Bihar Election | ಪ್ರಧಾನಿ ನರೇಂದ್ರ ಮೋದಿ ಮತ್ತು ಸಿಎಂ ನಿತೀಶ್ ಕುಮಾರ್
ಪಟನಾ: ಸಾಮಾಜಿಕ ನ್ಯಾಯ, ಚುನಾವಣಾ ನಿರ್ವಹಣೆ, ನಾಯಕತ್ವದ ಆಯ್ಕೆ ಮನಸ್ಥಿತಿ ಬದಲಾಯಿಸಬಹುದು ಎನ್ನುವುದನ್ನು ಬಿಹಾರದ ಜನಾದೇಶ ಮತ್ತೊಮ್ಮೆ ನಿರೂಪಿಸಿದೆ. ರಾಜ್ಯದ ಎನ್ಡಿಎದ ಈ ದೊಡ್ಡ ಗೆಲುವು ಯಾವುದೇ ಒಂದು ಅಂಶದ ಫಲಿತಾಂಶವಲ್ಲ, ತೆಗೆದುಕೊಂಡ ಅನೇಕ ನಿರ್ಧಾರಗಳ ಪ್ರತಿಫಲ.
ಬಿಹಾರ ಚುನಾವಣೆಯಲ್ಲಿ ಎನ್‌ಡಿಎ ಗೆದ್ದಿದ್ದು ಹೇಗೆ...?
1. ಮಹಿಳೆಯರು-ಇಬಿಸಿ ಸಂಯೋಜನೆ: ಈ ಚುನಾವಣೆಯ ಪ್ರಮುಖ ವರ್ಗ ಎಂದರೆ ಮಹಿಳಾ ಮತದಾರರ ದೊಡ್ಡ ಮಟ್ಟದ ಮತದಾನ. ರಾಜ್ಯದ ಏಳು ಜಿಲ್ಲೆಗಳಲ್ಲಿ ಪುರುಷರಿಗಿಂತ, ಮಹಿಳೆಯರೇ ಶೇಕಡಾ 14 ಕ್ಕಿಂತ ಹೆಚ್ಚು ಮತದಾನ ಮಾಡಿದ್ದಾರೆ. ಇದು ಎನ್‌ಡಿಎಗೆ ತುಂಬಾ ಅನುಕೂಲಕರವಾಗಿದೆ.
ಚುನಾವಣೆ ಪೂರ್ವವೇ ಮಹಿಳೆಯರನ್ನು ಗುರಿಯಾಗಿಟ್ಟುಕೊಂಡು ಅನೇಕ ಜನಪರ ಯೋಜನೆಗಳನ್ನು ಘೋಷಿಸಿದ ಎನ್‌ಡಿಎ ಸರ್ಕಾರ, 10,000 ರೂ ನಗದು ಠೇವಣಿಗಳಿಂದ ಜೀವಿಕಾ ದೀದಿ ಕಲ್ಯಾಣ ಕಾರ್ಯಕ್ರಮಗಳತ್ತ ಗಮ ಹರಸಿದ್ದು ಅದರ ಕೈ ಹಿಡಿದಿದೆ.
2. ಜಾತಿ: ಇಂದಿನ ಸ್ಪರ್ಧಾತ್ಮಕ ರಾಜಕಾರಣಕ್ಕೆ ಜಾತಿಯೇ ಭೂಷಣವಾಗಿದೆ. ಈ ಚುನಾವಣೆಯಲ್ಲಿ ಜಾತಿ ಸಮೀಕರಣವನ್ನು ಒಟ್ಟುಗೂಡಿಸುವಲ್ಲಿ ಎನ್‌ಡಿಎ ಮೈತ್ರಿಕೂಟ ಯಶಸ್ವಿಯಾಗಿದ್ದು, ಈ ಗೆಲುವಿಗೆ ಟರ್ನಿಂಗ್ ಪಾಯಿಂಟ್. ತನ್ನ ಗಟ್ಟಿ ವೋಟ್ ಬ್ಯಾಂಕ್ ಒಲವನ್ನು ಹಾಗೆಯೇ ಉಳಿಸಿಕೊಂಡು, ಇತ್ತ ಪಾಸ್ವಾನ್ ಸೇರಿದಂತೆ ಇತರ ದಲಿತ ಸಮುದಾಯದ ವೋಟ್ಗಳನ್ನು ಪಡೆಯಲು ತಂತ್ರ ಹೆಣೆದಿದ್ದು ವಿಪಕ್ಷ ಆರ್ಜೆಡಿ ಹೊಡೆತ ನೀಡಿದ್ದರೆ, ಎನ್‌ಡಿಎಗೆ ವರವಾಗಿದೆ.
3. ತಂತ್ರಗಾರಿಕೆಯಲ್ಲಿ ಬದಲಾವಣೆ: ಬಿಹಾರದಂತಹ ದೊಡ್ಡ ರಾಜ್ಯಗಳ ಬಗ್ಗೆ ಬಿಜೆಪಿ ಸದಾ ಗಮನಹರಿಸುತ್ತದೆ. ಅದಕ್ಕಾಗಿ 2020 ರ ಚುನಾವಣೆಯಲ್ಲಿನ ಬೆಳವಣಿಗೆಗಳ ಪಾಠ ಕಲಿತ ಎನ್‌ಡಿಎ, ತನ್ನ ಚುನಾವಣಾ ತಂತ್ರಗಳನ್ನು ಬದಲಾಯಿಸಿಕೊಂಡಿತು. ಮಿತ್ರಪಕ್ಷಗಳ ನಡುವಿನ ಸಮನ್ವಯ, ಅವರ ಬೇಕು ಬೇಡಗಳಿಗೆ ಸ್ಪಂದನೆ, ಬೂತ್ ಮಟ್ಟದ ಪರಿಣಾಮಕಾರಿ ನಿರ್ವಹಣೆ ಎನ್‌ಡಿಎ ಕೈ ಹಿಡಿದಿದೆ.
ಎನ್‌ಡಿಎ ಮಿತ್ರಪಕ್ಷಗಳು: ಭಾರತೀಯ ಜನತಾ ಪಕ್ಷ, ಜನತಾದಳ (ಯುನೈಟೆಡ್), ಲೋಕ ಜನಶಕ್ತಿ ಪಕ್ಷ, ಹಿಂದೂಸ್ತಾನಿ ಅವಾಮ್ ಮೋರ್ಚಾ (ಜಾತ್ಯತೀತ) ಮತ್ತು ರಾಷ್ಟ್ರೀಯ ಲೋಕ ಸಮತಾ ಪಕ್ಷದ ಕಾರ್ಯಕರ್ತರ ನಡುವಿನ ಸುಧಾರಿತ ಸಿನರ್ಜಿ ಕೂಡ ಸುಗಮ ಮತ್ತು ಹೆಚ್ಚು ಒಗ್ಗಟ್ಟಿನ ಸಂಪರ್ಕಕ್ಕೆ ಕೊಡುಗೆ ನೀಡಿತು.
4. ವಿರೋಧ ಪಕ್ಷಗಳು ವಿಭಜನೆ: ಈ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟ ಒಗ್ಗಟ್ಟಿನಿಂದ ಸಂಘಟಿತ ಪ್ರದರ್ಶನ ನೀಡಿದರೆ, ಇತ್ತ ಮಹಾಘಟಬಂಧನ್ ನಡುವಿನ ಅಸಮಧಾನ ಬಿಹಾರದಲ್ಲಿ ಅಲ್ಲಲ್ಲಿ ಕಂಡು ಬಂತು. ಅನೇಕ ಕ್ಷೇತ್ರಗಳಲ್ಲಿನ ಫ್ರೆಂಡ್ಲಿ ಫೈಟ್ ಕೂಡ ಮಹಾಮೈತ್ರಿಕೂಟಕ್ಕೆ ಹೊಡೆತ ನೀಡಿದೆ ಎನ್ನಲಾಗಿದ್ದು, ಕಾರ್ಯತಂತ್ರದ ಕೊರತೆ ವಿರೋಧ ಪಕ್ಷಗಳನ್ನು ದುರ್ಬಲಗೊಳಿಸಿದ್ದರೆ, ಎನ್‌ಡಿಎಗೆ ಜಯದ ಹಾರ ಹಾಕಿದೆ.
5. ಮುಸ್ಲಿಂ-ಯಾದವ್ ಸಮೀಕರಣ: ಬಿಹಾರ ಮತ್ತು ಉತ್ತರ ಪ್ರದೇಶದಲ್ಲಿ ಸಮಾಜವಾದಿ ಮತ್ತು ಇಲ್ಲಿ ಆರ್ಜೆಡಿಯ ಸಾಂಪ್ರದಾಯಿಕ ಮತಬ್ಯಾಂಕ್ ಎಂದರೆ ಅದು ಮುಸ್ಲಿಂ-ಯಾದವ್. ಇದನ್ನು ಮಹಾಘಟಬಂಧನ್ ಸರಿಯಾಗಿ ನಿಭಾಯಿಸುವಲ್ಲಿ ವಿಫಲವಾಗಿದೆ ಎನ್ನುವುದು ರಾಜಕೀಯ ವಿಶ್ಲೇಷಕರ ಅಭಿಪ್ರಾಯ. ಸೀಮಾಂಚಲ್ ಪ್ರದೇಶದಲ್ಲಿ ಅಸಾದುದ್ದೀನ್ ಓವೈಸಿ ಪಕ್ಷದ ಉತ್ತಮ ಸಾಧನೆ ಮುಸ್ಲಿಂ ಮತಗಳ ವಿಭಜನೆಯನ್ನು ಸ್ಪಷ್ಟವಾಗಿ ಸೂಚಿಸುತ್ತಿದ್ದು, ಇದು ಮಹಾಘಟಬಂಧನ್‌ದ ಮತಬುಟ್ಟಿಗೆ ನೇರ ಹಾಕಿರುವುದಂತು ಸ್ಪಷ್ಟವಾಗಿದೆ.
6. ಜಂಗಲ್ ರಾಜ್ ಬರುತ್ತೆ...: ಬಿಹಾರದ ಅಂದ ತಕ್ಷಣ ಈ ಮೊದಲು ನೆನಪಾಗುತ್ತಿದ್ದಿದ್ದೆ ಜಂಗಲ್ ರಾಜ್ ಆಡಳಿತ. ಇದು ತಲೆಮಾರುಗಳೇ ಕಳೆದರು ಮರೆಯಲಾಗದ ಕಹಿ ನೆನಪು. ರಾಜ್ಯ ರಾಜಕೀಯದಲ್ಲಿನ ಅನೇಕ ಬದಲಾವಣೆಗಳ ಹೊರತಾಗಿಯೂ ಜನರಲ್ಲಿ ಆತಂಕ ಇನ್ನೂ ಹಾಗೆ ಇದೆ. ಎನ್‌ಡಿಎ ತನ್ನ ಚುನಾವಣಾ ಪ್ರಚಾರದಲ್ಲಿ ಹೇಳುತಿದ್ದ ಮಾತೆಂದರೆ ಜಂಗಲ್ ರಾಜ್ ಬರುತ್ತೆ, ಲಾಲೂ ಮಗ ತೇಜಸ್ವಿ ಬರುತ್ತಾನೆ. ಇದರಿಂದ ಜನ ಎನ್ಡಿಎದತ್ತ ಒಲವು ತೋರಿರುವ ಸಾಧ್ಯತೆಗಳಿವೆ.
ಬಿಹಾರದಲ್ಲಿ ಎನ್‌ಡಿಎ ಗೆಲುವು ಕೇವಲ ಒಂದೆರಡು ತಿಂಗಳಿನಿಂದ ನಡೆದ ತಯಾರಿ ಅಲ್ಲ. ಇದಕ್ಕೆ ಅನೇಕರ, ಅನೇಕ ರೀತಿಯ ಶ್ರಮವಿದೆ(ಏಜೆನ್ಸೀಸ್).