Assam Election | ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ  
ದೇಶ

ಸತತ ಮೂರನೇ ಬಾರಿಗೆ ಅಸ್ಸಾಂ ಅಖಾಡದಲ್ಲಿ ಕೇಸರಿ ಧ್ವಜ..? ವಿಪಕ್ಷಗಳ ನಿದ್ದೆಗೆಡಿಸಿವೆ ಬಿಜೆಪಿಯ ಈ 6 ಪ್ರಮುಖ ಅಂಶಗಳು | Assam Election

ದಿಸ್ಪೂರ್​: ಈಶಾನ್ಯ ಭಾರತದ ಹೆಬ್ಬಾಗಿಲು ಅಸ್ಸಾಂನಲ್ಲಿ ಈಗ ಚುನಾವಣಾ (Assam Election) ಕಾವು ಬಿಸಿಲಿಗಿಂತ ಪ್ರಖರವಾಗಿದ್ದು, ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ನೇತೃತ್ವದ ಬಿಜೆಪಿ ಸರ್ಕಾರ ಸತತ ಮೂರನೇ ಬಾರಿಗೆ ಅಧಿಕಾರದ ಗದ್ದುಗೆ ಏರಲು ಸರ್ವ ಸನ್ನದ್ಧವಾಗಿದೆ.
ಕಾಂಗ್ರೆಸ್​ ನೇತೃತ್ವದ ವಿರೋಧ ಪಕ್ಷಗಳ ಮೈತ್ರಿಕೂಟದ ಸವಾಲುಗಳ ನಡುವೆಯೂ ಬಿಜೆಪಿ ಹ್ಯಾಟ್ರಿಕ್ ಸಾಧಿಸುವುದು ಖಚಿತ ಎನ್ನುತ್ತಿವೆ ರಾಜಕೀಯ ಸಮೀಕ್ಷೆಗಳು. ಅಸ್ಸಾಂನ ಮಣ್ಣಿನಲ್ಲಿ ಕಮಲ ಮತ್ತೊಮ್ಮೆ ಅರಳಲು ಕಾರಣವಾಗುತ್ತಿರುವ ಆ 6 ಪ್ರಮುಖ ಅಂಶಗಳ ವಿಶ್ಲೇಷಣೆ ಇಲ್ಲಿದೆ.

1. ಹಿಮಂತ ಬಿಸ್ವ ಶರ್ಮಾ ನಾಯಕತ್ವ

ಬಿಜೆಪಿಯ ಈ ಯಶಸ್ಸಿನ ಹಿಂದೆ ಇರುವ ಅತೀ ದೊಡ್ಡ ಶಕ್ತಿ ಎಂದರೆ ಅದು ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ. ಕೇವಲ ಅಸ್ಸಾಂ ಮಾತ್ರವಲ್ಲದೆ ಇಡೀ ಈಶಾನ್ಯ ಭಾರತದ ರಾಜಕೀಯ ಧ್ರುವತಾರೆಯಾಗಿ ಬೆಳೆದಿರುವ ಇವರು, ಆಡಳಿತದ ಮೇಲೆ ಬಿಗು ಹಿಡಿತ ಹೊಂದಿದ್ದಾರೆ. ಶರ್ಮಾರ ಅಭಿವೃದ್ಧಿ ಪರ ಚಿಂತನೆ ಮತ್ತು ಹಿಂದುತ್ವದ ಕಠಿಣ ನಿಲುವುಗಳು ಬಹುಸಂಖ್ಯಾತ ಮತದಾರರನ್ನು ಸೆಳೆಯುವಲ್ಲಿ ಯಶಸ್ವಿಯಾಗಿವೆ.

2. ಕ್ಷೇತ್ರ ಪುನರ್ ವಿಂಗಡಣೆ ಎಂಬ ರಾಜಕೀಯ ಚದುರಂಗಾಟ

2023ರಲ್ಲಿ ಜಾರಿಗೆ ಬಂದ ವಿಧಾನಸಭಾ ಕ್ಷೇತ್ರಗಳ ಪುನರ್ ವಿಂಗಡಣೆಯು ಬಿಜೆಪಿಗೆ ವರದಾನವಾಗಿದೆ. 126 ಕ್ಷೇತ್ರಗಳ ಪೈಕಿ ಪರಿಶಿಷ್ಟ ಪಂಗಡ (ST) ಮತ್ತು ಪರಿಶಿಷ್ಟ ಜಾತಿ (SC) ಮೀಸಲು ಕ್ಷೇತ್ರಗಳ ಸಂಖ್ಯೆಯನ್ನು ಹೆಚ್ಚಿಸಿರುವುದು ಮತ್ತು ಭೌಗೋಳಿಕ ಗಡಿಗಳನ್ನು ಬದಲಿಸಿರುವುದು ಸ್ಥಳೀಯ ಸಮುದಾಯಗಳ ಮತಗಳನ್ನು ಧ್ರುವೀಕರಿಸಲು ಬಿಜೆಪಿಗೆ ಅನುಕೂಲ ಮಾಡಿಕೊಟ್ಟಿದೆ. ಇದು ಕಾಂಗ್ರೆಸ್ ಮತ್ತು AIUDF ಪಕ್ಷಗಳ ಸಾಂಪ್ರದಾಯಿಕ ಮತಬ್ಯಾಂಕ್‌ಗೆ ದೊಡ್ಡ ಹೊಡೆತ ನೀಡಿದೆ.

3. ಒರುನೋದೋಯ್ ಮತ್ತು ಫಲಾನುಭವಿಗಳ ಕ್ರಾಂತಿ

ರಾಜ್ಯ ಸರ್ಕಾರದ ಒರುನೋದೋಯ್ ಯೋಜನೆಯು ದೇಶದ ಅತಿದೊಡ್ಡ ನೇರ ನಗದು ವರ್ಗಾವಣೆ ಯೋಜನೆಗಳಲ್ಲಿ ಒಂದಾಗಿದ್ದು, ಲಕ್ಷಾಂತರ ಮಹಿಳೆಯರ ಖಾತೆಗೆ ಪ್ರತಿ ತಿಂಗಳು ಹಣ ಜಮೆಯಾಗುತ್ತಿರುವುದು ಗ್ರಾಮೀಣ ಭಾಗದಲ್ಲಿ ಬಿಜೆಪಿಗೆ ಭದ್ರವಾದ ಮಹಿಳಾ ಮತಬ್ಯಾಂಕ್ ಸೃಷ್ಟಿಸಿದೆ. ಸರ್ಕಾರದ ಪ್ರತಿಯೊಂದು ಯೋಜನೆಯು ತಾರತಮ್ಯವಿಲ್ಲದೆ ಕಟ್ಟಕಡೆಯ ವ್ಯಕ್ತಿಗೂ ತಲುಪುತ್ತಿರುವುದು ಪಕ್ಷದ ಜನಪ್ರಿಯತೆಯನ್ನು ಹೆಚ್ಚಿಸಿರುವುದರಲ್ಲಿ ಅನುಮಾನವಿಲ್ಲ.

4. ಅಕ್ರಮ ವಲಸೆ ಮತ್ತು ಅಸ್ಸಾಮಿ ಅಸ್ಮಿತೆಯ ರಕ್ಷಣೆ

ಅಸ್ಸಾಂನ ಅಸ್ಮಿತೆಯನ್ನು ಉಳಿಸುವ ಹೋರಾಟದಲ್ಲಿ ಬಿಜೆಪಿ ಸದಾ ಮುಂಚೂಣಿಯಲ್ಲಿದೆ. ಅಕ್ರಮ ವಲಸಿಗರ ವಿರುದ್ಧದ ಕಠಿಣ ಕ್ರಮಗಳು ಮತ್ತು ಎನ್ಆರ್ ಸಿ (NRC) ವಿಚಾರದಲ್ಲಿ ಪಕ್ಷದ ಸ್ಪಷ್ಟ ನಿಲುವು ಸ್ಥಳೀಯ ಅಸ್ಸಾಮಿ ಜನರ ವಿಶ್ವಾಸವನ್ನು ಗಳಿಸಿದೆ. ಜಾತಿ-ಮಾತಿ-ಭೇಟಿ (ಭೂಮಿ, ಸಮುದಾಯ ಮತ್ತು ಗುರುತು) ಎಂಬ ಘೋಷವಾಕ್ಯವು ಅಸ್ಸಾಂನ ಪ್ರತಿ ಮನೆಮನಗಳನ್ನು ತಲುಪಿದೆ.

5. ಬಲಿಷ್ಠ ಎನ್‌ಡಿಎ ಮೈತ್ರಿಕೂಟ ಮತ್ತು ಪ್ರತಿಪಕ್ಷಗಳ ದೌರ್ಬಲ್ಯ

ಅಸೋಮ್ ಗಣ ಪರಿಷತ್ (AGP) ಮತ್ತು ಯುಪಿಪಿಎಲ್ (UPPL) ಜೊತೆಗಿನ ಬಿಜೆಪಿಯ ಸುಭದ್ರ ಮೈತ್ರಿಕೂಟವು ರಾಜ್ಯದಾದ್ಯಂತ ಸಮತೋಲಿತ ಶಕ್ತಿಯನ್ನು ಹೊಂದಿದೆ. ಇನ್ನೊಂದೆಡೆ, ಕಾಂಗ್ರೆಸ್ ನೇತೃತ್ವದ ವಿರೋಧ ಪಕ್ಷಗಳ ಮೈತ್ರಿಕೂಟದಲ್ಲಿನ ಆಂತರಿಕ ಕಲಹ, ನಾಯಕತ್ವದ ಕೊರತೆ ಮತ್ತು ಬಿಜೆಪಿ ಸೇರುತ್ತಿರುವ ಪ್ರಭಾವಿ ನಾಯಕರ ಸರಣಿ ವಲಸೆಯು ಬಿಜೆಪಿಗೆ ಹಾದಿ ಸುಗಮ ಮಾಡಿಕೊಟ್ಟಿದೆ.
ಕಾಗದದ ಮೇಲೆ ಕಾಂಗ್ರೆಸ್ ನೇತೃತ್ವದ ಮೈತ್ರಿಕೂಟ ಪ್ರಬಲವಾಗಿ ಕಂಡರೂ, ವಾಸ್ತವದಲ್ಲಿ ಅವುಗಳ ಸಾಂಸ್ಥಿಕ ಬಲ ತೀರಾ ದುರ್ಬಲವಾಗಿದೆ ಎನ್ನಲಾಗಿದೆ. ಈ ಮೈತ್ರಿಕೂಟದ ಐದು ಪಕ್ಷಗಳು ಕಳೆದ ವಿಧಾನಸಭೆಯಲ್ಲಿ ಕೇವಲ ಎರಡು ಸ್ಥಾನಗಳನ್ನು ಹೊಂದಿದ್ದವು ಮತ್ತು ಅವುಗಳ ಪ್ರಭಾವ ಕೆಲವು ಸೀಮಿತ ಪ್ರದೇಶಗಳಿಗೆ ಮಾತ್ರ ಅಂಟಿಕೊಂಡಿದೆ. ರೈಜೋರ್ ದಳ ಮತ್ತು ಎಜೆಪಿ ಸ್ಪರ್ಧಿಸುತ್ತಿರುವ 21 ಸ್ಥಾನಗಳ ಪೈಕಿ, ಆರು ಕ್ಷೇತ್ರಗಳು ಹೊಸದಾಗಿ ವಿಂಗಡಣೆಯಾಗಿವೆ.
ಇವುಗಳಲ್ಲಿ ಒಂದು ಬಿಟಿಆರ್ ಪ್ರದೇಶದಲ್ಲಿದ್ದರೆ, ಮತ್ತೊಂದು ಮುಸ್ಲಿಂ ಪ್ರಾಬಲ್ಯದ ಕ್ಷೇತ್ರವಾಗಿದೆ. ಅಲ್ಲಿ ಅಸಲಿ ಸ್ಪರ್ಧೆ ಇರುವುದು ಎನ್‌ಡಿಎ ಜೊತೆಗಲ್ಲ, ಬದಲಿಗೆ ಎಐಯುಡಿಎಫ್‌ ಜೊತೆಗೆ. ಉಳಿದ ಕ್ಷೇತ್ರಗಳಲ್ಲಿ ಬಿಜೆಪಿ-ಎಜಿಪಿ ಮೈತ್ರಿಕೂಟವು ಸ್ಪಷ್ಟವಾದ ರಾಜಕೀಯ ಮೇಲುಗೈ ಹೊಂದಿದ್ದು, ಕಾಂಗ್ರೆಸ್ ಮೈತ್ರಿಕೂಟಕ್ಕೆ ಇಲ್ಲಿ ಗೆಲುವು ಅಂದುಕೊಂಡಷ್ಟು ಸುಲಭವಿಲ್ಲ.
ಕಾಂಗ್ರೆಸ್ ಪಕ್ಷದೊಳಗೆ ರಾಕಿಬುಲ್ ಹುಸೇನ್ ವಿರುದ್ಧ ಇರುವ ಅಸಮಾಧಾನವನ್ನು ಶರ್ಮಾ ಬಿಜೆಪಿಯ ಅನುಕೂಲಕ್ಕೆ ಅತ್ಯಂತ ಚಾಣಾಕ್ಷತನದಿಂದ ಬಳಸಿಕೊಳ್ಳುತ್ತಿದ್ದಾರೆ. ಈ ಹಿಂದೆ ಕಾಂಗ್ರೆಸ್‌ನಲ್ಲಿದ್ದ ಭೂಪೇನ್ ಬೋರಾ ಮತ್ತು ಪ್ರದ್ಯುತ್ ಬೋರ್ಡೊಲೊಯ್​ರಂತಹ ಪ್ರಮುಖ ನಾಯಕರು ತಮಗಾದ ಅವಮಾನಕ್ಕೆ ಹುಸೇನ್ ನೇರ ಕಾರಣ ಎಂದು ಬಹಿರಂಗವಾಗಿ ದೂಷಿಸಿದ್ದರು.
ಈ ಸಂದರ್ಭವನ್ನು ಬಳಸಿಕೊಂಡ ಶರ್ಮಾ, ಯಾವುದೇ ಸ್ವಾಭಿಮಾನಿ ಹಿಂದೂ ಕಾಂಗ್ರೆಸ್‌ನಲ್ಲಿ ಬದುಕಲು ಸಾಧ್ಯವಿಲ್ಲ ಎಂಬ ಹೇಳಿಕೆಗಳಿಂದ ಬಂಗಾಳ ಮೂಲದ ಮುಸ್ಲಿಂ ನಾಯಕರ ಪ್ರಭಾವವನ್ನು ಎತ್ತಿ ತೋರಿಸುವ ಮೂಲಕ ಹಿಂದೂ ಮತದಾರರನ್ನು ಒಗ್ಗೂಡಿಸುವ ತಂತ್ರವನ್ನು ಅನುಸರಿಸುತ್ತಿದ್ದಾರೆ.

6. ಈಶಾನ್ಯ ಭಾರತದ ಅಭಿವೃದ್ಧಿಯ ಪರ್ವ

ಕೇಂದ್ರದ ನರೇಂದ್ರ ಮೋದಿ ಸರ್ಕಾರದ "Act East" ನೀತಿಯಡಿ ಅಸ್ಸಾಂನಲ್ಲಿ ಅಭೂತಪೂರ್ವ ಮೂಲಸೌಕರ್ಯ ಅಭಿವೃದ್ಧಿಯಾಗಿದೆ. ಬ್ರಹ್ಮಪುತ್ರ ನದಿಯ ಮೇಲಿನ ಬೃಹತ್ ಸೇತುವೆಗಳು, ವಿಶ್ವದರ್ಜೆಯ ಹೆದ್ದಾರಿಗಳು ಮತ್ತು ರೈಲ್ವೆ ಸಂಪರ್ಕದ ವಿಸ್ತರಣೆಯು ಅಸ್ಸಾಂನ ಚಿತ್ರಣವನ್ನೇ ಬದಲಿಸಿದೆ. ಈ ಅಭಿವೃದ್ಧಿಯ ವೇಗವೇ ಬಿಜೆಪಿಗೆ ಮತಗಳ ರೂಪದಲ್ಲಿ ಪರಿವರ್ತನೆಯಾಗುವ ಎಲ್ಲಾ ಲಕ್ಷಣಗಳಿವೆ.
ಬಿಜೆಪಿಯು ಭದ್ರವಾದ ನೆಲೆ ಹೊಂದಿದ್ದರೂ, ತನ್ನದೇ ಆದ ಕಾರ್ಯಕರ್ತರ ಶ್ರೇಣಿಯಿಂದ ಸಮರ್ಥ ಅಭ್ಯರ್ಥಿಗಳನ್ನು ಬೆಳೆಸುವಲ್ಲಿ ಹಿನ್ನಡೆ ಅನುಭವಿಸಿದೆ. ಈಗ ಘೋಷಣೆಯಾಗಿರುವ 88 ಅಭ್ಯರ್ಥಿಗಳಲ್ಲಿ ಸುಮಾರು 30 ಮಂದಿ ಕಾಂಗ್ರೆಸ್ ಮತ್ತು ಎಜಿಪಿಯಂತಹ ಇತರ ಪಕ್ಷಗಳಿಂದ ಬಂದವರಾಗಿದ್ದಾರೆ. ಈ ಪಕ್ಷಾಂತರ ರಾಜಕಾರಣವು ಮೂಲ ಬಿಜೆಪಿಗರಲ್ಲಿ ಅಸಮಾಧಾನ ಮೂಡಿಸಿದ್ದು, ಆಂತರಿಕ ಕಲಹದ ಮುನ್ಸೂಚನೆ ನೀಡಿದೆ. ಪ್ರಭಾವಿ ನಾಯಕರಾದ ಶರ್ಮಾ ಮತ್ತು ಸೋನೋವಾಲ್ ಕೂಡ ಮೂಲತಃ ಬೇರೆ ಪಕ್ಷದವರೇ ಆಗಿರುವುದರಿಂದ, ಈ ಭಿನ್ನಮತವನ್ನು ಶಿಸ್ತಿನಿಂದ ನಿರ್ವಹಿಸುವುದು ಬಿಜೆಪಿಗೆ ಈಗ ದೊಡ್ಡ ಸವಾಲಾಗಿದೆ(ಏಜೆನ್ಸೀಸ್​).