ಭೂಪೇನ್ ಬೋರಾ ಬಿಜೆಪಿ ಸೇರ್ಪಡೆಯಾಗಿರುವುದು. 
ದೇಶ

ಅಸ್ಸಾಂನಲ್ಲಿ ಮಹತ್ವದ ಬೆಳವಣಿಗೆ; ನಿರೀಕ್ಷೆಯಂತೆ ಬಿಜೆಪಿಗೆ ಸೇರ್ಪಡೆಯಾದ ಅಸ್ಸಾಂ ಮಾಜಿ ಕಾಂಗ್ರೆಸ್ ಅಧ್ಯಕ್ಷ ಭೂಪೇನ್ ಬೋರಾ | Bhupen Bora

ಗುವಾಹಟಿ: ಅಸ್ಸಾಂ ವಿಧಾನಸಭೆ ಚುನಾವಣೆಗೂ ಮುನ್ನವೇ ಪ್ರಮುಖ ರಾಜಕೀಯ ಬೆಳವಣಿಗೆಯಲ್ಲಿ ನಿರೀಕ್ಷೆಯಂತೆ ಇಂದು(ಫೆ. 22) ಅಸ್ಸಾಂ ಮಾಜಿ ಕಾಂಗ್ರೆಸ್ ಮುಖ್ಯಸ್ಥ ಭೂಪೇನ್ ಬೋರಾ, ಸಿಎಂ ಹಿಮಂತ ಬಿಸ್ವಾ ಶರ್ಮಾ ಸಮ್ಮುಖದಲ್ಲಿ ಬಿಜೆಪಿ ಸೇರ್ಪಡೆಯಾಗಿದ್ದಾರೆ.
ಗುವಾಹಟಿಯಲ್ಲಿರುವ ಬಿಜೆಪಿ ರಾಜ್ಯ ಪ್ರಧಾನ ಕಚೇರಿಯಾದ ವಾಜಪೇಯಿ ಭವನದಲ್ಲಿ ನಡೆದ ಸಮಾರಂಭದಲ್ಲಿ ಔಪಚಾರಿಕವಾಗಿ ಸೇರ್ಪಡೆಯಾಗಿದ್ದಾರೆ. ಈ ವೇಳೆ ಅಸ್ಸಾಂ ಬಿಜೆಪಿ ಅಧ್ಯಕ್ಷ ದಿಲೀಪ್ ಸೈಕಿಯಾ ಸೇರಿ ಹಲವು ಮುಖಂಡರು ಹಾಜರಿದ್ದರು.
ಈ ಹಿಂದೆ ಫೆ. 16ರಂದು ಭೂಪೇನ್ ಬೋರಾ ಕಾಂಗ್ರೆಸ್​ಗೆ ರಾಜೀನಾಮೆ ನೀಡಿದ್ದರು. ಆದರೆ ಅದಾದ ಬಳಿಕ ಹೈಕಮಾಂಡ್ ಮತ್ತು ರಾಜ್ಯ ಕಾಂಗ್ರೆಸ್​ ನಾಯಕರು ಅವರ ಮನೆಗೆ ತೆರಳಿ ಮನವೊಲಿಸಿದ್ದರು. ಈ ವೇಳೆ ನಿರ್ಧಾರ ಮರು ಪರಿಶೀಲಿಸುವುದಾಗಿ ಹೇಳಿದ್ದರು.
ಅದಾದ ಮರುದಿನವೇ ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮಾ, ಭೂಪೇನ್ ಅವರ ಮನೆಗೆ ಭೇಟಿ ನೀಡಿ ಮಾಜಿ ಕಾಂಗ್ರೆಸ್ ನಾಯಕ ಫೆ. 22ರಂದು ಬಿಜೆಪಿಗೆ ಸೇರಲಿದ್ದಾರೆ ಎಂದು ಸಾರ್ವಜನಿಕವಾಗಿ ಘೋಷಿಸಿದ್ದರು. ಮತ್ತು ಅದನ್ನು ಭೂಪೇನ್ ಬೋರಾ ಅನುಮೋದಿಸಿದ್ದರು. ಅದರ ಭಾಗವಾಗಿ ಇಂದು ಔಪಚಾರಿಕವಾಗ ಬಿಜೆಪಿ ಸೇರ್ಪಡೆಯಾಗಿದ್ದಾರೆ.
ಬಿಜೆಪಿ ಸೇರ್ಪಡೆ ಬಳಿಕ ಮಾತನಾಡಿರುವ ಭೂಪೇನ್ ಬೋರಾ, ಸ್ವಾಭಿಮಾನಿ ಅಸ್ಸಾಮಿಗಳು ಕಾಂಗ್ರೆಸ್​ ತೊರೆದು ಬಿಜೆಪಿ ಸೇರುತ್ತಾರೆ. ಮುಂದಿನ ಚುನಾವಣೆಗೆ ಕಾಂಗ್ರೆಸ್​ನಲ್ಲಿ 700 ಮಂದಿ ಟಿಕೆಟ್ ಆಕಾಂಕ್ಷಿಗಳಿದ್ದಾರೆ. ಅದರಲ್ಲಿ 100 ಜನಕ್ಕೆ ಟಿಕೆಟ್ ಸಿಗಲಿದೆ. ಇನ್ನುಳಿದ 600 ಮುಖಂಡರು ಬಿಜೆಪಿಗೆ ಬರುತ್ತಾರೆ ಎಂದು ಹೇಳಲ್ಲ. ಆದರೆ ರಾಜೀವ್ ಭವನದ ಸ್ವಾಭಿಮಾನಿ ಅಸ್ಸಾಮಿಗಳು ವಾಜಪೇಯಿ ಭವನಕ್ಕೆ ಬರುತ್ತಾರೆ ಎಂದು ಹೇಳಿದ್ದಾರೆ.
ನಾನು ದುರ್ಯೋಧನನಿಂದ ದೂರ ಸರಿದಿದ್ದೇನೆ, ಆದರೆ ಕರ್ಣರು ಇನ್ನೂ ಅಲ್ಲೇ ಇದ್ದಾರೆ. ಮಹಾಭಾರತ ಯುದ್ಧದಲ್ಲಿ ಯಾರು ಯಾವ ಕಡೆ ಇರುತ್ತಾರೆಂದು ಅವರಿಗೆ ನಿಧಾನವಾಗಿ ತಿಳಿಯುತ್ತದೆ. ಈ ಯುದ್ಧದ ಫಲಿತಾಂಶ ಈಗಾಗಲೇ ನಿರ್ಧರಿಸಲ್ಪಟ್ಟಿದೆ ಎಂದು ನಾನು ರಾಜೀವ್ ಭವನದ ಕರ್ಣರಿಗೆ ಹೇಳಲು ಬಯಸುತ್ತೇನೆ ಎಂದಿದ್ದಾರೆ.
ಇನ್ನೂ ಸಿಎಂ ಹಿಮಂತ ಬಿಸ್ವಾ ಶರ್ಮಾ ಮಾತನಾಡಿ,  ಬೋರಾ ಅವರು ಸುಮಾರು 33 ವರ್ಷಗಳ ಕಾಲ ಕಾಂಗ್ರೆಸ್ ಪಕ್ಷಕ್ಕೆ ಪ್ರಮುಖ ಕೊಡುಗೆ ನೀಡಿದ್ದಾರೆ. ಅವರು ಇಂದಿನಿಂದ ಹೊಸ ಜೀವನವನ್ನು ಪ್ರಾರಂಭಿಸುತ್ತಾರೆ. ನಾನು ಅವರನ್ನು ಅಭಿನಂದಿಸುತ್ತೇನೆ ಎಂದು ತಿಳಿಸಿದ್ದಾರೆ (ಏಜೆನ್ಸೀಸ್).