ದೇಶ

137 ಕ್ಯಾನ್ಸರ್ ನಿರೋಧಕ ಔಷಧಗಳ ದರ ಭಾರಿ ಇಳಿಕೆ

ನವದೆಹಲಿ: ಕ್ಯಾನ್ಸರ್ ರೋಗಿಗಳಿಗೆ ಕೇಂದ್ರ ಸರ್ಕಾರ ಭಾರಿ ರಿಲೀಫ್ ನೀಡಿದ್ದು, ವಿವಿಧ ಬ್ರ್ಯಾಂಡ್​ಗಳ 137 ಕ್ಯಾನ್ಸರ್ ನಿರೋಧಕ ಔಷಧಗಳ ಬೆಲೆಯನ್ನು ಗಣನೀಯವಾಗಿ ಇಳಿಕೆ ಮಾಡಿದೆ. ಟ್ರೇಡ್ ಮಾರ್ಜಿನ್ (ವ್ಯಾಪಾರ ಅಂತರ) ಮಿತಿಗೊಳಿಸುವ ಸರ್ಕಾರದ ನಿರ್ಧಾರದಿಂದಾಗಿ ಈ ಪರಿಷ್ಕೃತ ದರಗಳು ನ.9ರಿಂದ ಜಾರಿಗೆ ಬರಲಿದ್ದು, ಇದರಿಂದ ಗ್ರಾಹಕರಿಗೆ ವಾರ್ಷಿಕ ಅಂದಾಜು 3,502.31 ಕೋಟಿ ರೂ. ಉಳಿತಾಯವಾಗಲಿದೆ.

ರಾಷ್ಟ್ರೀಯ ಔಷಧೀಯ ಬೆಲೆ ಪ್ರಾಧಿಕಾರ (ಎನ್​ಪಿಪಿಎ) ಈ ದರ ಕಡಿತವನ್ನು ಪ್ರಕಟಿಸಿದೆ. ಇದುವರೆಗೆ 76 ಫಾಮಾ ಕಂಪನಿಗಳು 121 ಔಷಧಗಳನ್ನು ಒಳಗೊಂಡ 1,225 ಫಾಮುಲೇಶನ್​ಗಳ ಪರಿಷ್ಕೃತ ಗರಿಷ್ಠ ಚಿಲ್ಲರೆ ಬೆಲೆ(ಎಂಆರ್​ಪಿ)ಯನ್ನು ಸಲ್ಲಿಸಿವೆ. ಇದರಲ್ಲಿ 1,031 ಔಷಧಗಳ ಬೆಲೆ ಇಳಿಕೆಯಾಗಿದ್ದು, 600ಕ್ಕೂ ಹೆಚ್ಚು ಬ್ರ್ಯಾಂಡ್​ಗಳ ಬೆಲೆಯಲ್ಲಿ ಶೇ.50ರಷ್ಟು ಕಡಿತವಾಗಿದೆ. ಗರಿಷ್ಠ ಶೇ.96.45ರಷ್ಟು ದರ ಇಳಿಕೆಯಾಗಿದೆ.

ಪ್ರಮುಖ ಔಷಧಗಳ ಪರಿಷ್ಕೃತ ದರ

1. ಸ್ತನ ಕ್ಯಾನ್ಸರ್(ಪಲ್ಬೊಪ್ರೊ): 40,421.33ರಿಂದ 2,720 ರೂಪಾಯಿಗೆ ಇಳಿಕೆ.

2. ಪ್ರಾಸ್ಟೇಟ್ ಕ್ಯಾನ್ಸರ್(ಅಬಿರೋನ್): 41,250ರಿಂದ 3,218.23 ರೂ.ಗೆ ಕಡಿತ.

3. ಶ್ವಾಸಕೋಶದ ಕ್ಯಾನ್ಸರ್ (ಬ್ರಿಕ್ಸ್​ಟಾ): 25,995ರಿಂದ 3,318 ರೂ.ಗೆ ಇಳಿಕೆ.

ದರ ಪಟ್ಟಿ ಪ್ರದರ್ಶನ ಕಡ್ಡಾಯ

ಎಲ್ಲ ಚಿಲ್ಲರೆ ವ್ಯಾಪಾರಿಗಳು ಮತ್ತು ಆಸ್ಪತ್ರೆಗಳು ಪರಿಷ್ಕೃತ ದರಪಟ್ಟಿಯನ್ನು ಗ್ರಾಹಕರಿಗೆ ಕಾಣುವಂತೆ ಕಡ್ಡಾಯವಾಗಿ ಪ್ರದರ್ಶಿಸಬೇಕು ಎಂದು ಸೂಚಿಸಲಾಗಿದೆ. ನಿಯಮ ಉಲ್ಲಂಘನೆ ಆಗದಂತೆ ರಾಜ್ಯ ಡ್ರಗ್ ಕಂಟ್ರೋಲರ್​ಗಳು ನಿಗಾ ವಹಿಸಲಿದ್ದಾರೆ. ಗ್ರಾಹಕರು ಹೊಸ ದರಗಳನ್ನು ಎನ್​ಪಿಪಿಎ ಪೋರ್ಟಲ್ ಅಥವಾ ‘ಫಾಮಾ ಸಾಹಿ ದಾಮ್ ಆಪ್ ಮೂಲಕ ಪರಿಶೀಲಿಸಬಹುದು ಮತ್ತು ನಿಯಮ ಉಲ್ಲಂಘನೆಯಾದರೆ ದೂರು ದಾಖಲಿಸಬಹುದು.