Yuvraj Singh | ಸಿಕ್ಸರ್ ಕಿಂಗ್ ಯುವರಾಜ್ ಸಿಂಗ್
ನವದೆಹಲಿ: ಭಾರತೀಯ ಕ್ರಿಕೆಟ್‌ನ ಸಿಕ್ಸರ್ ಕಿಂಗ್ ಯುವರಾಜ್ ಸಿಂಗ್ (Yuvraj Singh) ಅವರು ಟೀಮ್ ಇಂಡಿಯಾದ ಬ್ಯಾಟಿಂಗ್ ಕೋಚ್ ಆಗಿ ನೇಮಕಗೊಳ್ಳಲಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ಕ್ರಿಕೆಟ್ ವಲಯದಲ್ಲಿ ಭಾರಿ ಸಂಚಲನ ಮೂಡಿಸಿದೆ. ಒಂದು ವೇಳೆ ಅಂದುಕೊಂಡಂತೆ ನಡೆದರೆ, ಯುವಿ ಆಯ್ಕೆ ಕೇವಲ ನೇಮಕಾತಿಯಾಗದೆ, ಭಾರತೀಯ ಕ್ರಿಕೆಟ್‌ನ ಆಕ್ರಮಣಕಾರಿ ಬ್ಯಾಟಿಂಗ್ ಶೈಲಿಗೆ ಸಿಗಲಿರುವ ಹೊಸ ಆಯಾಮವಾಗಲಿದೆ.
ಬಿಸಿಸಿಐ ಮಹತ್ವದ ನಿರ್ಧಾರ!.. ಯುವರಾಜ್ ಆಯ್ಕೆಗೆ ಕಾರಣವೇನು..?
ಗೌತಮ್ ಗಂಭೀರ್ ಮುಖ್ಯ ಕೋಚ್ ಆಗಿ ಅಧಿಕಾರ ವಹಿಸಿಕೊಂಡ ಬಳಿಕ ತಂಡದಲ್ಲಿ ಭಾರಿ ಬದಲಾವಣೆಗಳಾಗುತ್ತಿವೆ. ಪ್ರಸ್ತುತ ಭಾರತೀಯ ಬ್ಯಾಟರ್‌ಗಳು ವಿದೇಶಿ ನೆಲದಲ್ಲಿ, ಅದರಲ್ಲೂ ಸ್ಪಿನ್ ದಾಳಿಯ ವಿರುದ್ಧ ತಿಣುಕಾಡುತ್ತಿರುವ ಈ ಸಂದರ್ಭದಲ್ಲಿ, ಯುವರಾಜ್ರಂತಹ ಅನುಭವಿಗಳ ಮಾರ್ಗದರ್ಶನ ಅವಶ್ಯಕತೆ ತಂಡಕ್ಕೆ ಇದೆ ಎನ್ನುವುದು ಬಿಸಿಸಿಐ ಅಭಿಪ್ರಾಯ.
ಯುವರಾಜ್ ಆಟಗಾರರಾಗಿ ಎದುರಿಸಿದ ಒತ್ತಡದ ಸಂದರ್ಭಗಳು ಮತ್ತು ದೊಡ್ಡ ಪಂದ್ಯಗಳಲ್ಲಿ ನೀಡಿದ ಪ್ರದರ್ಶನ ಇಂದಿನ ಯುವ ಪೀಳಿಗೆಗೆ ಮಾದರಿಯಾಗುವುದರಲ್ಲಿ ಅನುಮಾನವಿಲ್ಲ. ಅನೇಕ ಯುವ ಆಟಗಾರರು ಯುವಿ ಗರಡಿಯಲ್ಲಿ ಪಳಗಿ ಇಂದು ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಇಂತಹ ಕೋಚ್ ಅಧಿಕೃತವಾಗಿ ರಾಷ್ಟ್ರೀಯ ತಂಡಕ್ಕೆ ಬಂದರೆ ಉತ್ತಮ ಎಂಬ ಚರ್ಚೆಗಳು ನಡೆಯುತ್ತಿವೆ.
ಯುವಿ ಮಾರ್ಗದರ್ಶನದಲ್ಲಿ ಮಿಂಚುತ್ತಿರುವ ಶಿಷ್ಯರು
1. ಯುವರಾಜ್ ಸಿಂಗ್ ಈಗಾಗಲೇ ಎಲೆಮರೆಯ ಕಾಯಿಯಂತೆ ಅನೇಕ ಯುವ ಆಟಗಾರರಿಗೆ ನೆರವಾಗಿದ್ದಾರೆ, ಅವರ ಪಟ್ಟಿ ಇಲ್ಲಿದೆ.
2. ಶುಭಮನ್ ಗಿಲ್: ಯುವಿಯ ಕಠಿಣ ತರಬೇತಿಯಿಂದಲೇ ಗಿಲ್ ಇಂದು ವಿಶ್ವದ ಶ್ರೇಷ್ಠ ಬ್ಯಾಟರ್‌ಗಳಲ್ಲಿ ಒಬ್ಬರಾಗಿ ಹೊರಹೊಮ್ಮಿದ್ದಾರೆ ಎನ್ನಲಾಗಿದೆ.
3. ಅಭಿಷೇಕ್ ಶರ್ಮಾ: ಐಪಿಎಲ್ ಮತ್ತು ಅಂತರಾಷ್ಟ್ರೀಯ ಟಿ20ಯಲ್ಲಿ ಅಭಿಷೇಕ್ ಅಬ್ಬರಿಸಲು ಯುವರಾಜ್ ನೀಡಿದ ತರಬೇತಿಯೇ ಪ್ರಮುಖ ಕಾರಣ ಎನ್ನುವುದನ್ನು ಯಾರು ಅಲ್ಲಗಳೆಯುವಂತಿಲ್ಲ.
4. ರಿಷಬ್ ಪಂತ್: ಇತ್ತೀಚಿನ ವರದಿಗಳ ಪ್ರಕಾರ, ರಿಷಬ್ ಪಂತ್ ಕೂಡ ತಮ್ಮ ಬ್ಯಾಟಿಂಗ್ ತಂತ್ರಗಳನ್ನು ಸುಧಾರಿಸಲು ಯುವರಾಜ್ ಮೊರೆ ಹೋಗಿದ್ದಾರೆ ಎಂದು ತಿಳಿದುಬಂದಿದೆ.
ಮರುಕಳಿಸುತ್ತಾ 2011ರ ಮ್ಯಾಜಿಕ್..?
ಈ ಹಿಂದೆ ಮೈದಾನದಲ್ಲಿ ಜೊತೆಯಾಗಿ ಆಡಿ ಭಾರತಕ್ಕೆ ವಿಶ್ವಕಪ್ ತಂದುಕೊಟ್ಟ ಗೌತಮ್ ಗಂಭೀರ್ ಮತ್ತು ಯುವರಾಜ್ ಸಿಂಗ್ ಈಗ ಡ್ರೆಸ್ಸಿಂಗ್ ರೂಮ್‌ನಲ್ಲಿ ಒಂದಾದರೆ ಭಾರತವನ್ನು ಸೋಲಿಸುವುದು ಅಸಾಧ್ಯ ಎಂಬುದು ಕ್ರಿಕೆಟ್ ಪಂಡಿತರ ಅಭಿಪ್ರಾಯ. ಗಂಭೀರ್ರ ಶಿಸ್ತುಬದ್ಧ ಆಲೋಚನೆ ಮತ್ತು ಯುವರಾಜ್ ಅವರ ಫಿಯರ್ಲೆಸ್ ಆಟದ ಶೈಲಿ ತಂಡಕ್ಕೆ ಹೊಸ ಚೈತನ್ಯ ನೀಡಲಿದೆ(ಏಜೆನ್ಸೀಸ್).