ಕೋಲ್ಕತ್ತಾ: ಪಶ್ಚಿಮ ಬಂಗಾಳ ಚುನಾವಣೆಗೆ ಕೆಲವೇ ತಿಂಗಳು ಬಾಕಿ ಇರುವಂತೆ ಮಹತ್ವದ ರಾಜಕೀಯ ಬೆಳವಣಿಗೆ ನಡೆದಿದ್ದು, ಆಡಳಿತರೂಢ ಸಿಎಂ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಸರ್ಕಾರದ ವಿರುದ್ಧ ಸಂಘರ್ಷ ನಡೆಸಿದ್ದ ರಾಜ್ಯಪಾಲ ಸಿ.ವಿ.ಆನಂದ ಬೋಸ್(C V Ananda Bose) ಗುರುವಾರ(ಮಾ. 05) ಹಠಾತ್ ರಾಜೀನಾಮೆ ನೀಡಿದ್ದಾರೆ ಎಂದು ವರದಿಯಾಗಿದೆ.
ಈ ಕುರಿತು ರಾಜಭವನದ ಅಧಿಕೃತ ಮಾಹಿತಿಗಳನ್ನು ಉಲ್ಲೇಖಿಸಿ ವರದಿ ಮಾಡಿರುವ ಪಿಟಿಐ, ಬಂಗಾಳದ ರಾಜ್ಯಪಾಲರಾಗಿ ಅಧಿಕಾರ ವಹಿಸಿಕೊಂಡು ಮೂರುವರೆ ವರ್ಷಗಳ ಬಳಿಕ ರಾಜೀನಾಮೆ ನೀಡಿದ್ದು, ಈ ಬಗ್ಗೆ ಸ್ವತಂ ಬೋಸ್ ಅಧಿಕೃತವಾಗಿ ಮಾಹಿತಿ ನೀಡಿದ್ದಾರೆ ಎಂದು ಹೇಳಿದೆ.
2022 ನವೆಂಬರ್ 17ರಂದು ಬಂಗಾಳದ ರಾಜ್ಯಪಾಲರಾಗಿ ಬೋಸ್ ನೇಮಕವಾಗಿದ್ದರು. ಅದಕ್ಕಿಂತ ಮೊದಲು ಜಗದೀಪ್ ಧನಕರ್ ರಾಜ್ಯಪಾಲರಾಗಿದ್ದರು. ಉಪರಾಷ್ಟ್ರಪತಿ ಚುನಾವಣೆಯಲ್ಲಿ ಸ್ಪರ್ಧಿಸಲು ಧನಕರ್ ರಾಜೀನಾಮೆ ನೀಡಿದ ಬಳಿಕ ಮಾಜಿ ಐಎಎಸ್ ಅಧಿಕಾರಿಯಾಗಿದ್ದ ಬೋಸ್ ಅವರನ್ನು ನೇಮಿಸಲಾಗಿತ್ತು.
ರಾಜ್ಯಪಾಲರಾಗಿ ಅಧಿಕಾರ ನಡೆಸಿದ ಮೂರುವರೆ ವರ್ಷಗಳಲ್ಲಿ ಬೋಸ್, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದ ರಾಜ್ಯ ಸರ್ಕಾರದೊಂದಿಗೆ ಆಗಾಗ ಸಂಘರ್ಷ ನಡೆಸಿದ್ದರು. ಆಡಳಿತಾತ್ಮಕ ಸಮಸ್ಯೆ, ಕಾನೂನು ಸುವ್ಯವಸ್ಥೆ ಹಾಗೂ ರಾಜ್ಯಪಾಲರ ಆಡಳಿತದ ಬಗ್ಗೆ ಸರ್ಕಾರ ಮತ್ತು ರಾಜ್ಯಪಾಲರ ನಡುವೆ ವಾಗ್ವಾದಗಳು ನಡೆದಿದ್ದವು (ಏಜೆನ್ಸೀಸ್).