ಉತ್ತರಾಖಂಡ: ತೆಹ್ರಿ ಜಿಲ್ಲೆಯಲ್ಲಿ ನಡೆದ ಪ್ರಸಿದ್ಧ 'ಕುಂಜಪುರಿ ಮೇಳ'ದಲ್ಲಿ ಖ್ಯಾತ ಪಂಜಾಬಿ ಗಾಯಕ ದಲೇರ್ ಮೆಹಂದಿ (Daler Mehndi) ಅವರ ಸಂಗೀತ ಕಾರ್ಯಕ್ರಮಕ್ಕೆ ಅರಣ್ಯ ಸಚಿವ ಸುಬೋಧ್ ಉನಿಯಾಲ್ ಅಡ್ಡಿಪಡಿಸಿದ ಘಟನೆ ಸದ್ಯ ಭಾರಿ ಚರ್ಚೆಗೆ ಗ್ರಾಸವಾಗಿದೆ.
ಭಾನುವಾರ ರಾತ್ರಿ ನವರಾತ್ರಿಯ ಅಂಗವಾಗಿ ನಡೆದ ದುರ್ಗಾ ಪೂಜೆ ಕಾರ್ಯಕ್ರಮದಲ್ಲಿ ದಲೇರ್ ಮೆಹಂದಿ ಭಜನೆ ಮತ್ತು ಹಾಡುಗಳನ್ನು ಹಾಡಲು ವೇದಿಕೆಯಲ್ಲಿದ್ದರು. ಈ ವೇಳೆ, ಕಾರ್ಯಕ್ರಮಕ್ಕೆ ಅತಿಥಿಯಾಗಿ ಆಗಮಿಸಿದ್ದ ಉತ್ತರಾಖಂಡ ಸಚಿವ ಹಾಗೂ ನರೇಂದ್ರನಗರ ಕ್ಷೇತ್ರದ ಶಾಸಕ ಸುಬೋಧ್ ಉನಿಯಾಲ್, ಮೆಹಂದಿ ಅವರ ನಡೆಯನ್ನು ಗಮನಿಸಿ ಸಿಡಿಮಿಡಿಗೊಂಡರು.
ಇದು ನವರಾತ್ರಿಯ ದುರ್ಗಾ ಮಾತೆಯ ಧಾರ್ಮಿಕ ಕಾರ್ಯಕ್ರಮ. ಇಂತಹ ಪವಿತ್ರ ಸಂದರ್ಭದಲ್ಲಿ ನೀವು ಮದ್ಯಪಾನ ಮಾಡಿರುವುದಲ್ಲದೇ, ಹಾಡು ಹಾಡಲು ಬೇರೆ ಬಂದಿದ್ದೀರಿ. ಇದು ಸರಿಯಲ್ಲ. ನಿಮಗೆ ಮೊದಲು ಸರಿಯಾಗಿ ನಿಲ್ಲಲು ಆಗುತ್ತಿಲ್ಲ. ಇನ್ನೂ ಹಾಡುಗಳನ್ನು ಹೇಗೆ ಹಾಡ್ತೀರಿ? ಎಂದು ಗಾಯಕನ ಪಕ್ಕದಲ್ಲೇ ನಿಂತು ಬಹಿರಂಗವಾಗಿ ಆಕ್ಷೇಪ ವ್ಯಕ್ತಪಡಿಸಿದರು.
ಮುಂದುವರಿದು ಮಾತನಾಡಿದ ಅವರು, "ನಿಮಗೆ ಒಳ್ಳೆಯ ಹೆಸರಿದೆ ಎಂದು ಗೌರವಿಸಿ, ನಾವು ಜನರಿಗೆ ಮನರಂಜನೆ ನೀಡಲು ಕರೆಸಿದ್ದು. ಆದರೆ, ನೀವು ನಮ್ಮನ್ನೇ ಮೂರ್ಖರನ್ನಾಗಿ ಮಾಡುತ್ತಿದ್ದೀರಿ. ಇದು ಅಕ್ಷರಶಃ ತಪ್ಪು ಎಂದು ಅಸಮಾಧಾನ ಹೊರಹಾಕಿದರು. ಇದಕ್ಕೆ ಬಹಿರಂಗವಾಗಿ ಕ್ಷಮೆಯಾಚಿಸಿದ ಗಾಯಕ, "ಸರ್, ಕೈ ಮುಗಿದು ಕೇಳಿಕೊಳ್ಳುತ್ತೇನೆ. ದಯವಿಟ್ಟು ವೇದಿಕೆಯಿಂದ ಕೆಳಗೆ ಹೋಗಿ" ಎಂದು ಮನವಿ ಮಾಡಿದ ದೃಶ್ಯಗಳು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇದು ಉತ್ತರಾಖಂಡ ರಾಜಕೀಯ ವಲಯದಲ್ಲಿ ಹೊಸ ಚರ್ಚೆಗಳಿಗೆ ಕಾರಣವಾಗಿದೆ,(ಏಜೆನ್ಸೀಸ್).