ನವದೆಹಲಿ: ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಯನ್ನು ಕೆಲ ರಾಜಕೀಯ ಪಕ್ಷಗಳು ಬಲವಾಗಿ ವಿರೋಧಿಸುತ್ತಿವೆ. ಎಸ್ಐಆರ್ ಈ ಹಿಂದೆಯೂ ನಡೆದಿದ್ದು, ಚುನಾವಣಾ ಆಯೋಗ ಕಾಲಕಾಲಕ್ಕೆ ನಡೆಸುತ್ತಲೇ ಬಂದಿರುವ ಸ್ವಾಭಾವಿಕ ಪ್ರಕ್ರಿಯೆ. ಆದರೆ, ಈ ಬಾರಿ ಈ ಪ್ರಕ್ರಿಯೆಯನ್ನೇ ಸಂಕೀರ್ಣ ಮತ್ತು ಕ್ಲಿಷ್ಟಗೊಳಿಸಲಾಗಿದ್ದು, ನೌಕರರಲ್ಲೂ ಅಸಮಾಧಾನ ಮೂಡಿಸಿದೆ. ಗಡುವಿನೊಳಗೆ ಪ್ರಕ್ರಿಯೆ ಮುಗಿಸುವ ಉದ್ದೇಶದಿಂದ ಅತಿಯಾದ ಒತ್ತಡ ಹೇರಲಾಗುತ್ತಿದೆ ಎಂದು ಆರೋಪಿಸಲಾಗಿದೆ. ದೇಶದಲ್ಲಿ ಇದುವರೆಗೂ ಹೃದಯಾಘಾತ ಮತ್ತು ಆತ್ಮಹತ್ಯೆ ಘಟನೆಗಳಿಂದ 7 ಮತಗಟ್ಟೆ ಅಧಿಕಾರಿಗಳು ಮೃತಪಟ್ಟಿದ್ದಾರೆ.
ದೇಶದ ಒಂಬತ್ತು ರಾಜ್ಯಗಳು ಮತ್ತು ಮೂರು ಕೇಂದ್ರಾಡಳಿತ ಪ್ರದೇಶಗಳಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ನಡೆಯುತ್ತಿದೆ. ಬೂತ್ ಮಟ್ಟದ ಅಧಿಕಾರಿಗಳು (ಬಿಎಲ್ಒ) ಪ್ರತಿ ಮನೆಗೂ ತೆರಳಿ ಅರ್ಜಿ (ನಮೂನೆ) ನೀಡಿ, ಅವನ್ನು ಭರ್ತಿ ಮಾಡಿಸಬೇಕು ಮತ್ತು ಭರ್ತಿ ಮಾಡಿದ ಅರ್ಜಿಗಳಲ್ಲಿನ ವಿವರಗಳನ್ನು ಆನ್ಲೈನ್ ಮೂಲಕ (ಡಿಜಿಟಲೈಜ್) ತುಂಬಬೇಕು. ಅಲ್ಲದೆ, ಈ ಪ್ರಕ್ರಿಯೆ ಹೇಗೆ ನಡೆಸಬೇಕು, ತಾಂತ್ರಿಕ ತೊಂದರೆಗಳು ಎದುರಾದರೆ ಬಗೆಹರಿಸುವುದು ಹೇಗೆ ಎಂಬ ಕುರಿತಂತೆ ಬಿಎಲ್ಒಗಳಿಗೆ ಸೂಕ್ತ ತರಬೇತಿ ನೀಡಲಾಗಿಲ್ಲ.
ಕೈಪಿಡಿ ನೀಡಲಾಗಿದ್ದರೂ, ಅದರಲ್ಲೂ ಹಲವು ಗೊಂದಲಗಳಿವೆ. ಆ್ಯಪ್ನಲ್ಲಿ ವಿವರ ಭರ್ತಿ ಮಾಡುವಾಗ ಆ್ಯಪ್ ಸರಿಯಾಗಿ ಕೆಲಸ ಮಾಡದೆ ಸಿಬ್ಬಂದಿ ಹೈರಾಣಾಗಿದ್ದಾರೆ. ಅಲ್ಲದೆ, ಎಲ್ಲ ಮತದಾರರನ್ನು ಎಸ್ಐಆರ್ ಪ್ರಕ್ರಿಯೆಗೆ ಒಳಪಡಿಸಬೇಕಿರುವುದರಿಂದ ಸಂಬಂಧಪಟ್ಟ ಸಿಬ್ಬಂದಿ ಒಂದೇ ದಿನ ನೂರಾರು ಮನೆಗೆ ಭೇಟಿ ನೀಡುವ ಒತ್ತಡವಿದೆ. ಇದು ಪ್ರಾಯೋಗಿಕವಾಗಿ ಸಾಧ್ಯವಾಗದ ಸಂಗತಿ. ಅಲ್ಲದೆ, ಎರಡು ಗಂಟೆಗಳಿಗೊಮ್ಮೆ ಹಿರಿಯ ಅಧಿಕಾರಿಗಳಿಗೆ ವರದಿ ಇಂದುಗೊಳಿಸಬೇಕು (ಅಪ್ಡೇಟ್) ಎಂಬ ನಿಯಮ ಬೇರೆ!
ಈ ಎಲ್ಲ ಕ್ರಮಗಳಿಂದ ಬೂತ್ ಮಟ್ಟದ ಅಧಿಕಾರಿಗಳ ಮೇಲೆ ಕೆಲಸದ ಒತ್ತಡ ಹೆಚ್ಚಿದೆ. ಬೆಳಗ್ಗೆ 9 ಗಂಟೆಯಿಂದ ತಡರಾತ್ರಿಯವರೆಗೂ ಕೆಲಸ ಮಾಡಬೇಕಾದ ಅನಿವಾರ್ಯತೆ ಇದೆ. ಇದು ಆರೋಗ್ಯದ ಸಮಸ್ಯೆಗಳನ್ನು ಸೃಷ್ಟಿಸುತ್ತಿದ್ದು, ಮಾನಸಿಕ ಒತ್ತಡಕ್ಕೆ ಕಾರಣವಾಗಿದೆ. ನವೆಂಬರ್ ತಿಂಗಳ ಆರಂಭದಿಂದ ಈವರೆಗೆ ವಿವಿಧ ರಾಜ್ಯಗಳಲ್ಲಿ ಅತ್ಮಹತ್ಯೆ ಮತ್ತು ಹೃದಯಾಘಾತದಿಂದ ಏಳು ಜನ ಮತಗಟ್ಟೆ ಅಧಿಕಾರಿಗಳು ಮೃತಪಟ್ಟಿದ್ದಾರೆ.
ಅಧಿಕಾರಿ ಹೃದಯಾಘಾತಕ್ಕೆ ಬಲಿ
ರಾಜಸ್ಥಾನದ ಸವಾಯಿ ಮಾಧೋಪುರ ಜಿಲ್ಲೆಯಲ್ಲಿ ಎಸ್ಐಆರ್ ಕಾರ್ಯಕ್ಕೆ ನಿಯೋಜನೆಗೊಂಡಿದ್ದ ಬೂತ್ ಮಟ್ಟದ ಅಧಿಕಾರಿ (ಬಿಎಲ್ಒ) ಹರಿಓಂ ಬೈರ್ವಾ (34) ಬುಧವಾರ ಬೆಳಗ್ಗೆ ಹೃದಯಾಘಾತದಿಂದ ಮೃತಪಟ್ಟರು. ಘಟನೆಗೆ ಎಸ್ಐಅರ್ ಕೆಲಸದ ಒತ್ತಡ ಕಾರಣ ಎಂದು ಕುಟುಂಬ ಸದಸ್ಯರು ಆರೋಪಿಸಿದ್ದಾರೆ. ತಹಸೀಲ್ದಾರ್ ಅವರಿಂದ ಫೋನ್ ಕರೆ ಬಂದ ಐದು ನಿಮಿಷಗಳ ಬಳಿಕ ಬೈರ್ವಾ ಕುಸಿದು ಬಿದ್ದರು. ಕೂಡಲೇ ಆಸ್ಪತ್ರೆಗೆ ಕೊಂಡೊಯ್ಯಲಾಯಿತು. ಅಲ್ಲಿ ಅವರು ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದರು. ‘ಎಸ್ಐಆರ್ ಕೆಲಸದ ಬಗ್ಗೆ ಅಧಿಕಾರಿಗಳು ಭಾರಿ ಒತ್ತಡ ಹೇರುತ್ತಿದ್ದಾರೆ.
ಇದರಿಂದಾಗಿ ಅವರು (ಹರಿಓಂ) ಕಳೆದ ಆರು ದಿನಗಳಿಂದ ತೀವ್ರ ಒತ್ತಡದಲ್ಲಿದ್ದರು. ನಿರಂತರ ಕೆಲಸದ ಹೊರೆಯಿಂದಾಗಿ ಅವರು ಮನೆಯಲ್ಲಿ ಹೆಚ್ಚು ಮಾತನಾಡುತ್ತಿರಲಿಲ್ಲ. ತಡರಾತ್ರಿಯವರೆಗೂ ಕೆಲಸ ಮಾಡುತ್ತಿದ್ದರು ಮತ್ತು ಬೆಳಗ್ಗೆ ಬೇಗ ಏಳುತ್ತಿದ್ದರು’ ಎಂದು ಬೈರ್ವಾ ಸಹೋದರ ಆಶಿಶ್ ಬೈರ್ವಾ ಹೇಳಿದ್ದಾರೆ.
ಶಿಕ್ಷಕ ಆತ್ಮಹತ್ಯೆ
ಗುಜರಾತ್ನ ಗಿರ್ ಸೋಮನಾಥ ಜಿಲ್ಲೆಯ ಕೋಡಿನಾರ್ ತಾಲೂಕಿನ ಛಾರಾ ಗ್ರಾಮದಲ್ಲಿ ಎಸ್ಐಆರ್ ಕಾರ್ಯಕ್ಕೆ ನಿಯೋಜನೆಗೊಂಡಿದ್ದ ಬಿಎಲ್ಒ, ಶಿಕ್ಷಕ ಅರವಿಂದ ವಾಢೇರ್ (40) ಕೆಲಸದ ಒತ್ತಡ ತಡೆಯಲಾಗದೆ ನ.21ರಂದು ಬೆಳಗ್ಗೆ ಆತ್ಮಹತ್ಯೆಗೆ ಶರಣಾಗಿದ್ದಾರೆ. ಘಟನೆಗೆ ಶಿಕ್ಷಕ ಸಂಘಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿವೆ. ಅಲ್ಲದೆ, ಎಸ್ಐಆರ್ ಅರ್ಜಿಗಳನ್ನು ಆನ್ಲೈನ್ ಮೂಲಕ ಭರ್ತಿ ಮಾಡುವ ಕೆಲಸವನ್ನು ಶಿಕ್ಷಕರ ಸಂಘ ಬಹಿಷ್ಕರಿಸಿದೆ. ಆತ್ಮಹತ್ಯೆಗೂ ಮುನ್ನ ಪತ್ನಿಗೆ ಭಾವುಕ ಸೂಸೈಡ್ ನೋಟ್ ಬರೆದಿರುವ ಅರವಿಂದ, ‘ನನ್ನಿಂದ ಈಗ ಎಸ್ಐಆರ್ ಕಾರ್ಯದ ಒತ್ತಡ ತಡೆಯಲಾಗುತ್ತಿಲ್ಲ. ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಆಯಾಸ ಮತ್ತು ಒತ್ತಡ ಅನುಭವಿಸುತ್ತಿದ್ದೇನೆ. ನೀನು ನಿನ್ನ ಮತ್ತು ಮಗನ ಬಗ್ಗೆ ಕಾಳಜಿ ವಹಿಸು. ನಿಮ್ಮಿಬ್ಬರನ್ನೂ ನಾನು ತುಂಬ ಪ್ರೀತಿಸುತ್ತೇನೆ. ಆದರೆ, ನನಗೀಗ ಸಾಕಾಗಿದೆ. ನನ್ನ ಬಳಿ ಬೇರೆ ಆಯ್ಕೆ ಇಲ್ಲ. ನನ್ನ ಬ್ಯಾಗಿನಲ್ಲಿ ಎಸ್ಐಆರ್ಗೆ ಸಂಬಂಧಿಸಿದ ಎಲ್ಲ ದಾಖಲೆಗಳಿವೆ. ಅವುಗಳನ್ನು ನನ್ನ ಶಾಲೆಗೆ ಕೊಟ್ಟುಬಿಡಿ. ಪ್ರೀತಿಯ ಹೆಂಡತಿ ಸಂಗೀತಾ ಮತ್ತು ಪ್ರೀತಿಯ ಮಗ ಕ್ರಿಷಯ್ ನನ್ನನ್ನು ದಯವಿಟ್ಟು ಕ್ಷಮಿಸಿ’ ಎಂದಿದ್ದಾರೆ.
ಒತ್ತಡಕ್ಕೆ ಕಾರಣಗಳು
- ಹಲವಾರು ಮತಗಟ್ಟೆ ಅಧಿಕಾರಿಗಳನ್ನು ಕರ್ತವ್ಯಕ್ಕೆ ಹೊಸ ಪ್ರದೇಶಕ್ಕೆ ನಿಯೋಜಿಸಲಾಗಿದೆ. ಆ ಪ್ರದೇಶದ ಭೌಗೋಳಿಕ ಪರಿಚಯ ಇಲ್ಲದಿರುವುದರಿಂದ ಮನೆ-ಮನೆ ಭೇಟಿ ನೀಡಿ, ಮಾಹಿತಿ ಸಂಗ್ರಹಿಸುವುದು ದುಸ್ತರವಾಗಿದೆ.
- ಕೆಲ ರಾಜ್ಯಗಳಲ್ಲಿ ಪ್ರತಿನಿತ್ಯ 200 ಮತದಾರರನ್ನು ಭೇಟಿ ಮಾಡಿ, ಅರ್ಜಿ ತುಂಬಿಸಿ, ಅವನ್ನು ಆಪ್ನಲ್ಲಿ ಭರ್ತಿ ಮಾಡುವ ಟಾರ್ಗೆಟ್ ನೀಡಲಾಗಿದೆ. ತಾಂತ್ರಿಕ ತೊಂದರೆಗಳಿಗೆ ಹಿರಿಯ ಅಧಿಕಾರಿಗಳು ಸ್ಪಂದಿಸುತ್ತಿಲ್ಲ.
- ಕೆಲ ಶಿಕ್ಷಕರಿಗೆ ಡಬಲ್ ಡ್ಯೂಟಿಯ ಶಿಕ್ಷೆ. ಶಾಲೆಯಲ್ಲಿ ಪಠ್ಯ ಪೂರ್ಣಗೊಳಿಸಬೇಕಾಗಿರುವುದರಿಂದ ಮುಖ್ಯೋ ಪಾಧ್ಯಾಯರು ರಿಲೀವ್ ಮಾಡುತ್ತಿಲ್ಲ. ಇತ್ತ ಎಸ್ಐಆರ್ ಕತ್ಯರ್ವಕ್ಕೆ ಗೈರುಹಾಜರಾಗುವಂತಿಲ್ಲ. ಹಾಗಾಗಿ, ತರಗತಿಯಲ್ಲಿ ಕೆಲ ಹೊತ್ತು ಪಾಠ ಮಾಡಿ, ಆ ಬಳಿಕ ಎಸ್ಐಆರ್ ಕೆಲಸದಲ್ಲಿ ತೊಡಗುತ್ತಿದ್ದಾರೆ.
- ಕುಟುಂಬ-ಮಕ್ಕಳು ಮತ್ತು ಶಾಲೆಯನ್ನು ನಿರ್ವಹಿಸಬೇಕಾದ ಶಿಕ್ಷಕಿಯರು ತೊಂದರೆಗೆ ಸಿಲುಕಿದ್ದಾರೆ.
ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಯು ಚುನಾವಣಾ ಆಯೋಗದ ಪ್ರಕ್ರಿಯೆ ಆಗಿದ್ದು, ಇದರಲ್ಲಿ 18 ವರ್ಷ ಮೇಲ್ಪಟ್ಟ ಹೊಸ ಮತದಾರರ ಹೆಸರನ್ನು ಸೇರ್ಪಡೆಗೊಳಿಸಲಾಗುತ್ತದೆ. ಮೃತರಾದವರ, ಶಾಶ್ವತವಾಗಿ ವಲಸೆ ಹೋದವರ ಹೆಸರುಗಳನ್ನು ತೆಗೆದು ಹಾಕಲಾಗುತ್ತದೆ. ಅಷ್ಟೇ ಅಲ್ಲ, ಮತದಾರರ ಪಟ್ಟಿಯಲ್ಲಿ ಹೆಸರು, ವಿಳಾಸದಲ್ಲಾದ ತಪ್ಪುಗಳನ್ನು ಕೂಡ ಸರಿಪಡಿಸಲಾಗುತ್ತದೆ. ಮತಗಟ್ಟೆ ಅಧಿಕಾರಿ (ಬಿಎಲ್ಒ) ಮನೆ-ಮನೆಗೆ ತೆರಳಿ ಅರ್ಜಿ ಭರ್ತಿ ಮಾಡಿಸುತ್ತಾರೆ. ಆ ಅರ್ಜಿಯನ್ನು ಪಡೆದುಕೊಂಡು, ಅದನ್ನು ಆನ್ಲೈನ್ನಲ್ಲಿ ಭರ್ತಿ ಮಾಡುತ್ತಾರೆ.
ಈ ಸಮೀಕ್ಷೆ ಬಹುತೇಕ ಎರಡು ದಶಕದ ಬಳಿಕ ನಡೆಯುತ್ತಿದ್ದು, ಸಾಕಷ್ಟು ಲೋಪಗಳನ್ನು ಸರಿಪಡಿಸಬೇಕಿದೆ. ಅರ್ಹ ಮತದಾರರನ್ನು ಪಟ್ಟಿಗೆ ಸೇರಿಸಬೆಕಿದೆ. ಆಂಧ್ರಪ್ರದೇಶದಲ್ಲಿ 2003-04ರಲ್ಲಿ 5.5 ಕೋಟಿ ಮತದಾರರಿದ್ದರು. ಈಗ ಈ ಸಂಖ್ಯೆ 6.6 ಕೋಟಿಗೆ ತಲುಪಿದೆ. ಉತ್ತರಪ್ರದೇಶದಲ್ಲಿ 2003ರಲ್ಲಿ 11.5 ಕೋಟಿ ಮತದಾರರಿದ್ದರು. ಪ್ರಸ್ತುತ ಅದು 15.9 ಕೋಟಿಗೆ ಏರಿಕೆ ಕಂಡಿದೆ. ರಾಜಧಾನಿ ದೆಹಲಿಯಲ್ಲಿ 2008ರಲ್ಲಿ 1.1 ಕೋಟಿ ಇದ್ದ ಮತದಾರರ ಸಂಖ್ಯೆ ಪ್ರಸ್ತುತ 1.5 ಕೋಟಿಯಷ್ಟಾಗಿದೆ.
ಆಯೋಗದ ಮಾಹಿತಿ
ದೇಶದ 9 ರಾಜ್ಯಗಳು ಮತ್ತು ಮೂರು ಕೇಂದ್ರಾಡಳಿತ ಪ್ರದೇಶಗಳ 51 ಕೋಟಿ ಮತದಾರರ ಪೈಕಿ 50.25 ಕೋಟಿಗಿಂತಲೂ ಅಧಿಕ ಮತದಾರರಿಗೆ ಎಸ್ಐಆರ್ ಅರ್ಜಿ ವಿತರಿಸಲಾಗಿದೆ. ಭರ್ತಿ ಮಾಡಿದ ಅರ್ಜಿಗಳನ್ನು ವಾಪಸ್ ಪಡೆದು, ಡಿಜಿಟಲೀಕರಣ ಮಾಡುವ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದು ಚುನಾವಣಾ ಆಯೋಗ ಮಾಹಿತಿ ನೀಡಿದೆ.
ರಾಜ್ಯ ಅರ್ಜಿ ವಿತರಣೆ ಡಿಜಟಲೀಕರಣ
- ರಾಜಸ್ಥಾನ 98.98% 33.84%
- ತಮಿಳುನಾಡು 94.74% 13.02%
- ಉತ್ತರಪ್ರದೇಶ 99.29% 2.19%
- ಪಶ್ಚಿಮ ಬಂಗಾಳ 99.64% 13.18%
- ಛತ್ತೀಸ್ಗಢ 98.18% 10.07%
- ಗುಜರಾತ್ 99.51% 15.24%
- ಕೇರಳ 96.15% 1.04%
- ಮಧ್ಯಪ್ರದೇಶ 99.69% 15.18%
ಆಯೋಗಕ್ಕೆ ಸುಪ್ರೀಂ ಕೋರ್ಟ್ ನೋಟಿಸ್
ಕೇರಳ, ಉತ್ತರಪ್ರದೇಶ ಹಾಗೂ ಇತರ ರಾಜ್ಯಗಳಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ನಡೆಸುವ ಚುನಾವಣಾ ಆಯೋಗದ ನಿರ್ಧಾರವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಗಳ ವಿಚಾರಣೆಗೆ ಸುಪ್ರೀಂ ಕೋರ್ಟ್ ಶುಕ್ರವಾರ ಸಮ್ಮತಿಸಿದೆ. ವಿವಿಧ ರಾಜ್ಯಗಳಲ್ಲಿ ಎಸ್ಐಆರ್ ಪ್ರಕ್ರಿಯೆಯನ್ನು ಪ್ರಶ್ನಿಸಿ ವಿವಿಧ ರಾಜಕೀಯ ನಾಯಕರು ಸಲ್ಲಿಸಿದ್ದ ಹೊಸ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಸೂರ್ಯಕಾಂತ್, ಎಸ್ವಿಎನ್ ಭಟ್ಟಿ ಹಾಗೂ ಜೋಯ್ ಮಲ್ಯ ಬಾಗ್ಚಿ, ಅವರಿದ್ದ ಪೀಠ ಚುನಾವಣಾ ಆಯೋಗಕ್ಕೆ ನೋಟಿಸ್ ಜಾರಿ ಮಾಡಿದೆ. ಕೇರಳದಲ್ಲಿ ಎಸ್ಐಆರ್ ಪ್ರಕ್ರಿಯೆ ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿದಾರರ ಪರ ಹಾಜರಿದ್ದ ಹಿರಿಯ ವಕೀಲ ಕಪಿಲ್ ಸಿಬಲ್, ಕೇರಳದಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆಗಳು ಕೂಡ ನಿಗದಿಯಾಗಿವೆ.
ಹೀಗಾಗಿ ಈ ಅರ್ಜಿಯನ್ನು ತುರ್ತಾಗಿ ಪರಿಗಣಿಸಬೇಕು ಎಂದು ಪೀಠಕ್ಕೆ ವಿನಂತಿಸಿದರು. ಕೇರಳದಲ್ಲಿ ಎಸ್ಐಆರ್ ನಡೆಸುವುದನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಯ ವಿಚಾರಣೆಯನ್ನು ನವೆಂಬರ್ 26ರಂದು ನಡೆಸುವಾಗಿ ಹೇಳಿದ ಕೋರ್ಟ್, ಉಳಿದ ರಾಜ್ಯಗಳ ಅರ್ಜಿಗಳ ವಿಚಾರಣೆಯನ್ನು ಡಿಸೆಂಬರ್ ಮೊದಲ ಅಥವಾ ಎರಡನೇ ವಾರದಲ್ಲಿ ಪಟ್ಟಿ ಮಾಡುವುದಾಗಿ ಹೇಳಿತು. ದೇಶದಾದ್ಯಂತ ಎಸ್ಐಆರ್ ನಡೆಸುವ ಚುನಾವಣಾ ಆಯೋಗದ ನಿರ್ಧಾರ ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳ ವಿಚಾರಣೆ ಈಗಾಗಲೇ ಸುಪ್ರೀಂ ಕೋರ್ಟ್ನಲ್ಲಿ ನಡೆಯುತ್ತಿದೆ.
ಕೇರಳ ಬಿಎಲ್ಒ ಆತ್ಮಹತ್ಯೆ
ಕೇರಳದಲ್ಲಿ ಎಸ್ಐಆರ್ ಕಾರ್ಯಕ್ಕೆ ನಿಯೋಜನೆಗೊಂಡಿದ್ದ ಬೂತ್ ಮಟ್ಟದ ಅಧಿಕಾರಿ (ಬಿಎಲ್ಒ) ಅನೀಶ್ ಜಾರ್ಜ್ನ.16ರಂದು ನೇಣು ಬೀಗಿದುಕೊಂಡು ಆತ್ಮಹತ್ಯೆಗೆ ಶರಣಾದರು. ಪಯ್ಯಣ್ಣೂರು ಶಾಲೆಯ ಗುಮಾಸ್ತರಾಗಿದ್ದ ಅನೀಶ್ ಕುಟುಂಬದ ಸದಸ್ಯರು ಚರ್ಚ್ಗೆ ಹೋಗಿದ್ದಾಗ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರಿಗೆ ತಂದೆ, ತಾಯಿ, ಪತ್ನಿ ಮತ್ತು ಮೂವರು ಮಕ್ಕಳಿದ್ದಾರೆ. ನ.16ರಂದು ಅವರು ಬೆಳಗಿನ ಜಾವ 2 ಗಂಟೆಯವರೆಗೆ ಕೆಲಸ ನಿರ್ವಹಿಸಿದ್ದರು. ಎಸ್ಐಆರ್ ಅರ್ಜಿಗಳನ್ನು ಭರ್ತಿ ಮಾಡುವ ಮತ್ತು ತನಗೆ ನೀಡಿದ ಪ್ರದೇಶದ ಪ್ರತಿಯೊಬ್ಬರಿಗೂ ವಿತರಿಸುವ ಒತ್ತಡದಲ್ಲಿ ಅವರು ಸಿಲುಕಿದ್ದರು ಎಂದು ಕುಟುಂಬದ ಸದಸ್ಯರು ಹೇಳಿದ್ದಾರೆ. ತನಗೆ ಆಗುತ್ತಿರುವ ಕೆಲಸದ ಅತಿಯಾದ ಒತ್ತಡದ ಬಗ್ಗೆ ಅನೀಶ್ ಜಿಲ್ಲಾಧಿಕಾರಿಗಳಿಗೆ ದೂರು ಸಲ್ಲಿಸಿದ್ದರೂ, ಯಾವುದೇ ಕ್ರಮ ಕೈಗೊಳ್ಳಲಿಲ್ಲ.
50 ವರ್ಷದ ಶಿಕ್ಷಕ ಬಲಿ
ಗುಜರಾತಿನ ಖೇಡಾ ಜಿಲ್ಲೆಯ ಕಪಡವಂಜ್ ತಾಲೂಕಿನ ನವಾಪುರಾ ಗ್ರಾಮದ ಶಿಕ್ಷಕ, ಬಿಎಲ್ಒ ರಮೇಶಭಾಯಿ ಪರ್ವರ್ (50) ತೀವ್ರ ಒತ್ತಡದಿಂದ ಬಳಲಿ ನ.18ರಂದು ರಾತ್ರಿ ಹೃದಯಾಘಾತಕ್ಕೆ ಬಲಿಯಾದರು. 25 ವರ್ಷಗಳಿಂದ ಅವರು ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದರು. ತಾಯಿ, ಪತ್ನಿ ಮತ್ತು ಇಬ್ಬರು ಹೆಣ್ಣುಮಕ್ಕಳನ್ನು ಅವರು ಅಗಲಿದ್ದಾರೆ. ‘ಎಸ್ಐಆರ್ ಕಾರ್ಯಕ್ಕಾಗಿ ಅವರು ಪ್ರತಿನಿತ್ಯ 100 ಕಿ.ಮೀ. ಸಂಚರಿಸಬೇಕಿತ್ತು. ಇದು ಅವರಲ್ಲಿ ತೀವ್ರ ಬಳಲಿಕೆ, ಆಯಾಸ ಉಂಟು ಮಾಡಿತ್ತು. ಅಲ್ಲದೆ, ತಡರಾತ್ರಿ ಮನೆಗೆ ಮರಳಿದ ಬಳಿಕ ಆ ಅರ್ಜಿಗಳನ್ನು ಆನ್ಲೈನ್ನಲ್ಲಿ ಭರ್ತಿ ಮಾಡಬೇಕಿತ್ತು’ ಎಂದು ಕುಟುಂಬದ ಸದಸ್ಯರು ವಿವರಿಸಿದ್ದಾರೆ.
ಇತರ ಪ್ರಕರಣಗಳು
- ಪಶ್ಚಿಮ ಬಂಗಾಳದ ಪೂರ್ವ ವರ್ಧಮಾನ್ ಜಿಲ್ಲೆಯಲ್ಲಿ ನ.9ರಂದು ಬಿಎಲ್ಒ ಬ್ರೖೆನ್ ಸ್ಟ್ರೋಕ್ನಿಂದ ಪ್ರಾಣ ಕಳೆದುಕೊಂಡರು.
- ಪಶ್ಚಿಮ ಬಂಗಾಳದ ಜಲಪಾಯಿಗುರಿಯಲ್ಲಿ ಬಿಎಲ್ಒ ಒಬ್ಬರು ಆತ್ಮಹತ್ಯೆಗೆ ಶರಣಾದರು.
- ರಾಜಸ್ಥಾನದ ಜೈಪುರದ ಸರ್ಕಾರಿ ಶಾಲೆಯ ಶಿಕ್ಷಕ, ಬಿಎಲ್ಒ ನ.16ರಂದು ಆತ್ಮಹತ್ಯೆಗೆ ಶರಣಾಗಿ ಪ್ರಾಣ ತ್ಯಜಿಸಿದರು.