Simple Steps for A Greener tomorrow
ಪರಿಸರ ಸಂರಕ್ಷಣೆ ಎಂದಾಕ್ಷಣ ಅದೊಂದು ದೊಡ್ಡ ಸವಾಲು ಅಂತ ಭಾವಿಸಲಾಗುತ್ತದೆ. ಆದರೆ, ನಾವು ವಾಸಿಸುವ ಭೂಮಿಯನ್ನು ಕಾಪಾಡಿಕೊಳ್ಳಲು ಕೋಟಿಗಟ್ಟಲೇ ಹಣ ಅಥವಾ ಬೃಹತ್ ಯೋಜನೆಗಳೇ ಬೇಕಾಗಿಲ್ಲ; ನಮ್ಮ ದೈನಂದಿನ ಜೀವನಶೈಲಿಯಲ್ಲಿ ಮಾಡಿಕೊಳ್ಳುವ ಸಣ್ಣ ಸಣ್ಣ ಬದಲಾವಣೆಗಳೇ ಪರಿಸರಕ್ಕೆ ನಾವು ನೀಡಬಹುದಾದ ಅತಿ ದೊಡ್ಡ ಕೊಡುಗೆ. ಪ್ರಕೃತಿಯನ್ನು ಕಾಪಾಡುವುದು ಎಂದರೆ ನಮ್ಮ ಮುಂದಿನ ಪೀಳಿಗೆಯ ಭವಿಷ್ಯವನ್ನು ಕಾಪಾಡಿದಂತೆ. ಬನ್ನಿ, ಇಂದಿನಿಂದಲೇ ನಮ್ಮ ಮನೆಯಿಂದಲೇ ಬದಲಾವಣೆ ಆರಂಭಿಸೋಣ! ನಮ್ಮ ಮನೆ ಅಥವಾ ಕಾರ್ಯಕ್ಷೇತ್ರದಲ್ಲೇ, ಅತ್ಯಂತ ಸರಳವಾಗಿ ಅಳವಡಿಸಿಕೊಳ್ಳಬಹುದಾದ ಪರಿಸರಸ್ನೇಹಿ ಸೂತ್ರಗಳು ಇಲ್ಲಿವೆ.
ಡಿಜಿಟಲ್ ಕಸ ಡಿಲೀಟ್ ಮಾಡಿ!
ನಿಮ್ಮ ಮಿಂಚಂಚೆಯ (ಇ-ಮೇಲ್) ಇನ್ಬಾಕ್ಸ್ ನಲ್ಲಿರುವ ಅನಗತ್ಯ ಸ್ಪಾ್ಯಮ್ ಹಾಗೂ ಪ್ರಚಾರದ ಸಂದೇಶಗಳನ್ನು ನಿಯಮಿತವಾಗಿ ಡಿಲೀಟ್ ಮಾಡಿ. ಲಕ್ಷಾಂತರ ಬೇಡದ ಇ-ಮೇಲ್ಗಳನ್ನು ಸರ್ವರ್ಗಳಲ್ಲಿ ಸಂಗ್ರಹಿಸಿಡಲು ಜಾಗತಿಕವಾಗಿ ಬೃಹತ್ ಡೇಟಾ ಸೆಂಟರ್ಗಳು ಹಗಲಿರುಳು ಕಾರ್ಯನಿರ್ವಹಿಸಬೇಕಾಗುತ್ತದೆ. ಇದು ಭಾರಿ ಪ್ರಮಾಣದ ವಿದ್ಯುತ್ನ್ನು ಪೋಲು ಮಾಡುತ್ತದೆ. ಮಾತ್ರವಲ್ಲ, ಡೇಟಾ ಸೆಂಟರ್ಗಳ ನಿರ್ವಹಣೆ ವೆಚ್ಚದಾಯಕವೂ ಆಗಿದೆ.
ಇ-ರಸೀದಿ: ಬ್ಯಾಂಕ್ ಎಟಿಎಂ, ಸೂಪರ್ ಮಾರ್ಕೆಟ್ ಅಥವಾ ಪೆಟ್ರೋಲ್ ಬಂಕ್ಗಳಲ್ಲಿ ಪ್ರಿಂಟ್ ಮಾಡಿದ ಕಾಗದದ ರಸೀದಿಗಳನ್ನು ನಿರಾಕರಿಸಿ. ಮೊಬೈಲ್ ಫೋನ್ಗೆ ಬರುವ ಎಸ್ಎಂಎಸ್ ಅಥವಾ ಇ-ಮೇಲ್ ರಸೀದಿಗಳನ್ನು ಆಯ್ದುಕೊಳ್ಳಿ. ಈ ಸಣ್ಣ ಬದಲಾವಣೆಯು ಕಾಗದದ ಉತ್ಪಾದನೆಗಾಗಿ ಕತ್ತರಿಸುವ ಲಕ್ಷಾಂತರ ಮರಗಳನ್ನು ಉಳಿಸುತ್ತದೆ. ಅಲ್ಲದೆ, ಪ್ರಿಂಟ್ ಪ್ರಮಾಣ ತಗ್ಗಿಸಿದಷ್ಟು ಕಸದ ಪ್ರಮಾಣವೂ ಕಡಿಮೆಯಾಗುತ್ತದೆ.
ಗೃಹ ಬಳಕೆಯಲ್ಲಿ ವಿದ್ಯುತ್ ಉಳಿತಾಯದ ಮಂತ್ರ
ಟಿವಿ, ಕಂಪ್ಯೂಟರ್ ಅಥವಾ ಮೈಕ್ರೋವೇವ್ ಬಳಸಿದ ನಂತರ ಕೇವಲ ರಿಮೋಟ್ನಿಂದ ಆಫ್ ಮಾಡಬೇಡಿ. ಮುಖ್ಯ ಸ್ವಿಚ್ ಆಫ್ ಮಾಡದಿದ್ದರೆ ಅದು ‘ಸ್ಟಾ್ಯಂಡ್ಬೈ’ ಮೋಡ್ನಲ್ಲಿ ಸದ್ದಿಲ್ಲದೆ ವಿದ್ಯುತ್ ಹೀರುತ್ತಿರುತ್ತದೆ. ಸ್ವಿಚ್ ಆಫ್ ಮಾಡುವುದರಿಂದ ಮನೆಯ ವಿದ್ಯುತ್ ಬಿಲ್ ಕೂಡ ಕಡಿಮೆಯಾಗುತ್ತದೆ.
ಎಲ್ಇಡಿ ಬಲ್ಬ್ಗಳ ಕ್ರಾಂತಿ: ಮನೆಯಲ್ಲಿ ಇಂದಿಗೂ ಹಳೆಯ ಫಿಲಮೆಂಟ್ ಅಥವಾ ಸಿಎಫ್ಎಲ್ ಬಲ್ಬ್ಗಳಿದ್ದರೆ ಅವುಗಳನ್ನು ತಕ್ಷಣ ಬದಲಾಯಿಸಿ ಎಲ್ಇಡಿ ಬಲ್ಬ್ಗಳನ್ನು ಅಳವಡಿಸಿ. ಇವು ಶೇಕಡ 80ರಷ್ಟು ಕಡಿಮೆ ವಿದ್ಯುತ್ ಬಳಸುತ್ತವೆ ಮತ್ತು ದೀರ್ಘಕಾಲ ಬಾಳಿಕೆ ಬರುವುದರಿಂದ ಜೇಬಿಗೂ ಲಾಭ, ಪರಿಸರಕ್ಕೂ ಹಿತ ಎಂಬುದನ್ನು ಮರೆಯಡುುವಂತಿಲ್ಲ.
ನೈಸರ್ಗಿಕ ಡ್ರೖೆಯರ್ ಬಳಸಿ: ವಾಷಿಂಗ್ ಮಷಿನ್ನಲ್ಲಿ ಬಟ್ಟೆ ತೊಳೆದ ನಂತರ ಒಣಗಿಸಲು ಮಷಿನ್ನ ಡ್ರೖೆಯರ್ ಬಳಸುವ ಬದಲು, ಮನೆಯ ಗ್ಯಾಲರಿಯಲ್ಲಿ ಅಥವಾ ಟೆರೇಸ್ ಮೇಲೆ ಸೂರ್ಯನ ಬೆಳಕಿಗೆ ಹಾಕಿ. ಸೂರ್ಯನ ಶಾಖವು ಬಟ್ಟೆಗಳನ್ನು ನೈಸರ್ಗಿಕವಾಗಿ ಸೋಂಕುಮುಕ್ತ ಗೊಳಿಸುತ್ತದೆ ಮತ್ತು ವಿದ್ಯುತ್ ಉಳಿಸುತ್ತದೆ.
ಸೋಲಾರ್ ಮತ್ತು ನೈಸರ್ಗಿಕ ಬೆಳಕು: ಹಗಲಿನಲ್ಲಿ ಮನೆಯ ಕಿಟಕಿಗಳ ಪರದೆಗಳನ್ನು ಸರಿಸಿ ನೈಸರ್ಗಿಕ ಬೆಳಕು ಮತ್ತು ಗಾಳಿ ಬರುವಂತೆ ಮಾಡಿ. ಸಾಧ್ಯವಾದರೆ ಟೆರೇಸ್ ಮೇಲೆ ಸೋಲಾರ್ ವಾಟರ್ ಹೀಟರ್ ಅಳವಡಿಸಿಕೊಳ್ಳಿ. ವಿದ್ಯುತ್ ಮತ್ತು ಇಂಧನ ಉಳಿಸುವುದರಿಂದ ಥರ್ಮಲ್ ಪವರ್ ಪ್ಲಾಂಟ್ಗಳ ಮೇಲಿನ ಒತ್ತಡ ಕಡಿಮೆಯಾಗಿ, ವಾಯು ಮಾಲಿನ್ಯ ಮತ್ತು ಜಾಗತಿಕ ತಾಪಮಾನ ನಿಯಂತ್ರಣಕ್ಕೆ ಬರುತ್ತದೆ.
ಜೀವಕ್ಕೆ ಆಧಾರ ನೀರು
ನೀರು ನೈಸರ್ಗಿಕ ಸಂಪನ್ಮೂಲ. ಮನುಷ್ಯ ಎಷ್ಟೇ ಮುಂದುವರಿದರೂ ನೀರನ್ನು ಉತ್ಪಾದಿಸಲು ಸಾಧ್ಯವಿಲ್ಲ. ಹಾಗಾಗಿ, ನೀರಿನ ಹಿತಮಿತ ಬಳಕೆ ಅಗತ್ಯ. ಶವರ್ ಬಳಸಿ ಸ್ನಾನ ಮಾಡುವುದರಿಂದ ಪ್ರತಿ ನಿಮಿಷಕ್ಕೆ 15ರಿಂದ 20 ಲೀಟರ್ ನೀರು ಪೋಲಾಗುತ್ತದೆ. ಅದರ ಬದಲು ಒಂದು ಬಕೆಟ್ ನೀರು ಬಳಸಿದರೆ ಕೇವಲ 15 ಲೀಟರ್ನಲ್ಲೇ ಸ್ನಾನ ಮುಗಿಸಬಹುದು. ಇದರಿಂದ ದಿನಕ್ಕೆ ನೂರಾರು ಲೀಟರ್ ನೀರು ಉಳಿತಾಯವಾಗುತ್ತದೆ.
ಬ್ರಷ್ ಮಾಡುವಾಗ ನಲ್ಲಿ ಬಂದ್ ಮಾಡಿ: ಬೆಳಗ್ಗೆ ಹಲ್ಲುಜ್ಜುವಾಗ ಅಥವಾ ಮುಖ ತೊಳೆಯುವಾಗ ನಲ್ಲಿಯನ್ನು ಅನಗತ್ಯವಾಗಿ ತೆರೆದಿಡಬೇಡಿ. ಬ್ರಷ್ ಮಾಡುವ ಆ 2-3 ನಿಮಿಷಗಳ ಕಾಲ ನಲ್ಲಿ ಬಂದ್ ಮಾಡುವುದರಿಂದ ದಿನವೊಂದಕ್ಕೆ ಕನಿಷ್ಠ 10 ರಿಂದ 12 ಲೀಟರ್ ಶುದ್ಧ ನೀರು ಪೋಲಾಗುವುದನ್ನು ತಡೆಯಬಹುದು.
ಆರ್ಒ ನೀರು ವ್ಯರ್ಥ ಮಾಡಬೇಡಿ: ಮನೆಯ ವಾಟರ್ ಪ್ಯೂರಿಫೈಯರ್ನಿಂದ ಹೊರಹೋಗುವ ರಿಜೆಕ್ಟ್ ನೀರನ್ನು ಪೈಪ್ ಮೂಲಕ ಬಕೆಟ್ಗೆ ಹಿಡಿದಿಡಿ. ಈ ನೀರನ್ನು ಪಾತ್ರೆ ತೊಳೆಯಲು, ಮನೆ ಒರೆಸಲು ಅಥವಾ ಗಿಡಗಳಿಗೆ ಹಾಕಲು ಬಳಸಿ. ಇದರಿಂದ ಪ್ರತಿ ಲೀಟರ್ ಶುದ್ಧೀಕರಿಸಿದ ನೀರಿಗೆ ವ್ಯರ್ಥವಾಗುವ 3 ಲೀಟರ್ ನೀರು ಮರುಬಳಕೆಯಾಗುತ್ತದೆ.
ಪ್ರವಾಸ ಮತ್ತು ದೈಹಿಕ ಆರೋಗ್ಯ
ವಾರದಲ್ಲಿ ಕನಿಷ್ಠ ಒಂದು ದಿನವಾದರೂ ಸ್ವಂತ ವಾಹನ ಬಿಟ್ಟು ಮೆಟ್ರೋ ಅಥವಾ ಬಸ್ಸುಗಳಂತಹ ಸಾರ್ವಜನಿಕ ಸಾರಿಗೆ ಬಳಸುವುದು ಸೂಕ್ತ. ಹತ್ತಿರದ ಜಾಗಗಳಿಗೆ ನಡೆದು ಹೋಗಿ ಅಥವಾ ಸೈಕಲ್ ಬಳಸಿ. ಇದರಿಂದ ಇಂಧನ ಉಳಿತಾಯವಾಗುವುದಲ್ಲದೆ, ವಾಯು ಮಾಲಿನ್ಯವೂ ಗಣನೀಯವಾಗಿ ತಗ್ಗುತ್ತದೆ. ಆಫೀಸ್ ಅಥವಾ ಅಪಾರ್ಟ್ ಮೆಂಟ್ಗಳಲ್ಲಿ ಒಂದೆರಡು ಮಹಡಿಗಳನ್ನು ಹತ್ತಲು ಲಿಫ್ಟ್ ಬಳಸುವ ಬದಲು ಮೆಟ್ಟಿಲುಗಳನ್ನು ಬಳಸಿ. ಇದು ಲಿಫ್ಟ್ ಚಲಾಯಿಸಲು ಬಳಕೆಯಾಗುವ ಅಮೂಲ್ಯ ವಿದ್ಯುತ್ ಶಕ್ತಿಯನ್ನು ಉಳಿಸುವುದರ ಜೊತೆಗೆ ದೈಹಿಕ ಆರೋಗ್ಯ ಮತ್ತು ಹೃದಯದ ಸಾಮರ್ಥ್ಯ ವನ್ನೂ ವೃದ್ಧಿಸುತ್ತದೆ.
ಅಡುಗೆಮನೆಯ ಹಸಿರು ನಿರ್ವಹಣೆ
ಮನೆಯಲ್ಲಿ ಅಡುಗೆ ಮಾಡುವಾಗ ಪಾತ್ರೆಗಳ ಮೇಲೆ ಸೂಕ್ತವಾದ ಮುಚ್ಚಳವನ್ನು ಮುಚ್ಚಿ ಬೇಯಿಸಿ. ಹಬೆಯು ಹೊರಗೆ ಹೋಗದಿದ್ದರೆ ಆಹಾರ ಬೇಗನೆ ಬೇಯುತ್ತದೆ. ಈ ಸಣ್ಣ ಅಭ್ಯಾಸದಿಂದ ಪ್ರತಿ ತಿಂಗಳು ಬಳಸುವ ಅಡುಗೆ ಅನಿಲದಲ್ಲಿ ಕನಿಷ್ಠ ಶೇಕಡ 15ರಷ್ಟು ಉಳಿತಾಯ ಮಾಡಬಹುದು. ಅಲ್ಲದೆ, ಮನೆಯ ಅಡುಗೆಮನೆಯಲ್ಲಿ ಉಳಿಯುವ ತರಕಾರಿ ಸಿಪ್ಪೆ, ಹಣ್ಣಿನ ತ್ಯಾಜ್ಯ, ಚಹಾ ಪುಡಿಯನ್ನು ಎಸೆಯಬೇಡಿ. ಒಂದು ಸಣ್ಣ ಬಕೆಟ್ನಲ್ಲಿ ಇವುಗಳನ್ನು ಹಾಕಿ ಒಣ ಎಲೆಗಳೊಂದಿಗೆ ಮಿಶ್ರಣ ಮಾಡಿ ಇಟ್ಟರೆ, ಕೆಲವೇ ವಾರಗಳಲ್ಲಿ ಗಿಡಗಳಿಗೆ ಅತ್ಯುತ್ತಮವಾದ ಸಾವಯವ ಗೊಬ್ಬರ ಸಿದ್ಧವಾಗುತ್ತದೆ.
ಸ್ಥಳೀಯ ಆಹಾರಕ್ಕೆ ಆದ್ಯತೆ: ದೂರದ ದೇಶಗಳಿಂದ ಆಮದಾಗುವ ಮತ್ತು ಕೋಲ್ಡ್ ಸ್ಟೋರೇಜ್ಗಳಲ್ಲಿಟ್ಟ ಹಣ್ಣು, ತರಕಾರಿಗಳನ್ನು ಖರೀದಿಸಬೇಡಿ. ನಮ್ಮ ಸುತ್ತಮುತ್ತಲಿನ ರೈತರು ಬೆಳೆಯುವ ಸ್ಥಳೀಯ ಹಾಗೂ ಆಯಾ ಹಂಗಾಮಿನಲ್ಲಿ ಸಿಗುವ ತರಕಾರಿಗಳನ್ನು ಬಳಸಿ. ಇದರಿಂದ ಸಾರಿಗೆಯಿಂದಾಗುವ ಕಾರ್ಬನ್ ಮಾಲಿನ್ಯ ತಗ್ಗುತ್ತದೆ.
ಪ್ಲಾಸ್ಟಿಕ್ವುುಕ್ತ ಜೀವನ
ಬಟ್ಟೆ ಬ್ಯಾಗ್ ಸದಾ ಜತೆಗಿರಲಿ: ಖರೀದಿಗೆ ಹೋಗುವಾಗ ಮಾತ್ರವಲ್ಲ, ಆಫೀಸ್ ಅಥವಾ ಬೈಕ್ ಡಿಕ್ಕಿಯಲ್ಲಿ ಸದಾ ಒಂದೆರಡು ಬಟ್ಟೆಯ ಬ್ಯಾಗ್ಗಳನ್ನು ಇಟ್ಟುಕೊಳ್ಳಿ. ಇದರಿಂದ ಹಾದಿ ಬದಿಯಲ್ಲಿ ತರಕಾರಿ ಅಥವಾ ದಿನಸಿ ಖರೀದಿಸುವಾಗ ಅಂಗಡಿಯವರಿಂದ ಪ್ಲಾಸ್ಟಿಕ್ ಕವರ್ಗಳನ್ನು ಪಡೆಯುವ ಅನಿವಾರ್ಯತೆ ಸಂಪೂರ್ಣವಾಗಿ ತಪ್ಪುತ್ತದೆ.
ಸಿಂಗಲ್ ಯೂಸ್ ಪ್ಲಾಸ್ಟಿಕ್ ಬೇಡ: ಒಮ್ಮೆ ಬಳಸಿ ಎಸೆಯುವ ಪ್ಲಾಸ್ಟಿಕ್ ಚಮಚ, ಸ್ಟ್ರಾ, ಪ್ಲಾಸ್ಟಿಕ್ ಕಪ್ಗಳು, ಪ್ಲಾಸ್ಟಿಕ್ ಲೋಟಗಳು ಜೀವರಾಶಿಗೆ ಮಾರಕವಾದ ವಸ್ತುಗಳು. ಜ್ಯೂಸ್ ಕುಡಿಯುವಾಗ ಸ್ಟ್ರಾ ನಿರಾಕರಿಸಿ. ಹೊರಗೆ ಹೋಗುವಾಗ ಸ್ಟೀಲ್ ಚಮಚ ಹಾಗೂ ನೀರಿನ ಸ್ಟೀಲ್ ಬಾಟಲಿಯನ್ನು ಜೊತೆಯಲ್ಲೇ ಕೊಂಡೊಯ್ಯುವ ಅಭ್ಯಾಸ ಮಾಡಿಕೊಳ್ಳಿ. ಇದರಿಂದ ಪ್ಲಾಸ್ಟಿಕ್ ತ್ಯಾಜ್ಯದ ಪ್ರಮಾಣವನ್ನು ದೊಡ್ಡ ಪ್ರಮಾಣದಲ್ಲಿ ತಗ್ಗಿಸಬಹುದು.
ರಾಸಾಯನಿಕ ಕ್ಲೀನರ್ಗಳಿಗೆ ಪರ್ಯಾಯ: ಮನೆ ಒರೆಸಲು ಅಥವಾ ಶೌಚಗೃಹ ಸ್ವಚ್ಛಗೊಳಿಸಲು ಮಾರುಕಟ್ಟೆಯಲ್ಲಿ ಸಿಗುವ ತೀವ್ರ ರಾಸಾಯನಿಕಯುಕ್ತ ದ್ರಾವಣಗಳ ಬದಲಾಗಿ ವಿನೆಗರ್, ಅಡುಗೆ ಸೋಡಾ ಮತ್ತು ನಿಂಬೆ ರಸ ಬಳಸಿ. ಇವುಗಳನ್ನು ಬಳಸಿದ ನೀರು ಮಣ್ಣು ಸೇರಿದಾಗ ವಿಷಕಾರಿ ಯಾಗುವುದಿಲ್ಲ. ಮಣ್ಣಿನ ಆರೋಗ್ಯವನ್ನು ಕಾಪಾಡಲು ಇದು ಸುಲಭ ವಿಧಾನ.
ತ್ಯಾಜ್ಯಮುಕ್ತ ಉಡುಗೊರೆ
ಹಬ್ಬ ಅಥವಾ ಹುಟ್ಟುಹಬ್ಬದ ಉಡುಗೊರೆಗಳಿಗೆ ಹೊಳೆಯುವ ಪ್ಲಾಸ್ಟಿಕ್ ಕೋಟಿಂಗ್ ಇರುವ ರ್ಯಾಪಿಂಗ್ ಪೇಪರ್ ಬಳಸಬೇಡಿ. ಅದರ ಬದಲು ಹಳೆಯ ದಿನಪತ್ರಿಕೆ, ಮ್ಯಾಗಜೀನ್ ಪುಟಗಳು ಅಥವಾ ಬಣ್ಣದ ಬಟ್ಟೆಗಳನ್ನು ಬಳಸಿ ಆಕರ್ಷಕವಾಗಿ ಪ್ಯಾಕ್ ಮಾಡಿ. ಇದು ನೋಡಲು ವಿಭಿನ್ನ ಮತ್ತು ಪರಿಸರ ಸ್ನೇಹಿಯಾಗಿರುತ್ತದೆ. ಮನೆಯಲ್ಲಿ ಬಳಕೆಯಾಗದ ಹಳೆಯ ಬಟ್ಟೆಗಳು, ಪುಸ್ತಕಗಳು, ಆಟಿಕೆಗಳು ಅಥವಾ ಪೀಠೋಪಕರಣಗಳನ್ನು ಕಸಕ್ಕೆ ಎಸೆಯಬೇಡಿ. ಅವುಗಳನ್ನು ಅಗತ್ಯವಿರುವವರಿಗೆ ಅಥವಾ ಅನಾಥಾಶ್ರಮಗಳಿಗೆ ದಾನ ಮಾಡಿ. ಇದರಿಂದ ಕಸದ ಪ್ರಮಾಣ ಕಡಿಮೆಯಾಗುವುದಲ್ಲದೆ, ಮತ್ತೊಬ್ಬರ ಮುಖದಲ್ಲಿ ನಗು ಮೂಡಿಸಬಹುದು.
ಮೂಕ ಜೀವಿಗಳಿಗೆ ಆಸರೆಯಾಗಿ: ಮನೆಯ ಉದ್ಯಾನ, ಬಾಲ್ಕನಿ ಅಥವಾ ಟೆರೇಸ್ ಮೇಲೆ ಒಂದು ಸಣ್ಣ ಮಣ್ಣಿನ ಪಾತ್ರೆಯಲ್ಲಿ ಶುದ್ಧ ನೀರನ್ನು ಇಡಿ. ಕಾಂಕ್ರೀಟ್ ಕಾಡಿನಲ್ಲಿ ಕುಡಿಯುವ ನೀರಿಗಾಗಿ ಪರದಾಡುವ ಹಕ್ಕಿಗಳು ಮತ್ತು ಸಣ್ಣ ಪ್ರಾಣಿಗಳಿಗೆ ಸಹಾಯ ಮಾಡಿದ ಸಾರ್ಥಕತೆ ಲಭಿಸುತ್ತದೆ.
ವಿಭಿನ್ನವಾಗಿ ಆಚರಿಸಿ
ಹುಟ್ಟುಹಬ್ಬ, ಮದುವೆ ವಾರ್ಷಿಕೋತ್ಸವ ಅಥವಾ ಇತರ ಸಂತೋಷದ ಆಚರಣೆಗಳನ್ನು ಗಿಡ ನೆಡವುದರ ಮೂಲಕ ವಿಭಿನ್ನವಾಗಿ ಆಚರಿಸಬಹುದು. ನಿಮ್ಮ ಮನೆಯ ಬಾಲಕ ಅಥವಾ ಬಾಲಕಿ 10ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದರೆ, ಕನಿಷ್ಠ 10 ಗಿಡಗಳನ್ನು ನೆಟ್ಟು, ಅವುಗಳ ನಿರ್ವಹಣೆಯತ್ತ ಗಮನ ನೀಡಿ. ಇದರಿಂದ ವಾತಾವರಣದಲ್ಲಿ ಇಂಗಾಲದ ಪ್ರಮಾಣ ಕಡಿಮೆಯಾಗಿ ಆಮ್ಲಜನಕದ ಮಟ್ಟ ಹೆಚ್ಚುತ್ತದೆ, ವಾತಾವರಣ ಶುದ್ಧವಾಗುತ್ತದೆ. ರಿಟರ್ನ್ ಗಿಫ್ಟ್ ಅಥವಾ ಯಾವುದಾದರೂ ಉಡುಗೊರೆ ನೀಡುವಾಗಲೂ ಹೂವಿನ ಗಿಡ, ಹಣ್ಣಿನ ಗಿಡಗಳನ್ನು ನೀಡುವುದು ಸೂಕ್ತ. ಇದು ಉಡುಗೊರೆಯನ್ನು ಸ್ಮರಣೀಯ ವಾಗಿಸುವುದಲ್ಲದೆ, ಪರಿಸರಕ್ಕೆ ಸಣ್ಣ ಕೊಡುಗೆ ಕೊಟ್ಟ ಸಂತೃಪ್ತಿಯೂ ಲಭಿಸುತ್ತದೆ.