ನವದೆಹಲಿ: ಭಾರತದ ಖ್ಯಾತ ಪಿಸ್ತೂಲ್ ಶೂಟರ್ ಜಸ್ಪಾಲ್ ರಾಣಾ ನಿಧನದ(passes away) ಆಘಾತದಿಂದ ಕುಟುಂಬ ಇನ್ನೂ ಹೊರಬರದಿರುವಾಗಲೇ ಮತ್ತೊಂದು ದುಃಖದ ಘಟನೆ ನಡೆದಿದೆ. ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಜಸ್ಪಾಲ್ ರಾಣಾ ಅವರ ತಾಯಿ ಶ್ಯಾಮಾ ದೇವಿ ರಾಣಾ ಅವರು ದೆಹಲಿಯಲ್ಲಿ ನಿಧನರಾಗಿದ್ದಾರೆ. ಪುತ್ರನ ಸಾವಿನ ಕೆಲವೇ ದಿನಗಳಲ್ಲೇ ತಾಯಿಯೂ ವಿಧಿವಶರಾಗಿರುವುದು ಕುಟುಂಬಕ್ಕೆ ಮತ್ತೊಂದು ದೊಡ್ಡ ಆಘಾತವಾಗಿದೆ.
ಮುಖ್ಯಮಂತ್ರಿ ಸಂತಾಪ
ಶ್ಯಾಮಾ ದೇವಿ ರಾಣಾ ಅವರ ನಿಧನದ ನಿಖರ ದಿನಾಂಕ ಮತ್ತು ಸಮಯವನ್ನು ಅಧಿಕೃತವಾಗಿ ದೃಢಪಡಿಸಲಾಗಿಲ್ಲ. ಆದರೆ ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಸಂತಾಪ ಸೂಚಿಸಿ ಈ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. "ಮಾಜಿ ಸಚಿವ ನಾರಾಯಣ್ ಸಿಂಗ್ ರಾಣಾ ಅವರ ಪತ್ನಿ ಹಾಗೂ ಪದ್ಮಶ್ರೀ ಪುರಸ್ಕೃತ ದಿವಂಗತ ಜಸ್ಪಾಲ್ ರಾಣಾ ಅವರ ತಾಯಿ ಶ್ಯಾಮಾ ದೇವಿ ರಾಣಾ ಅವರ ನಿಧನದ ಸುದ್ದಿ ಅತ್ಯಂತ ದುಃಖ ತಂದಿದೆ. ಅಗಲಿದ ಆತ್ಮಕ್ಕೆ ಸದ್ಗತಿ ಸಿಗಲಿ ಹಾಗೂ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ದೊರಕಲಿ" ಎಂದು ಅವರು ತಿಳಿಸಿದ್ದಾರೆ.
ಜೂನ್ 12ರಂದು ಜಸ್ಪಾಲ್ ರಾಣಾ ನಿಧನ
ಭಾರತದ ಶ್ರೇಷ್ಠ ಪಿಸ್ತೂಲ್ ಶೂಟರ್‌ಗಳಲ್ಲಿ ಒಬ್ಬರೆಂದು ಗುರುತಿಸಿಕೊಂಡಿದ್ದ ಜಸ್ಪಾಲ್ ರಾಣಾ ಅವರು ಜೂನ್ 12ರಂದು ಹೃದಯ ಸಂಬಂಧಿ ತೊಂದರೆಯಿಂದ 49ನೇ ವಯಸ್ಸಿನಲ್ಲಿ ನಿಧನರಾಗಿದ್ದರು. ಅವರ ನಿಧನ ದೇಶದ ಕ್ರೀಡಾ ವಲಯಕ್ಕೆ ದೊಡ್ಡ ಆಘಾತವಾಗಿತ್ತು. ಜೂನ್ 14ರಂದು ಡೆಹ್ರಾಡೂನ್‌ನಿಂದ ಏರ್ ಆಂಬುಲೆನ್ಸ್ ಮೂಲಕ ಅವರ ಪಾರ್ಥಿವ ಶರೀರವನ್ನು ವಾರಾಣಸಿಗೆ ತರಲಾಗಿತ್ತು. ನೂರಾರು ಜನರು ಕಂಬನಿ ಮಿಡಿದು ಅಂತಿಮ ನಮನ ಸಲ್ಲಿಸಿದ್ದರು.
ರಾಜ್ಯ ಗೌರವದೊಂದಿಗೆ ಅಂತ್ಯಕ್ರಿಯೆ
ಜಸ್ಪಾಲ್ ರಾಣಾ ಅವರಿಗೆ ರಾಜ್ಯ ಗೌರವದೊಂದಿಗೆ ಅಂತ್ಯಕ್ರಿಯೆ ನೆರವೇರಿಸಲಾಯಿತು. ವಾರಾಣಸಿಯ ಮಣಿಕರ್ಣಿಕಾ ಘಾಟ್‌ನಲ್ಲಿ ಅವರ ಪುತ್ರ ಯುವರಾಜ್ ಅಂತಿಮ ವಿಧಿವಿಧಾನಗಳನ್ನು ನೆರವೇರಿಸಿದರು. ಈ ಸಂದರ್ಭದಲ್ಲಿ ಸಹೋದರ ಸುಭಾಷ್ ರಾಣಾ, ಕುಟುಂಬ ಸದಸ್ಯರು, ಶೂಟಿಂಗ್ ಕ್ರೀಡಾಪಟುಗಳು ಹಾಗೂ ವಿವಿಧ ಕ್ಷೇತ್ರಗಳ ಗಣ್ಯರು ಉಪಸ್ಥಿತರಿದ್ದರು. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ಪುತ್ರ ಹಾಗೂ ಬಿಜೆಪಿ ಶಾಸಕ ಪಂಕಜ್ ಸಿಂಗ್, ಬಿಜೆಪಿ ರಾಜ್ಯ ಸಚಿವ ಶಂಕರ್ ಗಿರಿ ಸೇರಿದಂತೆ ಹಲವು ನಾಯಕರು ಅಂತಿಮ ನಮನ ಸಲ್ಲಿಸಿದರು.
ವಾರಾಣಸಿಯ ಲಾಲ್ ಬಹದ್ದೂರ್ ಶಾಸ್ತ್ರಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿಯೂ ಜಸ್ಪಾಲ್ ರಾಣಾ ಅವರಿಗೆ ಗೌರವ ವಂದನೆ ಸಲ್ಲಿಸಲಾಗಿತ್ತು. ಬಳಿಕ ಪಾರ್ಥಿವ ಶರೀರವನ್ನು ರಾಜ್‌ಘಾಟ್ ಮಾರ್ಗವಾಗಿ ಮಣಿಕರ್ಣಿಕಾ ಘಾಟ್‌ಗೆ ಕೊಂಡೊಯ್ಯಲಾಯಿತು.
ಮನು ಭಾಕರ್ ಯಶಸ್ಸಿನ ಹಿಂದಿದ್ದ ಮಾರ್ಗದರ್ಶಿ
ಕ್ರೀಡಾಪಟುವಾಗಿ ಯಶಸ್ಸು ಸಾಧಿಸಿದ ಬಳಿಕ ಜಸ್ಪಾಲ್ ರಾಣಾ ತರಬೇತುದಾರರಾಗಿಯೂ ಗಮನ ಸೆಳೆದಿದ್ದರು. 2024ರ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಶೂಟರ್ ಮನು ಭಾಕರ್ ಎರಡು ಕಂಚಿನ ಪದಕ ಗೆಲ್ಲುವಲ್ಲಿ ಅವರ ಮಾರ್ಗದರ್ಶನ ಮಹತ್ವದ ಪಾತ್ರ ವಹಿಸಿತ್ತು,(ಏಜೆನ್ಸೀಸ್).