ಮೀರತ್: ಸಾಮಾಜಿಕ ಜಾಲತಾಣದಲ್ಲಿ ಪ್ರತಿದಿನ ಸಾವಿರಾರು ವಿಡಿಯೋಗಳು ವೈರಲ್ ಆಗುತ್ತವೆ. ಕೆಲವು ವಿಡಿಯೋಗಳು ಮುಖದಲ್ಲಿ ಖುಷಿಯನ್ನು ತರಿಸುವ ಹಾಸ್ಯಮಯವಾಗಿದ್ದರೆ, ಇನ್ನು ಕೆಲವು ಕಣ್ಣನ್ನು ಕೆಂಪಾಗಿಸುತ್ತವೆ. ಸದ್ಯ ಉತ್ತರ ಪ್ರದೇಶದ ಮೀರತ್‌ನಿಂದ ಬೆಚ್ಚಿಬೀಳಿಸುವ ವಿಡಿಯೋವೊಂದು ವೈರಲ್ ಆಗಿದೆ.
ಒಂದೇ ಮೋಟಾರ್‌ಸೈಕಲ್‌ನಲ್ಲಿ ಬರೋಬ್ಬರಿ ಆರು ಶಾಲಾ ವಿದ್ಯಾರ್ಥಿಗಳು ಪ್ರಯಾಣಿಸುತ್ತಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ರಸ್ತೆ ಸುರಕ್ಷತೆಯ ಬಗ್ಗೆ ಗಂಭೀರ ಪ್ರಶ್ನೆಯನ್ನು ಹುಟ್ಟುಹಾಕಿದೆ.
ವೈರಲ್ ಆಗಿರುವ ವಿಡಿಯೋದಲ್ಲಿ, ಒಬ್ಬ ಅಪ್ರಾಪ್ತ ಬಾಲಕ ಮೋಟಾರ್‌ಸೈಕಲ್ ಚಲಾಯಿಸುತ್ತಿದ್ದಾನೆ. ಆ ಬೈಕ್ ಮೇಲೆ ಉಳಿದ ಮಕ್ಕಳು ಕಿಕ್ಕಿರಿದು ಕುಳಿತಿದ್ದಾರೆ. ಅಷ್ಟೇ ಅಲ್ಲ, ಬೈಕ್‌ನಲ್ಲಿ ಈಗಾಗಲೇ ಇಷ್ಟು ಮಂದಿ ಕುಳಿತಿದ್ದರೂ, ಮತ್ತೊಬ್ಬ ವಿದ್ಯಾರ್ಥಿ ಇನ್ನೊಬ್ಬನ ಭುಜದ ಮೇಲೆ ಕುಳಿತುಕೊಂಡು ಪ್ರಯಾಣಿಸುತ್ತಿರುವ ದೃಶ್ಯ ನೋಡುಗರ ಕೆಂಗಣ್ಣಿಗೆ ಗುರಿಯಾಗಿದೆ.
ಈ ಬೈಕಿನಲ್ಲಿ ಪ್ರಯಾಣಿಸುತ್ತಿದ್ದ ಎಲ್ಲರೂ ಶಾಲಾ ಸಮವಸ್ತ್ರದಲ್ಲೇ ಇರುವುದು ವಿಡಿಯೋದಲ್ಲಿ ಸ್ಪಷ್ಟವಾಗಿ ಕಾಣುತ್ತದೆ. ಅತಿಯಾದ ಭಾರದಿಂದ ಕೂಡಿರುವ ಈ ಬೈಕ್ ರಸ್ತೆಯಲ್ಲಿ ಸಾಗುತ್ತಿದ್ದಾಗ, ಇತರ ವಾಹನ ಸವಾರರು ಕೂಡ ಆತಂಕದಿಂದ ದೂರ ಸರಿಯುತ್ತಿರುವುದು ಕಾಣುತ್ತಿದೆ. ಮಕ್ಕಳ ಈ ಬೇಜವಾಬ್ದಾರಿ ವರ್ತನೆ ಮತ್ತು ಪೋಷಕರ ನಿರ್ಲಕ್ಷ್ಯಕ್ಕೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದೆ.
ಈ ವಿಡಿಯೋ ನೇರವಾಗಿ ಮೀರತ್ ಟ್ರಾಫಿಕ್ ಪೊಲೀಸರ ಗಮನಕ್ಕೆ ಬಂದಿದೆ. ತಕ್ಷಣವೇ ಕಾರ್ಯಪ್ರವೃತ್ತರಾದ ಪೊಲೀಸರು, ವಿಡಿಯೋ ಆಧರಿಸಿ ತನಿಖೆ ನಡೆಸಿ ಸಂಬಂಧಪಟ್ಟವರ ವಿರುದ್ಧ ಕಠಿಣ ಕ್ರಮ ಕೈಗೊಂಡಿದ್ದಾರೆ.
ಈ ಕುರಿತು ಮಾತನಾಡಿದ ಮೀರತ್ ಪೊಲೀಸ್ ವರಿಷ್ಠಾಧಿಕಾರಿ ರಾಜೇಶ್ ಕುಮಾರ್ ಶ್ರೀವಾಸ್ತವ, ಮಕ್ಕಳು ಈ ರೀತಿಯಾಗಿ ಮೋಟಾರ್‌ಸೈಕಲ್ ಸವಾರಿ ಮಾಡುವುದು ಕಾನೂನುಬಾಹಿರವಾಗಿದೆ. ವಾಹನವನ್ನು ಈಗಾಗಲೇ ವಶಪಡಿಸಿಕೊಂಡಿದ್ದು, ಮಾಲೀಕರಿಗೆ 25,000 ರೂ. ದಂಡ ವಿಧಿಸಲಾಗಿದೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆ.
ಜೊತೆಗೆ, ಈ ಘಟನೆಗೆ ಕೇವಲ ಮಕ್ಕಳಷ್ಟೇ ಅಲ್ಲ, ಪೋಷಕರೂ ಕೂಡ ನೇರ ಹೊಣೆ ಎಂದು ಪೊಲೀಸರು ಎಚ್ಚರಿಸಿದ್ದಾರೆ. ಅಪಾಯಕಾರಿ ನಡವಳಿಕೆಯಲ್ಲಿ ತೊಡಗಿಸಿಕೊಳ್ಳಲು ಮಕ್ಕಳಿಗೆ ಅವಕಾಶ ನೀಡುವುದು ದೊಡ್ಡ ಅನಾಹುತಕ್ಕೆ ದಾರಿ ಮಾಡಿಕೊಡುತ್ತದೆ. ಇದಕ್ಕೆ ಪೋಷಕರೇ ಸಂಪೂರ್ಣ ಹೊಣೆಗಾರರು ಮತ್ತು ಅವರ ವಿರುದ್ಧವೂ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ರಾಜೇಶ್ ಕುಮಾರ್ ಶ್ರೀವಾಸ್ತವ ಎಚ್ಚರಿಕೆ ನೀಡಿದ್ದಾರೆ.
ಈ ಘಟನೆಯು ಅಪ್ರಾಪ್ತ ಮಕ್ಕಳಿಗೆ ವಾಹನಗಳನ್ನು ನೀಡುವ ಪೋಷಕರಿಗೆ ದೊಡ್ಡ ಎಚ್ಚರಿಕೆಯ ಗಂಟೆಯಾಗಿದೆ. ಲೈಸೆನ್ಸ್ ಇಲ್ಲದ ಮಕ್ಕಳಿಗೆ ಬೈಕ್ ಅಥವಾ ಸ್ಕೂಟಿ ಕೊಡುವುದು ಎಷ್ಟು ಅಪಾಯಕಾರಿ ಎಂಬುದನ್ನು ಈ ಘಟನೆ ಮತ್ತೊಮ್ಮೆ ಸಾಬೀತುಪಡಿಸಿದೆ.
ಒಂದೇ ಬೈಕ್‌ನಲ್ಲಿ ಅತಿಯಾದ ಜನ ಪ್ರಯಾಣಿಸುವುದರಿಂದ ವಾಹನದ ಬ್ಯಾಲೆನ್ಸ್ ತಪ್ಪಿ ದೊಡ್ಡ ಅಪಘಾತ ಸಂಭವಿಸುವ ಸಾಧ್ಯತೆ ತುಂಬಾ ಹೆಚ್ಚಿರುತ್ತದೆ. ಇದು ಮಕ್ಕಳ ಪ್ರಾಣಕ್ಕೆ ಮಾತ್ರವಲ್ಲ, ರಸ್ತೆಯಲ್ಲಿ ಓಡಾಡುವ ಇತರ ಅಮಾಯಕ ಸಾರ್ವಜನಿಕರ ಜೀವಕ್ಕೂ ಕುತ್ತು ತರುತ್ತದೆ ಎನ್ನುವುದು ನೆಟ್ಟಿಗರ ಅಭಿಪ್ರಾಯವಾಗಿದೆ, (ಏಜೆನ್ಸೀಸ್).