ಅಭಿಷೇಕ್ ಬ್ಯಾನರ್ಜಿ ಮತ್ತು ಅರ್ಥಶಾಸ್ತ್ರಜ್ಞ ಅಮರ್ತ್ಯ ಸೇನ್
ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆಗೆ ಸಂಬಂಧಿಸಿದಂತೆ ಚುನಾವಣೆ ಆಯೋಗವು ನೊಬೆಲ್ ಪ್ರಶಸ್ತಿ ವಿಜೇತ ಅರ್ಥಶಾಸ್ತ್ರಜ್ಞ ಅಮರ್ತ್ಯ ಸೇನ್(Amartya Sen) ಅವರನ್ನು ವಿಚಾರಣೆಗೆ ಕರೆದಿದೆ ಎಂದು ಟಿಎಂಸಿ ನಾಯಕ ಅಭಿಷೇನ್ ಬ್ಯಾನರ್ಜಿ ಆರೋಪಿಸಿದ್ದಾರೆ.
ಅಮರ್ತ್ಯ ಸೇನ್ ಅವರ ತವರು ಜಿಲ್ಲೆ ಬಿರ್ಭುಮ್‌ನಲ್ಲಿ ಸಾರ್ವಜನಿಕ ರ್ಯಾಲಿಯಲ್ಲಿ ಮಾತಣಾಡಿರುವ ಸಂಸದ ಅಭಿಷೇಕ್ ಬ್ಯಾನರ್ಜಿ, ಪಶ್ಚಿಮ ಬಂಗಾಳದಲ್ಲಿ ನಡೆಯುತ್ತಿರುವ ಎಸ್‌ಐಆರ್ ವಿಚಾರಣೆಯಲ್ಲಿ ನೊಬೆಲ್ ಪ್ರಶಸ್ತಿ ವಿಜೇತ ಅಮರ್ತ್ಯ ಸೇನ್, ನಟ ದೇವ್ ಹಾಗೂ ಕ್ರಿಕೆಟಿಗ ಎಂಡಿ ಶಮಿ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಲಾಗಿದೆ ಎಂದು ಹೇಳಿದ್ದರು.
ಸ್ಪಷ್ಟನೆ ನೀಡಿದ ಚುನಾವಣೆ ಆಯೋಗ
ಅಮರ್ತ್ಯ ಸೇನ್ ಅವರಿಗೆ ನೋಟಿಸ್ ನೀಡಲಾಗಿದೆ ಎಂಬ ಅಭಿಷೇಕ್ ಬ್ಯಾನರ್ಜಿ ಆರೋಪಕ್ಕೆ ಸ್ಪಷ್ಟನೆ ನೀಡಿರುವ ಭಾರತೀಯ ಚುನಾವಣೆ ಆಯೋಗ, ಇದು ಎಣಿಕೆ ನಮೂನೆಯಲ್ಲಿನ ಕಾಗುಣಿತ ದೋಷವಾಗಿದೆ. ಮತ್ತು ವಿಚಾರಣೆಗಾಗಿ ಸೇನ್ ಚುನಾವಣಾ ಸಂಸ್ಥೆಯ ಮುಂದೆ ಹಾಜರಾಗುವ ಅಗತ್ಯವಿಲ್ಲ. ಕಾಗುಣಿತ ದೋಷವನ್ನು ಸರಿಪಡಿಸಲು ಆಯೋಗವು ಸಂಬಂಧಪಟ್ಟ ಬಿಎಲ್ಓಗೆ ಹೇಳಿದೆ ಎಂದು ತಿಳಿಸಿದೆ (ಏಜೆನ್ಸೀಸ್).