಲೆ ಗಟ್ಟಿಯಾಗಿ ಮೂಡಿಸಿದ್ದೀರಿ ಎಂದು ಪ್ರಧಾನಿ ಮುಕ್ತಕಂಠದಿಂದ ಶ್ಲಾಘಿಸಿದರು.
ಈ ಐತಿಹಾಸಿಕ ಸಾಧನೆಯ ಕುರಿತು ತಮ್ಮ ಅಪಾರ ಉತ್ಸಾಹವನ್ನು ಹಂಚಿಕೊಂಡ ಪ್ರಧಾನಿ ಮೋದಿ, ತಾವೂ ಕೂಡ ಈ ಮಿಷನ್ ಅನ್ನು ಅತ್ಯಂತ ಸೂಕ್ಷ್ಮವಾಗಿ ಗಮನಿಸುತ್ತಿದ್ದಾಗಿ ತಿಳಿಸಿದರು. ರಾಕೆಟ್ ಉಡಾವಣೆಯ ಕ್ಷಣಗಳನ್ನು ನಾನು ಅತ್ಯಂತ ಕುತೂಹಲದಿಂದ ಟ್ರ್ಯಾಕ್ ಮಾಡುತ್ತಿದ್ದೆ ಮತ್ತು ಆ ಯುವ ವಿಜ್ಞಾನಿಗಳ ತಂಡದೊಂದಿಗೆ ನಾನೂ ಅಲ್ಲಿಯೇ ಇರಬೇಕೆಂದು ಬಯಸಿದ್ದೆ. ಈ ಯಶಸ್ಸು ದೇಶಾದ್ಯಂತ ಅಪಾರ ಸಂತಸವನ್ನು ತಂದಿದೆ. ಇಂತಹ ದೊಡ್ಡ ಸಾಧನೆ ಮಾಡಿದ ನಿಮ್ಮ ಇಡೀ ತಂಡಕ್ಕೆ ನನ್ನ ಹೃತ್ಪೂರ್ವಕ ಅಭಿನಂದನೆಗಳು ಎಂದು ಪ್ರಧಾನಿ ಮೋದಿಯವರು ತಮ್ಮ ಸಂತಸವನ್ನು ಹಂಚಿಕೊಂಡರು.
ಅಂದಹಾಗೆ, ಭಾರತದ ಖಾಸಗಿ ಬಾಹ್ಯಾಕಾಶ ರಂಗದಲ್ಲಿ ಶನಿವಾರ ಮತ್ತೊಂದು ಐತಿಹಾಸಿಕ ಸುವರ್ಣ ಅಧ್ಯಾಯ ಬರೆಯಲ್ಪಟ್ಟಿದೆ. ಸ್ಕೈರೂಟ್ ಏರೋಸ್ಪೇಸ್ ಸಂಸ್ಥೆಯು ದೇಶದ ಮೊದಲ ಖಾಸಗಿ ಅಭಿವೃದ್ಧಿತ ಕಕ್ಷೀಯ ದರ್ಜೆಯ (Orbital-class) ರಾಕೆಟ್ 'ವಿಕ್ರಮ್-1' ( Vikram 1 ) ಅನ್ನು ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಯಶಸ್ವಿಯಾಗಿ ನಭಕ್ಕೆ ಚಿಮ್ಮಿಸಿದೆ. ದಶಕಗಳ ಕನಸನ್ನು ನನಸು ಮಾಡಿದ ಈ ಯಶಸ್ವಿ ಉಡಾವಣೆಯು ಜಾಗತಿಕ ಬಾಹ್ಯಾಕಾಶ ಮಾರುಕಟ್ಟೆಯಲ್ಲಿ ಭಾರತದ ಖಾಸಗಿ ಉದ್ಯಮದ ಸಾಮರ್ಥ್ಯವನ್ನು ಜಗತ್ತಿಗೆ ಸಾರುವ ಮೂಲಕ ಒಂದು ಹೊಸ ಮೈಲಿಗಲ್ಲನ್ನು ಸ್ಥಾಪಿಸಿದೆ.
'ಮಿಷನ್ ಆಗಮನ್' ಎಂಬ ಈ ಹೆಮ್ಮೆಯ ಐತಿಹಾಸಿಕ ಕಾರ್ಯಾಚರಣೆಯು ಜಾಗತಿಕ ಕಕ್ಷೀಯ ಉಡಾವಣಾ ವ್ಯವಹಾರಕ್ಕೆ ಭಾರತದ ಖಾಸಗಿ ಉದ್ಯಮದ ಅಧಿಕೃತ ಪ್ರವೇಶವನ್ನು ಸಾರಿದೆ. ವಾಣಿಜ್ಯ ಸಂಸ್ಥೆಗಳೇ ಸ್ವತಂತ್ರವಾಗಿ ಕಕ್ಷೀಯ ರಾಕೆಟ್‌ಗಳನ್ನು ಅಭಿವೃದ್ಧಿಪಡಿಸಿ, ಯಶಸ್ವಿಯಾಗಿ ಉಡಾವಣೆ ಮಾಡಿದ ವಿಶ್ವದ ಕೆಲವೇ ಕೆಲವು ಆಯ್ದ ದೇಶಗಳ ಗಣ್ಯರ ಪಟ್ಟಿಗೆ ಭಾರತವೂ ಸೇರುವಂತೆ ಮಾಡುವಲ್ಲಿ ಈ ಮಿಷನ್ ಅತ್ಯಂತ ಪ್ರಮುಖ ಪಾತ್ರ ವಹಿಸಿದೆ.
ಗರ್ಜನೆ ಮತ್ತು ಧಗಧಗಿಸುವ ಅಗ್ನಿ ಜ್ವಾಲೆಯೊಂದಿಗೆ 'ವಿಕ್ರಮ್-1' ರಾಕೆಟ್ ನಭಕ್ಕೆ ಚಿಮ್ಮುತ್ತಿದ್ದಂತೆ, ಸ್ಕೈರೂಟ್ ಸಂಸ್ಥೆಯ ವಿಜ್ಞಾನಿಗಳ ವರ್ಷಗಳ ಕಠಿಣ ಪರಿಶ್ರಮ, ತಾಂತ್ರಿಕ ನಾವೀನ್ಯತೆ ಹಾಗೂ ನಿರಂತರ ಪರೀಕ್ಷೆಗಳ ಶ್ರಮ ಸಾರ್ಥಕವಾಗಿದೆ. ಉಡಾವಣೆಯ ಕೊನೆಯ ಕ್ಷಣದಲ್ಲಿ ಆಂತರಿಕ ತಪಾಸಣೆಗಾಗಿ ಸಣ್ಣದೊಂದು ವಿಳಂಬ (Hold) ಎದುರಾಗಿದ್ದರೂ ಸಹ, ರಾಕೆಟ್‌ನ ಎಲ್ಲಾ ಹಂತಗಳು ಯಾವುದೇ ದೋಷವಿಲ್ಲದೆ ಅತ್ಯಂತ ನಿಖರವಾಗಿ ಕಾರ್ಯನಿರ್ವಹಿಸಿದವು. ರಾಕೆಟ್‌ನ ಪ್ರತಿಯೊಂದು ಹಂತದ ಬೇರ್ಪಡಿಕೆಯೂ ಅತ್ಯಂತ ವ್ಯವಸ್ಥಿತವಾಗಿ ಹಾಗೂ ಅಚ್ಚುಕಟ್ಟಾಗಿ ನಡೆಯುವ ಮೂಲಕ ಇಡೀ ಕಾರ್ಯಾಚರಣೆ ಅದ್ಭುತ ಯಶಸ್ಸು ಕಂಡಿತು.
ತಮ್ಮ ಮೊದಲ ಪ್ರಯತ್ನದಲ್ಲೇ ಇತಿಹಾಸ ಸೃಷ್ಟಿಸಿದ ಸ್ಕೈರೂಟ್ ಸಂಸ್ಥೆಯ ಯುವ ವಿಜ್ಞಾನಿಗಳ ತಂಡವು ಈ ಅಭೂತಪೂರ್ವ ಯಶಸ್ಸಿನಿಂದ ಅತ್ಯಂತ ಹರ್ಷಗೊಂಡಿದೆ. ಈ ಮಹತ್ವಾಕಾಂಕ್ಷಿ ತಂಡವು ಭಾರತಕ್ಕೆ ಉಡುಗೊರೆಯಾಗಿ ನೀಡಿರುವ ಈ ಹೊಸ ರಾಕೆಟ್, ಮುಂದಿನ ದಿನಗಳಲ್ಲಿ ದೇಶದ ಬಾಹ್ಯಾಕಾಶ ಸಾರಿಗೆಯ ಭವಿಷ್ಯವನ್ನೇ ಬದಲಾಯಿಸಲಿದೆ. ಈ ಯಶಸ್ಸಿನೊಂದಿಗೆ ಭಾರತೀಯ ಬಾಹ್ಯಾಕಾಶ ಯಾನದ ಪಥ ಬದಲಾಗಲಿದ್ದು, ಖಾಸಗಿ ವಲಯದ ಸಹಭಾಗಿತ್ವದಲ್ಲಿ ದೇಶವು ಜಾಗತಿಕ ಮಟ್ಟದಲ್ಲಿ ಹೊಸ ಎತ್ತರಕ್ಕೆ ಬೆಳೆಯಲು ದಾರಿಯಾಗಲಿದೆ.
ಸುಮಾರು ಏಳು ಮಹಡಿಗಳಷ್ಟು ಎತ್ತರವಿರುವ 'ವಿಕ್ರಮ್-1' ಸಂಪೂರ್ಣ ಕಾರ್ಬನ್ ಸಂಯೋಜಿತ (ಆಲ್-ಕಾರ್ಬನ್ ಕಾಂಪೋಸಿಟ್) ಬಹು-ಹಂತದ ಉಡಾವಣಾ ವಾಹನವಾಗಿದ್ದು, 350 ಕೆಜಿವರೆಗಿನ ಉಪಗ್ರಹಗಳನ್ನು ಭೂಮಿಯ ಕೆಳ ಕಕ್ಷೆಗೆ (ಲೋ ಅರ್ಥ್ ಆರ್ಬಿಟ್) ತಲುಪಿಸುವ ಸಾಮರ್ಥ್ಯ ಹೊಂದಿದೆ. ಅತ್ಯಾಧುನಿಕ 3D-ಪ್ರಿಂಟೆಡ್ ರಾಕೆಟ್ ಇಂಜಿನ್‌ಗಳು ಮತ್ತು ಹೆಚ್ಚಿನ ದಕ್ಷತೆಯ ಘನ ರಾಕೆಟ್ ಮೋಟಾರ್‌ಗಳು ಸೇರಿದಂತೆ ಸ್ಕೈರೂಟ್ ಸಂಸ್ಥೆಯು ಸಂಪೂರ್ಣವಾಗಿ ಸ್ವದೇಶಿ ತಂತ್ರಜ್ಞಾನದಡಿ ತನ್ನದೇ ಪ್ರಯೋಗಾಲಯದಲ್ಲಿ ಅಭಿವೃದ್ಧಿಪಡಿಸಿರುವ ಪ್ರೊಪಲ್ಷನ್ ಸಿಸ್ಟಮ್‌ಗಳ ಶಕ್ತಿ ಇದರಲ್ಲಿದೆ.
ಈ ಐತಿಹಾಸಿಕ ಮೊದಲ ಪ್ರಾಯೋಗಿಕ ಹಾರಾಟದಲ್ಲಿ ಗ್ರಾಹಾ ಸ್ಪೇಸ್, ಕಾಸ್ಮೋಸರ್ವ್, ಡಿಕ್ಯೂಬ್ಡ್ ಸಂಸ್ಥೆಗಳ ತಂತ್ರಜ್ಞಾನ ಪ್ರದರ್ಶನ ಪೇಲೋಡ್‌ಗಳು ಹಾಗೂ ಸ್ಕೈರೂಟ್‌ನ ಸ್ವಂತ 'ಸ್ಕೋಪ್' (SCOPE) ಪ್ರಯೋಗದ ಉಪಕರಣಗಳನ್ನು ಯಶಸ್ವಿಯಾಗಿ ಕೊಂಡೊಯ್ಯಲಾಗಿದೆ. ಇವುಗಳ ಜೊತೆಗೆ, ಪ್ರಧಾನಿ ನರೇಂದ್ರ ಮೋದಿ ಅವರು ಕೈಬರಹದಲ್ಲಿ ಬರೆದಿರುವ "ವಂದೇ ಮಾತರಂ" ಪೋಸ್ಟ್‌ಕಾರ್ಡ್, ಪ್ರಸ್ತುತ ಮತ್ತು ಮಾಜಿ ಇಸ್ರೋ ಅಧ್ಯಕ್ಷರುಗಳು, ಭಾರತೀಯ ಗಗನಯಾತ್ರಿಗಳು, ಸ್ಕೈರೂಟ್ ಉದ್ಯೋಗಿಗಳು, ಹೂಡಿಕೆದಾರರು ಹಾಗೂ ವಿಶ್ವದಾದ್ಯಂತದ ಬೆಂಬಲಿಗರ ಹಸ್ತಾಕ್ಷರಗಳಿರುವ ಸಂದೇಶಗಳನ್ನು ಒಳಗೊಂಡ ಸಾಂಕೇತಿಕ ಪೇಲೋಡ್‌ಗಳು ಸಹ ಈ ರಾಕೆಟ್ ಮೂಲಕ ಬಾಹ್ಯಾಕಾಶ ಸೇರಿವೆ, (ಏಜೆನ್ಸೀಸ್​).