ಘಟನೆಯ ವಿಡಿಯೋದ ದೃಶ್ಯ 
ದೇಶ

ಪರಿತ್ಯಕ್ತ ಪತ್ನಿಯ ಮೇಲೆ ಭೀಕರ ಹಲ್ಲೆ ನಡೆಸಿ, ತಲೆ ಕೂದಲು ಕತ್ತರಿಸಿ ವಿಡಿಯೋ ರೆಕಾರ್ಡ್ ಮಾಡಿಕೊಂಡ ಪಾಪಿ ಪತಿ | husband assaults

ರಾಯ್ಪುರ: ಛತ್ತೀಸ್‌ಗಢದ ಕೊರಿಯಾ ಜಿಲ್ಲೆಯಯಲ್ಲಿ ಕೌಟುಂಬಿಕ ಕಲಹ ಮತ್ತು ಆರ್ಥಿಕ ಸಂಕಷ್ಟದಿಂದ ನೊಂದಿದ್ದ ಪತ್ನಿಯ ಮೇಲೆ ಆಕೆಯ ಪತಿಯೇ ಅಮಾನವೀಯವಾಗಿ ಹಲ್ಲೆ (husband assaults) ನಡೆಸಿ, ಸಾರ್ವಜನಿಕವಾಗಿ ಆಕೆಯ ಜುಟ್ಟನ್ನು ಕತ್ತರಿಸಿ ವಿಕೃತ ಆನಂದ ಪಟ್ಟಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ.
ಕೊರಿಯಾ ಜಿಲ್ಲೆಯ ಪಾಂಡೋಪಾರ ಗ್ರಾಮದಲ್ಲಿ ಘಟನೆ ನಡೆದಿದೆ. ಸಂತ್ರಸ್ತೆ ತಾರಾ ಬಾಯಿ(32) ಆರೋಪಿ ಪತಿ ಜಿತೇಂದ್ರ ಘಾಸಿಯಾ ಸುಮಾರು 15 ವರ್ಷಗಳ ಹಿಂದೆ ವಿವಾಹವಾಗಿದ್ದರು. ದಂಪತಿಗೆ ನಾಲ್ಕು ಜನ ಮಕ್ಕಳಿದ್ದಾರೆ.ದಂಪತಿಗಳ ಮಧ್ಯೆ ಇತ್ತೀಚಿನ ದಿನಗಳಲ್ಲಿ ಬಿರುಕು ಮೂಡಿದ್ದು, ಕಳೆದ ಒಂದು ವರ್ಷದಿಂದ ತಾರಾಬಾಯಿ ಪತಿಯಿಂದ ದೂರವಾಗಿ ಮಕ್ಕಳೊಂದಿಗೆ ಒಬ್ಬಂಟಿಯಾಗಿ ಜೀವನ ಮಾಡುತ್ತಿದ್ದಳು ಎನ್ನಲಾಗಿದೆ.
ತೀವ್ರ ಆರ್ಥಿಕ ಸಂಕಷ್ಟದಿಂದ ಜೀವನ ನಡೆಸಲು ಯಾವುದೇ ದಾರಿಯಿಲ್ಲದೆ, ಕೊನೆಗೆ ತನ್ನದೇ ಸಮುದಾಯದ ಪರಿಚಿತರೊಬ್ಬರ ಮನೆಯಲ್ಲಿ ತಾರಾಬಾಯಿ ಆಶ್ರಯ ಪಡೆದಿದ್ದರು. ಇದರಿಂದ ಕೆರಳಿದ ಪತಿ ಸ್ಥಳಕ್ಕೆ ಆಗಮಿಸಿ ಆಕೆಯನ್ನು ಮನೆಯ ಹೊರಗೆ ಕರೆದು ಭೀಕರವಾಗಿ ಹಲ್ಲೆ ಮಾಡಿ, ಆಕೆಯ ತಲೆ ಬೋಳಿಸಿದ್ದಾನೆ. ಅದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ದೌರ್ಜನ್ಯದ ಬಳಿಕ ತಾರಾ ಬಾಯಿ ಸ್ಥಳೀಯ ಪೊಲೀಸ್ ಠಾಣೆಗೆ ತೆರಳಿ ಪತಿಯ ವಿರುದ್ಧ ದೂರು ದಾಖಲಿಸಿದ್ದಾರೆ. ಘಟನೆಯ ಗಂಭೀರತೆಯನ್ನು ಅರಿತ ಕೊರಿಯಾ ಜಿಲ್ಲೆಯ ಸ್ಥಳೀಯ ಪೊಲೀಸರು ಆರೋಪಿ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಈ ಕುರಿತು ಮಾತನಾಡಿರುವ ಸ್ಥಳೀಯ ಪೊಲೀಸ್ ಅಧಿಕಾರಿಯೊಬ್ಬರು, ನಾವು ಸ್ಥಳದಲ್ಲಿದ್ದ ಪ್ರತ್ಯಕ್ಷದರ್ಶಿಗಳ ಹೇಳಿಕೆಗಳನ್ನು ದಾಖಲಿಸುತ್ತಿದ್ದೇವೆ ಮತ್ತು ಪ್ರಸ್ತುತ ಘಟನೆಯ ಲಭ್ಯವಿರುವ ವೀಡಿಯೊ ದೃಶ್ಯಾವಳಿಗಳನ್ನು ವಿಶ್ಲೇಷಿಸುತ್ತಿದ್ದೇವೆ. ಸಂಶೋಧನೆಗಳ ಆಧಾರದ ಮೇಲೆ ಆರೋಪಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ (ಏಜೆನ್ಸೀಸ್).