ನವದೆಹಲಿ: ಯುವಕನೊಬ್ಬ ತನ್ನ ತಾಯಿ, ತಂಗಿ ಮತ್ತು ತಮ್ಮನನ್ನು ಕೊಂದು ನೇರವಾಗಿ ಪೊಲೀಸ್ ಠಾಣೆಗೆ ಹೋಗಿ ಅಪರಾಧವನ್ನು ಒಪ್ಪಿಕೊಂಡ ಘಟನೆ ಸೋಮವಾರ ರಾಜಧಾನಿ ದೆಹಲಿಯ ಲಕ್ಷ್ಮೀನಗರ ಪ್ರದೇಶದಲ್ಲಿ ನಡೆದಿದೆ.
ಆತ ತನ್ನ ತಾಯಿ, ತಂಗಿ ಮತ್ತು ತಮ್ಮನನ್ನು ಚಾಕುವಿನಿಂದ ಇರಿದು ಕೊಂದ ನಂತರ, ರಕ್ತಸಿಕ್ತ ಸ್ಥಿತಿಯಲ್ಲೇ ಪೊಲೀಸ್ ಠಾಣೆಗೆ ತೆರಳಿ "ನಾನು ನನ್ನ ತಾಯಿ, ತಂಗಿ ಮತ್ತು ತಮ್ಮನನ್ನು ಕೊಂದಿದ್ದೇನೆ" ಎಂದು ಒಪ್ಪಿಕೊಂಡಿದ್ದಾನೆ.
ಪೊಲೀಸ್ ಮಾಹಿತಿ ಪ್ರಕಾರ, ಪೊಲೀಸರು ತಕ್ಷಣ ಆತನ ಮನೆಗೆ ತೆರಳಿ ಪರಿಶೀಲಿಸಿದಾಗ, ಮೂವರ ದೇಹಗಳು ರಕ್ತದ ಮಡುವಿನಲ್ಲಿ ಬಿದ್ದಿರುವುದು ಕಂಡುಬಂದಿದೆ. ಆರೋಪಿಯನ್ನು ಬಂಧಿಸಲಾಗಿದ್ದು, ಅಪರಾಧಕ್ಕೆ ನಿಖರ ಕಾರಣ ಏನು ಎಂಬುದರ ಬಗ್ಗೆ ತನಿಖೆ ನಡೆಯುತ್ತಿದೆ. ಕುಟುಂಬದಲ್ಲಿ ಹಣಕಾಸು ವಿವಾದ ಅಥವಾ ವೈಯಕ್ತಿಕ ದ್ವೇಷವೇ ಕಾರಣವಾಗಿರಬಹುದು ಎಂದು ಪೊಲೀಸರು ಅಂದಾಜಿಸಿದ್ದಾರೆ. ಆದ್ರೆ, ಆರೋಪಿ ಯುವಕ ತನ್ನ ಕುಟುಂಬದೊಂದಿಗೆ ಲಕ್ಷ್ಮೀನಗರದಲ್ಲಿ ವಾಸಿಸುತ್ತಿದ್ದ. ಕುಟುಂಬದಲ್ಲಿ ಆಗಾಗ್ಗೆ ಜಗಳಗಳು ನಡೆಯುತ್ತಿದ್ದವು ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ.
ಪೊಲೀಸರು ಪ್ರದೇಶದಲ್ಲಿ ಹೆಚ್ಚಿನ ಭದ್ರತೆಯನ್ನು ಒದಗಿಸಿದ್ದಾರೆ. ಆರೋಪಿಯ ಹೆಸರು ಮತ್ತು ಇತರ ವಿವರಗಳನ್ನು ಪೊಲೀಸರು ಬಹಿರಂಗಪಡಿಸಿಲ್ಲ. ತನಿಖೆ ಮುಂದುವರಿದಿದೆ,(ಏಜೆನ್ಸೀಸ್).