ಸಾಂದರ್ಭಿಕ ಚಿತ್ರ  
ದೇಶ

ಬೆಳ್ಳಿ ಬೆಲೆ ಒಮ್ಮೆಲೇ ಭಾರಿ ಕುಸಿತ

ನವದೆಹಲಿ: ಬಲವಾದ ಅಮೆರಿಕನ್ ಡಾಲರ್​ನಿಂದಾಗಿ ಜಾಗತಿಕ ಮಾರುಕಟ್ಟೆಯಲ್ಲಿ ಉಂಟಾದ ಭಾರಿ ಮಾರಾಟದ ಒತ್ತಡದ ನಡುವೆ ಹೂಡಿಕೆದಾರರು ಲಾಭಾಂಶ ನಗದೀಕರಣಕ್ಕೆ ಮುಂದಾದ ಪರಿಣಾಮ, ರಾಷ್ಟ್ರ ರಾಜಧಾನಿಯಲ್ಲಿ ಶನಿವಾರ ಬೆಳ್ಳಿ ಬೆಲೆ ಶೇ. 19ರಷ್ಟು ಕುಸಿತ ಕಂಡು ಪ್ರತಿ ಕೆಜಿಗೆ 3.12 ಲಕ್ಷ ರೂ.ಗೆ ತಲುಪಿದೆ. ಇದೇ ವೇಳೆ ಚಿನ್ನದ ಬೆಲೆಯೂ ಶೇ. 2ರಷ್ಟು ಇಳಿಕೆಯಾಗಿದ್ದು, 10 ಗ್ರಾಂಗೆ 1.65 ಲಕ್ಷ ರೂ.ಗೆ ಬಂದು ನಿಂತಿದೆ.

ಅಖಿಲ ಭಾರತ ಸರಾಫರ ಸಂಘ ನೀಡಿರುವ ಮಾಹಿತಿ ಪ್ರಕಾರ, ಬೆಳ್ಳಿ ಬೆಲೆ ಕೆಜಿಗೆ ಬರೋಬ್ಬರಿ 72,500 ರೂ. ಅಥವಾ ಶೇ. 18.85ರಷ್ಟು ಕುಸಿದು 3,12,000 ರೂ.ಗೆ (ಎಲ್ಲ ತೆರಿಗೆಗಳು ಸೇರಿ) ತಲುಪಿದೆ. ಇದು ಸತತ ಎರಡನೇ ದಿನದ ಭಾರಿ ಇಳಿಕೆಯಾಗಿದ್ದು, ಈ ವಾರ ಕಂಡಿದ್ದ ದಾಖಲೆಯ ಏರಿಕೆಯ ಬಹುಪಾಲು ಲಾಭವನ್ನು ಅಳಿಸಿಹಾಕಿದೆ. ಬೆಳ್ಳಿ ಕಳೆದ ಗುರುವಾರ ಕೆಜಿಗೆ 4,04,500 ರೂ. ದಾಖಲೆ ಮಟ್ಟ ಮುಟ್ಟಿತ್ತು. ನಂತರ ಶುಕ್ರವಾರದ ವಹಿವಾಟಿನಲ್ಲಿ ಶೇ. 5ರಷ್ಟು ಕುಸಿದಿತ್ತು.

ಸತತ 2 ದಿನ ಭಾರಿ ಕುಸಿತ ಕಂಡಿದ್ದರೂ ಜನವರಿಯಲ್ಲಿ ಒಟ್ಟಾರೆ ಬೆಳ್ಳಿ ಬೆಲೆ ಏರಿಕೆಯನ್ನೇ ದಾಖಲಿಸಿದೆ. 2025ರ ಡಿ. 31ರಂದು ಕೆಜಿಗೆ 2,39,000 ರೂ. ಇದ್ದ ಬೆಲೆ, ಜನವರಿಯಲ್ಲಿ ಸುಮಾರು 73,000 ರೂ. ಅಂದರೆ ಶೇ. 30.5ರಷ್ಟು ಏರಿಕೆ ಕಂಡಂತಾಗಿದೆ.

ಚಿನ್ನದ ಬೆಲೆಯೂ ಶನಿವಾರ ಹೊಳಪು ಕಳೆದುಕೊಂಡಿದ್ದು, 10 ಗ್ರಾಂಗೆ 3,500 ರೂ. ಅಥವಾ ಶೇ. 2.07ರಷ್ಟು ಇಳಿಕೆಯಾಗಿ 1,65,500 ರೂ.ಗೆ (ಎಲ್ಲ ತೆರಿಗೆ ಸೇರಿ) ತಲುಪಿದೆ. ಶೇ. 99.9 ಶುದ್ಧತೆಯ ಚಿನ್ನ ಗುರುವಾರ 1,83,000 ರೂ. ದಾಖಲೆ ಮಟ್ಟ ತಲುಪಿತ್ತು, ಆದರೆ ಶುಕ್ರವಾರದ ವಹಿವಾಟಿನಲ್ಲಿ ಶೇ. 7.6ರಷ್ಟು ಕುಸಿದು 1,69,000 ರೂ.ಗೆ ಇಳಿದಿತ್ತು. ಒಟ್ಟಾರೆ ಜನವರಿಯಲ್ಲಿ ಚಿನ್ನದ ಬೆಲೆ ಕಳೆದ ವರ್ಷದ ಅಂತ್ಯದ ದರವಾದ 1,37,700 ರೂ.ಗೆ

ಹೋಲಿಸಿದರೆ 27,800 ರೂ. ಅಥವಾ ಶೇ. 20.2ರಷ್ಟು ಹೆಚ್ಚಳ ದಾಖಲಿಸಿದೆ.

ಇಂದು ಕಾರ್ಯ ನಿರ್ವಹಿಸಲಿದೆ ಷೇರುಪೇಟೆ

ನವದೆಹಲಿ: ಕೇಂದ್ರ ಬಜೆಟ್ ಮಂಡನೆಯ ಹಿನ್ನೆಲೆಯಲ್ಲಿ ಭಾನುವಾರ ಭಾರತೀಯ ಷೇರು ಮಾರುಕಟ್ಟೆ ಕಾರ್ಯನಿರ್ವಹಿಸಲಿದೆ. ಸಾಮಾನ್ಯ ದಿನಗಳಂತೆ ಬೆಳಗ್ಗೆ 9.15ರಿಂದ ಅಪರಾಹ್ನ 3.30ರವರೆಗೆ ವಹಿವಾಟು ನಡೆಯಲಿದೆ.