ನವದೆಹಲಿ: ಎಸ್ಐಆರ್ ವಿವಾದ ಮತ್ತು ಮತಗಳ್ಳತನ ಆರೋಪಕ್ಕೆ ಸಂಬಂಧಿಸಿದಂತೆ ದೆಹಲಿಯಲ್ಲಿ ನಡೆಯುತ್ತಿರುವ ಪ್ರತಿಭಟನೆಗೆ ಒಡಿಶಾದ ನವೀನ್ ಪಟ್ನಾಯಕ್ ನೇತೃತ್ವದ ಬಿಜೆಡಿ ಮೊದಲ ಬಾರಿಗೆ ಬೆಂಬಲ ನೀಡಿದ್ದು, ಸಿಇಸಿ ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಒತ್ತಾಯಿಸಿ ಇಂಡಿಯಾ ಒಕ್ಕೂಟ ಆಯೋಜಿಸಿದ್ದ ಮೆರವಣಿಗೆಯಲ್ಲಿ ಬಿಜೆಡಿ ಸಂಸದರು ಭಾಗವಹಿಸಿದ್ದಾರೆ.
ಬಿಜೆಡಿ ಸಂಸದರಾದ ಮಾನಸ್ ಮಂಗರಾಜ್ ಮತ್ತು ಸುಲತಾ ದೇವ್ ವಿರೋಧ ಪಕ್ಷಗಳ ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ಈ ಕುರಿತು ಮಾತನಾಡಿರುವ ಮಾನಸ್ ಮಂಗರಾಜ್, ಪಕ್ಷದ ಮುಖ್ಯಸ್ಥ ಮತ್ತು ಒಡಿಶಾದ ಮಾಜಿ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರ ಆದೇಶದ ಮೇರೆಗೆ ನಾನು ಪ್ರತಿಭಟನೆಯಲ್ಲಿ ಭಾಗವಹಿಸಿದ್ದೇನೆ ಎಂದು ಹೇಳಿದ್ದಾರೆ.
ಬಿಜೆಡಿ ಸಂಸದೆ ಸುಲತಾ ದೇವ್ ಮಾತನಾಡಿ, ಬಿಜೆಡಿ ಇಂಡಿಯಾ ಮೈತ್ರಿಕೂಟಕ್ಕೆ ಸೇರ್ಪಡೆಯಾಗಿಲ್ಲ. ನಮ್ಮ ಪಕ್ಷವು ಇಂಡಿಯಾ ಕೂಟ ಮತ್ತು ಎನ್ಡಿಎ ಜೊತೆ ಸಮಾನ ಅಂತರ ಕಾಯ್ದುಕೊಳ್ಳುತ್ತಿದೆ. ಚುನಾವಣಾ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಮತ್ತು ಪ್ರಜಾಪ್ರಭುತ್ವ ಸಂಸ್ಥೆಗಳ ರಕ್ಷಣೆಗಾಗಿ ಮಾತ್ರ ಈ ಪ್ರತಿಭಟನೆಯಲ್ಲಿ ಭಾಗವಹಿಸಿದ್ದೇವೆ ಎಂದು ತಿಳಿಸಿದ್ದಾರೆ.
ಬಿಜೆಡಿ ಇಂಡಿಯಾ ಕೂಟಕ್ಕೆ ಅಧಿಕೃತವಾಗಿ ಸೇರಿಲ್ಲ. ಆದಾಗ್ಯೂ, ಪ್ರತಿಭಟನೆಗೆ ಅದರ ಬೆಂಬಲವು ರಾಜಕೀಯವಾಗಿ ಭಾರಿ ಮಹತ್ವವನ್ನು ಪಡೆದುಕೊಂಡಿದೆ. ಇನ್ನೂ ವಿಪಕ್ಷಗಳ ಪ್ರತಿಭಟನೆಗೆ ಬೆಂಬಲ ನೀಡಿದ್ದಕ್ಕೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮತ್ತು ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮಮತಾ ಬ್ಯಾನರ್ಜಿ, ನವೀನ್ ಪಟ್ನಾಯಕ್ ಅವರಿಗೆ ಧನ್ಯವಾದ ಅರ್ಪಿಸಿದ್ದಾರೆ (ಏಜೆನ್ಸೀಸ್).