Kejriwal Sisodia Meet 
ದೇಶ

ಗುಜರಾತ್​ನಿಂದ​ ನೇರವಾಗಿ ಕೇಜ್ರಿವಾಲ್​ ಮನೆಗೆ!... ಆಪ್ ಉಳಿಸುವ ಸಂಜೀವಿನಿ ಹೊತ್ತು ತಂದ್ರಾ ಸಿಸೋಡಿಯಾ..? | Kejriwal Sisodia Meet

ದೆಹಲಿ: ರಾಜ್ಯಸಭಾ ಸಂಸದರ ಸಾಮೂಹಿಕ ಪಕ್ಷಾಂತರದಿಂದ ಆಮ್ ಆದ್ಮಿ ಪಕ್ಷವು (ಎಎಪಿ) ತೀವ್ರ ಆಘಾತಕ್ಕೊಳಗಾಗಿದ್ದು, ಪಕ್ಷದೊಳಗೆ ಅಸ್ತವ್ಯಸ್ತ ಸ್ಥಿತಿ ನಿರ್ಮಾಣವಾಗಿದೆ. ಈ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ, ಗುಜರಾತ್ ಭೇಟಿಯಿಂದ ಹಿಂದಿರುಗಿದ ತಕ್ಷಣ ಹಿರಿಯ ನಾಯಕ ಮನೀಶ್ ಸಿಸೋಡಿಯಾ ನವದೆಹಲಿಯಲ್ಲಿರುವ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ (Kejriwal Sisodia Meet) ನಿವಾಸಕ್ಕೆ ತೆರಳಿ ತುರ್ತು ಸಭೆ ನಡೆಸಿದರು ಎಂದು ವರದಿಯಾಗಿದೆ.
ಮುಂದಿನ ವರ್ಷ ಪಂಜಾಬ್‌ನಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಮುನ್ನ ಪಕ್ಷದ ಭವಿಷ್ಯದ ಕಾರ್ಯತಂತ್ರ ಮತ್ತು ಪ್ರಸ್ತುತ ಎದುರಾಗಿರುವ ಬೃಹತ್ ಬಿಕ್ಕಟ್ಟನ್ನು ಹೇಗೆ ನಿಭಾಯಿಸಬಹುದು ಎಂಬುದರ ಕುರಿತು ಇಬ್ಬರೂ ನಾಯಕರು ಸುದೀರ್ಘವಾಗಿ ಚರ್ಚಿಸಿದರು. ಸಿಸೋಡಿಯಾ ವಿಮಾನ ನಿಲ್ದಾಣದಿಂದ ನೇರವಾಗಿ ಕೇಜ್ರಿವಾಲ್ ನಿವಾಸಕ್ಕೆ ತೆರಳಿ ಅರ್ಧ ಗಂಟೆಗೂ ಹೆಚ್ಚು ಕಾಲ ಸಮಾಲೋಚನೆ ನಡೆಸಿದ್ದು, ಈ ವೇಳೆ ಪಕ್ಷದ ವಿಭಜನೆಯ ಸಂಭವನೀಯ ಪರಿಣಾಮಗಳ ಬಗ್ಗೆ ಅವಲೋಕನ ನಡೆಸಲಾಯಿತು ಎನ್ನಲಾಗಿದೆ.
ರಾಘವ್ ಚಡ್ಡಾ, ಅಶೋಕ್ ಮಿತ್ತಲ್, ಸಂದೀಪ್ ಪಾಠಕ್, ಹರ್ಭಜನ್ ಸಿಂಗ್, ರಾಜೇಂದ್ರ ಗುಪ್ತಾ, ವಿಕ್ರಮ್ ಸಾಹ್ನಿ ಮತ್ತು ಸ್ವಾತಿ ಮಲಿವಾಲ್ ಸೇರಿದಂತೆ ಏಳು ಪ್ರಮುಖ ರಾಜ್ಯಸಭಾ ಸಂಸದರು ಬಿಜೆಪಿಗೆ ಸೇರಲು ಪಕ್ಷವನ್ನು ತೊರೆದಿರುವುದು ಎಎಪಿಯನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಈ ಬೆಳವಣಿಗೆಯನ್ನು ಎಎಪಿ ಪಂಜಾಬ್‌ಗೆ ಮಾಡಿದ ದ್ರೋಹ ಎಂದು ಕರೆದಿದ್ದು, ಕೇಂದ್ರೀಯ ಸಂಸ್ಥೆಗಳನ್ನು ಬಳಸಿಕೊಂಡು ಬಿಜೆಪಿ ತನ್ನ ಪಕ್ಷವನ್ನು ಒಡೆಯುತ್ತಿದೆ ಎಂದು ಗಂಭೀರವಾಗಿ ಆರೋಪಿಸಿದೆ.

ಸಿಸೋಡಿಯಾ-ಕೇಜ್ರಿವಾಲ್ ಹೊಸ ಪ್ಲಾನ್

ಈ ಎಲ್ಲಾ ಸಂಸದರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಮುಂದಾಗಿರುವ ಎಎಪಿ, ವಿಶೇಷವಾಗಿ ಬಿಜೆಪಿ ಕಚೇರಿಯಲ್ಲಿ ಸಾರ್ವಜನಿಕವಾಗಿ ಕಾಣಿಸಿಕೊಂಡಿರುವ ರಾಘವ್ ಚಡ್ಡಾ, ಅಶೋಕ್ ಮಿತ್ತಲ್ ಮತ್ತು ಸಂದೀಪ್ ಪಾಠಕ್ ವಿರುದ್ಧ ಪಕ್ಷಾಂತರ ವಿರೋಧಿ ಕಾನೂನಿನಡಿಯಲ್ಲಿ ಕ್ರಮ ಕೈಗೊಳ್ಳುವಂತೆ ಕೋರಿ ರಾಜ್ಯಸಭಾ ಅಧ್ಯಕ್ಷ ಸಿಪಿ ರಾಧಾಕೃಷ್ಣನ್ ಅವರಿಗೆ ಪತ್ರ ಕಳುಹಿಸಲು ನಿರ್ಧರಿಸಿದೆ. ಮೇಲ್ಮನೆಯಲ್ಲಿ ಎಎಪಿಯ ಮುಖ್ಯ ಸಚೇತಕರಾಗಿರುವ ಎನ್ ಡಿ ಗುಪ್ತಾ ಮೂಲಕ ಈ ದೂರು ದಾಖಲಾಗಲಿಸುವ ಸಾಧ್ಯತೆ ಇದ್ದು, ಸಾರ್ವಜನಿಕವಾಗಿ ಪಕ್ಷ ಬದಲಿಸಿರುವುದು ಕಂಡುಬಂದಿರುವ ಮೂವರು ನಾಯಕರನ್ನು ಗುರಿಯಾಗಿಸಿಕೊಂಡು ಈ ಕಾನೂನು ಹೋರಾಟ ನಡೆಯಲಿದೆ.
ಈ ಬೆಳವಣಿಗೆಯು ರಾಜ್ಯಸಭೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಬಲವನ್ನು ಹೆಚ್ಚಿಸಲಿದ್ದು, ಮತ್ತೊಂದೆಡೆ, ಪಂಜಾಬ್, ಗೋವಾ ಮತ್ತು ಗುಜರಾತ್ ವಿಧಾನಸಭಾ ಚುನಾವಣೆಗಳಿಗೆ ಸಿದ್ಧತೆ ನಡೆಸುತ್ತಿರುವ ಎಎಪಿಗೆ ಇದು ಅತಿದೊಡ್ಡ ಹಿನ್ನಡೆಯಾಗಿದೆ. ಪಂಜಾಬ್‌ನಲ್ಲಿ ಪಕ್ಷದ ನೆಲೆಯನ್ನು ವಿಸ್ತರಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದ ಚಡ್ಡಾ ಮತ್ತು ಪಾಠಕ್ ನಿರ್ಗಮನವು ಕೇಜ್ರಿವಾಲ್​ ಪಾಳಯದಲ್ಲಿ ದೊಡ್ಡ ನಿರ್ವಾತವನ್ನು ಸೃಷ್ಟಿಸಿದೆ. ಈ ಬಿಕ್ಕಟ್ಟು ಎಎಪಿ ತನ್ನ ರಾಷ್ಟ್ರವ್ಯಾಪಿ ವಿಸ್ತರಣಾ ಮಹತ್ವಾಕಾಂಕ್ಷೆಗಳನ್ನು ಮುಂದುವರಿಸುತ್ತದೆಯೇ ಅಥವಾ ತನ್ನ ಅಸ್ತಿತ್ವದಲ್ಲಿರುವ ಭದ್ರಕೋಟೆಗಳನ್ನು ಉಳಿಸಿಕೊಳ್ಳಲು ಮಾತ್ರ ಸೀಮಿತವಾಗುತ್ತದೆಯೇ ಎಂಬುದನ್ನು ನಿರ್ಧರಿಸುವ ನಿರ್ಣಾಯಕ ಘಟ್ಟವಾಗಿ ಪರಿಣಮಿಸಿದೆ(ಏಜೆನ್ಸೀಸ್​​).