Silver price 
ದೇಶ

ಬೆಳ್ಳಿ ಬೆಲೆ ಗಗನಮುಖಿ

ವಿಶ್ವಾಸ್​ ಎನ್​ ಜೋಳದಾಳು
ಕಳೆದ ವರ್ಷದಿಂದ ಏರುತ್ತಲೇ ಸಾಗಿರುವ ಬೆಳ್ಳಿ ದರ ಈಗ ಸಾರ್ವಕಾಲಿಕ ಎತ್ತರವನ್ನು ತಲುಪಿದೆ. ರಾಜಧಾನಿ ನವದೆಹಲಿಯಲ್ಲಿ ಜ.12ರಂದು ಒಂದೇ ದಿನ 15 ಸಾವಿರ ರೂಪಾಯಿ ಏರಿಕೆ ಕಂಡಿದೆ. ಕೆ.ಜಿ.ಗೆ 2.50 ಲಕ್ಷ ರೂ.ನಿಂದ 2.65 ಲಕ್ಷ ರೂ.ಗೆ ತಲುಪಿದೆ. ಬೆಂಗಳೂರಿನಲ್ಲಿ ಈ ದರ 2.70 ಲಕ್ಷ ರೂಪಾಯಿ. 2025ರ ಜನವರಿ 1ರಂದು ಕೆ.ಜಿ ಬೆಳ್ಳಿಯ ದರ 86,017 ರೂ. ಇತ್ತು. 2025ರ ಡಿಸೆಂಬರ್ 31ರಂದು 2,44,788 ರೂ.ಗೆ ತಲುಪುವ ಮೂಲಕ ಒಂದೇ ವರ್ಷದಲ್ಲಿ ಶೇಕಡ 170ರಷ್ಟು ಏರಿಕೆ ಕಂಡಿತು. 2026ರ ಆರಂಭದಲ್ಲೇ ಜಾಗತಿಕ ಮಟ್ಟದಲ್ಲಿ ಸ್ಥಿತ್ಯಂತರದ ಹಲವು ಬೆಳವಣಿಗೆಗಳು ಘಟಿಸಿರುವುದರಿಂದ, ಷೇರುಪೇಟೆಗಳು ಕುಸಿತ ಕಾಣುತ್ತಿವೆ. ಆದ್ದರಿಂದ ಜನರು ಸುರಕ್ಷಿತ ಹೂಡಿಕೆಗಾಗಿ ಚಿನ್ನ ಮತ್ತು ಬೆಳ್ಳಿ ಖರೀದಿಸುತ್ತಿದ್ದಾರೆ. ಇದಕ್ಕೂ ಮುನ್ನ 1980 ಮತ್ತು 2011ರಲ್ಲಿ ಬೆಳ್ಳಿ ದರ ದಾಖಲೆ ಮಟ್ಟದಲ್ಲಿ ಏರಿಕೆ ಕಂಡಿತ್ತು.

ಪ್ರಮುಖ ಕಾರಣಗಳು

ಜಾಗತಿಕ ಅಸ್ಥಿರತೆ

ಪ್ರಸ್ತುತ ಜಗತ್ತಿನ 30 ದೇಶಗಳಲ್ಲಿ ಸಮರ ಅಥವಾ ಸಂಘರ್ಷದಂಥ ಸ್ಥಿತಿ ಇದೆ. ರಷ್ಯಾ-ಯೂಕ್ರೇನ್, ಇಸ್ರೇಲ್-ಲೆಬನಾನ್ ಬಳಿಕ ಇಸ್ರೇಲ್-ಇರಾನ್ ನಡುವೆ ಸಂಘರ್ಷ ಸಂಭವಿಸಿದೆ. ಅಲ್ಲದೆ, ಅಮೆರಿಕ ಮತ್ತು ವೆನಿಜುವೆಲಾ ನಡುವೆ ಸಂಘರ್ಷ ಮುಂದುವರಿದಿದ್ದು, ವೆನಿಜುವೆಲಾ ಅಧ್ಯಕ್ಷರನ್ನೇ ಅಮೆರಿಕ ಬಂಧಿಸಿರುವುದು ಪರಿಸ್ಥಿತಿಯನ್ನು ಮತ್ತಷ್ಟು ಬಿಗಡಾಯಿಸಿದೆ. ಇರಾನ್​ನಲ್ಲಿ ಆಂತರಿಕ ಸಂಘರ್ಷ ಏರ್ಪಟ್ಟಿದ್ದು, ಖಮೇನಿ ಆಡಳಿತದ ವಿರುದ್ಧ ದೇಶದ 100ಕ್ಕೂ ಹೆಚ್ಚು ನಗರಗಳ 250 ಸ್ಥಳಗಳಲ್ಲಿ ಪ್ರತಿಭಟನೆ ನಡೆದಿದೆ. 500ಕ್ಕೂ ಹೆಚ್ಚು ಜನರು ಪ್ರತಿಭಟನೆಯಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ. ಮತ್ತೊಂದೆಡೆ, ಬಾಂಗ್ಲಾದೇಶದಲ್ಲಿ ಫೆಬ್ರವರಿಯಲ್ಲಿ ಸಂಸತ್ ಚುನಾವಣೆ ಘೋಷಣೆಯಾಗಿದ್ದರೂ ಹಿಂಸಾಚಾರ ನಿಂತಿಲ್ಲ. ನೇಪಾಳದಲ್ಲಿ ಜೆನ್-ಝಿ ಪ್ರತಿಭಟನೆಯ ನಂತರ ಅಲ್ಲಿನ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದೆ. ಅಮೆರಿಕ-ರಷ್ಯಾ ನಡುವಿನ ವಾಣಿಜ್ಯ ಸಂಬಂಧಗಳು ಬಿಗಡಾಯಿಸಿವೆ. ರಷ್ಯಾದ ಮೇಲೆ ಮತ್ತಷ್ಟು ನಿರ್ಬಂಧಗಳನ್ನು ಹೇರುವ ನಿಟ್ಟಿನಲ್ಲಿ ಅಮೆರಿಕ ಈಗಾಗಲೇ ಮಸೂದೆ ಸಿದ್ಧಪಡಿಸಿದೆ. ಈ ಮಸೂದೆ ಅಂಗೀಕಾರಗೊಂಡು ಕಾನೂನಾಗಿ ಬದಲಾದರೆ, ರಷ್ಯಾದಿಂದ ಕಚ್ಚಾ ತೈಲ ಖರೀದಿಸುತ್ತಿರುವ ಭಾರತ, ಚೀನಾ, ಬ್ರೆಜಿಲ್ ಮೇಲೆ ಶೇಕಡ 500ರಷ್ಟು ಸುಂಕ ಬೀಳಲಿದೆ. ಒಟ್ಟಾರೆ ಜಾಗತಿಕವಾಗಿ ಯಾವ ದಿಕ್ಕಿನತ್ತ ನೋಡಿದರೂ ಸಂಘರ್ಷ, ಹಿಂಸಾಚಾರ ಮತ್ತು ಅಸ್ಥಿರತೆಯೇ ಕಣ್ಣಿಗೆ ರಾಚುತ್ತಿದೆ. ಈ ಹಿನ್ನೆಲೆಯಲ್ಲಿ ಸುರಕ್ಷಿತ ಹೂಡಿಕೆಯ ಮಾರ್ಗವನ್ನು ಹುಡುಕುತ್ತಿರುವ ಜನರು ಚಿನ್ನ ಮತ್ತು ಬೆಳ್ಳಿಯ ಖರೀದಿಯೇ ಬೆಸ್ಟ್ ಎಂದುಕೊಂಡು, ಖರೀದಿ ಹೆಚ್ಚಿಸಿದ್ದಾರೆ. ರಾಜಕೀಯ ಸಂಘರ್ಷ ಮತ್ತು ಅಸ್ಥಿರತೆಯ ವಾತಾವರಣ ಹಾಗೂ ಆರ್ಥಿಕ ಹಿಂಜರಿತದ ಲಕ್ಷಣ ಕಾಣಿಸಿದಾಗ ಚಿನ್ನ ಮತ್ತು ಬೆಳ್ಳಿಯ ಖರೀದಿ ಹೆಚ್ಚಾಗುವ ಕ್ರಮ ಸಂಪ್ರದಾಯ ಎಂಬಂತೆ ನಡೆದು ಬಂದಿದ್ದು, ಸ್ವಾಭಾವಿಕವಾಗಿ ದರ ಏರಿಕೆಯಾಗುತ್ತದೆ.

ಸುಂಕ ಸಮರ

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮೆಕ್ಸಿಕೋ, ಕೆನಡಾ ಹಾಗೂ ಯುರೋಪಿಯನ್ ಒಕ್ಕೂಟದ ಮೇಲೆ ಶೇಕಡ 30ರಿಂದ 50ರವರೆಗೆ ಸುಂಕ ಹೇರಿದ್ದು ಕೂಡ ಬೆಳ್ಳಿ ಬೆಲೆ ಏರಿಕೆಗೆ ಪ್ರಮುಖ ಕಾರಣ. ಏಕೆಂದರೆ, ಜಗತ್ತಿನಲ್ಲೇ ಬೆಳ್ಳಿಯ ಅತಿ ದೊಡ್ಡ ಉತ್ಪಾದಕ ರಾಷ್ಟ್ರ ಮೆಕ್ಸಿಕೋ. 2024ರಲ್ಲಿ ಜಗತ್ತಿನ ಶೇಕಡ 23ರಷ್ಟು ಬೆಳ್ಳಿಯನ್ನು ಮೆಕ್ಸಿಕೋ ಉತ್ಪಾದಿಸಿತ್ತು. ಟ್ರಂಪ್ ಸುಂಕವನ್ನು 2025ರ ಆರಂಭದಲ್ಲೇ ಏಕಾಏಕಿ ಭಾರಿ ಪ್ರಮಾಣದಲ್ಲಿ ಹೆಚ್ಚಿಸಿದ್ದರಿಂದ ಮೆಕ್ಸಿಕೋದಿಂದ ಬೆಳ್ಳಿಯ ಪೂರೈಕೆ ಜಾಲ ಅಸ್ತವ್ಯಸ್ತವಾದವು. ಬೆಳ್ಳಿ ತಯಾರಿಸಿ, ಹೊರರಾಷ್ಟ್ರಗಳಿಗೆ ಕಳುಹಿಸುವುದು ವೆಚ್ಚದಾಯಕವಾಗಿ ಪರಿಣಮಿಸಿದ್ದರಿಂದ, ದರ ಏರಿಕೆಯಾಯಿತು.

ಕೈಗಾರಿಕೆಗಳಲ್ಲಿ ಬೇಡಿಕೆ

ಕಳೆದ ವರ್ಷ (2025) ಕೈಗಾರಿಕೆ ವಲಯದಲ್ಲೂ ಬೆಳ್ಳಿಗೆ ಬೇಡಿಕೆ ದೊಡ್ಡ ಮಟ್ಟದಲ್ಲಿ ಇತ್ತು. ಕೈಗಾರಿಕೆ ಉತ್ಪಾದನೆ ಹೆಚ್ಚಳವಾದಷ್ಟು, ಬೆಳ್ಳಿಯ ಬೇಡಿಕೆಯೂ ಜಿಗಿತ ಕಾಣುತ್ತದೆ. ಸಿಲ್ವರ್ ಇನ್​ಸ್ಟಿಟ್ಯೂಟ್ ವರದಿಯ ಪ್ರಕಾರ, 2023-25ರ ಅವಧಿಯಲ್ಲಿ ದೇಶದ ಕೈಗಾರಿಕಾ ವಲಯದಲ್ಲಿ ಬೆಳ್ಳಿಯ ಬೇಡಿಕೆ ಶೇಕಡ 20ರಷ್ಟು ಹೆಚ್ಚಿದೆ. ಬೆಳ್ಳಿಯ ಅತಿ ಹೆಚ್ಚು ಉಪಯೋಗ ಸೋಲಾರ್ ಪ್ಯಾನಲ್ ತಯಾರಿಕೆಯಲ್ಲಿ ಆಗುತ್ತದೆ. ಭಾರತ ಸೇರಿದಂತೆ ಜಗತ್ತಿನ ಬಹುತೇಕ ದೇಶಗಳಲ್ಲಿ ಸೌರಶಕ್ತಿಗೆ ಬೇಡಿಕೆ ಹೆಚ್ಚಿದೆ. ಅಲ್ಲದೆ, ಸ್ಮಾರ್ಟ್​ಫೋನ್, ಲ್ಯಾಪ್​ಟಾಪ್, ಎಲೆಕ್ಟ್ರಿಕ್ ವಾಹನಗಳು, ಬ್ಯಾಟರಿಗಳು ಮತ್ತು ಕೆಲ ಔಷಧಗಳ ತಯಾರಿಯಲ್ಲೂ ಬೆಳ್ಳಿ ಬಳಕೆಯಾಗುತ್ತಿದೆ.

ಬಡ್ಡಿ ದರ ಇಳಿಕೆ

ಯಾವುದೇ ರಾಷ್ಟ್ರದಲ್ಲಿ ಬೆಲೆಯೇರಿಕೆ ಹೆಚ್ಚಾದಾಗ ಅಲ್ಲಿನ ಬ್ಯಾಂಕುಗಳು ತಮ್ಮ ಬಡ್ಡಿ ದರವನ್ನು ಕಡಿತಗೊಳಿಸುತ್ತವೆ. ಆಗ ಸಹಜವಾಗಿಯೇ, ಬ್ಯಾಂಕ್​ಗಳಲ್ಲಿ ಇಡುವ ಠೇವಣಿಗೆ ರಿಟರ್ನ್ ಕಡಿಮೆ ಸಿಗುತ್ತದೆ. ನಿಶ್ಚಿತ ಠೇವಣಿಗಳ (ಎಫ್​ಡಿ) ಪ್ರಮಾಣವೂ ಕುಸಿಯುತ್ತದೆ. ಇಂಥ ಹೊತ್ತಲ್ಲಿ ಜನರು ಆ ಹಣವನ್ನು ಬ್ಯಾಂಕ್​ನಲ್ಲಿ ಇರಿಸುವುದಕ್ಕಿಂತ ಚಿನ್ನ ಮತ್ತು ಬೆಳ್ಳಿಯಲ್ಲಿ ಹೂಡಿಕೆ ಮಾಡುತ್ತಾರೆ. 2025ರಲ್ಲಿ ಅಮೆರಿಕದ ಸೆಂಟ್ರಲ್ ಬ್ಯಾಂಕ್ ತನ್ನ ಬಡ್ಡಿದರದಲ್ಲಿ 0.5% ಕಡಿತ ಮಾಡಿತು. ಪರಿಣಾಮ, ಬೆಳ್ಳಿಗೆ ಬೇಡಿಕೆ ಹೆಚ್ಚಿತು.

ದುರ್ಬಲಗೊಂಡ ಡಾಲರ್

ಬೆಳ್ಳಿಯನ್ನು ಮುಂಚೆಗಿಂತ ಕಡಿಮೆ ಬೆಲೆಗೆ ಖರೀದಿಸಲು ಸಾಧ್ಯವಾಗುತ್ತದೆ. ಡಾಲರ್​ಗಳಲ್ಲಿ ಪಾವತಿ ಮಾಡುವ ದೇಶಗಳಿಗೆ ಇದು ಅನ್ವಯಿಸುತ್ತದೆ. ಡಾಲರ್ ದುರ್ಬಲಗೊಂಡಾಗ ದೊಡ್ಡ ಮತ್ತು ಮಧ್ಯಮ ಹೂಡಿಕೆದಾರರು ಕೂಡ ಡಾಲರ್ ಅಥವಾ ಷೇರುಗಳಲ್ಲಿ ಹೂಡಿಕೆ ಮಾಡುವ ಬದಲು ಬೆಳ್ಳಿಯನ್ನು ಖರೀದಿಸುತ್ತಾರೆ, ಇದರಿಂದಲೂ ಬೆಳ್ಳಿಯ ದರ ಕಡಿಮೆ ಅವಧಿಯಲ್ಲಿ ಹೆಚ್ಚು ಏರಿಕೆ ಕಾಣುತ್ತದೆ. 2025ರಲ್ಲಿ ಡಾಲರ್ ಇಂಡೆಕ್ಸ್ 10% ಕುಸಿದು, 98.4ರ ಆಸುಪಾಸಿನಲ್ಲಿದೆ. ಇದರಿಂದ ಜಾಗತಿಕ ಮಾರುಕಟ್ಟೆಯಲ್ಲಿ ಪ್ರತಿ ಔನ್ಸ್ ಬೆಳ್ಳಿಯ ದರ 84 ಡಾಲರ್​ಗೆ ತಲುಪಿದೆ.

2026ರಲ್ಲಿ ಹೇಗೆ?

ಹೂಡಿಕೆದಾರರ ಚಿತ್ತ

ಕೆಲ ತಜ್ಞರ ಪ್ರಕಾರ, ಜಾಗತಿಕ ಅನಿಶ್ಚಿತತೆಯ ಸ್ಥಿತಿ ಮುಂದುವರಿದರೆ 2026ರಲ್ಲಿ ಬೆಳ್ಳಿ ದರ ಏರುಹಾದಿಯಲ್ಲೇ ಇರಲಿದೆ. ಆದರೆ, 2027ರ ಹೊತ್ತಿಗೆ ಒಂದಿಷ್ಟು ಕಡಿಮೆಯಾಗುವ ಸಾಧ್ಯತೆ ಇದೆ. ಏರಿಕೆಯಾಗಿರುವ ಬೆಳ್ಳಿಯ ಈಗಿನ ದರ ತುಂಬ ದಿನಗಳ ಕಾಲ ಸ್ಥಿರವಾಗಿ ಇರುವುದಿಲ್ಲ. ಈಗಾಗಲೇ ಕೆಲ ಹೂಡಿಕೆದಾರರು ಬೆಳ್ಳಿ ಸಂಗ್ರಹದ ಷೇರನ್ನು ಮಾರಾಟ ಮಾಡಿ ಲಾಭ ಮಾಡಿಕೊಳ್ಳುತ್ತಿದ್ದಾರೆ (ಪ್ರಾಫಿಟ್ ಬುಕಿಂಗ್). ಈ ಪ್ರಕ್ರಿಯೆ ಅಂದರೆ ಪ್ರಾಫಿಟ್ ಬುಕಿಂಗ್​ನ ಸರದಿ ಮುಂದುವರಿದರೆ ಬೆಳ್ಳಿ ದರ ಕುಸಿಯಲಿದೆ.

ಪರ್ಯಾಯ ಆಯ್ಕೆ

ಬೆಳ್ಳಿ ದರ ಏರಿಕೆ ಹಾದಿಯಲ್ಲೇ ಸಾಗಿದರೆ, ಕೈಗಾರಿಕೆಗಳು ಬೆಳ್ಳಿಯನ್ನು ಬದಿಗಿರಿಸಿ, ಇತರ ಖನಿಜ (ಮೆಟಲ್)ಗಳನ್ನು ಪರ್ಯಾಯವಾಗಿ ಉಪಯೋಗಿಸಲು ಆರಂಭಿಸುತ್ತವೆ. ಬೆಳ್ಳಿಗೆ ಪರ್ಯಾಯವನ್ನು ಕಂಡುಕೊಳ್ಳುವಲ್ಲಿ ಕೈಗಾರಿಕೆಗಳು ಸಫಲವಾದಲ್ಲಿ, ಬೆಳ್ಳಿಗೆ ಬೇಡಿಕೆ ಕುಸಿದು, ದರ ಇಳಿಕೆಯಾಗುತ್ತದೆ. ಇಸ್ರೇಲ್, ತೈವಾನ್, ಆಸ್ಟ್ರೇಲಿಯಾ ಹಾಗೂ ಚೀನಾದ ಸೌರಶಕ್ತಿ ಉದ್ಯಮಗಳು ಸೋಲಾರ್ ಪ್ಯಾನಲ್ ತಯಾರಿಕೆಯಲ್ಲಿ ಈಗಾಗಲೇ ಬೆಳ್ಳಿ ಬಳಕೆಯನ್ನು ಕಡಿಮೆ ಮಾಡಿ, ತಾಮ್ರವನ್ನು ಬಳಸುತ್ತಿವೆ. ಈ ವಿಧಾನವನ್ನು ಮತ್ತಷ್ಟು ದೇಶಗಳು ಅನುಸರಿದರೆ ಬೆಳ್ಳಿ ಬೇಡಿಕೆ ತಗ್ಗಿ, ದರ ಇಳಿಯುವ ಸಾಧ್ಯತೆ ಇದೆ. ಮತ್ತೊಂದೆಡೆ, ತಾಮ್ರಕ್ಕೆ ಬೇಡಿಕೆ ಹೆಚ್ಚುವುದರಿಂದ ಅದರ ದರ ಜಿಗಿತ ಕಾಣಬಹುದು.

ಚಂಚಲ ಚಿನ್ನ

2025ರಲ್ಲಿ ಚಿನ್ನದ ಬೆಲೆ ಶೇಕಡ 75ರಷ್ಟು ಏರಿಕೆ ಕಂಡಿದೆ. 2025ರ ಜನವರಿ 1ರಂದು 24 ಕ್ಯಾರೆಟ್​ನ 10 ಗ್ರಾಂ ಚಿನ್ನದ ದರ 76,162 ರೂ. ಇತ್ತು. ಪ್ರಸಕ್ತ 1.44 ಲಕ್ಷ ರೂ. ಗಡಿ ದಾಟಿದೆ. 2026ರ ಅಂತ್ಯದಲ್ಲಿ ಇದು 1.70 ಲಕ್ಷ ರೂ.ವರೆಗೆ ತಲುಪುವ ಸಾಧ್ಯತೆ ಇದೆ ಎನ್ನುತ್ತಾರೆ ಮಾರುಕಟ್ಟೆ ವಿಶ್ಲೇಷಕರು.