ಸಿಎಂ ವಿಜಯ್ 
ದೇಶ

ತಮಿಳುನಾಡಿನ ಸರ್ಕಾರಿ ಕಾರ್ಯಕ್ರಮಗಳಲ್ಲಿ ಮೊದಲು ನಾಡಗೀತೆ ತಮಿಳು ತಾಯಿ ವಾಳ್ತು ಕಡ್ಡಾಯ; ನಿರ್ಣಯ ಮಂಡಿಸಿದ ಸಿಎಂ ವಿಜಯ್ | Tamil Thai Vazhthu

ಚೆನ್ನೈ: ತಮಿಳುನಾಡಿನಲ್ಲಿ ಅಧಿಕೃತ ಸರ್ಕಾರಿ ಕಾರ್ಯಕ್ರಮಗಳಲ್ಲಿ ಮೊದಲು ನಾಡಗೀತೆ ತಮಿಳು ತಾಯಿ ವಾಳ್ತು(Tamil Thai Vazhthu) ಹಾಡುವುದನ್ನು ಕಡ್ಡಾಯಗೊಳಿಸುವ ನಿರ್ಣಯವನ್ನು ಸಿಎಂ ವಿಜಯ್ ಸೋಮವಾರ(ಆ. 10) ವಿಧಾನಸಭೆಯಲ್ಲಿ ಮಂಡಿಸಿದ್ದು, ಎಲ್ಲಾ ಪಕ್ಷಗಳ ಸರ್ವಾನುಮತದ ಬೆಂಬಲದಿಂದ ಅಂಗೀಕರಿಸಲಾಗಿದೆ. 
ನಿರ್ಣಯವನ್ನು ಮಂಡಿಸಿದ ಸಿಎಂ ವಿಜಯ್, ತಮ್ಮ ತಮಿಳಗ ವೆಟ್ರಿ ಕಳಗಂ ಸರ್ಕಾರವು ತಮಿಳುನಾಡಿನ ಭಾಷಾ ಮತ್ತು ಸಾಂಸ್ಕೃತಿಕ ಹಕ್ಕುಗಳ ಮೇಲೆ ರಾಜಿ ಮಾಡಿಕೊಳ್ಳುವುದಿಲ್ಲ. ತಮಿಳು ನಮ್ಮ ಭಾವನೆ ಮತ್ತು ಗುರುತು. ರಾಜ್ಯವು ತನ್ನ ಹೆಮ್ಮೆಯನ್ನು ತ್ಯಾಗ ಮಾಡಿ ತನ್ನದೇ ಆದ ಭಾಷೆಯನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ತಮಿಳು ಕೇವಲ ಒಂದು ಭಾಷೆಯಲ್ಲ, ನಮ್ಮ ಜೀವನ ಮತ್ತು ಭಾವನೆಗಳೂ ಹೌದು. ಮಾತೃಭಾಷೆಯು ಒಬ್ಬರ ತಾಯಿಯಷ್ಟೇ ಶುದ್ಧವಾಗಿದೆ. ತಮಿಳು ತಾಯಿ ಹಾಡು ಹಾಡುವುದು ರಾಜಕೀಯ ವ್ಯವಸ್ಥೆ ಅಥವಾ ಭಾರತದ ಏಕತೆಗೆ ವಿರುದ್ಧವಲ್ಲ. ಇದು ದೇಶದ ವಿವಿಧತೆಯಲ್ಲಿ ಏಕತೆಯ ಉನ್ನತ ತತ್ವವನ್ನು ಪ್ರತಿಬಿಂಬಿಸುತ್ತದೆ. ತಮಿಳು ತಾಯಿ ಹಾಡು ಹಾಡುವುದನ್ನು ಮೊದಲು ರಾಜಕೀಯ ಚರ್ಚೆಯನ್ನಾಗಿ ಮಾಡುವ ಅಗತ್ಯವಿಲ್ಲ ಎಂದಿದ್ದಾರೆ.
ಸಿಎಂ ಮಂಡಿಸಿದ ನಿರ್ಣಯವನ್ನು ವಿರೋಧ ಪಕ್ಷಗಳಾದ ಡಿಎಂಕೆ ಮತ್ತು ಎಐಎಡಿಎಂಕೆ ಸೇರಿದಂತೆ ಹಲವಾರು ಶಾಸಕಾಂಗ ಪಕ್ಷಗಳು ಬೆಂಬಲಿಸಿದವು. ಸರ್ಕಾರಿ ಕಾರ್ಯಕ್ರಮಗಳಲ್ಲಿ ಹಾಡಬೇಕಾದ ಹಾಡುಗಳ ಅನುಕ್ರಮದಲ್ಲಿ ಮೊದಲು ರಾಜ್ಯ ಗೀತೆಯನ್ನು ಹಾಡಬೇಕು ಎಂಬ ಸರ್ಕಾರದ ನಿಲುವನ್ನು ಎಲ್ಲಾ ಪಕ್ಷಗಳು ಸರ್ವಾನುಮತದಿಂದ ಅನುಮೋದಿಸಿದವೆ.
ನಿರ್ಣಯವನ್ನು ಸರ್ವಾನುಮತದಿಂದ ಅಂಗೀಕರಿಸಲಾಗಿದೆ ಎಂದು ಘೋಷಿಸಿದ ಸ್ಪೀಕರ್ ಜೆಸಿಡಿ ಪ್ರಭಾಕರ್, ಇದರ ಅನುಷ್ಠಾನಕ್ಕೆ ಯಾರ ಅನುಮತಿಯೂ ಅಗತ್ಯವಿಲ್ಲ ಎಂದು ಸದನಕ್ಕೆ ತಿಳಿಸಿದರು. ಇದು ವಿಧಾನಸಭೆಯ ನಿರ್ಣಯವಾಗಿದ್ದು, ಮುಖ್ಯಮಂತ್ರಿಯವರ ಧ್ವನಿ ಇಡೀ ತಮಿಳು ಜನತೆಯನ್ನು ಪ್ರತಿನಿಧಿಸುತ್ತದೆ ಎಂದು ಹೇಳಿದರು. 

ಇನ್ನೂ ನಿರ್ಣಯದ ಪ್ರಕಾರ, ತಮಿಳುನಾಡಿನಲ್ಲಿ ಶಿಕ್ಷಣ ಸಂಸ್ಥೆಗಳು, ವಿಶ್ವವಿದ್ಯಾಲಯಗಳು, ಸರ್ಕಾರಿ ಕಚೇರಿಗಳು ಮತ್ತು ಸಾರ್ವಜನಿಕ ವಲಯದ ಸಂಸ್ಥೆಗಳಲ್ಲಿ ನಡೆಯುವ ಕಾರ್ಯಕ್ರಮಗಳ ಆರಂಭದಲ್ಲಿ ರಾಜ್ಯ ಗೀತೆಯನ್ನು ಹಾಡಬೇಕು (ಏಜೆನ್ಸೀಸ್).