Dimagi Naxals | ಪ್ರಧಾನಿ ಮೋದಿ ಹೊಸ ಶಬ್ದಪ್ರಯೋಗಕ್ಕೆ ವಿಪಕ್ಷಗಳ ತೀವ್ರ ಆಕ್ರೋಶ! 
ದೇಶ

ಅರ್ಬನ್ ನಕ್ಸಲ್ ನಂತರ ಈಗ ದಿಮಾಗಿ ನಕ್ಸಲ್: ಪ್ರಧಾನಿ ಮೋದಿ ಹೊಸ ಶಬ್ದಪ್ರಯೋಗಕ್ಕೆ ವಿಪಕ್ಷಗಳ ತೀವ್ರ ಆಕ್ರೋಶ! | Dimagi Naxals

ಪ್ರಧಾನಿ ನರೇಂದ್ರ ಮೋದಿ ಅವರು ಕೆಂಪು ಕೋಟೆಯಿಂದ ಮಾಡಿದ ಸ್ವಾತಂತ್ರ್ಯ ದಿನಾಚರಣೆಯ ಭಾಷಣದಲ್ಲಿ ನೀಡಿದ ದಿಮಾಗಿ ನಕ್ಸಲರು (

ಬೌದ್ಧಿಕ ನಕ್ಸಲರು

) ಹೇಳಿಕೆಗೆ ಕಾಂಗ್ರೆಸ್ ತಿರುಗೇಟು ನೀಡಿದೆ. ಪ್ರಧಾನಿಯವರ ಈ ಶಬ್ದಪ್ರಯೋಗವು ಅವರ ನಿರಾಶೆಯ ಸ್ಪಷ್ಟ ಸಂಕೇತ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಟೀಕಿಸಿದ್ದಾರೆ.

ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ಜೈರಾಮ್ ರಮೇಶ್​, ಮೊದಲು ತಮ್ಮ ವಿರೋಧಿಗಳನ್ನು ಅರ್ಬನ್ ನಕ್ಸಲರು ಎಂದು ಕರೆಯುತ್ತಿದ್ದ ಪ್ರಧಾನಿ ಮೋದಿ, ಈಗ ದಿಮಾಗಿ ನಕ್ಸಲರು ಎಂಬ ಪದ ಬಳಸ್ತಿದ್ದಾರೆ, ಅವರು ಯಾರನ್ನು ಈ ರೀತಿ ಬಿಂಬಿಸುತ್ತಾರೋ, ಕೊನೆಗೆ ಅವರ ಬೇಡಿಕೆಗಳನ್ನೇ ಅನುಷ್ಠಾನಗೊಳಿಸುತ್ತಾರೆ ಎಂದು ವ್ಯಂಗ್ಯವಾಡಿರುವ ಕಾಂಗ್ರೆಸ್​ ನಾಯಕ, ರಾಜಕೀಯ ವಿಜ್ಞಾನದಲ್ಲಿ ಪ್ರಧಾನಿ ಮೋದಿ ಮಾಸ್ಟರ್ ಅಬ್ಯೂಸರ್ (ನಿಂದನೆಯಲ್ಲಿ ಸ್ನಾತಕೋತ್ತರ) ಪದವಿ ಪಡೆದಿದ್ದಾರೆ ಎಂದು ತೀವ್ರವಾಗಿ ವಾಗ್ದಾಳಿ ನಡೆಸಿದ್ದಾರೆ.

ಮತ್ತೊಂದೆಡೆ, ಕಾಂಗ್ರೆಸ್ ಪ್ರಧಾನ ಕಚೇರಿಯಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಸರ್ಕಾರವು ಮೂಲಭೂತ ಹಕ್ಕುಗಳನ್ನು ನೀಡುವಲ್ಲಿ ವಿಫಲವಾಗಿದೆ, ಸಂಸದೀಯ ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳುತ್ತಿದೆ ಮತ್ತು ವಿಭಜಕ ರಾಜಕೀಯದಲ್ಲಿ ತೊಡಗಿದೆ ಎಂದು ಆರೋಪಿಸಿದರು. ಶಿಕ್ಷಣದ ಹಕ್ಕು, ಆಹಾರದ ಹಕ್ಕು ಮತ್ತು ಉದ್ಯೋಗ ಖಾತರಿಯಂತಹ ಮಹತ್ವದ ಯೋಜನೆಗಳನ್ನು ತಂದಿದ್ದು ಕಾಂಗ್ರೆಸ್ ಸರ್ಕಾರಗಳು ಎಂದು ಉಲ್ಲೇಖಿಸಿದ ಖರ್ಗೆ, ಪ್ರಧಾನಿಯವರು ಕೆಂಪು ಕೋಟೆಯಿಂದ ಪ್ರತಿಯೊಂದಕ್ಕೂ ತಾವೇ ಕಾರಣ ಎಂದು ಪ್ರತಿಪಾದಿಸಿಕೊಳ್ಳುತ್ತಾರೆ ಎಂದು ವ್ಯಂಗ್ಯವಾಡಿದರು.

ಭಾಷಣದ ವೇಳೆ ಪ್ರಧಾನಿ ಮೋದಿ ಅವರು ಬಯೋ ಎಕಾನಮಿ (ಜೈವಿಕ ಅರ್ಥವ್ಯವಸ್ಥೆ) ಬಗ್ಗೆ ಮಾತನಾಡುವಾಗ ಗೊಂದಲಕ್ಕೀಡಾದ ದೃಶ್ಯಾವಳಿಯನ್ನು ಇಟ್ಟುಕೊಂಡು ವಿರೋಧ ಪಕ್ಷಗಳು ಹಾಸ್ಯ ಮಾಡಿವೆ. ಟೆಲಿಪ್ರಾಂಪ್ಟರ್ ಇಲ್ಲದ ಮಹಾಮಾನವ ಎಂದು ಕಾಂಗ್ರೆಸ್ ನಾಯಕ ಪವನ್ ಖೇರಾ ಟೀಕಿಸಿದರೆ, ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರು ಮೋದಿಯವರನ್ನು ಆತ್ಮವಿಶ್ವಾಸವಿಲ್ಲದ ಮತ್ತು ನಡುಗುತ್ತಿರುವ ಪ್ರಧಾನಿ ಎಂದು ಕರೆದಿದ್ದಾರೆ. ಈ ಬಾರಿಯ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಪ್ರಧಾನಿ ಮೋದಿ ಅವರು ಸುಮಾರು 75 ನಿಮಿಷಗಳ ಕಾಲ ಭಾಷಣ ಮಾಡಿದ್ದು, ಇದು ಕಳೆದ ನಾಲ್ಕು ವರ್ಷಗಳಲ್ಲೇ ಅವರ ಅತ್ಯಂತ ಕಡಿಮೆ ಅವಧಿಯ ಸ್ವಾತಂತ್ರ್ಯ ದಿನದ ಭಾಷಣವಾಗಿದೆ.

ಪ್ರಧಾನಿ ಮೋದಿ ಹೇಳಿದ್ದೇನು..?

ಸ್ವಾತಂತ್ರ್ಯ ದಿನಾಚರಣೆಯ ಭಾಷಣದಲ್ಲಿ ದಿಮಾಗಿ ನಕ್ಸಲರ ಬಗ್ಗೆ ಪ್ರಸ್ತಾಪಿಸಿದ್ದ ಪ್ರಧಾನಿ ಮೋದಿ, ಕಾಡುಗಳಲ್ಲಿ ಶಸ್ತ್ರಸಜ್ಜಿತ ನಕ್ಸಲಿಸಂ ಅನ್ನು ನಿರ್ಮೂಲನೆ ಮಾಡುವಲ್ಲಿ ನಾವು ಯಶಸ್ವಿಯಾಗಿದ್ದೇವೆ, ಆದರೆ ದಿಮಾಗಿ ನಕ್ಸಲರು ಸಮಾಜದಲ್ಲಿ ಹಿಂಸಾಚಾರ ಮತ್ತು ಅಶಾಂತಿಯನ್ನು ಸೃಷ್ಟಿಸಲು ಅವಕಾಶ ಕಾಯುತ್ತಿದ್ದಾರೆ ಎಂದು ಹೇಳಿದ್ದರು. ಇಂತಹ ಬುದ್ಧಿಜೀವಿ ನಕ್ಸಲರನ್ನು ಗುರುತಿಸಿ ಸಮಾಜದಿಂದ ಪ್ರತ್ಯೇಕಿಸಬೇಕಿದೆ ಎನ್ನುತ್ತಾ, ಮಾವೋವಾದಿ ಮನಸ್ಥಿತಿಯ ಜನರು ಹಲವು ವರ್ಷಗಳಿಂದ ಸರ್ಕಾರಿ ಸಂಸ್ಥೆಗಳಲ್ಲಿ ನೆಲೆ ಕಂಡುಕೊಂಡು ಸಾರ್ವಜನಿಕ ನೀತಿಗಳ ಮೇಲೆ ಪ್ರಭಾವ ಬೀರಿದ್ದಾರೆ ಎಂದು ಆರೋಪಿಸಿದ್ದರು. ದಶಕಗಳ ನಕ್ಸಲೈಟ್ ಹಿಂಸಾಚಾರದಿಂದ ಲಕ್ಷಾಂತರ ಯುವಕರ ಜೀವನ ನಾಶವಾಗಿದ್ದು, 3,500ಕ್ಕೂ ಹೆಚ್ಚು ಭದ್ರತಾ ಸಿಬ್ಬಂದಿ ಹುತಾತ್ಮರಾಗಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದ್ದರು(ಏಜೆನ್ಸೀಸ್​).