ತಿರುವನಂತಪುರಂ: ಮುಂಬರುವ ಚುನಾವಣೆ ಮೊದಲು ಕೇರಳದ ಕರಡು SIR ಪಟ್ಟಿಯನ್ನು(SIR effect in Kerala) ಪ್ರಕಟಿಸಲಾಗಿದ್ದು, 24,80,503 ಜನರನ್ನು ಮತದಾರರ ಪಟ್ಟಿಯಿಂದ ತಗೆದುಹಾಕಲಾಗಿದೆ ಎಂದು ಮುಖ್ಯ ಚುನಾವಣಾ ಅಧಿಕಾರಿ ರತನ್ ಯು. ಕೇಳ್ಕರ್ ಮಾಹಿತಿ ನೀಡಿದ್ದಾರೆ.
ಈ ಮಾಹಿತಿಯನ್ನು ಮುಖ್ಯ ಚುನಾವಣಾ ಅಧಿಕಾರಿ ರಥನ್ ಯು ಕೇಳ್ಕರ್ ಅವರು ಕರಡು ಪಟ್ಟಿಯನ್ನು ಚುನಾವಣಾ ಆಯೋಗದ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಲಾಗಿದೆ ಮತ್ತು ಪ್ರತಿಗಳನ್ನು ರಾಜಕೀಯ ಪಕ್ಷಗಳೊಂದಿಗೆ ಹಂಚಿಕೊಳ್ಳಲಾಗಿದೆ ಎಂದು ತಿಳಿಸಿದರು.
ಕೇರಳದಲ್ಲಿ 24 ಲಕ್ಷಕ್ಕೂ ಹೆಚ್ಚು ಹೆಸರುಗಳನ್ನು ತೆಗೆಯಲಾಗಿದೆ
ಕೇರಳದಲ್ಲಿ ಪ್ರಕಟವಾದ ಕರಡು ಪಟ್ಟಿಯಲ್ಲಿ 2,54,42,352 ಮತದಾರರನ್ನು ಸೇರಿಸಲಾಗಿದೆ. ಆದರೆ SIR ನ ಎಣಿಕೆ ಹಂತ ಪೂರ್ಣಗೊಂಡ ನಂತರ 24,08,503 ಮತದಾರರ ಹೆಸರನ್ನು ತೆಗೆದುಹಾಕಲಾಗಿದೆ. ಅಲ್ಲದೆ, ತೆಗೆದುಹಾಕಿದವರಲ್ಲಿ 6,49,885 ಮಂದಿ ಮೃತ ಮತದಾರರಾಗಿದ್ದಾರೆ. ಇನ್ನೂ 6,45,548 ಮತದಾರರ ಗುರುತು ಪತ್ತೆಯಾಗಿಲ್ಲ ಎಂದು ಕಂಡುಬಂದಿದೆ. ಅಲ್ಲದೆ, 8,16,221 ಮಂದಿ ತಮ್ಮ ನೋಂದಾಯಿತ ವಿಳಾಸಗಳಿಂದ ಶಾಶ್ವತವಾಗಿ ಸ್ಥಳಾಂತರಗೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಪಟ್ಟಿಯಲ್ಲಿ ಹೆಚ್ಚುವರಿಯಾಗಿ, 1,36,029 ನಕಲಿ ನಮೂದುಗಳು ಮತ್ತು ಇತರ ವರ್ಗಗಳ ಅಡಿಯಲ್ಲಿ ಬರುವ 1,60,830 ಮತದಾರರನ್ನು ಗುರುತಿಸಿ ತೆಗೆದುಹಾಕಲಾಗಿದೆ. SIR ಪರಿಷ್ಕರಣೆ ಪ್ರಕ್ರಿಯೆಗೆ ಮುನ್ನ, ಕೇರಳದ ಮತದಾರರ ಪಟ್ಟಿ 2,78,50,855 ಮತದಾರರನ್ನು ಹೊಂದಿತ್ತು. ಒಟ್ಟು ಮತದಾರರಲ್ಲಿ ಅಳಿಸುವಿಕೆಗಳು ಶೇ 8.65 ರಷ್ಟಿವೆ ಎಂದು ಮಾಹಿತಿ ದೊರೆತಿದೆ.
ಬಿಡುಗಡೆಯಾಗಿರುವ ಕರಡು ಪಟ್ಟಿಗೆ ಸಂಬಂಧಿಸಿದ ಆಕ್ಷೇಪಣೆಗಳು ಮತ್ತು ಕುಂದುಕೊರತೆಗಳನ್ನು ರಾಜಕೀಯ ಪಕ್ಷಗಳು ಜನವರಿ 22 ರವರೆಗೆ ಸಲ್ಲಿಸಬಹುದು. ಅಲ್ಲದೆ, ಅಂತಿಮ ಮತದಾರರ ಪಟ್ಟಿಯನ್ನು ಫೆಬ್ರವರಿ 21 ರಂದು ಪ್ರಕಟಿಸಲಾಗುವುದು ಎಂದು ಮುಖ್ಯ ಚುನಾವಣಾ ಅಧಿಕಾರಿ ಕೇಳ್ಕರ್ ಹೇಳಿದ್ದಾರೆ.
ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಕರಡು ಮತದಾರರ ಪಟ್ಟಿ
ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಕರಡು ಮತದಾರರ ಪಟ್ಟಿಯನ್ನು ಇಂದು ಬಿಡುಗಡೆ ಮಾಡಲಾಗಿದ್ದು, ಚುನಾವಣಾ ಆಯೋಗದ ಮಾಹಿತಿಯ ಪ್ರಕಾರ, ಕರಡು ಪಟ್ಟಿಯಲ್ಲಿ 2,46,390 ಮತದಾರರಿದ್ದಾರೆ.
ಮತದಾರರ ಎಣಿಕೆ ಹಂತ ಮುಗಿದ ನಂತರ 64,014 ಮತದಾರರ ಹೆಸರುಗಳನ್ನು ತೆಗೆದುಹಾಕಲಾಗಿದೆ. ಈ ಪೈಕಿ 9,191 ಜನರನ್ನು ಮೃತರೆಂದು ಗುರುತಿಸಲಾಗಿದೆ. ಇನ್ನೂ 51,906 ಜನರು ತಮ್ಮ ನೋಂದಾಯಿತ ವಿಳಾಸಗಳಿಗೆ ಸ್ಥಳಾಂತರಗೊಂಡಿದ್ದಾರೆ. ಅಲ್ಲದೆ, 2,917 ಜನರು ಮತದಾರರ ಪಟ್ಟಿಯಲ್ಲಿ ಬಹು ಸ್ಥಳಗಳಲ್ಲಿ ದಾಖಲಾಗಿದ್ದಾರೆ.
ಪರಿಷ್ಕರಣೆ ಪ್ರಕ್ರಿಯೆಗೂ ಮುನ್ನ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಮತದಾರರ ಪಟ್ಟಿಯಲ್ಲಿ 3,10,404 ಮತದಾರರಿದ್ದರು,(ಏಜೆನ್ಸೀಸ್).