Rahul Gandhi | ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ (ಸಂಗ್ರಹ ಚಿತ್ರ) 
ದೇಶ

ಎಸ್​​ಐಆರ್​ ದಬ್ಬಾಳಿಕೆ ತಂತ್ರ...ಅಧಿಕಾರದಲ್ಲಿರುವವರನ್ನು ರಕ್ಷಿಸುವ ತ್ಯಾಗ ಎಂದ ರಾಹುಲ್​ ಗಾಂಧಿ | Rahul Gandhi

ದೆಹಲಿ: ಮತದಾರರ ಪಟ್ಟಿಯ ಪರಿಷ್ಕರಣೆಯ ಕೆಲಸದ ಒತ್ತಡದಿಂದಾಗಿ ಕೆಲವು ಬೂತ್ ಮಟ್ಟದ ಅಧಿಕಾರಿಗಳು ಸಾವಿಗೆ ಶರಣಾಗಿರುವ ಆರೋಪದ ಕುರಿತು ಪ್ರತಿಕ್ರಿಯೆ ನೀಡಿರುವ ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ, ಇದು ದಬ್ಬಾಳಿಕೆ ಮತ್ತು ಕಿರುಕುಳ ನೀಡುವ ಉದ್ದೇಶಪೂರ್ವಕ ತಂತ್ರ ಎಂದು ಕರೆದಿದ್ದಾರೆ.
ತಮ್ಮ ಎಕ್ಸ್​ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ರಾಹುಲ್​ ಗಾಂಧಿ, ಎಸ್​ಐಆರ್​ ದೇಶದಲ್ಲಿ ಅವ್ಯವಸ್ಥೆಯನ್ನು ಉಂಟುಮಾಡುತ್ತಿದ್ದು, ಇದು ವೈಫಲ್ಯವಲ್ಲ, ಪಿತೂರಿ. ಅಧಿಕಾರದಲ್ಲಿರುವವರನ್ನು ರಕ್ಷಿಸಲು ಪ್ರಜಾಪ್ರಭುತ್ವದ ತ್ಯಾಗ, ಇದು ನಿಜವಾದ ಮತದಾರರನ್ನು ಹೈರಾಣಾಗಿಸುವ ಗುರಿಯನ್ನು ಹೊಂದಿದೆ ಎಂದು ಆರೋಪಿಸಿದರು.
ಎಸ್​ಐಆರ್​ ಫಲಿತಾಂಶ..? ಮೂರು ವಾರಗಳಲ್ಲಿ ಹದಿನಾರು ಬಿಎಲ್‌ಒಗಳು ಪ್ರಾಣ ಕಳೆದುಕೊಂಡಿದ್ದಾರೆ. ಹೃದಯಾಘಾತ, ಒತ್ತಡ, ಆತ್ಮಹತ್ಯೆ. ಎಸ್‌ಐಆರ್ ಎನ್ನುವುದು ಸುಧಾರಣೆಯಲ್ಲ, ಅದು ಜನರ ಮೇಲೆ ಹೇರಿದ ದಬ್ಬಾಳಿಕೆಯಾಗಿದೆ. ದೇಶವು ಜಗತ್ತಿಗೆ ಅತ್ಯಾಧುನಿಕ ಸಾಫ್ಟ್‌ವೇರ್ ಅನ್ನು ಅಭಿವೃದ್ಧಿಪಡಿಸಿದ್ದರೂ, ಕೇಂದ್ರ ಚುನಾವಣಾ ಆಯೋಗ ಕಾಗದದ ಕಾಯಿಗಳ ಕಾಡನ್ನು ಸೃಷ್ಟಿಸಿದೆ ಎಂದು ಹೇಳಿದರು.
ಒಂದು ತಿಂಗಳಲ್ಲಿ ಕೆಲಸವನ್ನು ತ್ವರಿತಗೊಳಿಸುವ ಬದಲು ಪಾರದರ್ಶಕತೆ ಮತ್ತು ಹೊಣೆಗಾರಿಕೆಯತ್ತ ಗಮನಹರಿಸಲು ಚುನಾವಣಾ ಆಯೋಗ ತನ್ನ ಸಮಯವನ್ನು ತೆಗೆದುಕೊಳ್ಳುತ್ತಿತ್ತು, ಪಟ್ಟಿ ಪರಿಷ್ಕರಣೆ ಎನ್ನುವುದು ಉದ್ದೇಶಪೂರ್ವಕ ತಂತ್ರವಾಗಿದ್ದು, ಇದರ ಅಡಿಯಲ್ಲಿ ನಾಗರಿಕರಿಗೆ ಕಿರುಕುಳ ಕೊಡಲಾಗುತ್ತಿದೆ, ಅನಗತ್ಯ ಒತ್ತಡದಿಂದಾಗಿ ಬೂತ್​ ಮಟ್ಟದ ಅಧಿಕಾರಿಗಳ ಸಾವುಗಳನ್ನು ಮೇಲಾಧಾರ ಹಾನಿ ಎಂದು ನಿರ್ಲಕ್ಷಿಸಲಾಗುತ್ತಿದೆ ಎಂದು ಆರೋಪಿಸಿದರು.
ಎಸ್‌ಐಆರ್‌ನ ಒತ್ತಡದಿಂದಾಗಿ ಅನೇಕ ಬೂತ್​ ಮಟ್ಟದ ಅಧಿಕಾರಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ವರದಿಗಳು ಹೊರಬಿದ್ದ ಬಳಿಕ, ರಾಹುಲ್ ಗಾಂಧಿ ಕಡೆಯಿಂದ ಈ ಹೇಳಿಕೆಗಳು ಹೊರಬಿದ್ದಿದ್ದು, ಶನಿವಾರ, ಪಶ್ಚಿಮ ಬಂಗಾಳದ ನಾಡಿಯಾ ಜಿಲ್ಲೆಯ ನಿವಾಸದಲ್ಲಿ ಮಹಿಳಾ ಬಿಎಲ್‌ಒ ಒಬ್ಬರು ಶವವಾಗಿ ಪತ್ತೆಯಾಗಿದ್ದಾರೆ. ಎಸ್‌ಐಆರ್ ಕೆಲಸಕ್ಕೆ ಸಂಬಂಧಿಸಿದ ಒತ್ತಡದಿಂದಾಗಿ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನುವುದು ಅವರ ಕುಟುಂಬಸ್ಥರ ಆರೋಪ. ಇದಕ್ಕೂ ಮುನ್ನ ಮಧ್ಯಪ್ರದೇಶದ ರೈಸೆನ್ ಮತ್ತು ದಾಮೋಹ್ ಜಿಲ್ಲೆಗಳಲ್ಲಿ ಇಬ್ಬರು ಬಿಎಲ್‌ಒಗಳು ಅನಾರೋಗ್ಯದಿಂದ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
ವಿರೋಧ ಪಕ್ಷಗಳು ಈ ಅವಕಾಶವನ್ನು ಬಳಸಿಕೊಂಡಿದ್ದು, ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆಯನ್ನು ಪ್ರಶ್ನಿಸಿ ಸರ್ಕಾರದ ಮೇಲೆ ವಾಗ್ದಾಳಿ ನಡೆಸುತ್ತಿವೆ. ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ತಕ್ಷಣವೇ ಈ ಪ್ರಕ್ರಿಯೆಯನ್ನು ನಿಲ್ಲಿಸುವಂತೆ ಚುನಾವಣಾ ಆಯೋಗವನ್ನು ಒತ್ತಾಯಿಸಿದ್ದಾರೆ. ಇತ್ತ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕೂಡ ಇದೇ ರೀತಿಯ ಮನವಿಯನ್ನು ಮಾಡಿಕೊಂಡಿದ್ದು, SIR ಅಭಿಯಾನವನ್ನು ಬಲವಂತವಾಗಿ ಜಾರಿಗೊಳಿಸುವುದು ನೋಟು ರದ್ದತಿ ಮತ್ತು ಕರೋನಾ ಸಮಯದ ಲಾಕ್‌ಡೌನ್ ನೆನಪಿಸುತ್ತದೆ ಎಂದಿದ್ದಾರೆ(ಏಜೆನ್ಸೀಸ್​).